ಶಿವಣ್ಣ ಪುನೀತ್ ಸಮಾಧಿಗಾಗಲೀ, ತಂದೆ ತಾಯಿಯರ ಪುಣ್ಯಭೂಮಿಗಾಗಲಿ ಹೋಗುವುದು ಕಡಿಮೆ. ಪುನೀತ್ ಕುರಿತ ಕಾರ್ಯಕ್ರಮಗಳಲ್ಲಿಯೂ ಶಿವಣ್ಣ ಭಾಗವಹಿಸುವುದು ಅಪರೂಪ. ಪದೇ ಪದೇ ನೆನಪಾಗುತ್ತೆ. ಪ್ರತಿ ಬಾರಿಯೂ ನೋವು ನುಂಗಿಕೊಂಡು ಇರುವುದಕ್ಕೆ ಆಗುವುದಿಲ್ಲ. ಹಾಗಂತ ಪ್ರತಿ ಬಾರಿ ಜನರ ಎದುರು ಕಣ್ಣೀರು ಹಾಕುವುದು ಸರಿ ಇರುವುದಿಲ್ಲ ಎನ್ನುವ ಶಿವಣ್ಣ ಪುನೀತ್ ಪ್ರತಿಮೆ ಅನಾವರಣ ಕಾರ್ಯಕ್ರಮಗಳಿಗೆ ತಪ್ಪಿಸಿಕೊಂಡಿದ್ದರು. ಆದರೆ ವಜ್ರಮುನಿ ಅವರ ಕಂಚಿನ ಪ್ರತಿಮೆ ಅನಾವರಣ ಮಾಡುವುದನ್ನು ತಪ್ಪಿಸಿಕೊಳ್ಳುವುದಕ್ಕೆ ಆಗಲಿಲ್ಲ. ಏಕೆಂದರೆ ವಜ್ರಮುನಿ ಮತ್ತು ರಾಜ್ ಕುಟುಂಬದ ಮಧ್ಯೆ ಇರುವ ಬಾಂಧವ್ಯ ಅಂತಹದ್ದು.
ಕನ್ನಡ ಚಿತ್ರರಂಗದಲ್ಲಿ ಇವತ್ತಿಗೂ ಖಳನಾಯಕ ಎಂದರೆ ಥಟ್ಟನೆ ಕಣ್ಣ ಮುಂದೆ ಬರೋದು ವಜ್ರಮುನಿ ಅವರ ಹೆಸರು. ಕಂಚಿನ ಕಂಠ, ಕೆಂಡದಂತಾ ಕಣ್ಣು, ಗಹಗಹಿಸಿ ನಗುವ ಆ ಆರ್ಭಟ.. ಖಳನಟನಿಗೆ ಹೇಳಿ ಮಾಡಿಸಿದಂತಿದ್ದ ಕಲಾವಿದ. ಪೋಷಕ ನಟನಾಗಿಯೂ ಅದ್ಭುತವಾಗಿ ನಟಿಸಿರುವ ವಜ್ರಮುನಿ, 2006ರಲ್ಲಿ ನಿಧನರಾದರು. ಆಗ ಅವರಿಗೆ 61 ವರ್ಷವಷ್ಟೇ. ಡಾ.ರಾಜ್ ಚಿತ್ರಗಳಲ್ಲಿ ವಜ್ರಮುನಿ ಖಾಯಂ ಖಳ ನಟನಾಗಿದ್ದವರು. ಡಾ.ರಾಜ್ ಚಿತ್ರಗಳಲ್ಲಿ ವಜ್ರಮುನಿ, ತೂಗುದೀಪ ಶ್ರೀನಿವಾಸ್ ಖಳರಾಗಿ, ಬಾಲಕೃಷ್ಣ, ನರಸಿಂಹ ರಾಜು ಹಾಸ್ಯ ಅಥವಾ ಪೋಷಕ ಪಾತ್ರಗಳಲ್ಲಿ, ಅಶ್ವತ್ಥ್, ಪಂಡರೀಭಾಯಿ ಮೊದಲಾದವರು ಪೋಷಕ ಪಾತ್ರಗಳಲ್ಲಿ ಬಹುತೇಕ ಇದ್ದೇ ಇರುತ್ತಿದ್ದರು. ವಜ್ರಮುನಿ, ಕೇವಲ ನಟರಾಗಿ ಅಷ್ಟೇ ಅಲ್ಲ, ರಾಜ್, ಪಾರ್ವತಮ್ಮನವರ ಬದುಕಿನಲ್ಲಿಯೂ ಮರೆಯಲಾಗದ ವ್ಯಕ್ತಿಯೂ ಹೌದು.
