ಚಿತ್ರಜಗತ್ತಿನ ರೋಮಾಂಚನ ಕಾಂತಾರ. ಹೊಂಬಾಳೆ ಫಿಲಮ್ಸ್ನವರು ಜೊತೆಗಿದ್ದ ಕಾರಣಕ್ಕೆ ಬಜೆಟ್ ಬಗ್ಗೆ ತಲೆಕೆಡಿಸಿಕೊಳ್ಳುವಂತಿರಲಿಲ್ಲ. ಈ ಹಿಂದೆ ಹೋರಾಡಿ ಸಿನಿಮಾಗೆ ಬಜೆಟ್ ಹೊಂಚಿ ಗೆದ್ದಿದ್ದ ರಿಷಬ್ ಶೆಟ್ಟಿಯವರಿಗೆ ಈ ಸಿನಿಮಾದಲ್ಲಿ ಬಜೆಟ್ ಬಗ್ಗೆ ಮಾತ್ರ ತಲೆ ಬಿಸಿ ಇರಲಿಲ್ಲ. ಆದರೆ ಬಜೆಟ್ ಎರಡು ಪಟ್ಟಿಗಿಂತ ಹೆಚ್ಚಾದಾಗ ಟೆನ್ಷನ್ ಆಗಿದ್ದೂ ಸುಳ್ಳಲ್ಲ.
ಕಡಿಮೆ ದಿನಗಳಲ್ಲೇ ನೂರಾರು ಕೋಟಿ ಲಾಭ ತಂದುಕೊಟ್ಟ ಕಾಂತಾರ ಸಿನಿಮಾದ ಒಟ್ಟು ಬಜೆಟ್ ಎಷ್ಟು. ಈ ಬಗ್ಗೆ ಪ್ರಶ್ನೆಗಳಿವೆ.ಆದರೆ ಹೊಂಬಾಳೆಯವರು ಆ ಬಗ್ಗೆ ಉತ್ತರ ಕೊಟ್ಟಿಲ್ಲ. ರಿಷಬ್ ಶೆಟ್ಟಿ ಕೂಡಾ ಹೇಳಿಲ್ಲ. ವಿಜಯ್ ಕಿರಗಂದೂರು, ಕಾರ್ತಿಕ್ ಗೌಡ ಸೇರಿದಂತೆ ಯಾರೊಬ್ಬರೂ ಬಾಯಿಬಿಟ್ಟಿಲ್ಲ. ಒಬ್ಬೊಬ್ಬರದ್ದು ಒಂದು ಲೆಕ್ಕ.
ಆದರೆ ರಿಷಬ್ ಶೆಟ್ಟಿಯವರ ತಂದೆ ಪ್ರಕಾರ ಚಿತ್ರಕ್ಕೆ 7 ಕೋಟಿ ಬಜೆಟ್ ಹಾಕಿಕೊಳ್ಳಲಾಗಿತ್ತು. ಆದರೆ ಸಿನಿಮಾ ಮುಗಿದಾಗ ಆದ ಒಟ್ಟು ಬಜೆಟ್ 16 ಕೋಟಿ ರೂಪಾಯಿ ದಾಟಿತ್ತು. ಮಳೆ ಬಂದು ಮಣ್ಣೇ ಕರಗಿ ಹೋಯಿತು. ರಸ್ತೆ ಕೆಸರಾಗಿ ರಸ್ತೆಯೇ ಮುಚ್ಚಿ ಹೋಯಿತು. ರಸ್ತೆ ನಿರ್ಮಾಣಕ್ಕೆ ಜಲ್ಲಿ ತರಬೇಕಾಯಿತು. ಐದಾರು ತಿಂಗಳು ಮಳೆ ಬಂತು. ಹೀಗೆ ನಾನಾ ರೀತಿಯ ತೊಂದರೆಗಳಿಂದಾಗಿ ಬಜೆಟ್ ಜಾಸ್ತಿ ಆಯಿತು ಎಂದಿದ್ದಾರೆ ರಿಷಬ್ ಶೆಟ್ಟಿ ತಂದೆ.
ಚಿತ್ರ ಬಿಡುಗಡೆ ಆದ ಮೇಲೆ ರಿಷಬ್ ಶೆಟ್ಟಿ ಡಿವೈನ್ ಸ್ಟಾರ್ ಆದರೆ ಬಾಕ್ಸಾಫೀಸ್ ಕೂಡಾ ಕನಸಿನ ಲೋಕದಲ್ಲಿದೆ. 130 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಚಿತ್ರಮಂದಿರಗಳ ಸಂಖ್ಯೆಯೂ ತಗ್ಗಿಲ್ಲ. ಹೌಸ್ ಫುಲ್ ಶೋಗಳೂ ತಗ್ಗಿಲ್ಲ. ಕನ್ನಡದಲ್ಲಿಯೇ 100 ಕೋಟಿ ದಾಟಿದ್ದು, ಹಿಂದಿ ಮತ್ತು ತೆಲುಗಿನಲ್ಲಿ ತಲಾ 10 ಕೋಟಿ ಕಲೆಕ್ಷನ್ ದಾಟಿ ಮುನ್ನುಗ್ಗುತ್ತಿದೆ. ತಮಿಳಿನಲ್ಲಿ ಸಮಾಧಾನಕರ ಪ್ರದರ್ಶನವಿದ್ದರೆ ಮಲಯಾಳಂನಲ್ಲಿ ಈ ವಾರ ರಿಲೀಸ್.