ನಟ ಸುದರ್ಶನ್ ಯಾರು ಎಂದರೆ ವಿಜಯನಗರದ ವೀರಪುತ್ರ ಚಿತ್ರದ ಹೀರೋ. ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು.. ಎಂಬ ಹಾಡನ್ನು ಬ್ಲಾಕ್ & ವೈಟ್ ಸಿನಿಮಾಗಳಲ್ಲಿ ನೋಡಿದ್ದೀರಲ್ಲ.. ಅದೇ ಸುದರ್ಶನ್. ದ್ವಾರಕೀಶ್ ಅಭಿನಯದ ಪ್ರಚಂಡ ಕುಳ್ಳ ಚಿತ್ರದ ಕಿಂಕಿಣಿ ಶರ್ಮ ನೆನಪಿದ್ದಾನಲ್ಲವೇ.. ಆ ಸುದರ್ಶನ್. ಡಾ.ರಾಜ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಪ್ರಭಾಕರ್, ರವಿಚಂದ್ರನ್ ಮೊದಲಾದ ದಿಗ್ಗಜರ ಜೊತೆ ನಟಿಸಿದ್ದ ಸುದರ್ಶನ್ ನಟಿಸಿದ್ದ ಕೊನೆಯ ಚಿತ್ರ ಉಪ್ಪಿ-02.
ಕನ್ನಡ ಚಿತ್ರರಂಗವನ್ನು ಕಟ್ಟಿ ಬೆಳೆಸಿದ ಆರ್. ನಾಗೇಂದ್ರರಾವ್ ಅವರ ಪುತ್ರ. ಆಗಿನ ಕಾಲಕ್ಕೆ ಕನ್ನಡ ಚಿತ್ರರಂಗ ಕಂಡ ಆರಡಿ ಎತ್ತರದ ಅಜಾನುಬಾಹು. ದೈತ್ಯ ದೇಹ. ನೋಡಲು ಸುಂದರಾಂಗ. ಕನ್ನಡದಲ್ಲಷ್ಟೇ ಅಲ್ಲದೆ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲೂ ನಟಿಸಿದ್ದ ಸುದರ್ಶನ್ ಅವರ ಕೊನೆಯ ದಿನಗಳು ದುರ್ಬರವಾಗಿದ್ದವು.
ಸಿನಿಮಾ ನಿರ್ಮಾಣಕ್ಕೆ ಕೈ ಸುಟ್ಟುಕೊಂಡಿದ್ದ ಸುದರ್ಶನ್ ಅವರಿಗೆ ನಷ್ಟವಾಗಿತ್ತಷ್ಟೇ ಅಲ್ಲದೆ, ನಂಬಿದ್ದ ಕೆಲವರು ಮೋಸವನ್ನೂ ಮಾಡಿದ್ದರು. ಅಂತಹ ಸುದರ್ಶನ್ ಅವರ ಕುಟುಂಬದ ನೆರವಿಗೆ ಬಂದಿರುವುದು ನಟ ದರ್ಶನ್. ಸುದರ್ಶನ್ ಅವರು ನಟಿಸಿದ್ದ ಬಹುತೇಕ ಚಿತ್ರಗಳಲ್ಲಿ ದರ್ಶನ್ ಅವರ ತಂದೆ ತೂಗುದೀಪ ಶ್ರೀನಿವಾಸ್ ಕೂಡಾ ನಟಿಸಿದ್ದರು. ಹೀಗಾಗಿ ವೈಯಕ್ತಿಕವಾಗಿ ಕೌಟುಂಬಿಕ ಬಾಂಧವ್ಯವೂ ಇತ್ತು. ಇದೀಗ ಸುದರ್ಶನ್ ಅವರ ಪತ್ನಿ ಶೈಲಜಾ ಅವರು ಆಶ್ರಮವೊಂದರಲ್ಲಿದ್ದು, ಅವರ ಖರ್ಚುವೆಚ್ಚವನ್ನು ದರ್ಶನ್ ಅವರೇ ಭರಿಸುತ್ತಿದ್ದಾರೆ.
ವಿಶೇಷ ಎಂದರೆ ಸುದರ್ಶನ್ ಅವರು ನಿಧನರಾಗಿದ್ದು 2017ರಲ್ಲಿ. ಇದೀಗ 8 ವರ್ಷಗಳ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಇಷ್ಟು ದಿನ ದರ್ಶನ್ ಅವರು ಎಲ್ಲಿಯೂ ಈ ಬಗ್ಗೆ ಹೇಳಿಕೊಂಡಿರಲಿಲ್ಲ. ಈಗಲೂ ದರ್ಶನ್ ಎಲ್ಲಿಯೂ ಹೇಳಿಕೊಂಡಿಲ್ಲ. ದರ್ಶನ್ ಅವರ ಈ ಸೇವೆಯ ಕೆಲಸವನ್ನು ಬಹಿರಂಗ ಮಾಡಿರುವುದು ಪತ್ರಕರ್ತ ಗಣೇಶ್ ಕಾಸರಗೋಡು.