ಇದೀಗ ಬೆಂಗಳೂರಿನಲ್ಲಿ ವಜ್ರಮುನಿ ಅವರ ಕಂಚಿನ ಪ್ರತಿಮೆ ಅನಾವರಣಗೊಂಡಿದೆ.
ಖಳನಟರೊಬ್ಬರ ಕಂಚಿನ ಪ್ರತಿಮೆ ಅನಾವರಣಗೊಂಡಿದ್ದು ಇದೇ ಮೊದಲು. ಭಾರತೀಯ ಚಿತ್ರರಂಗದಲ್ಲಿ ಹಲವು ಖಳನಟರಿದ್ದರೂ, ಖಳನಟನೊಬ್ಬನ ಪ್ರತಿಮೆ ಅನಾವರಣವಾಗಿಲ್ಲ. ಮೃತಪಟ್ಟ 18 ವರ್ಷಗಳ ನಂತರ ವಜ್ರಮುನಿ ಅವರ ಕಂಚಿನ ಪ್ರತಿಮೆ ಅನಾವರಣವಾಗಿದೆ. ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ನಾಗರಬಾವಿ ಸರ್ಕಲ್ʻನಲ್ಲಿ ವಜ್ರಮುನಿ ಅವರ ಕಂಚಿನ ಪ್ರತಿಮೆ ಅನಾವರಣಗೊಂಡಿದ್ದು, ನಟ ಶಿವ ರಾಜ್ʻಕುಮಾರ್ ಪ್ರತಿಮೆ ಅನಾರವಣ ಮಾಡಿದ್ದಾರೆ. ಶಾಸಕ ಪ್ರಿಯಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿದೆ.
ಅಗಲಿದ ನಟರನ್ನು ಪುತ್ಥಳಿಯ ಸ್ವರೂಪದಲ್ಲಿ ನೋಡುವುದು ಮನಸ್ಸಿಗೆ ನೋವಾಗುತ್ತೆ. ಹತ್ತಿರದಿಂದ ನೋಡಿರುತ್ತೇವೆ. ಒಟ್ಟಿಗೇ ಒಡನಾಡಿರುತ್ತೇವೆ. ಅವರನ್ನು ಕಲ್ಲಿನಲ್ಲಿ ನೋಡಲು ಕಷ್ಟ ಎಂದ ಶಿವಣ್ಣ ನಮ್ಮ ತಂದೆಯವರದ್ದೇ ಆಗಲಿ, ವಿಷ್ಣುವರ್ಧನ್ ಆಗಲಿ, ಅಂಬರೀಶ್ ಅವರದ್ದೇ ಆಗಲಿ, ಪುನೀತ್ ಆಗಲಿ.. ವಜ್ರಮುನಿಯವರದ್ದೇ ಆಗಲಿ.. ಕಲ್ಲಿನಲ್ಲಿ ನೋಡುವುದಕ್ಕೆ ಕಷ್ಟ ಆಗುತ್ತೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನನಗೂ ವಜ್ರಮುನಿಯವರೊಂದಿಗೆ ಎರಡು ಸಿನಿಮಾಗಳಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿತ್ತು. ಪುರುಷೋತ್ತಮ ಹಾಗೂ ರಣರಂಗ ಸಿನಿಮಾದಲ್ಲಿ ಜೊತೆಯಲ್ಲಿ ನಟಿಸಿದ್ದೇವೆ. ಬಹಳ ಒಳ್ಳೆಯ ವ್ಯಕ್ತಿ. ಶೂಟಿಂಗ್ ಮುಗಿಸಿಕೊಂಡು ನಮ್ಮ ಮನೆಗೆ ಬಂದು ಅಪ್ಪಾಜಿ, ವಜ್ರಮುನಿ, ತೂಗುದೀಪ ಶ್ರೀನಿವಾಸ್ ಎಲ್ಲಾ ಒಟ್ಟಿಗೆ ಕೂತು ಊಟ ಮಾಡುತ್ತಿದ್ದರು. ಎಷ್ಟು ಮಜವಾಗಿತ್ತು ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.