ಪಠಾಣ್. ಶಾರೂಕ್ ಖಾನ್ ಮತ್ತ ದೀಪಿಕಾ ಪಡುಕೋಣೆ ನಟಿಸಿರೋ ಸಿನಿಮಾ. ಇತ್ತೀಚೆಗೆ ಇಬ್ಬರಿಗೂ ಗೆಲುವು ಸಿಕ್ಕಿಲ್ಲ. ಸೋಲಿಗಿಂತ ಹೆಚ್ಚು ವಿವಾದಗಳಿಂದಲೇ ಸುದ್ದಿಯಾಗಿರುವ ಇಬ್ಬರೂ, ಒಂದು ಸಕ್ಸಸ್ ಕೊಡೋಣ ಎಂದು ಕಾಯುತ್ತಿದ್ದಾರೆ. ದೀಪಿಕಾಗೆ 2018ರಲ್ಲಿ ರಿಲೀಸ್ ಆದ ಪದ್ಮಾವತ್ ಚಿತ್ರದ ನಂತರ ಗೆಲುವು ಸಿಕ್ಕಿಲ್ಲ. ಇದೇ ಶಾರೂಕ್ ಖಾನ್‍ರ ಝೀರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದು. ಇಬ್ಬರಿಗೂ ಸೋಲು ಹೆಗಲೇರಿತು. ದೀಪಿಕಾರ ಚಪಾಕ್, 83 ಕೂಡಾ ಸೋತು ಸೊರಗಿದವು. ಗೆಹರಿಯಾನ್ ಅನ್ನೋ ಚಿತ್ರಕ್ಕೆ ಅಭಿಮಾನಿಗಳು ಸೆಮಿಪೋರ್ನ್ ಸಿನಿಮಾ ಪಟ್ಟ ಕೊಟ್ಟರು.
ಅತ್ತ ಶಾರೂಕ್ ಖಾನ್ ಕೊನೆಯ ಹಿಟ್ ಚಿತ್ರ ಯಾವುದು ಎಂದರೆ ಇದೇ ದೀಪಿಕಾ ಪಡುಕೋಣೆ ಜೊತೆಗೆ ನಟಿಸಿದ್ದ ಚೆನ್ನೈ ಎಕ್ಸ್‍ಪ್ರೆಸ್. ಅದು 2013ರ ಸಿನಿಮಾ.ಅದಾದ ನಂತರ ದಿಲ್‍ವಾಲೆ, ಫ್ಯಾನ್, ಹ್ಯಾಪಿ ನ್ಯೂ ಇಯರ್, ಡಿಯರ್ ಜಿಂದಗಿ, ರಾಯಿಸ್, ಟ್ಯೂಬ್ ಲೈಟ್, ಜಬ್ ಹ್ಯಾರಿ ಮೆಟ್ ಸಿಝಲ್, ಹೀರೋ..ಹೀಗೆ ಸತತವಾಗಿ ಸೋಲುತ್ತಲೇ ಬಂದರು ಶಾರೂಕ್. ಕೆಲವು ಚಿತ್ರಗಳ ನಟನೆ ಸದ್ದು ಮಾಡಿತಾದರೂ ಬಾಕ್ಸಾಫೀಸಿನಲ್ಲಿ ಠುಸ್ ಠುಸ್. ಈಗ ಸೋತು ಸುಣ್ಣವಾಗಿರೋ ಇಬ್ಬರೂ ಮತ್ತೊಬ್ಬ ಸೋಲಿನ ಸರದಾರ ಜಾನ್ ಅಬ್ರಹಾಂ ಎಲ್ಲರೂ ಒಟ್ಟಾಗಿ ಬರುತ್ತಿರೋ ಸಿನಿಮಾವೇ ಈ ಪಠಾಣ್.
