ಕನ್ನಡದ ಅಪರೂಪದ ಕಲಾವಿದ. ಎಲ್ಲವನ್ನೂ ನ್ಯಾಚುರಲ್ ಏನೋ ಎನ್ನುವಷ್ಟು ಸಹಜವಾಗಿ ನಟಿಸುವ ಅನಂತನಾಗ್ ಅವರಿಗೆ ಈ ಬಾರಿ ಪದ್ಮಭೂಷಣ ಪುರಸ್ಕಾರ ಸಂದಿದೆ. ನಮ್ಮ ಅನಂತನಾಗ್ ಅವರಿಗೊಂದು ಪದ್ಮ ಪುರಸ್ಕಾರ ಕೊಡಿ ಎಂದು ಅಭಿಮಾನಿಗಳು ಆಂದೋಲವನ್ನೇ ನಡೆಸಿದ್ದರು. ಪುನೀತ್ ರಾಜ್ ಕುಮಾರ್, ರಿಷಬ್ ಶೆಟ್ಟಿ, ಸಿಂಪಲ್ ಸುನಿ, ಯಶ್, ರಕ್ಷಿತ್ ಶೆಟ್ಟಿ, ಎಪಿ ಅರಜುನ್, ಕವಿರಾಜ್, ಸುದೀಪ್ ಸೇರಿದಂತೆ ಹಲವು ಕಲಾವಿದರು, ತಂತ್ರಜ್ಞರು ಅಭಿಯಾನ ನಡೆಸಿದ್ದರು. ಆ ಅಭಿಯಾನ 4 ವರ್ಷಗಳ ನಂತರ ಯಶಸ್ಸು ಕಂಡಿದೆ. ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪುರಸ್ಕಾರ ಸಂದಿದೆ.
ಕನ್ನಡದ ಕಲಾವಿದರಿಗೆ ಪದ್ಮ ಪುರಸ್ಕಾರಗಳು ಸಿಗುವುದೇ ಅಪರೂಪ ಎನ್ನುವುದು ಆರೋಪವಲ್ಲ, ಸತ್ಯವೂ ಹೌದು. ಹಲವು ವರ್ಷಗಳಿಂದ ಅನಂತ್ ನಾಗ್ ಅವರಿಗೆ ಪದ್ಮ ಪುರಸ್ಕಾರ ನೀಡಬೇಕು ಎಂಬ ಜನಾಭಿಪ್ರಾಯವೂ ರೂಪುಗೊಂಡಿತ್ತು. ಆ ಎಲ್ಲರ ಬೇಡಿಕೆ ಈ ಬಾರಿ ಫಲಿಸಿದೆ. ಈ ವರ್ಷ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ವಿಶೇಷ ಎಂದರೆ ಅನಂತ್ ನಾಗ್ ಅವರ ಸಾಧನೆಯ ಸಮೀಪಕ್ಕೂ ಬಾರದ ತೆಲುಗು, ತಮಿಳಿನ ಕಲಾವಿದರಿಗೂ ಪ್ರಶಸ್ತಿ ಘೋಷಿಸಲಗಿದೆ.
