ಡಾ.ರಾಜ್ ಇಲ್ಲದೆ ಕರ್ನಾಟಕದ ಇತಿಹಾಸ, ಕನ್ನಡ ಚಿತ್ರರಂಗವನ್ನು ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ಕನ್ನಡ ಇಂಡಸ್ಟ್ರಿಯನ್ನು ಮದ್ರಾಸಿನಿಂದ ಕರ್ನಾಟಕಕ್ಕೆ ಕರೆತಂದಿದ್ದು ಡಾ.ರಾಜ್. ಗೋಕಾಕ್ ಚಳವಳಿಯ ನೇತೃತ್ವ ವಹಿಸಿಕೊಳ್ಳದೆ ಹೋರಾಟಕ್ಕಿಳಿಯದೆ ಹೋಗಿದ್ದರೆ ಇವತ್ತಿನ ಕರ್ನಾಟಕ, ಕನ್ನಡದ ಸ್ಥಿತಿಯನ್ನು ಕಲ್ಪನೆ ಮಾಡಿಕೊಳ್ಳೋಕೂ ಸಾಧ್ಯವಿರಲಿಲ್ಲ.
ರಾಜ್ ಕುಟುಂಬವನ್ನು ಹೀಯಾಳಿಸುವ ದಂಧೆಯೊಂದು ವ್ಯವಸ್ಥಿತವಾಗಿ ನಡೆಯುತ್ತಿದೆ. ಡಾ.ರಾಜ್, ಪಾರ್ವತಮ್ಮ, ಪುನೀತ್ ಅವರನ್ನಷ್ಟೇ ಅಲ್ಲ, ಅಶ್ವಿನಿಯವರನ್ನೂ ಬಿಡದೆ ಅಸಹ್ಯವಾಗಿ ಪೋಸ್ಟ್ ಹಾಕುವ ದಂಧೆಯೇ ನಡೆಯುತ್ತಿದೆ. ಶಿವಣ್ಣ, ಗೀತಾ, ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್.. ಹೀಗೆ ಎಲ್ಲರನ್ನೂ ಟಾರ್ಗೆಟ್ ಮಾಡಲಾಗುತ್ತಿದೆ. ಅವರ ಮಕ್ಕಳನ್ನೂ ಬಿಟ್ಟಿಲ್ಲ. ಕುಟುಮಬದೊಳಗಿನ ಸಾವು ನೋವುಗಳನ್ನು, ಕಾಯಿಲೆಗಳನ್ನು, ಬಣ್ಣ, ದೇಹದ ಗಾತ್ರ.. ಹೀಗೆ ಪ್ರತಿಯೊಂದನ್ನೂ ಹಿಡಿದು ಟ್ರೋಲ್ ಮಾಡುವ ಜನ ವ್ಯಕ್ತಿತ್ವ ಚಾರಿತ್ರ್ಯ ಹರಣಕ್ಕೂ ಇಳಿದಿದ್ದಾರೆ. ಚಿತ್ರೋದ್ಯಮದಲ್ಲೇ ಇರುವ ಕೆಲವರು ಏನೇನೋ ಮಾತನಾಡಿ ಅನುಮಾನ ಹುಟ್ಟಿಸುವಂತೆ ಹೇಳಿಕೆ ನೀಡುವುದು ಕೂಡಾ ಹೊಸದಲ್ಲ.
ಇತ್ತೀಚೆಗೆ ಈ ರೀತಿಯ ಚಾರಿತ್ರ್ಯಹರಣ ಕೀಳು ಮಟ್ಟಕ್ಕೆ ಇಳಿದಿತ್ತು. ಅಸಹ್ಯದ ಮಟ್ಟ ತಲುಪಿತ್ತು. ಖುದ್ದು ಯುವ ರಾಜಕುಮಾರ್ ಕೂಡಾ ಗೌರವ ಕೊಟ್ಟು ತೆಗೆದುಕೊಳ್ಳುವಂತಹುದು ಎಂದು ಬರೆದುಕೊಂಡಿದ್ದರು. ಡಾ.ರಾಜ್ ಕುಟುಂಬದವರು ಎಂದಿನಂತೆ ಮೌನಕ್ಕೆ ಶರಣಾಗಿದ್ದರೂ, ಅಭಿಮಾನಿಗಳು ಸುಮ್ಮನಿರಲಿಲ್ಲ.
