ನಿಮ್ಮ ಗೆಳೆಯರು ಎಂಥವರು ಎಂದು ಹೇಳಿದರೆ, ನೀವು ಎಂಥವರೆಂದು ಹೇಳ್ತೀವಿ ಅಂತಾರೆ ಕೆಲವರು. ಏಕೆಂದರೆ ನಮ್ಮ ಶಕ್ತಿ ಮತ್ತು ನಿಶ್ಯಕ್ತಿ ಎರಡೂ ಗೆಳೆಯರೇ ಆಗಿರುತ್ತಾರೆ. ಗೆಳೆಯರ ಮೂಲಕ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಅಳೆಯಬಹುದಾಗಿದೆ. ಹಾಗಾದರೆ ಎಂತಹವರನ್ನು ಗೆಳೆಯರನ್ನಾಗಿ ಮಾಡಿಕೊಳ್ಳಬೇಕು, ಎಂತಹವರು ನಮ್ಮ ಹತ್ತಿರ ಇರಬೇಕು, ಯಾರ ಮಾತನ್ನು ಕೇಳಬೇಕು. ಇಂತಹವುಗಳ ಬಗ್ಗೆ ಚಾಣಕ್ಯ ನೀತಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಅವಮಾನಿಸುವವರಿಂದ ದೂರ ಇರಿ :
ಸಣ್ಣ ಸಣ್ಣ ವಿಷಯಗಳಿಗೂ ತಮ್ಮ ಸುತ್ತಲಿನ ಜನರನ್ನು ಪದೇ ಪದೇ ಅವಮಾನಿಸುವ ವ್ಯಕ್ತಿಯನ್ನು ಗೆಳೆಯರ ಬಳಗದಿಂದ ದೂರ ಇರಿಸುವುದೇ ಒಳ್ಳೆಯದು. ಜೊತೆಯಲ್ಲಿದ್ದು ಅವಮಾನಕ್ಕೆ ಒಳಗಾಗೋದಕ್ಕಿಂತ, ಒಂದು ಹಂತದ ಶತ್ರುತ್ವ ಇದ್ದರೂ ಒಳ್ಳೆಯದು ಎನ್ನುತ್ತಾನೆ ಚಾಣಕ್ಯ. ಇಂತಹವರನ್ನು ಸಮಾಜ ಎಂದಿಗೂ ಗೌರವಿಸುವದಿಲ್ಲ. ಇವರ ಜೊತೆಗೆ ಇರುವವರನ್ನೂ ಸಮಾಜ ಗೌರವಿಸೋದಿಲ್ಲ. ಜೊತೆಯಲ್ಲಿ ಇಟ್ಟುಕೊಂಡವರನ್ನು ಸಮಾಜ ಅನುಮಾನದಿಂದ ನೋಡುತ್ತದೆ.
ಸ್ವಯಂ ಹೊಗಳುಭಟರಿಂದ ದೂರ ಇರುವುದೇ ಭಾಗ್ಯ :
ಚಾಣಕ್ಯ ನೀತಿ ಪ್ರಕಾರ, ಕೆಲವರು ಎಲ್ಲರ ಮುಂದೆ ತಮ್ಮ ಬಗ್ಗೆ ತಾವೇ ಗುಣಗಾನ ಮಾಡಿಕೊಳ್ಳುತ್ತಿರುತ್ತಾರೆ. ತಮ್ಮಷ್ಟು ಬುದ್ದಿಶಕ್ತಿ ಯಾರಿಗೂ ಇಲ್ಲ ಎನ್ನುವುದು ಅವರ ನಂಬಿಕೆ. ಆದರೆ ಅದು ಅವರ ನಂಬಿಕೆಯಷ್ಟೇ ಆಗಿರುತ್ತದೆ. ಇಂತಹವರನ್ನು ಸಹ ಚಾಣಕ್ಯ ನೀತಿ ಶತಮೂರ್ಖ ಎನ್ನುತ್ತದೆ. ಇಂತಹವರು ತಮ್ಮ ಮುಂದೆ ಬೇರೆಯವರ ಬಗ್ಗೆ ಹೊಗಳಿ ಮಾತಾಡೋದನ್ನು ಎಂದಿಗೂ ಸಹಿಸಿಕೊಳ್ಳುವುದಿಲ್ಲ ಹಾಗೂ ಯಾರ ಮಾತನ್ನ ಕೇಳಿಸಿಕೊಳ್ಳುವ ತಾಳ್ಮೆಯೂ ಇವರಿಗೆ ಇರುವುದಿಲ್ಲ. ಆದರೆ ಇವರಿಗೆ ನಿಜವಾದ ಬುದ್ದಿವಂತರು ಯಾರು ಎನ್ನುವುದು ಗೊತ್ತಿರುತ್ತದೆ. ಅಂತಹವರನ್ನು ಶತಾಯಗತಾಯ ತಮ್ಮ ವರ್ತುಲದಿಂದ ದೂರ ಇಟ್ಟು ಬದುಕುತ್ತಾರೆ.