ಪಠಾಣ್ ಚಿತ್ರದ ಹಾಡೊಂದು ರಿಲೀಸ್ ಆಗಿದೆ. ಆ ಹಾಡು ಟ್ರೆಂಡಿಂಗ್‍ನಲ್ಲಿದೆ. ಆದರೆ ಹಾಡು ಸಖತ್ತಾಗಿದೆ, ಇಂಪಾಗಿದೆ ಅನ್ನೋ ಕಾರಣಕ್ಕಾಗಿ ಅಲ್ಲ. ಬೇರೆ ಬೇರೆ ಕಾರಣಗಳಿಗಾಗಿ. ಶಾರೂಕ್ ಮತ್ತು ದೀಪಿಕಾ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಅನ್ನೋದು ಹಿಂದೂಗಳ ಅಸಮಾಧಾನ. ಅದಕ್ಕೆ ತಕ್ಕಂತೆ ಈಗ ರಿಲೀಸ್ ಆಗಿರೋ ಹಾಡಿನಲ್ಲಿ ಬೇಶರಮ್ ರಂಗ್.. ಅನ್ನೋ ಸಾಲಿದೆ. ಆ ಸಾಲು ಬರುವಾಗ ಸರಿಯಾಗಿ ಬಿಕಿನಿಯಲ್ಲಿ ಅದೂ ಕೇಸರಿ ಬಣ್ಣದ ಬಿಕಿನಿಯಲ್ಲಿ ಕಾಣಿಸಿಕಕೊಳ್ತಾರೆ ದೀಪಿಕಾ. ಕೇಸರಿ ಬಣ್ಣವನ್ನೇ ನಾಚಿಕೆಯಿಲ್ಲದ ಬಣ್ಣ ಎನ್ನುತ್ತಿದ್ದಾರೆ ಎನ್ನುವುದು ಬೇಶರಂ ರಂಗ್ ಹಾಡಿಗೆ ಕಿಡಿಕಾರುತ್ತಿರುವವರ ಆರೋಪ. ಇಷ್ಟಕ್ಕೂ ಹಾಡಿನ ಅರ್ಥವೇನು..?
ಹಾಡಿನಲ್ಲಿ ಬರುವ ಹಿಂದಿ ಸಾಹಿತ್ಯ ಇದು.
ಹಮೇ ತೋ ಲೂಟ್ ಲಿಯಾ ಮಿಲ್ಕೆ ಇಷ್ಕ್ವಾಲೋನೆ
ಬೊಹೊತ್ ಹೀ ತಂಗ್ ಕಿಯಾ ಅಬ್ತಕ್ ಇನ್ ಖಯಾಲೋನೆ
ನಶಾ ಚಡಾ ಜೋ ಶರೀಫಿಕಾ ಉತಾರ್ ಫೇಕಾ ಹೇ
ಬೇಷರಮ್ ರಂಗ್ ಕಹಾ ದೇಕಾ ದುನಿಯಾ ವಾಲೋನೆ
ಇದು ಹಿಂದಿ ಸಾಹಿತ್ಯವಾದರೆ ಈ ಹಾಡಿನ ಕನ್ನಡ ಅರ್ಥವಿದು.
ಪ್ರೀತಿಸುವವರೆಲ್ಲ ಸೇರಿ ನನ್ನನ್ನು ಲೂಟಿ ಮಾಡಿಬಿಟ್ಟರು
ಆ ರೀತಿಯ ಆಲೋಚನೆಗಳು ಈ ವರೆಗೆ ಬಹಳ ಕಾಟ ಕೊಟ್ಟಿವೆ
ಸಂಭಾವ್ಯಳಾಗಿರಬೇಕೆಂಬ ಭ್ರಮೆಯನ್ನು ಕಿತ್ತೊಗೆದು ಬಿಸಾಡಿದ್ದೇನೆ
ನನ್ನ ಈ ನಾಚಿಕೆಯಿಲ್ಲದ ವ್ಯಕ್ತಿತ್ವವನ್ನು (ನನ್ನ ನಿಜ ಬಣ್ಣವನ್ನು) ಯಾರೂ ನೋಡಿಯೇ ಇಲ್ಲ
ಅಂದರೆ ಇಲ್ಲಿ ಹಾಡಿನಲ್ಲಿ ದೀಪಿಕಾ ಪಡುಕೋಣೆಯ ಪಾತ್ರ ನಾಚಿಕೆಯಿಲ್ಲದ್ದು, ಈ ವ್ಯಕ್ತಿತ್ವವನ್ನು ವರ್ತನೆಯನ್ನು ಯಾರೂ ನೋಡಿಲ್ಲ. ಸಂಭಾವ್ಯಳಾಗಿರಬೇಕೆಂಬ ಭ್ರಮೆಯನ್ನು ಕಿತ್ತುಹಾಕಿದ್ದೇನೆ.. ಎನ್ನುವಾಗ ಬರುವುದು ಬೇಶರಂ ರಂಗ್.. ಅನ್ನೋ ಪದ.