ಸುದರ್ಶನ್ ಅವರ ಪತ್ನಿ ಶೈಲಶ್ರೀ ಕೂಡ ಕಲಾವಿದೆ. ಕನ್ನಡ ಚಿತ್ರರಂಗಕ್ಕೆ ನಾಗೇಂದ್ರ ರಾವ್ ಕುಟುಂಬ ನೀಡಿದ ಕೊಡುಗೆ ಅಪಾರ. ಸುದರ್ಶನ್ ಮರಣಾ ನಂತರ ಅವರ ಪತ್ನಿ ಶೈಲಶ್ರೀ ಒಬ್ಬಂಟಿ ಆಗಿದ್ದಾರೆ. ಗಣೇಶ್ ಕಾಸರಗೋಡು ಅವರ ಪ್ರಕಾರ ʻʻಈ ಮೊದಲು ಅಪಾರ್ಟ್ಮೆಂಟ್ ಒಂದರಲ್ಲಿ ಶೈಲಶ್ರೀ ಅವರು ವಾಸವಿದ್ದರು. ಆದರೆ, ಅದರ ಮಾಲೀಕರು ಬಿಲ್ಡಿಂಗ್ ನೆಲಸಮ ಮಾಡಿದ್ದರಿಂದ ಶೈಲಶ್ರೀ ಅವರು ಬೇರೆ ನೆಲೆ ಕಂಡುಕೊಳ್ಳಬೇಕಿತ್ತು. ಆಗ ಹಿರಿಯ ನಟಿಯೊಬ್ಬರು ಶೈಲಶ್ರೀ ಸಹಾಯಕ್ಕೆ ಬಂದರು. ಅವರ ಸಲಹೆಯಂತೆ ಆಶ್ರಮ ಸೇರಿದರು. ಆರಂಭದಲ್ಲಿ ಖರ್ಚು ವೆಚ್ಚಗಳನ್ನು ಹಿರಿಯ ನಟಿಯೇ ನೋಡಿಕೊಳ್ಳುತ್ತಿದ್ದರು. ಆದರೆ, ತಿಂಗಳುಗಳು ಉರುಳಿದಂತೆ ಇದು ಸಾಧ್ಯವಾಗಿಲ್ಲ. ಯಾವಾಗ ಇದು ತಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಗೊತ್ತಾಯಿತೋ.. ಆಗ ವಿಷಯವನ್ನು ಆ ಹಿರಿಯ ನಟಿ ದರ್ಶನ್ ಕಿವಿಗೆ ಹಾಕಿದರು. ಆಗ ಸಹಾಯಕ್ಕೆ ಬಂದಿದ್ದು ದರ್ಶನ್. ಶೈಲಿಶ್ರೀ ಅವರ ಕೊನೆಗಾಲದವರೆಗೂ ಸಹಾಯ ಮಾಡಲು ದರ್ಶನ್ ಒಪ್ಪಿ ಮುಂದೆ ಬಂದಿದ್ದಾರೆ. ಬಲಗೈ ಕೊಟ್ಟಿದ್ದು, ಎಡಗೈ ಗೊತ್ತಾಗಬಾರದು ಎಂಬುದು ದರ್ಶನ್ ಅವರ ಪಾಲಿಸಿ. ಹೀಗಾಗಿ, ಇದನ್ನು ಅವರು ಹೇಳಿಕೊಂಡಿಲ್ಲ. ಈಗ ದರ್ಶನ್ ಮಾಡಿರುವ ಸಹಾಯಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಾ ಇದೆ ಎಂದು ಬರೆದುಕೊಂಡಿದ್ದಾರೆ ಗಣೇಶ್ ಕಾಸರಗೋಡು.
ಇದರ ನಡುವೆ ಯೂಟ್ಯೂಬರ್ ಒಬ್ಬರು ವೃದ್ಧಾಪ್ಯದಲ್ಲಿರುವ ನಟಿ ಶೈಲಶ್ರೀ ಅವರ ಸಂದರ್ಶನ ಮಾಡಿ ಏಳೆಂಟು ಎಪಿಸೋಡ್ ಮಾಡಿ ಹೋಗಿ ನಾಲ್ಕಾರು ಲಕ್ಷ ದುಡ್ಡು ಮಾಡಿದ್ರಂತೆ. ಅದನ್ನೂ ಹೇಳಿಕೊಂಡಿರುವ ಗಣೇಶ್ ಕಾಸರಗೋಡು, ಆ ಪತ್ರಕರ್ತ ಅಥವಾ ಯೂಟ್ಯೂಬರ್ ಯಾರು ಅನ್ನೋದನ್ನ ಹೇಳಿಲ್ಲ.