ಕಾಂತಾರ ಚಿತ್ರ ಹಿಟ್ ಆದ ಕೆಲವು ದಿನಗಳಲ್ಲೇ ಈ ಸುದ್ದಿ ಹರಿದಾಡೋಕೆ ಶುರುವಾಯ್ತು. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರದ ಹೈಲೈಟ್ಸ್‍ಗಳಲ್ಲಿ ಒಂದು ಮ್ಯೂಸಿಕ್. ಅಜನೀಶ್ ಲೋಕನಾಥ್ ಮ್ಯೂಸಿಕ್ ಗುಂಗು ಹಿಡಿಸುತ್ತದೆ. ಚಿತ್ರದ ಕಥೆಗೆ ಕಥೆಯ ವೇಗಕ್ಕೆ ಹೊಂದಿಕೊಂಡು ಹೋಗುವ ಪ್ರೇಕ್ಷಕರನ್ನು ಬೇರೆಯದೇ ಲೋಕಕ್ಕೆ ತೆಗೆದುಕೊಂಡು ಹೋಗುವುದು ಅಜನೀಶ್ ಲೋಕನಾಥ್ ಸಂಗೀತ. ಚಿತ್ರದಲ್ಲಿ ವರಾಹ ರೂಪಂ.. ಹಾಡು ಚಿತ್ರಕ್ಕೊಂದು ಕಿರೀಟವಿದ್ದಂತೆ. ಆದರೆ ಅದೇ ಹಾಡನ್ನು ಕದ್ದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
5 ವರ್ಷಗಳ ಹಿಂದೆ ಮಲಯಾಳಂನಲ್ಲಿ ನವರಸಂ ಅನ್ನೋ ಆಲ್ಬಂ ಬಂದಿತ್ತು. ಅದರಲ್ಲಿ ಬರುವ ಥೈಕ್ಕುಡಂ ಬ್ರಿಡ್ಜ್‍ನ ಮ್ಯೂಸಿಕ್ ಹಾಗೂ ಕಾಂತಾರದ ವರಾಹ ರೂಪಂ ಮ್ಯೂಸಿಕ್ ಎರಡೂ ಒಂದೇ ಎನ್ನುವುದು ಆರೋಪ. ಈ ಬಗ್ಗೆ ಸ್ಪೆಷಲ್ಲು ಡಾಟ್ ಕಾಮ್ ಕೂಡಾ ವರದಿ ಮಾಡಿತ್ತು.
ಆ ಹಾಡನ್ನು ನಾನೂ ಕೇಳಿದ್ದೇನೆ. ಸ್ಫೂರ್ತಿಗೊಂಡಿದ್ದೇನೆ. ಆದರೆ ಈ ವರಾಹ ರೂಪಂ ಹಾಡು.. ಕದ್ದಿದ್ದಲ್ಲ ಎನ್ನುವುದು ಅಜನೀಶ್ ಲೋಕನಾಥ್ ಪ್ರತಿಕ್ರಿಯೆ. ಅಲ್ಲದೆ ನವರಸಂನ ಹಾಡಿನಲ್ಲಿರುವ ತೋಡಿ, ವರಾಳಿ ಹಾಗೂ ಮಖಾರಿ ರಾಗಗಳನ್ನೇ ಬಳಸಿದ್ದೇವೆ. ಹೀಗಾಗಿ ಸಂಗೀತದ ಹೋಲಿಕೆಯ ಭಾವನೆ ಬರುತ್ತದೆ. ಆದರೆ ಸಂಯೋಜನೆ ಬೇರೆ. ಟ್ಯೂನ್ ಕೂಡಾ ಬೇರೆ. ಕಂಪೋಸಿಷನ್ ಬೇರೆ. ರಾಗಗಳ ಛಾಯೆ ಒಂದೇ ರೀತಿ ಇರುತ್ತಾದ ಕಾರಣ ಹಾಗೆ ಅನಿಸುತ್ತದೆ. ಆದರೆ ಒಬ್ಬ ಸಂಗೀತ ನಿರ್ದೇಶಕನಿಗೆ ಅದರ ಸೂಕ್ಷ್ಮಗಳು ಅರ್ಥವಾಗುತ್ತವೆ ಎಂದಿದ್ದಾರೆ ಅಜನೀಶ್ ಲೋಕನಾಥ್.
ಇದು ಕರ್ಣಾಟಕ್ ಸಂಗೀತದಲ್ಲಿ ಮೂಡಿ ಬಂದಿದ್ದು. ಹಾಗೇನಾದರೂ ಇದು ಕಾಪಿ ಆಗಿದ್ದರೆ ಇಷ್ಟು ಹೊತ್ತಿಗೆ ಅವರು ಕಾಪಿರೈಟ್ ಉಲ್ಲಂಘನೆ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದರು. ಹಾಗೇನೂ ಆಗಿಲ್ಲ. ಒಬ್ಬ ಸಂಗೀತ ನಿರ್ದೇಶಕನಿಗೆ ವ್ಯತ್ಯಾಸ ಚೆನ್ನಾಗಿ ಗೊತ್ತಿರುತ್ತದೆ ಎನ್ನುವುದು ಅಜನೀಶ್ ವಾದ.