ಡಾ.ರಾಜ್ ಅವರ ಜೀವನ ಚೈತ್ರ ಚಿತ್ರದಿಂದ ಸ್ಫೂರ್ತಿಗೊಂಡು ಮದ್ಯದಂಗಡಿಯ ವಿರುದ್ಧ ಮಹಿಳೆಯರು ಹೋರಾಟ ಮಾಡಿದ್ದರು. ನೂರಾರು ಹೆಂಡದಂಗಡಿಗಳು ಬಾಗಿಲು ಮುಚ್ಚಿದ್ದವು. ಹಾಲು ಜೇನು ಚಿತ್ರ ನೋಡಿ ಡೈವರ್ಸ್ ಆಗಿದ್ದ ಪತಿ-ಪತ್ನಿ ಒಂದಾಗಿದ್ದರು. ಬಂಗಾರದ ಮನುಷ್ಯ ಚಿತ್ರ ನೋಡಿ ನಗರ ಸೇರಿದ್ದ ಹಳ್ಳಿಗರು ಊರಿಗೆ ಹೋಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಕಾಮನಬಿಲ್ಲು ಚಿತ್ರ ನೋಡಿ ಯೋಗಾಭ್ಯಾಸದ ಪ್ರಭಾವಕ್ಕೊಳಗಾದವರಿದ್ದರು. ಆಕಸ್ಮಿಕ ಚಿತ್ರ ನೋಡಿದವರು ಇನ್ನು ಮುಂದೆ ಹೆಣ್ಣು ಮಕ್ಕಳನ್ನು ಬೈಯ್ಯೋದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಒಡಹುಟ್ಟಿದವರು ಚಿತ್ರ ನೋಡಿದ ಅಣ್ಣತಮ್ಮಂದಿರು ಇನ್ನು ಮುಂದೆ ಜಗಳವಾಡುವುದಿಲ್ಲ. ಒಟ್ಟಿಗೇ ಒಗ್ಗಟ್ಟಾಗಿಯೇ ಇರುತ್ತೇವೆ ಎಂದು ಒಂದುಗೂಡಿದ್ದರು. ಅಫ್‍ಕೋರ್ಸ್, ಈ ಸಾಧನೆಯನ್ನು ವಿಷ್ಣುವರ್ಧನ್ ಅಭಿನಯದ ಯಜಮಾನ ಚಿತ್ರವೂ ಮಾಡಿತ್ತು. ಇವು ಸಿನಿಮಾ ದೃಶ್ಯಗಳಲ್ಲ.
ಸಿನಿಮಾ ನೋಡಿದ ನಂತರ ಆದ ಇಂಪ್ಯಾಕ್ಟ್`ಗಳು.
ಆ ರೀತಿಯಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಚಿತ್ರವೆಂದರೆ ರಾಜಕುಮಾರ. ಆ ಸಿನಿಮಾ ನೋಡಿದ ಹಲವರು ವೃದ್ಧಾಶ್ರಮದಲ್ಲಿ ಬಿಟ್ಟಿದ್ದ ಹೆತ್ತವರನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಇದು ರಾಜಕುಮಾರ ಚಿತ್ರದ ನಿಜವಾದ ಸಕ್ಸಸ್ ಎಂದು ಖುಷಿಪಟ್ಟಿದ್ದರು ಪುನೀತ್ ರಾಜಕುಮಾರ್.
ದೂರವಾಗಿದ್ದ, ಜಗಳವಾಡಿಕೊಂಡಿದ್ದ ಅಣ್ಣ ತಮ್ಮಂದಿರು ಒಂದಿಗೇ ಇರಲು ನಿರ್ಧರಿಸಿದ ಘಟನೆಗಳು ಒಡಹುಟ್ಟಿದವರು, ಯಜಮಾನ ಬಂದಾಗ ಘಟಿಸಿದ್ದವು. ಈಗ ಅದೇ ಹಾದಿಯಲ್ಲಿದೆ ತೆಲುಗಿನ ಬಳಗಂ ಸಿನಿಮಾ. ಅಂದಹಾಗೆ ತೆಲುಗಿನಲ್ಲಿ ಳ ಅಕ್ಷರ ಇಲ್ಲ.ಅದು ಕನ್ನಡಕ್ಕೆಂದೇ ಇರುವ ವಿಶೇಷ.
