ದೇಶದ ಎಲ್ಲ ಕಡೆ ಟ್ರಾಫಿಕ್ ರೂಲ್ಸ್ ಇದೆ. ಪೊಲೀಸರು ಇಲ್ಲದೇ ಹೋದರೂ ಅಲ್ಲಿರೋ ಕ್ಯಾಮೆರಾ ಕಣ್ಣಿಗೆ ಬಿದ್ದರೆ ಸಾಕು.. ನೋಟಿಸ್ ಮನೆಗೇ ಬರುತ್ತೆ. ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಈ ಸಿಸ್ಟಂ ಜಾರಿಯಲ್ಲಿದೆ. ಯಾರೇ ಆಗಿರಲಿ.. ಏನೇ ಟ್ರಾಫಿಕ್ ಉಲ್ಲಂಘನೆ ಆಗಿರಲಿ.. ಬೈಕ್ ಓಡಿಸುವಾಗ ಹೆಲ್ಮೆಟ್ ಧರಿಸಿಲ್ಲದಿದ್ದರೆ, ಹಿಂಬದಿಯವರು ಹೆಲ್ಮೆಟ್ ಧರಿಸಿಲ್ಲದಿದ್ದರೆ, ಟ್ರಾಫಿಕ್ನಲ್ಲಿ ಗೆರೆ ದಾಟಿದ್ದರೆ, ಸಿಗ್ನಲ್ ಬಿದ್ದ ನಂತರ ಉಲ್ಲಂಘಿಸಿ ಹೋಗಿದ್ದರೆ..ಅಷ್ಟೇ ಯಾಕೆ, ಅಪಾಯಕಾರಿಯಾಗಿ ಸವಾರಿ ಮಾಡಿದ್ದರೆ, ವ್ಹೀಲಿಂಗ್ ಮಾಡಿದ್ದರೆ.. ಸಣ್ಣದೋ.. ದೊಡ್ಡದೋ.. ತಪ್ಪು ಎಂಥದ್ದೇ ಆಗಿದ್ದರೂ.. . ವಾಹನ ಚಾಲನೆ ಮಾಡುವಾಗ ಒಂದು ಸಣ್ಣ ತಪ್ಪು ಮಾಡಿದರೂ ಸಹ ಟ್ರಾಫಿಕ್ ಪೊಲೀಸರು ಮತ್ತು ಅವರ ಕ್ಯಾಮೆರಾ ಕಣ್ಣುಗಳಿಗೆ ಸಿಕ್ಕಿಹಾಕಿಕೊಳ್ಳುತ್ತೇವೆ.
ಯಾವುದೇ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ನೋಟಿಸ್ ಮನೆಗೆ ಬರೋದು ಪಕ್ಕಾ. ಇದು ಈಗಾಗಲೇ ಜಾರಿಯಲ್ಲಿರೋ ಕ್ರಮ. ದಂಡ ಕಟ್ಟಿದ ಮೇಲೆ ಅಯ್ಯೋ ಆ ತಪ್ಪು ಮಾಡಬಾರದಿತ್ತು ಎಂದು ತಲೆ ಮೇಲೆ ಕೈ ಹೊತ್ತುಕೊಳ್ತೇವೆ. ಏನೇ ಮುಂಜಾಗ್ರತೆ ವಹಿಸಿದರೂ.. ಒಮ್ಮೊಮ್ಮೆ ತಪ್ಪಾಗುತ್ತೆ. ತಮಗರಿವಿಲ್ಲದೆ ತಪ್ಪು ಮಾಡಿಬಿಡ್ತಾರೆ.
ಅದನ್ನು ತಪ್ಪಿಸಿಕೊಳ್ಳೋಕೆ ಒಂದು ಉಪಾಯವೂ ಇದೆ. ಪರಿಹಾರವೂ ಇದೆ.
ದಂಡ ತಪ್ಪಿಸಿಕೊಳ್ಳೋಕೆ ಪರಿಹಾರ ಇರೋದು ಗೂಗಲ್ ಮ್ಯಾಪ್ನಲ್ಲಿ. ಇದನ್ನು ಸರಿಯಾಗಿ ಫಾಲೋ ಮಾಡಿದರೆ ದಂಡ ಕಟ್ಟೋದ್ರಿಂದ ಬಚಾವ್ ಆಗಬಹುದು. ಏಕೆಂದರೆ, ಗೂಗಲ್ ಮ್ಯಾಪ್ಸ್ ನಮ್ಮ ವಾಹನಗಳ ವೇಗದ ಮಿತಿಯ ಬಗ್ಗೆ ನಿಖರವಾಗಿ ಎಚ್ಚರಿಸುವ ವೈಶಿಷ್ಟ್ಯವನ್ನೂ ಹೊಂದಿದೆ. ಹಾಗಾದರೆ, ಗೂಗಲ್ ಮ್ಯಾಪ್ಸ್ ಸಹಾಯದಿಂದ ವೇಗ ಮಿತಿ ಎಚ್ಚರಿಕೆಗಳನ್ನು ಪಡೆಯುವುದು ಹೇಗೆ ಮತ್ತು ಟ್ರಾಫಿಕ್ ಫೈನ್‌ನಿಂದ ಮುಕ್ತರಾಗುವುದು ಹೇಗೆ.. ಇಲ್ಲಿದೆ ಒಂದಿಷ್ಟು ಟಿಪ್ಸ್.
ಅಂಡ್ರಾಯ್ಡ್ ಬಳಕೆದಾರರಿಗೆ..