ಮಂಡ್ಯದ ಒಬ್ಬ ಯುವಕ ಡಿ ಬಾಸ್ ಕರ್ನಾಟಕ ಎಂಬ ಅಕೌಂಟ್ ತೆರೆದಿದ್ದಾನೆ. ಮತ್ತೊಬ್ಬ ಮೈಸೂರಿನಲ್ಲಿ ನಾಗರಾಜ್ ದಚ್ಚ ಎಂಬ ಹೆಸರಲ್ಲಿ ಅಕೌಂಟ್ ಆಕ್ಟಿವ್ ಮಾಡಿದ್ದ. ಕಿಚ್ಚ ಹರೀಶ್ ಎಂಬ ಮತ್ತೊಬ್ಬ ಬೆಂಗಳೂರಿನವನು. ಗಡ್ಡ ಸ್ಟೈಲ್ ದಚ್ಚು ನಾಗರಾಜ್ (ಡಿ ಬಾಸ್) ಎಂಬ ಮತ್ತೊಬ್ಬ ಮೈಸೂರಿನವನು. ಇವರೆಲ್ಲ ಒಬ್ಬೊಬ್ಬರೂ ಹಲವು ಫೇಕ್ ಅಕೌಂಟ್ ಸೃಷ್ಟಿಸಿ, ಅವುಗಳಲ್ಲಿ ಡಾ.ರಾಜ್ ಕುಟುಂಬದವರ ಬಗ್ಗೆ ಅವಹೇಳನ, ಲೇವಡಿಯನ್ನೇ ಕಾಯಕ ಮಾಡಿಕೊಂಡಿದ್ದರು. ಪೊಲೀಸರು ಸದ್ಯಕ್ಕೆ ನಾಲ್ವರ ಹೆಸರನ್ನಷ್ಟೇ ಬಹಿರಂಗಪಡಿಸಿದ್ದಾರೆ. ಉಳಿದವರ ವಿವರವೂ ಸದ್ಯದಲ್ಲೇ ಹೊರಬೀಳಲಿದೆ. ಅಷ್ಟೇ ಅಲ್ಲ, ಅವರ ಅಡ್ರೆಸ್ ಹುಡುಕಿ ಅರೆಸ್ಟ್ ಮಾಡುವ ಕೆಲಸವೂ ಶುರುವಾಗಲಿದೆ.
ಆದರೆ ಇವರು ಕೇವಲ ತಮ್ಮ ನಟನ ಮೇಲಿನ ಅಭಿಮಾನಕ್ಕಾಗಿ ಈ ಕೆಲಸ ಮಾಡುತ್ತಿದ್ದರೇ ಅಥವಾ ಯಾರಾದರೂ ಹಣ ಕೊಟ್ಟು ಈ ಕೆಲಸ ಮಾಡಿಸುತ್ತಿದ್ದರೇ ಎಂಬ ಬಗೆಗಿನ ವಿವರ ಅವರು ಅರೆಸ್ಟ್ ಆದ ನಂತರವೇ ಗೊತ್ತಾಗಲಿದೆ. ಸದ್ಯಕ್ಕೆ ಪೊಲೀಸರ ಬಳಿ ಇವರ ಮೊಬೈಲ್ ನಂಬರ್, ಲ್ಯಾಪ್‍ಟಾಪ್, ಐಪಿ ಅಡ್ರೆಸ್, ಟೆಲಿಕಾಂ ನಂಬರ್, ಐಎಂಇಐ ನಂಬರ್, ಸೀರಿಯಲ್ ನಂಬರ್ ಡೀಟೈಲ್ಸ್ ಶೇಖರಿಸಿಟ್ಟಿದ್ದಾರೆ.