ಆ ಹಾಡಿನ ಸಾಹಿತ್ಯಕ್ಕೆ ತಕ್ಕಂತೆಯೇ ದೀಪಿಕಾ ಪಡುಕೋಣೆ ನಾಚಿಕೆಯಿಲ್ಲದೆ ವರ್ತಿಸುತ್ತಾಳೆ. ಬಿಕಿನಿಯಲ್ಲಿ ಬೊಂಬಾಟ್ ಆಗಿ ಕುಣಿಯುತ್ತಾಳೆ. ಶಾರೂಕ್ ಖಾನ್ ಪಾತ್ರವನ್ನು ಬುಟ್ಟಿಗೆ ಬೀಳಿಸಿಕೊಳ್ಳೋಕೆ ಸರ್ಕಸ್ ಮಾಡುತ್ತಾಳೆ.
ಮುಝ್ ಮೆ ನಯೀ ಬಾತ್ ಹೇ
ನಯಿ ಆದತೋಂಕಿ ಸಾಥ್ ಹೇ ಹೇ ಜೊ ಸಹಿ ವೋ ಕರತಾ ನಹಿ
ಗಲತ್ ಹೋನೆಕಿ ಯಹೀತೊ ಶುರುವಾತ್ ಹೇ
ಇನ್ಮೇಲೆ ಲೈಫಲ್ಲಿ ಸರಿಯಾದ ಹಾದಿಯಲ್ಲಿ ನಡೆಯೋ ಆಸೆಯೂ ಇಲ್ಲ. ತಪ್ಪು ಹಾದಿಯಲ್ಲಿ ಹೆಜ್ಜೆ ಹಾಕುತ್ತೇನೆ. ಹೊಸ ಜೀವನ ಆರಂಭವಾಗಿದೆ ಎಂಬ ಆರ್ಥ ಈ ಸಾಲುಗಳಲ್ಲಿದೆ.
ನನ್ನಲ್ಲಿ ಏನೋ ಹೊಸ ಬದಲಾವಣೆಗಳಾಗಿವೆ
ಹೊಸ ಅಭ್ಯಾಸಗಳು ಶುರುವಾಗಿವೆ
ಸರಿಯಾದ ಹಾದಿಯಲ್ಲಿ ನಡೆಯುವ ಆಸೆಯಿಲ್ಲ
ತಪ್ಪಾದ ಹಾದಿಯ ಪಯಣ ಈಗಿಂದ ಶುರು
ಇಡೀ ಹಾಡಿನಲ್ಲಿರೋ ಸಾಹಿತ್ಯ ಇಷ್ಟೆ. ಮೊದಲ ಸಾಲು ಇಡೀ ಹಾಡಿನಲ್ಲಿ 3 ಸಾರಿ ರಿಪೀಟ್ ಆಗುತ್ತವೆ. ಎರಡನೇ ಸಾಲು ಒಂದ್ಸಲ ಬಂದು ಹೋಗುತ್ತೆ. ಹಾಡು ಸಿಕ್ಕಾಪಟ್ಟೆ ಎಂದರೆ ಸಿಕ್ಕಾಪಟ್ಟೆ ಹಾಟ್ ಆಗಿದೆ. ಬಹುಶಃ ಗೆಲುವು ಅನಿವಾರ್ಯ ಎಂಬ ಕಾರಣಕ್ಕೆ ಶಾರೂಕ್ ಕೂಡಾ ತಮ್ಮ ಈ ಹಿಂದಿನ ಚಿತ್ರಗಳಲ್ಲಿ ಹಾಕಿಕೊಂಡಿದ್ದ ಬಾರ್ಡರುಗಳನ್ನೆಲ್ಲ ದಾಟಿದ್ದಾರೆ. ದೀಪಿಕಾ ಪಡುಕೋಣೆ ಕೂಡಾ ದಾಟಿ ಬಂದಿದ್ದಾರೆ. ಗೆಲುವಿನ ಅನಿವಾರ್ಯತೆ ಎದುರಾದಾಗ ಬಟ್ಟೆ ಕಡಿಮೆ ತೊಡುವ ಸಂಪ್ರದಾಯ ಈ ಪಠಾಣ್ ಹಾಡಿನಲ್ಲಿ ಮುಂದುವರೆದಿದೆ.
