ಕೆಜಿಎಫ್ ಬಾಬು. ನನ್ನ ಆಸ್ತಿ 1741 ಕೋಟಿ ಎಂದು ಘೋಷಿಸಿಕೊಂಡೇ ರಾಜಕೀಯ ಕಣಕ್ಕೆ ಧುಮುಕಿದ್ದ ಕುಬೇರ. ಡಿಕೆ ಶಿವಕುಮಾರ್ ಪರಮಾಪ್ತ. ವಿಧಾನ ಪರಿಷತ್ ಎಲೆಕ್ಷನ್ನಿನಲ್ಲಿ ನಿಂತು ಸೋತು ಹೋದ ಕೆಜಿಎಫ್ ಬಾಬು ಚಿಕ್ಕಪೇಟೆ ವಿಧಾನಸಭೆ ಟಿಕೆಟ್ ಆಕಾಂಕ್ಷಿ. ಡಿಕೆಶಿ ಆಪ್ತನೇ ಆದರೂ ನೀಡುತ್ತಿದ್ದ ಹೇಳಿಕೆಗಳು ಡಿಕೆಗೂ ಇರಿಸುಮುರಿಸು ಉಂಟು ಮಾಡಿದ್ದವು. ಸುಮ್ಮನಿರು ಎಂದರೆ ಸುಮ್ಮನಾಗುವವರೂ ಅಲ್ಲ. ಹೇಳಿದ ಮಾತು ಕೇಳುವ ವ್ಯಕ್ತಿಯೂ ಅಲ್ಲ. ಕೆಜಿಎಫ್ ಬಾಬು ಇದ್ದಿದ್ದೇ ಹಾಗೆ.
ಅವರ ಹೇಳಿಕೆಗಳ ಸ್ಯಾಂಪಲ್ ಒಮ್ಮೆ ನೋಡಿ.
ಚಿಕ್ಕಪೇಟೆಯಲ್ಲಿ ಗೆಲ್ಲೋದಕ್ಕೆ ನೂರಾರು ಕೋಟಿ ಖರ್ಚು ಮಾಡಿದ್ದೇನೆ. ಈಗಾಗಲೇ 17 ಸಾವಿರ ಚೆಕ್ ಕೊಟ್ಟಿದ್ದೇನೆ. ಇನ್ನೂ 14 ಸಾವಿರ ಚೆಕ್ ರೆಡಿ ಇದೆ.
6 ಕೋಟಿ ಖರ್ಚು ಮಾಡಿ ಕ್ಷೇತ್ರದ ಹೆಣ್ಣು ಮಕ್ಕಳಿಗೆ ಸೀರೆ ಕೊಟ್ಟಿದ್ದೇನೆ.
ಒಂದು ಕ್ಷೇತ್ರಕ್ಕೆ 350 ಕೋಟಿ ಖರ್ಚು ಮಾಡುತ್ತಿದ್ದೇನೆ.
ಕಾಂಗ್ರೆಸ್ ಪಕ್ಷಕ್ಕಾಗಿ ಇದುವರೆಗೆ 30 ಕೋಟಿಗೂ ಹೆಚ್ಚು ಹಣ ಕೊಟ್ಟಿದ್ದೇನೆ.
ಹಿಂಗೇ ಹೋದ್ರೆ ಕಾಂಗ್ರೆಸ್ ಪಕ್ಷಕ್ಕೆ 80 ಸೀಟೂ ಬರೋದಿಲ್ಲ. ಕೆಲಸ ಮಾಡೋವ್ರಿಗೆ ಕೊಟ್ರೆ 150 ಸೀಟು ಬರುತ್ತೆ.
ನನ್ನನ್ನು ಪಕ್ಷದಿಂದ ತೆಗೆದು ಹಾಕಿದ್ರೆ ನಾನೇ 10 ಜನರನ್ನ ಗೆಲ್ಲಿಸಿಕೊಂಡು ಬರುತ್ತೇನೆ. 2023ಕ್ಕೆ ನಾನ ಎಂಎಲ್‍ಎ ಆಗೋದು ಪಕ್ಕಾ.