ಸ್ವಯಂಘೋಷಿತ ಬುದ್ದಿವಂತರೂ ಅಗತ್ಯ ಇಲ್ಲ :
ಈ ಜನರು ತಮ್ಮನ್ನು ಬುದ್ಧಿವಂತರು ಎಂದು ತಾವೇ ಘೋಷಿಸಿಕೊಂಡಿರುತ್ತಾರೆ. ಜಗತ್ತಿನ ಯಾವುದೇ ವಿಷಯ ಇರಲಿ, ಇವರಿಗೆ ಎಲ್ಲವೂ ಗೊತ್ತು. ಯಾರಾದರೂ ಅದು ಹಾಗಲ್ಲ.. ಹೀಗೆ ಎಂದು ಹೇಳಿದರೆ ಅವರು ಒಪ್ಪುವುದೇ ಇಲ್ಲ. ಯಾರ ಮಾತು ಅಥವಾ ಸಲಹೆಗಳನ್ನು ಕೇಳಲು ಸಿದ್ಧರಾಗಿರುವದಿಲ್ಲ. ಹಾಗಾಗಿ ಈ ರೀತಿಯ ಜನರಿಂದ ಯಾವುದೇ ಕಾರಣಕ್ಕೂ ಸಲಹೆ ಪಡೆದುಕೊಳ್ಳಬಾರದು. ಅಕಸ್ಮಾತ್ ಸಲಹೆ ಕೇಳಿದರೆ, ಅವಮಾನಿಸುವುದು ಗ್ಯಾರಂಟಿ.
ಅನವಶ್ಯಕ ಸಲಹೆ ನೀಡುವವರೂ ಬೇಡ :
ಕೆಲವರು ಅವಶ್ಯಕತೆ ಇಲ್ಲದಿದ್ದರೂ ಸಲಹೆ ನೀಡುತ್ತಿರುತ್ತಾರೆ. ಯಾವಾಗಲೂ ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶನ ಮಾಡುತ್ತಿರುತ್ತಾರೆ. ಅವರು ವೈದ್ಯರಲ್ಲ, ಆದರೆ ಎಂಬಿಬಿಎಸ್ ಮಾಡಿದವರಿಗಿಂತಲೂ ಅದ್ಭುತ ಎನ್ನುವಂತೆ ಸಲಹೆ ನೀಡುತ್ತಲೇ ಇರುತ್ತಾರೆ. ಅವರು ಶಿಕ್ಷಕರಾಗಿರುವುದಿಲ್ಲ, ಆದರೆ ಶಿಕ್ಷಣದ ಬಗ್ಗೆ ಮಾತನಾಡುತ್ತಿರುತ್ತಾರೆ. ರಾಜಕೀಯ ತಜ್ಞರೂ ಆಗಿರುವುದಿಲ್ಲ. ಆದರೆ ರಾಜಕೀಯದ ಬಗ್ಗೆ ಸಲಹೆ ಕೊಡುತ್ತಾರೆ. ವಿಶೇಷವಾಗಿ ಎಕನಾಮಿಕ್ಸ್ ಬಗ್ಗೆ ತಾವು ಗೊತ್ತಿರುವ ಪ್ರಪಂಚದಲ್ಲಿ ನೋಡಿದ್ದಷ್ಟೇ ಸತ್ಯ ಎಂದು ನಂಬುತ್ತಾರೆ. ಅದನ್ನೇ ಸಲಹೆ ಎಂದು ಕೊಡುತ್ತಾರೆ. ಇಂತಹರಿಂದ ದೂರ ಇದ್ದರೆ ಆರೋಗ್ಯ ಮತ್ತು ಆರ್ಥಿಕತೆ ಚೆನ್ನಾಗಿರುತ್ತದೆ.
ವಿವೇಚನಾರಹಿತ ಕೆಲಸಗಾರರಿಂದ ದೂರ ಇರಿ :
ಸ್ವಲ್ಪವೂ ಯೋಚಿಸದೇ ವಿವೇಚನಾರಹಿತವಾಗಿ ಕೆಲಸ ಮಾಡುವ ಜನರು ಮೂರ್ಖರಾಗಿರುತ್ತಾರೆ. ಇಂತಹ ಜನರು ತಮ್ಮ ನಿರ್ಧಾರಗಳಿಂದಲೇ ನಷ್ಟ ಮತ್ತು ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತಾರೆ. ಕೆಲಸ ಮಾಡುವ ಮುನ್ನ ಅದರ ಪರಿಣಾಮಗಳ ಬಗ್ಗೆ ಇವರು ಯೋಚಿಸಲ್ಲ. ಯಾರೋ ಏನೋ ಹೇಳಿದರು ಎಂದರೆ, ಅದರ ಹಿಂದು ಮುಂದು ಯೋಚಿಸದೆ ಮುನ್ನುಗುತ್ತಾರೆ. ಅದನ್ನೇ ಅಂತಿಮ ಸತ್ಯ ಎಂದು ನಂಬುತ್ತಾರೆ ಹಾಗೂ ನಂಬಿಸುತ್ತಾರೆ. ಇಂತಹ ಮೂರ್ಖರನ್ನು ಹತ್ತಿರದಲ್ಲಿಟ್ಟುಕೊಳ್ಳಬೇಡಿ ಎನ್ನುತ್ತಾನೆ ಚಾಣಕ್ಯ.
ವಿಶೇಷ ಎಂದರೆ ಇಂತಹ ಜನರು ಹಣವನ್ನು ಗಳಿಸಿರುತ್ತಾರೆ. ಒಂದು ಲೆಕ್ಕದಲ್ಲಿ ಶ್ರೀಮಂತಿಕೆಯೂ ಇರುತ್ತದೆ. ಹಣ ಅಥವಾ ಅಧಿಕಾರ ಇದೆ ಎಂಬ ಕಾರಣಕ್ಕೆ ಇವರನ್ನು ಜನ ಎಲ್ಲರ ಎದುರು ಮನ್ನಣೆ ನೀಡುತ್ತಾರೆ. ಆದ್ರೆ ಸಮಾಜ ಇವರನ್ನು ಯಾವಾಗಲೂ ಮೂರ್ಖರೆಂದು ಗುರುತಿಸುತ್ತದೆ.