ಅನಂತ್ ನಾಗ್ ಕೇವಲ ಕಮರ್ಷಿಯಲ್ ನಟರಲ್ಲ. ಒಂದೆಡೆ ಕಮರ್ಷಿಯಲ್ ಸಿನಿಮಾ ಮಾಡುತ್ತಲೇ, ಮತ್ತೊಂದೆಡೆ ಪ್ರಯೋಗಾತ್ಮಕ ಚಿತ್ರಗಳಲ್ಲೂ ನಟಿಸುತ್ತಿದ್ದವರು. ಶ್ಯಾಂ ಬೆನಗಲ್ ಅವರಂತಹವರ ನೆಚ್ಚಿನ ನಟರಾಗಿದ್ದ ಅನಂತ್ ನಾಗ್ ಕನ್ನಡದಲ್ಲಿ ನಟಿಸಿರುವ 200ಕ್ಕೂ ಚಿತ್ರಗಳಲ್ಲಿ ಅವಿಸ್ಮರಣೀಯ ಚಿತ್ರಗಳು 50+ ಇವೆ. ಹೀಗಾಗಿಯೇ ಅನಂತ್ ನಾಗ್ ಅವರಿಗೆ ಪುರಸ್ಕಾರ ಸಂದಿರುವುದಕ್ಕೆ ರಿಷಬ್ ಶೆಟ್ಟಿ, ಸಿಂಪಲ್ ಸುನಿ, ಎಪಿ ಅರ್ಜುನ್.. ಹೀಗೆ ಹಲವು ನಟ ನಿರ್ದೇಶಕರು ಸಂತಸ ವ್ಯಕ್ತಪಡಿಸಿದ್ದಾರೆ. ಡಾ.ರಾಜ್ ಕುಮಾರ್ ನಂತರ ಪದ್ಮಭೂಷಣ ಪುರಸ್ಕಾರಕ್ಕೆ ಪಾತ್ರರಾಗಿರುವ ಕನ್ನಡದ ಕಲಾವಿದ ಅನಂತನಾಗ್ ಮಾತ್ರ.
ಅನಂತ್ ನಾಗ್ ಮತ್ತು ಡಾ.ರಾಜ್ ಒಟ್ಟಿಗೇ ಒಂದೆರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಭಕ್ತ ಪ್ರಹ್ಲಾದದಲ್ಲಿ ನಾರದನಾಗಿ, ಕಾಮನಬಿಲ್ಲು ಚಿತ್ರದಲ್ಲಿ ಗೆಳೆಯನಾಗಿ ನಟಿಸಿದ್ದಾರೆ. ಎಷ್ಟೋ ಬಾರಿ ಪೋಷಕ ನಟರಾಗಿ ನಟಿಸಿರುವ ಚಿತ್ರಗಳಲ್ಲಿ ಪ್ರೇಕ್ಷಕರು ಅನಂತ್ ಅವರ ಪೋಷಕ ಪಾತ್ರವನ್ನೇ ಹೀರೋ ಎಂಬಂತೆ ಸಂಭ್ರಮಿಸಿದ್ದಾರೆ. ಹಾಗಾದರೆ ಅನಂತ್ ಅವರೇಕೆ ಸ್ಟಾರ್ ಆಗಲಿಲ್ಲ ಎಂಬ ಮಾತಿಗೆ ಉತ್ತರವೂ ಇದೆ.
ಅನಂತ್ ನಾಗ್ ಎಷ್ಟು ಸಹಜ ನಟರೋ, ಅಷ್ಟೇ ಮೂಡಿ. ನಾನು ನಟಸುತ್ತಿದ್ದೇನೆ. ಅದು ನನ್ನ ವೃತ್ತಿ ಎಂದುಕೊಂಡಿದ್ದವರು. ಅದರ ಹೊರತಾಗಿ ಅಭಿಮಾನಿಗಳಿಗೆ ಎಂದೂ ಸಮಯ ಮೀಸಲಿಟ್ಟವರಲ್ಲ. ಯಾರಾದರೂ ನೂರಾರು ಅಭಿಮಾನಿಗಳು ಒಂದೇ ಬಾರಿ ಸುತ್ತುವರೆಗೆ ಸಿಡುಕುತ್ತಿದ್ದ ವ್ಯಕ್ತಿ. ಹೀಗಾಗಿಯೇ ಅನಂತ್ ಅವರಿಗೆ ಅಭಿಮಾನಿ ಸಂಘವೂ ಅಲ್ಲ. ಸಂಘಟಿತ ಅಭಿಮಾನಿಗಳೂ ಇಲ್ಲ. ಕಟೌಟ್, ಹಾರ ತುರಾಯಿಗಳೂ ಇಲ್ಲ. ಆದರೆ ಗೌರವವಂತೂ ಇದೆ.
ಅನಂತ್ ನಾಗ್ ಅವರೊಂದಿಗೆ ಕನ್ನಡದ ಪ್ರತಿಭಾವಂತ ಸಂಗೀತ ನಿರ್ದೇಶಕ ರಿಕಿ ಕೇಜ್ ಅವರಿಗೂ ಸಹ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. 113 ಮಂದಿಗೆ ಪದ್ಮಶ್ರೀ ಪ್ರಶಸ್ತಿಗಳ ಘೋಷಣೆಯಾಗಿದ್ದು, ಖ್ಯಾತ ಸಂಗೀತ ನಿರ್ದೇಶಕ, ಮೂರು ಗ್ರ್ಯಾಮಿ ಪ್ರಶಸ್ತಿಗಳ ವಿಜೇತ ರಿಕ್ಕಿ ಕೇಜ್ ಅವರಿಗೂ ಸಹ ಪದ್ಮಶ್ರೀ ಪ್ರಶಸ್ತಿಯನ್ನು ಅವರ ಕಲಾ ಸೇವೆಯನ್ನು ಗುರುತಿಸಿ ನೀಡಲಾಗಿದೆ.
ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕರ್ನಾಟಕದಲ್ಲಿ ನೆಲೆಸಿರುವ ಖ್ಯಾತ ವಯಲಿನ್ ವಾದಕ ಕ್ಷ್ಮೀನಾರಾಯಣ ಸುಬ್ರಮಣ್ಯಂ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಖ್ಯಾತ, ಹಾಸನ್ ರಘು, ವೆಂಕಪ್ಪ ಅಂಬಾಜಿ ಅವರುಗಳಿಗೂ ಸಹ ಕಲಾ ವಿಭಾಗದಲ್ಲಿ ಪದ್ಮಶ್ರೀ ಘೋಷಿಸಲಾಗಿದೆ.
ಪ್ರಶಸ್ತಿಗೆ ಪ್ರತಿಕ್ರಿಯೆ ನೀಡಿರುವ ಅನಂತ್ ನಾಗ್ ಈ ಪುರಸ್ಕಾರವನ್ನು ಕನ್ನಡಿಗರಿಗೇ ಅರ್ಪಿಸುತ್ತೇನೆ. ನಮ್ಮ ದೇಶದಲ್ಲಿ ಹಿಂದಿನಿಂದ ಪದ್ಮ ಪ್ರಶಸ್ತಿ ಕೊಡುವ ವ್ಯವಸ್ಥೆ ಬೇರೆ ಇತ್ತು. ಪಿಎಂ ಅವರು 3 ವರ್ಷಗಳ ಹಿಂದೆ ಪದ್ಮ ಪ್ರಶಸ್ತಿಯಲ್ಲಿ ಸಾರ್ವಜನಿಕರು ಭಾಗಿಯಾಗಬೇಕು ಅಂತ ಘೋಷಣೆ ಮಾಡಿದ್ದರು. ಬಳಿಕ ಕನ್ನಡಿಗರು ನನ್ನ ಹೆಸರನ್ನು ಸೂಚಿಸಿದ್ದರು. ಆ ವರ್ಷ ನನಗೆ ಪ್ರಶಸ್ತಿ ಬರಲಿಲ್ಲ. 3 ವರ್ಷಗಳಿಂದ ಹೀಗೆ ಆಗಿತ್ತು. ಅಭಿಮಾನಿಗಳು ಅಭಿಯಾನವನ್ನೇ ಮಾಡಿದ್ದರು. ಅವರಿಗೆ ಹಾಗೂ ನನ್ನ ನಾಟಕ ರಂಗ ಹಾಗೂ ಗುರುಗಳಿಗೆ ಪ್ರಶಸ್ತಿ ಅರ್ಪಿಸುತ್ತೇನೆ ಎಂದಿದ್ದಾರೆ.