ಆದರೆ ಕೆಲವು ಹಿಂದೂ ಸಂಘಟನೆಗಳು ಬಾಯ್ಕಾಟ್ ಪಠಾಣ್ ಎನ್ನುತ್ತಿವೆ. ಪ್ರತಿಭಟನೆ ನಡೆಯುತ್ತಿವೆ. ಅದು ಬಿಡಿ, ಮುಸ್ಲಿಂ ಸಂಘಟನೆಗಳೂ ಹಾಡಿನ ಪರವಾಗಿಲ್ಲ. ಹಾಡು ಅಶ್ಲೀಲವಾಗಿದೆ. ಅಸಭ್ಯವಾಗಿದೆ ಎಂದು ಕೋರ್ಟಿನ ಮೆಟ್ಟಿಲೇರಿವೆ. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರಂತೂ ನಮ್ಮದೊಂದಿರ್ಲಿ ಅನ್ನೋ ಹಾಗೆ ಬಾಯ್ಕಾಟ್ ಪಠಾಣ್ ಎಂಬ ಹೇಳಿಕೆ ಒಗೆದಿದ್ದಾರೆ. ಅವರದ್ದೇ ಸರ್ಕಾರ. ಬ್ಯಾನ್ ಮಾಡಲ್ಲ, ಅವರಿಗೆ ವಿವಾದ ಬೇಕು. ಕೇಂದ್ರ ಬಿಜೆಪಿ ಸರ್ಕಾರದ ಕೆಲವು ನಾಯಕರೂ ಅಷ್ಟೆ, ಹೇಳಿಕೆಗಳು ಹೊರಬೀಳುತ್ತವೆ. ಜನ ಸೋಷಿಯಲ್ ಮೀಡಿಯದಲ್ಲಿ ಇನ್ನಷ್ಟು ರೊಚ್ಚಿಗೇಳುತ್ತಾರೆ.
ಅತ್ತ ಮುಸ್ಲಿಂ ಸಂಘಟನೆಗಳೂ ಶಾರೂಕ್ ಪರ ಇಲ್ಲ. ಮಧ್ಯಪ್ರದೇಶದ ಉಲೇಮಾ ಬೋರ್ಡ್ ಅಧ್ಯಕ್ಷ ಸೈಯ್ಯದ್ ಅನ್ನಸ್ ಅಲಿ ಪ್ರಕಾರ ಮುಸ್ಲಿಮರಲ್ಲಿಯೇ ಪಠಾಣರು ಅತ್ಯಂತ ಸಂಭಾವಿತರು. ಗೌರವಾನ್ವಿತ ಸಮುದಾಯ. ಈ ಚಿತ್ರ ಪಠಾಣರಿಗೆ ಮುಸ್ಲಿಮರಿಗೆ ಅಪಮಾನ ಮಾಡಿದೆ. ಈ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಬಿಡಲ್ಲ ಎಂದಿದ್ದಾರೆ. ಸೆನ್ಸಾರ್ ಬೋರ್ಡ್‍ಗೆ ಪತ್ರವೂ ಹೋಗಿದೆ. ಎಫ್‍ಐಆರ್ ಕೂಡಾ ಆಗಿದೆ. ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಕೂಗೆಬ್ಬಿಸಿವೆ. ಕರ್ನಾಟಕದಲ್ಲಿಯೇ ಪ್ರಮೋದ್ ಮುತಾಲಿಕ್, ಯತ್ನಾಳ್‍ರಂತಹವರು ಗುಡುಗಿದ್ದಾರೆ.
ಅತ್ತ ದೀಪಿಕಾ ಪಡುಕೋಣೆ ಪರವಾಗಿ ಪ್ರಕಾಶ್ ರೈ, ದಿವ್ಯ ಸ್ಪಂದನಾ ಸೇರಿದಂತೆ ಹಲವರು ನಿಂತಿದ್ದಾರೆ. ಅವರೆಲ್ಲರದ್ದೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮಾತು. ಆದರೆ, ವಿಶೇಷವೆಂದರೆ ಅವರೆಲ್ಲರೂ ಟೀಕಿಸುತ್ತಿರುವುದು ಹಿಂದೂಪರ ಸಂಘಟನೆಯವರ ವಾದವನ್ನು ಮಾತ್ರ. ಮುಸ್ಲಿಂ ಸಂಘಟನೆಗಳ ವಿರೋಧವನ್ನು ಅಪ್ಪಿ ತಪ್ಪಿಯೂ ಮಾತನಾಡುತ್ತಿಲ್ಲ. ಎಲ್ಲರೂ ಒನ್ ಸೈಡೆಡ್ ವಾದಿಗಳೇ. ಏಕೆಂದರೆ ಬೇಶರಮ್ ರಂಗ್ ಹಾಡಿನಂತೆಯೇ ಎಲ್ಲರೂ ನಾಚಿಕೆ ಬಿಟ್ಟಿದ್ದಾರೆ. ತಪ್ಪು ಎಂದು ಗೊತ್ತಿದ್ದೂ ತಪ್ಪು ಹಾದಿಯಲ್ಲಿ ನಡೆಯುತ್ತಿದ್ದಾರೆ. ಆಯ್ಕೆ ಮಾಡಿಕೊಂಡಿದ್ದಾರೆ. ಬೇಶರಮ್ ರಂಗ್….