ಡಿಕೆ ಶಿವಕುಮಾರ್ ನನಗೆ ವ್ಯಾಪಾರದಲ್ಲಿ ಗುರು, ರಾಜಕೀಯದಲ್ಲಿ ಅಲ್ಲ.
ಡಿಕೆ ಶಿವಕುಮಾರ್ ನನಗೆ ದೇವರು, ಅವರ ಭಿಕ್ಷೆಯಲ್ಲಿ ನಾನು ಬದುಕಿದ್ದೇನೆ.
ಜಮೀರ್, ಖಾದರ್ ಮುಸ್ಲಿಂ ಲೀಡರ್ಸ್. ಸಲೀಂ ನಾಟಕ ಮಾಡ್ತಾರಷ್ಟೆ. ಅಲ್ಪಸಂಖ್ಯಾತರ ಮತಗಳನ್ನು ಆತನೇ ಹಾಳು ಮಾಡ್ತಾನೆ.
ನಾನು ಪಾರ್ಟಿಯಿಂದ ಇಲ್ಲ, ಪಾರ್ಟಿ ಇರೋದು ನಮ್ಮಿಂದ.
ಡಿಕೆ ಶಿವಕುಮಾರ್, ಸಿದ್ದರಾಮಯ್ಯಗೆ ಪ್ರಾಣ ಕೊಡ್ತೀನಿ. ಕಾಂಗ್ರೆಸ್ ಪಕ್ಷಕ್ಕಾಗಿ ನಾನು ಕೋಟ್ಯಂತರ ಹಣ ಕಳೆದುಕೊಂಡಿದ್ದೇನೆ…
ಇಂತಹ ಹೇಳಿಕೆ ಕೊಡುವುದು ಕೆಜಿಎಫ್ ಬಾಬುಗೆ ಹೊಸದಲ್ಲ. ಈ ಹಿಂದೆಯೂ ಹಲವು ಬಾರಿ ಇಂತಹ ಹೇಳಿಕೆಗಳನ್ನು ನೀಡಿದ ಕಾರಣಕ್ಕೇ ಟೀಕೆಗೆ ಗುರಿಯಾಗಿದ್ದ, ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದವರು ಕೆಜಿಎಫ್ ಬಾಬು. ಮೂರು ಬಾರಿ ನೋಟಿಸ್ ನೀಡಲಾಗಿತ್ತಾದರೂ ಕೆಜಿಎಫ್ ಬಾಬು ಡೋಂಟ್ ಕೇರ್ ಎಂಬಂತೆಯೇ ಇದ್ದರು. ಕೊನೆಗೆ ಈ ಹೇಳಿಕೆಗಳನ್ನೆಲ್ಲ ಕೆಪಿಸಿಸಿ ಕಚೇರಿಯಲ್ಲಿಯೇ ಮಾತನಾಡೋಕೆ ಮುಂದಾದಾಗ ಕಾರ್ಯಕರ್ತರು ಗರಂ ಆಗಿಬಿಟ್ಟರು. ಕೆಜಿಎಫ್ ಬಾಬುರನ್ನು ಪಕ್ಷದಿಂದ ಹೊರಹಾಕಿದರು. ಅದಾದ ಮೇಲೆ ಕೆಜಿಎಫ್ ಬಾಬು ಅವರನ್ನು ಪಕ್ಷದಿಂದ ಅಮಾನತು ಮಾಡಿ ಕಾಂಗ್ರೆಸ್ ಆದೇಶ ಹೊರಡಿಸಿದೆ. ಆದರೆ ಕೆಜಿಎಫ್ ಬಾಬು ಅವರ ಹೇಳಿಕೆಗಳು ಕಾಂಗ್ರೆಸ್‍ನ್ನು ಸುಡುತ್ತವೆ ಎನ್ನುವುದರಲ್ಲಿ ಮಾತ್ರ ಅನುಮಾನವಿಲ್ಲ.