ಜಸ್ಟಿಸ್ ಫಾರ್ ಸೌಜನ್ಯ. ಇತ್ತೀಚೆಗೆ ಯೂಟ್ಯೂಬ್, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿರೋ ವಿಷಯ.ಇದೀಗ ಇದೇ ಬೇಸ್ ಇಟ್ಟುಕೊಂಡು ಒಂದು ಸಿನಿಮಾ ಸಿದ್ಧವಾಗುತ್ತಿದೆ. ಸಿನಿಮಾ ಹೆಸರು ಚಿ.ಸೌಜನ್ಯ. ಡೈರೆಕ್ಟರ್ ನಟಿ ಹರ್ಷಿಕಾ ಪೂಣಚ್ಚ.
ʻಚಿ: ಸೌಜನ್ಯʼ! ʻಒಂದು ಹೆಣ್ಣಿನ ಕಥೆʼ ಸಿನಿಮಾಗೆ ಹರ್ಷಿಕಾ ಪೂಣಚ್ಚ ಅವರೇ ಕಥೆ ಬರೆದಿದ್ದಾರೆ. ಹರ್ಷಿಕಾ ಪತಿ, ನಟ ಹಾಗೂ ನಿರ್ಮಾಪಕ ಭುವನ್ ಪೊನ್ನಣ್ಣ, ಮಧು ಸ್ವಾಮಿ ಮತ್ತು ಗಣೇಶ್ ಮಹದೇವ್ ನಿರ್ಮಾಪಕರು. ಕಂಸಾಳೆ ಫಿಲ್ಮ್ಸ್ ಮತ್ತು ಭುವನಂ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಈ ಸಿನಿಮಾ ಮೂಡಿ ಬರಲಿದೆ.
ಪೋಸ್ಟರ್ ನೋಡಿದರೆ.. ಇತ್ತೀಚೆಗೆ ಶುರುವಾಗಿರುವ ದೂತ ಯೂಟ್ಯೂಬ್ ಚಾನೆಲ್ ಕಥೆ, ಗಿರೀಶ್ ಮಟ್ಟಣ್ಣವರ್ ಮೊದಲಾದವರ ಕಥೆಗಳನ್ನೇ ಸಿನಿಮಾ ಮಾಡಲು ಹೊರಟಿರುವಂತಿದೆ. ಪೋಸ್ಟರಿನಲ್ಲಿ ಬಾಲಕಿಯೊಬ್ಬಳು ಭಯದಿಂದ ಕೂಗುತ್ತಾ ನಿಂತಿದ್ದಾಳೆ. ಆಕೆಯ ಮುಖದ ಮೇಲೆ ಉಗುರಿನಿಂದ ಆದ ಗಾಯಗಳು ಇವೆ. ಅವಳ ಹಿಂದೆ ಒಂದಷ್ಟು ಪುರುಷರು ನಿಂತಿದ್ದಾರೆ. ದೇವಸ್ಥಾನದ ಕಳಶ ಇದೆ. ಒಂದಷ್ಟು ಮಂದಿ ತುಟಿಯ ಮೇಲೆ ಕೈ ಬೆರಳು ಇಟ್ಟು ಸುಮ್ಮನಿರುವಂತೆ ತೋರಿಸುತ್ತಿದ್ದಾರೆ. ಇದು ಸಹಜವಾಗಿಯೇ ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ಥಳುಕು ಹಾಕುವಂತೆ ಕಾಣುತ್ತದೆ. ಆದರೆ.. ಚಿತ್ರತಂಡ ಹಾಗೂ ನಿರ್ಮಾಪಕರಲ್ಲಿ ಒಬ್ಬರಾದ ಭುವನ್ ಗೌಡ ಹೇಳೋದೇ ಬೇರೆ.
‘ದೇಶದಲ್ಲಿ ನಡೆದ ಎಲ್ಲಾ ಘಟನೆಗಳನ್ನು ಸ್ಫೂರ್ತಿಯಾಗಿಟ್ಟುಕೊಂಡು ಮಾಡಲಾಗುತ್ತಿರುವ ಕಾಲ್ಪನಿಕ ಕಥೆ’ ಎಂದು ಪೋಸ್ಟರ್ನಲ್ಲಿ ಹೇಳಲಾಗಿದೆ. “ಭಾರತದಲ್ಲಿ ಪ್ರತಿವರ್ಷ ಮೂವತ್ತಾರು ಸಾವಿರಕ್ಕೂ ಅಧಿಕ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಸರಾಸರಿ ದಿನಕ್ಕೆ ನೂರು ಮಹಿಳೆಯರಂತೆ. ಈ ಅತ್ಯಾಚಾರಗಳ ಬಗ್ಗೆ ಕೇಸ್ ದಾಖಲಾಗುತ್ತದೆ. ವಿಚಾರಣೆ ನಡೆಯುತ್ತದೆ. ಆದರೆ ಆ ಹೆಣ್ಣುಮಕ್ಕಳಿಗೆ ನ್ಯಾಯ ದೊರಕಿರುವುದು ತೀರ ಕಡಿಮೆ. ನಾನು ಹಾಗೂ ಹರ್ಷಿಕಾ ಅವರು ಕೂಡ ಇಂತಹ ಘಟನೆ ಬಗ್ಗೆ ನಮಗೆ ತಿಳಿದಾಗ ಅ ಸ್ಥಳಕ್ಕೆ ಹೋಗಿ ಸಾವಿರಾರು ಜನರೊಂದಿಗೆ ಹೋರಾಟ ಮಾಡಿದ್ದೇವೆ. ಈ ವಿಷಯಗಳ ಕುರಿತು ಜನರಿಗೆ ಜಾಗೃತಿ ಮೂಡಿಸಲು ಸಿನಿಮಾ ಉತ್ತಮವಾದ ಮಾಧ್ಯಮ ಅನಿಸಿತು. ಹಾಗಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಇನ್ನು ಚಿತ್ರದ ಪ್ರಮುಖ ಪಾತ್ರ ಕಿಶೋರ್ ಅವರದ್ದಾದರೆ, ವಿಲನ್ ಪಾತ್ರಗಳಲ್ಲಿ ʻಬಿಗ್ ಬಾಸ್ʼ ಖ್ಯಾತಿಯ ಉಗ್ರಂ ಮಂಜು ಮತ್ತು ಕಾಕ್ರೋಚ್ ಸುಧಿ ಕಾಣಿಸಿಕೊಳ್ಳಲಿದ್ದಾರೆ. ಹರ್ಷಿಕಾ ನಿರ್ದೇಶನದ ಚೊಚ್ಚಲ ಸಿನಿಮಾ ಐದು ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಎಲ್ಲವೂ ಒಂದಕ್ಕೊಂದು ಲಿಂಕ್ ಆಗಿದೆ.
2012ರಲ್ಲಿ ನಡೆದಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಸಂತೋಷ್ ರಾವ್, ