ಕಾಂತಾರ ಆರೋಪ 01 : ದೈವಕ್ಕೂ ವೈದಿಕ ಆಚರಣೆ, ಸಂಕೇತಗಳಿಗೂ ಸಂಬಂಧವಿಲ್ಲ.ವೈದಿಕ ಆಚರಣೆಯನ್ನು ತುರುಕಲಾಗಿದೆ
ಉತ್ತರ : ಯಾವುದನ್ನೂ ತುರುಕಿಲ್ಲ. ಹಲವು ಬ್ರಾಹ್ಮಣರೂ ತಮ್ಮ ತಮ್ಮ ತೋಟ, ಮನೆಗಳಲ್ಲಿ ಭೂತದ ಕೋಲ ಮಾಡುತ್ತಾರೆ. ದೈವಸ್ಥಾನಗಳೂ ಇವೆ. ಧಣಿಯ ಮನೆಯ ಒಳಗೆ ಹೋಗಬೇಡ ಎನ್ನುವ ನಾಯಕನೇ, ಕೊನೆಯಲ್ಲಿ ಅವನ ಎದುರೇ ಕುಳಿತು ಊಟ ಮಾಡುವ ದೃಶ್ಯವಿದೆ. ಇಷ್ಟೆಲ್ಲ ಆಗಿ ಯಾರ ಜಾತಿ ಯಾವುದು ಎನ್ನುವುದನ್ನ ಎಲ್ಲಿಯೂ ತೋರಿಸಿಲ್ಲ. ಅವರೇ ತೋರಿಸದ ಜಾತಿಯನ್ನು ಹುಡುಕುವುದೇಕೆ?
ಕಾಂತಾರ ಆರೋಪ 02 : ಕಾಡನ್ನು ಕಡಿಯುವುದು, ಶಿಕಾರಿಯನ್ನು ವೈಭವೀಕರಿಸಲಾಗಿದೆ
ಉತ್ತರ : ಚಿತ್ರದ ಥೀಮ್ ಅದೇ. ತಾನು ಮಾಡುವ ಎಲ್ಲ ಅಪರಾಧಗಳನ್ನೂ ತಿದ್ದಿಕೊಳ್ಳುವ ಕ್ಲೈಮಾಕ್ಸ್ನಲ್ಲಿಯೇ ಉತ್ತರ ಅಡಗಿದೆ. ಅದು ತಪ್ಪು ಎಂಬ ಸಂದೇಶವೇ ಚಿತ್ರದ ಕೊನೆಯಲ್ಲಿದೆ.
ಕಾಂತಾರ ಆರೋಪ 03 :ಮಾಂಸಾಹಾರ ತ್ಯಜಿಸಿ ದೈವದ ಪಾತ್ರ ಮಾಡಿದೆ ಎನ್ನುವುದಕ್ಕೂ ಟೀಕೆ
ಉತ್ತರ : ದೈವವೇ ಇರಲಿ ಅಥವಾ ಬೇರಾವುದೇ ದೇವರ ಪಾತ್ರವೇ ಇರಲಿ. ಕಲೆಯನ್ನು ಪೂಜಿಸುವವರು ನಂಬಿಕೆಯಿರುವವರು ಅದನ್ನು ಪಾಲಿಸುತ್ತಾರೆ. ಬಯಲುಸೀಮೆ ನಾಟಕಗಳಲ್ಲಿ ಶನಿ ಪ್ರಭಾವ/ಸತ್ಯವ್ರತ/ಸತ್ಯಹರಿಶ್ಚಂದ ಮೊದಲಾದ ನಾಟಕಗಳಲ್ಲಿ ಶನಿಯ ಪಾತ್ರ ಮಾಡುವವರೂ ಅದನ್ನೇ ಪಾಲಿಸುತ್ತಾರೆ. ಇಷ್ಟಕ್ಕೂ ರಿಷಬ್ ಶೆಟ್ಟಿಯವರೇ ಇದು ನನ್ನ ನಂಬಿಕೆ ಎಂದಿದ್ದಾರೆ. ನೀವೂ ಹೀಗೆಯೇ ಮಾಡಿ ಎಂದೇನೂ ಹೇಳಿಲ್ಲ. ಅವರು ನನ್ನ ನಂಬಿಕೆ ಇದು ಎಂದು ಹೇಳಿಕೊಂಡರೆ ಏನು ತಪ್ಪು?
ಕಾಂತಾರ ಆರೋಪ 04 : ದೈವ ಹಾಗೂ ಭೂತಕೋಲದ ವಿವರಣೆ ಬೇಕಿತ್ತು. ಗೊತ್ತಿಲ್ಲದೆ ಇರುವವರಿಗೆ ಅದು ಅರ್ಥವಾಗಲ್ಲ
ಉತ್ತರ : ನಾವು ನೋಡುತ್ತಿರುವುದು ಸಿನಿಮಾ. ಡಾಕ್ಯುಮೆಂಟರಿ ಅಲ್ಲ.
ಕಾಂತಾರ ಆರೋಪ 05 : ಫಾರೆಸ್ಟ್ ಅಧಿಕಾರಿಗಳನ್ನು ಜನವಿರೋಧಿಗಳು ಎಂಬಂತೆ ತೋರಿಸಲಾಗಿದೆ
ಉತ್ತರ : ಕಿಶೋರ್ ಪಾತ್ರ ಬಿಟ್ಟರೆ ಉಳಿದವರು ಜನಸ್ನೇಹಿಯಾಗಿಯೇ ಇರುತ್ತಾರೆ. ಸಹನೆಯಿಂದ ಇರು. ಜನರನ್ನು ಮನವೊಲಿಸು ಎನ್ನುವವರೂ ಇದ್ದಾರೆ. ಹಾಗೆ ನೋಡಿದರೆ ಅಂತಹವರೇ ಹೆಚ್ಚು ಇದ್ದಾರೆ. ಇದು ವಾಸ್ತವಕ್ಕೆ ಹತ್ತಿರವಾಗಿಯೂ ಇದೆ.
ಕಾಂತಾರ ಆರೋಪ 06 : ನಾಯಕನನ್ನು ನೋಡಿದರೆ ಸಿಡುಕುವ ನಾಯಕಿ ಏಕಾಏಕಿ ಪ್ರೀತಿಯಾಗುತ್ತದೆ.
ಉತ್ತರ : ಹುಸಿಮುನಿಸಿಗೂ ಕೋಪಕ್ಕೂ ವ್ಯತ್ಯಾಸ ತಿಳಿದುಕೊಳ್ಳವರಿಗೆ ಪ್ರೀತಿಯ ಅರ್ಥವೇ ಗೊತ್ತಿಲ್ಲ ಎಂದು ಹೇಳಬಹುದು
ಕಾಂತಾರ ಆರೋಪ 07 : ಚಿತ್ರದ ಕೊನೆಗೆ ಪರಿಹಾರವೇ ಸಿಗುವುದಿಲ್ಲ. ದೈವದ ಭ್ರಮೆ ತೋರಿಸಿ ಚಿತ್ರ ಮುಗಿಸುತ್ತಾರೆ
ಉತ್ತರ : ಅದು ಸಿನಿಮಾ. ಅಷ್ಟಕ್ಕೂ ಈ ಹಿಂದೆಯೂ ಜನ ಇಂತಹ ಚಿತ್ರಗಳನ್ನು ಎಂಜಾಯ್ ಮಾಡಿದ್ದಾರೆ. ಡಾ.ರಾಜ್ ಚಿತ್ರಗಳಲ್ಲಿ ವಿಲನ್ನ್ನು ಹೀರೋ ಕೊಲ್ಲುವುದಕ್ಕಿಂತ ಹೆಚ್ಚಾಗಿ ಖಳನಾಯಕ ಮನಃಪರಿವರ್ತನೆಯಾಗುವ, ಪೊಲೀಸರು ಶಿಕ್ಷೆ ಕೊಡುವ ಕ್ಲೈಮಾಕ್ಸ್ ಇರುತ್ತಿತ್ತು. ಒಂದೆರಡು ಚಿತ್ರಗಳನ್ನು ಬಿಟ್ಟರೆ. ಇಲ್ಲಿಯೂ ಅದೇ ರೀತಿ ಕ್ಲೈಮಾಕ್ಸ್ ಇದೆ. ಸಂಘರ್ಷಕ್ಕೆ ಸಾಮರಸ್ಯವೇ ಮದ್ದು ಎಂಬ ಕ್ಲೈಮಾಕ್ಸ್ ಇದೆ.
ಕಾಂತಾರ ಆರೋಪ 08 :ಬೀಡಿ ಸೇದುವ, ಕುಡಿಯುವ ದೃಶ್ಯಗಳು ಹೆಚ್ಚಾಗಿವೆ
ಉತ್ತರ : ಸಹಜ ಪಾತ್ರಗಳು ಹೇಗಿರುತ್ತವೆಯೋ ಹಾಗೆಯೇ ರಚಿಸಲಾಗಿದೆ. ಕ್ಲೈಮಾಕ್ಸ್ಗೂ ಮುನ್ನ ಹೆಂಡ ಕಂಡರೆ ಬಾಚಿಕೊಳ್ಳುವ ಶಿವನ ಪಾತ್ರ, ಧಣಿಯ ಮನೆಯಲ್ಲಿ ಮದ್ಯವನ್ನು ನಿರಾಕರಿಸುತ್ತದೆ.
ಇವುಗಳನ್ನು ಬಿಟ್ಟರೆ ರಕ್ಷಿತ್ ಶೆಟ್ಟಿ ಸಿನಿಮಾ ಪ್ರಚಾರದಲ್ಲಿ ಆಡಿದ ಮಾತುಗಳೂ ವಿವಾದಕ್ಕೆ ಕಾರಣವಾಗಿವೆ. ಕರಾವಳಿ ಪರಶುರಾಮನ ಸೃಷ್ಟಿ ಎನ್ನುವ ನಂಬಿಕೆ ಇದೆ. ಇದು ಸುಳ್ಳು. ರಿಷಬ್ ಶೆಟ್ಟಿಯವರೇ ಹೇಳಿರೋ ಹಾಗೆ ಕರಾವಳಿ ಪರಶುರಾಮನ ಸೃಷ್ಟಿ ಎನ್ನುವ ನಂಬಿಕೆಯೂ ಇದೆ. ಅದರಲ್ಲಿಯೇ ಹಲವು ನಂಬಿಕೆಗಳಲ್ಲಿ ಅದೂ ಒಂದು ಎಂಬ ಸ್ಪಷ್ಟತೆ ಇರುವಾಗ ಗೊಂದಲಕ್ಕೆ ಆಸ್ಪದವಿಲ್ಲ. ಶೆಟ್ಟರ ಗ್ಯಾಂಗ್ ಎನ್ನುವ ಆರೋಪವೂ ಅಷ್ಟೆ. ಅವರಿಗೆ ಚೆನ್ನಾಗಿ ಒಡನಾಟವಿದ್ದವರ ಜೊತೆ ಕೆಲಸ ಮಾಡಿದರೆ ತಪ್ಪೇನಿದೆ? ರಾಜ್ ಚಿತ್ರಗಳನ್ನೇ ತೆಗೆದುಕೊಂಡರೆ ಅವರ ಚಿತ್ರಗಳಲ್ಲಿ ಬಹುತೇಕ ಅವವೇ ಕಲಾವಿದರಿರುತ್ತಿದ್ದರು. ಇನ್ನು ವೈಯಕ್ತಿಕ ರಾಜಕೀಯ ಅಭಿಪ್ರಾಯಗಳು ಅವರ ಸ್ವಂತದ್ದು. ಅವರು ಕಾಂಗ್ರೆಸ್ ಇಷ್ಟಪಡ್ತಾರೋ. ಬಿಜೆಪಿಯನ್ನು ಇಷ್ಟಪಡ್ತಾರೋ.. ಇಂತಹವರನ್ನೇ ಇಷ್ಟಪಡು ಅಂತಾ ಹಠ ಮಾಡೋದ್ಯಾಕೆ?
ಕೊನೆಯದಾಗಿ.. ಚಿತ್ರ ನೋಡಿದವರು ಮೆಚ್ಚಿದ್ದಾರೆ. ದೈವ, ಭೂತಕೋಲದ ಪರಿಚಯವೇ ಇಲ್ಲದ ಉತ್ತರ ಕರ್ನಾಟಕ, ಬಯಲುಸೀಮೆಯಲ್ಲಿಯೂ ಚಿತ್ರ ಜನಮೆಚ್ಚುಗೆ ಗಳಿಸಿದೆ. ಎಲ್ಲರೂ ಮೆಚ್ಚಿದ್ದರಲ್ಲಿ ಕೊಂಕು ಹುಡುಕುವುದೂ ಒಂದು ಕಾಯಿಲೆಯಾ ಹೇಗೆ..?