ಶಿವ ರಾಜ್ ಕುಮಾರ್ ಕನ್ನಡ ಚಿತ್ರರಂಗದವರು ಕರೆಯೋದೇ ಶಿವಣ್ಣ ಅಂಥಾ. ಪುನೀತ್ ಮತ್ತು ರಾಘವೇಂದ್ರ ರಾಜಕುಮಾರ್ ಅವರಷ್ಟೇ ನನ್ನ ತಮ್ಮಂದಿರಲ್ಲ ಎನ್ನುವ ಶಿವಣ್ಣ, ತಮ್ಮ ಹತ್ತಿರ ಬಂದವರನ್ನು ಆತ್ಮೀಯತೆಯಿಂದ ಮಾತನಾಡಿಸಿಯೇ ಅಣ್ಣನಾದವರು. ಈಗ ತಮಿಳಿನಲ್ಲೂ ಶಿವಣ್ಣಗೆ ಇನ್ನೊಬ್ಬ ತಮ್ಮ ಸಿಕ್ಕಿದ್ದಾರೆ. ತಮಿಳಿನಲ್ಲಿ ಹಲವು ಕಲಾವಿದರು ಶಿವಣ್ಣ & ಕುಟುಂಬಕ್ಕೆ ಆತ್ಮೀಯರು. ತೆಲುಗಿನಲ್ಲೂ ಆತ್ಮೀಯರು. ಅದರಲ್ಲಿಯೂ ರಜನಿಕಾಂತ್ ದೊಡ್ಮನೆಯ ಹಿರಿಯ ಸದಸ್ಯರಲ್ಲಿ ಒಬ್ಬರು. ಈಗ ಅವರ ಅಳಿಯ ಧನುಷ್ ಅವರಿಗೆ ಶಿವಣ್ಣ ಅಣ್ಣನಾಗುತ್ತಿದ್ದಾರೆ.
ಕನ್ನಡದಲ್ಲಿ 125ನೇ ಸಿನಿಮಾ ವೇದ ಚಿತ್ರದ ರಿಲೀಸ್ ಹೊತ್ತಲ್ಲಿ, ಬಿಡುವಿಲ್ಲದೆ ಕೆಲಸ ಮಾಡುತ್ತಿರುವ ಕೆಲಸ ಮಾಡುತ್ತಿರುವ ಸಮಯದಲ್ಲಿ ಶಿವಣ್ಣ ಮತ್ತೊಂದು ಚಿತ್ರಕ್ಕೆ ಯೆಸ್ ಎಂದಿದ್ದಾರೆ. ಧನುಷ್ ನಟನೆಯ ಹೊಸ ಚಿತ್ರ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಧನುಷ್ ಅಣ್ಣನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಒಂದೆಡೆ ತಮ್ಮದೇ ನಿರ್ಮಾಣದ ವೇದದ ಬಿಡುಗಡೆಯಲ್ಲಿ ಬ್ಯಸಿಯಾಗಿರುವ ಶಿವಣ್ಣ, ಮತ್ತೊಂದೆಡೆ ಘೋಸ್ಟ್, ಕರಟಕ ದಮನಕ, ನೀ ಸಿಗೋವರೆಗೂ.. ಮೊದಲಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಜೊತೆಯಲ್ಲಿಯೇ ರಜನಿಕಾಂತ್ ಜೊತೆ ಜೈಲರ್ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಅದು ತಮಿಳಿನ ಸಿನಿಮಾ. ಮಾವನ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿತ್ತಿರೋ ಶಿವಣ್ಣ, ಅಳಿಯ ಧನುಷ್ ಚಿತ್ರದಲ್ಲಿ ಧನುಷ್ ಅಣ್ಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಕ್ಯಾಪ್ಟನ್ ಮಿಲ್ಲರ್ ಸ್ವಾತಂತ್ರ್ಯ ಪೂರ್ವದ ಕಥೆ ಹೊಂದಿದ್ದು, ಚಿತ್ರದಲ್ಲಿ ತಮಗೆ ಒಂದು ಪಾತ್ರ ಮಾಡುವಂತೆ ಕರೆ ಬಂದಿದೆ ಎನ್ನುವುದನ್ನು ಶಿವಣ್ಣ ಹೇಳಿಕೊಂಡೂ ಇದ್ದರು. ಚಿತ್ರ ತಂಡದಿಂದ ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲವಾದರೂ, ಶಿವಣ್ಣ ಧನುಷ್ ಅಣ್ಣನಾಗುವುದು ಬಹುತೇಕ ಪಕ್ಕಾ ಎನ್ನುತ್ತಿವೆ ಮೂಲಗಳು.
ರಾಕಿ ಸಿನಿಮಾ ಖ್ಯಾತಿಯ ಮಥೇಶ್ವರನ್ ನಿರ್ದೇಶನದ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಸಂದೀಪ್ ಕಿಷನ್, ಪ್ರಿಯಾಂಕಾ ಅರುಲ್ ಮೋಹನ್ ಕೂಡಾ ನಟಿಸುತ್ತಿದ್ದಾರೆ.