ಈ ಸಿನಿಮಾವನ್ನು ನೋಡಿದ ಸಹೋದರರಿಬ್ಬರು ಒಂದಾಗಿದ್ದಾರೆ. ಹಲವು ವರ್ಷಗಳ ಹಿಂದೆ ಜಗಳ ಮಾಡಿಕೊಂಡು, ಮಾತುಬಿಟ್ಟಿದ್ದ ಇವರು ಈಗ ‘ಬಲಗಂ’ ಸಿನಿಮಾ ನೋಡಿ ಮನಸ್ಸು ಬದಲಾಯಿಸಿದ್ದಾರೆ. ತೆಲಂಗಾಣದ ನಿರ್ಮಲ್ ಜಿಲ್ಲೆಯ ಲಕ್ಷ್ಮೀಚಾಂದ ಎಂಬ ಗ್ರಾಮದಲ್ಲಿ. ಗುರ್ರಂ ಪೊಸುಲು ಮತ್ತು ರವಿ ಎಂಬಿಬ್ಬರು ಸಹೋದರರು ಹಲವು ವರ್ಷಗಳ ಹಿಂದೆ ಜಮೀನಿಗಾಗಿ ಕಿತ್ತಾಡಿಕೊಂಡಿದ್ದರು. ಇಬ್ಬರು ಬೇರೆ ಬೇರೆ ಮನೆಗಳಲ್ಲಿ ವಾಸಿಸುತ್ತಿದ್ದರು. ಎರಡು ಕುಟುಂಬದ ನಡುವೆ ಮಾತುಕತೆ ಇರಲಿಲ್ಲ. ಈಚೆಗೆ ಆ ಗ್ರಾಮದ ಮುಖ್ಯಸ್ಥರಾದ ಸೂರಕಂಟಿ ಮುತ್ಯಂ ರೆಡ್ಡಿ ಎಂಬುವವರು ತಮ್ಮ ಗ್ರಾಮದಲ್ಲಿ ‘ಬಲಗಂ’ ಸಿನಿಮಾವನ್ನು ಪ್ರದರ್ಶನ ಮಾಡಿಸಿದ್ದರು. ಈ ಸಿನಿಮಾ ನೋಡಿದ ಪೊಸುಲು ಮತ್ತು ರವಿ ಭಾವುಕರಾಗಿದ್ದಾರೆ ಮತ್ತು ತಮ್ಮ ಮನಸ್ಸು ಬದಲಾಯಿಸಿಕೊಂಡಿದ್ದಾರೆ. ಇದೀಗ ಅಣ್ಣ ತಮ್ಮ ಒಂದಾಗಿದ್ದಾರೆ. ಅದರಲ್ಲೂ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ತಂದೆಯ ಸಮಾಧಿ ಜಾಗಕ್ಕಾಗಿ ಅಣ್ಣ- ತಮ್ಮ ಕಿತ್ತಾಡುವ ಸೀನ್ ಬಂದಾಗ ಇಬ್ಬರು ಕೂಡ ತುಂಬ ಭಾವುಕರಾಗಿದ್ದರು.
ಇಷ್ಟಕ್ಕೂ ಬಲಗಂ ಸಿನಿಮಾ ಕಥೆಯೇನು..? ಬಲಗಂ ಸಿನಿಮಾದಲ್ಲಿ ಅಣ್ಣ, ತಮ್ಮ, ಅಕ್ಕ, ತಂಗಿ, ಬಂಧು ಬಳಗ ಎಲ್ಲರೂ ಒಟ್ಟಾಗಿ ಇರಬೇಕು. ಆಗಲೇ ನಮ್ಮ ಪೂರ್ವಜರು ಖುಷಿಯಾಗಿರುತ್ತಾರೆ ಎಂಬ ಸಂದೇಶವನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ.
‘ಬಲಗಂ’ ಸಿನಿಮಾವನ್ನು ನಟ ವೇಣು ಯೆಲ್ಡಂಡಿ ಅವರು ನಿರ್ದೇಶನ ಮಾಡಿದ್ದಾರೆ. ಮುಖ್ಯಪಾತ್ರದಲ್ಲಿ ನಟ ಪ್ರಿಯದರ್ಶಿ ಕಾಣಿಸಿಕೊಂಡಿದ್ದು, ಬಹುತೇಕ ಹೊಸ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾದ ಸಕ್ಸಸ್ ಇರುವುದೇ ಇಂತಹ ಗೆಲುವಿನಲ್ಲಿ ಅಲ್ಲವೇ..