ಗೂಗಲ್ ಮ್ಯಾಪ್ಸ್ ಅಪ್ಲಿಕೇಷನ್ ಬಳಸಿ ವಾಹನ ಚಲಾಯಿಸುವಾಗ ಮೊಬೈಲ್ ಸ್ಕ್ರೀನ್ ಮೇಲೆ ಸ್ಪೀಡೋಮೀಟರ್ ಸೇರಿಸಲು ಅವಕಾಶವಿದೆ. ಈ ಆಪ್ಷನ್ ಪೂರ್ವನಿಯೋಜಿತವಾಗಿ ಸಕ್ರಿಯವಾಗಿರುವುದಿಲ್ಲ. ಅಂದರೆ ಸ್ಮಾರ್ಟ್ ಫೋನ್ ಬಳಸುವವರು ತಮಗೆ ಬೇಕಾದ ರೀತಿ ಸೆಟ್ಟಿಂಗ್ ಮಾಡಿಕೊಂಡು ಅಲರ್ಟ್ ಮಾಡಿಕೊಳ್ಳಬೇಕು.
ಅದನ್ನು ಅಪ್ಡೇಟ್ ಮಾಡಿದ ಮೇಲೆ ಗೂಗಲ್ ಮ್ಯಾಪ್ ಆ ವೇಗಮಿತಿ ಲಭ್ಯವಿರುವ ಪ್ರದೇಶಗಳಲ್ಲಿ ನೀವು ಓವರ್ ಸ್ಪೀಡ್ ಹೋದ ತಕ್ಷಣ ಎಚ್ಚರಿಕೆ ಕೊಡುತ್ತೆ.
ನಿಮ್ಮ ಸ್ಮಾರ್ಟ್ ಫೋನ್ನಲ್ಲಿ ಗೂಗಲ್ ಮ್ಯಾಪ್ಸ್ ಅಪ್ಲಿಕೇಷನ್ ಓಪನ್ ಮಾಡಿ. ಅದರಲ್ಲಿಯೇ ಮೇಲೆ ಬಲಗಡೆ ಮೂಲೆಯಲ್ಲಿ ನಿಮ್ಮ ಗೂಗಲ್ ಪ್ರೊಫೈಲ್ನ್ನು ಒತ್ತಿ.
ನಂತರ ಮೆನುಗೆ ಹೋಗಿ ಸೆಟ್ಟಿಂಗ್ಸ್ ಆಯ್ಕೆ ಮಾಡಿಕೊಳ್ಳಿ. ಅದನ್ನು ಟ್ಯಾಪ್ ಮಾಡಿ ನಂತರ ನೇವಿಗೇಷನ್ ಸೆಟ್ಟಿಂಗ್ ತೆಗೆದುಕೊಳ್ಳಿ. ಅಲ್ಲಿಯೇ ಕೆಳಗೆ ಹೋದರೆ.. ಅಂದರೆ ಸ್ಕ್ರಾಲ್ ಮಾಡಿದರೆ, ಕೆಳಗೆ ನಿಮಗೆ ಸ್ಪೀಡೋಮೀಟರ್ ಆಪ್ಷನ್ ಕಾಣಿಸುತ್ತೆ. ಅದನ್ನು ಕ್ಲಿಕ್ ಮಾಡಿದರೆ ಆಯ್ತು. ಆಕ್ಟಿವೇಟ್ ಆಗುತ್ತೆ. ನಂತರ ಅದು ನಿಮ್ಮನ್ನು ಕಾಯೋಕೆ ಶುರು ಮಾಡುತ್ತೆ.
ದೇಶದಲ್ಲಿ ಗೂಗಲ್ ಮ್ಯಾಪ್ಸ್ ಅತ್ಯಂತ ಹೆಚ್ಚು ಬಳಸುವ ಅಪ್ಲಿಕೇಶನ್‌ಗಳಲ್ಲಿ ಒಂದು. ಸ್ಮಾರ್ಟ್‌ಪೋನ್ ಇರಬೇಕಷ್ಟೆ. ಅದು ನಿಮ್ಮ ಸಹಾಯಕನಾಗಿರುತ್ತೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡೋಕೆ, ಟ್ರಾಫಿಕ್ ಸಿಗ್ನಲ್‌ಗಳಲ್ಲಿ ವೇಯ್ಟಿಂಗ್ ಟೈಮ್ ಕಡಿಮೆ ಮಾಡೋಕೆ ಈಗ ಬೆಂಗಳೂರು ಪೊಲೀಸರು ಕೂಡಾ ಗೂಗಲ್ ಜೊತೆ ಕೈಜೊಡಿಸಿದ್ದಾರೆ. ಹೀಗಾಗಿ ಗೂಗಲ್ ಮ್ಯಾಪ್ಸ್ ತನ್ನ ಬಳಕೆದಾರರಿಗೆ ಪ್ರತಿ ಮಾಹಿತಿಯನ್ನೂ ಕೊಡುತ್ತಾ ಹೋಗುತ್ತೆ.
ನಗರಗಳಲ್ಲಿ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕಾಯುವಿಕೆ ಸಮಯವನ್ನು ಕಡಿಮೆ ಮಾಡಲು ಇರುವ ಟ್ರಾಫಿಕ್ ಮಾದರಿಗಳು ಮತ್ತು ಯಂತ್ರದ ಕಲಿಕೆಯ ಶಕ್ತಿಯನ್ನು ಗೂಗಲ್ ಬಳಸಿಕೊಳ್ಳುತ್ತಿದೆ.