ಒಟಿಟಿಗಳಲ್ಲಿ ಸಿನಿಮಾಗಳಿಗಿಂತಲೂ ಹೆಚ್ಚಾಗಿ ಕ್ಲಿಕ್ ಆಗುತ್ತಿರೋದು ವೆಬ್ ಸಿರೀಸ್`ಗಳು. ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ವೆಬ್ ಸಿರೀಸ್`ಗಳು ದಂಡಿಯಾಗಿ ಸಿಗುತ್ತಿವೆ. ಆದರೆ ಕನ್ನಡದಲ್ಲಿಯೇ ಕೊರತೆ. ಅಮೇಜಾನ್, ಹಾಟ್ ಸ್ಟಾರ್, ಝೀ5, ಸನ್.. ಹೀಗೆ ಯಾವ ಒಟಿಟಿ ತೆಗೆದರೂ ಕನ್ನಡದ ವೆಬ್ ಸರಣಿಗಳಿಲ್ಲ. ಆ ಕೊರತೆ ನೀಗುವ ಕಾಲ ಸನಿಹವಾಗಿದೆ. ಲವ್ ಯೂ ಅಭಿ. ಕನ್ನಡದ ವೆಬ್ ಸಿರೀಸ್. ಪ್ರಧಾನ ಪಾತ್ರದಲ್ಲಿ ನಟಿಸಿರುವುದು ಆದಿತಿ ಪ್ರಭುದೇವ ಮತ್ತು ವಿಕ್ರಂ ರವಿಚಂದ್ರನ್. ಮೊದಲ ಸಿನಿಮಾದಲ್ಲಿ ನಿರಾಶಾದಾಯಕ ಓಪನಿಂಗ್ ಪಡೆದ ವಿಕ್ರಂ, ಈಗ ಮುಧೋಳ್ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ಧಾರೆ. ಇದರ ಜೊತೆಗೆ ವೆಬ್ ಸಿರೀಸ್ ಲೋಕಕ್ಕೂ ಕಾಲಿಟ್ಟಿರುವ ವಿಕ್ರಂ, ಜಿಯೋ ಸಿನಿಮಾಸ್ ಮೂಲಕ ಬರುತ್ತಿದ್ದಾರೆ.
ಕಾಳಿ ವೇಲಾಯುಧಂ ನಿರ್ದೇಶನದ ಲವ್ ಯೂ ಅಭಿ, ಜಿಯೋ ಸಿನಿಮಾಸ್`ನಲ್ಲಿ ಮೇ 19ರಂದು ರಿಲೀಸ್ ಆಗುತ್ತಿದೆ. ಈ ಸಿರೀಸ್`ನಲ್ಲಿ ವಿಕ್ರಂ-ಆದಿತಿ ಜೊತೆ ರವಿಶಂಕರ್ ಕೂಡಾ ಇದ್ದಾರೆ. ಸಾಮಾನ್ಯವಾಗಿ ವೆಬ್ ಸಿರೀಸ್`ಗಳಲ್ಲಿ ಕೆಲವು ಲಿಮಿಟ್ಸ್ ಇರುವುದಿಲ್ಲ. ಸೆಕ್ಸ್ ಮತ್ತು ಕ್ರೌರ್ಯವನ್ನ ಢಾಳಾಗಿ ಪ್ರದರ್ಶಿಸಲಾಗುತ್ತದೆ. ಆದರೆ ಈ ಸಿರೀಸ್‍ನಲ್ಲಿ ಅಂತಹದ್ದೆಲ್ಲ ಇರಲ್ಲವಂತೆ. ಪ್ರೇಮ, ವಿರಹ, ಕೊಲೆ, ತನಿಖೆ ಹೀಗೆ ನೋಡುಗರನ್ನು ಕುರ್ಚಿಯ ತುದಿಯಲ್ಲಿ ಕೂಡುವಂತೆ ಮಾಡಬಲ್ಲ ಎಲ್ಲ ಅಂಶಗಳೂ ಇದರಲ್ಲಿದೆ. ಒಂದು ಸಾವಿನ ಸುತ್ತ ಬೆಳೆಯುತ್ತ ಹೋಗುವ ಕಥನದಲ್ಲಿ ಭಾವುಕ ಸನ್ನಿವೇಶಗಳಿವೆ, ದಾಂಪತ್ಯದ ಮಧುರ ಕ್ಷಣಗಳಿವೆ, ಅನುಮಾನ, ವಂಚನೆ, ಮುಗ್ಧ ಪ್ರೇಮ, ಒಳ್ಳೆಯತನ, ಸ್ವಾರ್ಥ, ಪ್ರಾಮಾಣಿಕತೆ ಎಲ್ಲ ಗುಣಗಳೂ ಸೇರಿ ರೂಪುಗೊಂಡ ಅಪರೂಪದ ರಸಪಾಕ ‘ಲವ್ ಯು ಅಭಿ’.
ಅಭಿಯಾಗಿ ನಟಿಸಿರುವ ಆದಿತಿ ಪ್ರಭುದೇವ ಅವರಿಗೆ ಇದು ನಟನಾಪಯಣಕ್ಕೆ ಬ್ರೇಕ್ ನೀಡಿದ ಪಾತ್ರವಂತೆ. ಎಲ್ಲ ಕಲಾವಿದರೂ ತಮ್ಮದೇ ಆದ ರಿದಮ್ನಲ್ಲಿ, ಮನೋಭಾವದಲ್ಲಿ ನಟಿಸುತ್ತ ಹೋಗುತ್ತಿರುತ್ತೇವೆ. ಕಲಾವಿದರ ಜರ್ನಿ ಹಾಗೆಯೇ ಇರುತ್ತದೆ. ಒಂದೊಂದ್ಸಲ ಅದು ಬ್ರೇಕ್ ಆಗಬೇಕಾಗುತ್ತದೆ. ಅಭಿ ನನ್ನ ನಟನಾಪಯಣವನ್ನು ಹಾಗೆ ಬ್ರೇಕ್ ಮಾಡಿದಂಥ ಪಾತ್ರ. ನನ್ನ ಇಡೀ ವ್ಯಕ್ತಿತ್ವಕ್ಕೇ ಚಾಲೆಂಜ್ ಮಾಡಿದಂಥ ಪಾತ್ರ. ಆ ಪಾತ್ರದಲ್ಲಿ ನಟಿಸುತ್ತ ನನ್ನ ವ್ಯಕ್ತಿತ್ವದಲ್ಲೂ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೀನಿ. ಐ ಲವ್ ಅಭಿ. ಬಹುಶಃ ತುಂಬ ಜನರಿಗೆ ಅಭಿ ಇಷ್ಟ ಆಗ್ತಾಳೆ’ ಎಂದು ತುಂಬ ವಿಶ್ವಾಸದಿಂದ ಹೇಳುತ್ತಾರೆ ಅದಿತಿ ಪ್ರಭುದೇವ.