ಕಾಂತಾರ ಚಿತ್ರ ಭರಪೂರ ಯಶಸ್ಸು ಗಳಿಸಿದೆ. 100 ಕೋಟಿ ಹತ್ತಿರದಲ್ಲಿದೆ. ತೆಲುಗು, ತಮಿಳು, ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಒಮ್ಮೆ ಸಿನಿಮಾ ನೋಡಿದವರು ಕನಿಷ್ಠ 10 ಜನಕ್ಕೆ ಸಿನಿಮಾ ನೋಡಿ ಎಂದು ಹೇಳುತ್ತಿದ್ದಾರೆ. ಕೇವಲ ಸಿನಿಮಾ ಆಗಿ ಉಳಿಯದೆ ಕನ್ನಡಿಗರ ಅನುಭವವಾಗಿ ದಂತಕಥೆಯಾಗಿ ಹೊರಹೊಮ್ಮಿದೆ. ಇದೆಲ್ಲದರ ನಡುವೆಯೂ ಕಥೆಗೆ ಬಗ್ಗೆ ಅಲ್ಲಲ್ಲಿ ಒಂದಿಷ್ಟು ನೆಗೆಟಿವ್ ಕಮೆಂಟ್ ಬಂದಿವೆ. ಅವುಗಳಿಗೆಲ್ಲ ರಿಷಬ್ ಶೆಟ್ಟಿ ಹೇಳಿರುವುದು ಇಷ್ಟು.
ಎಲ್ಲರಿಗೂ ಅಭಿಪ್ರಾಯ ಹೇಳುವ ಸ್ವಾತಂತ್ರ್ಯವಿದೆ. ಅವರನ್ನು ನಾನು ಗೌರವಿಸುತ್ತೇನೆ. ಕಾಂತಾರ ಅವರವರ ಅಭಿಪ್ರಾಯಕ್ಕೆ ಬೇರೆಯದೇ ರೂಪದಲ್ಲಿ ಕಂಡಿದೆ. ನಾನು ಸಿನಿಮಾ ನಿರ್ದೇಶಕ. ನಮ್ಮ ಊರಿನ ಕಥೆ ಹೇಳಬೇಕೆಂದುಕೊಂಡಿದ್ದೆ. ಹೇಳಿದೆ. ಜನರಿಗೆ ಇಷ್ಟವಾಯಿತು. ಕೆಲವು ನೆಗೆಟಿವ್ ಟೀಕೆಗಳೂ ಬಂದಿವೆ. ಟೀಕೆ ಮಾಡಿ. ಬೇಜಾರೇನಿಲ್ಲ. ಆದರೆ ದಯವಿಟ್ಟು ಕಥೆ ಹೇಳಬೇಡಿ. ಕಥೆ ಗೊತ್ತಾದರೆ ಪ್ರೇಕ್ಷಕರು ಕುತೂಹಲ ಕಳೆದುಕೊಳ್ಳುತ್ತಾರೆ ಎನ್ನುತ್ತಾರೆ ರಿಷಬ್ ಶೆಟ್ಟಿ.
ದೈವ ನರ್ತಕನ ಮಗ. ಆದರೆ ದೈವಸೇವೆ ಮಾಡದೆ ದುಶ್ಚಟ ಮಾಡುತ್ತಾನೆ. ಸಮಾಜ ಹಾಗೂ ಸರ್ಕಾರಿ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಾನೆ. ಹಾಗೆ ಅವನು ಕೆಟ್ಟ ಕೆಲಸ ಮಾಡಿದಾಗಲೆಲ್ಲ ಪಂಜುರ್ಲಿ ದೈವ ಕಾಣಿಸಿಕೊಂಡು ಎಚ್ಚರಿಕೆ ಕೊಡುತ್ತದೆ. ಈ ರೀತಿಯ ಪಾತ್ರಗಳು ನಮ್ಮ ನಡುವೆಯೇ ಇವೆ. ಕೆಳ ಸಮುದಾಯದವರು ಬಂಡಾಯವೆದ್ದರೆ ಏನು ತಪ್ಪು ಎನ್ನುವುದು ರಿಷಬ್ ಶೆಟ್ಟಿ ಪ್ರಶ್ನೆ.
ವಿಜಯ್ ಕಿರಗಂದೂರು ನಿರ್ಮಾಣದ ಕಾಂತಾರದಲ್ಲಿ ಸಪ್ತಮಿಗೌಡ, ಕಿಶೋರ್, ಮಾನಸಿ ಸುಧೀರ್, ಪ್ರಮೋದ್ ಶೆಟ್ಟಿ ಮೊದಲಾದವರು ಮಿಂಚು ಹರಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಕಿರೀಟಕ್ಕೆ ಗರಿ ಮೂಡಿಸಿದಂತಿದೆ.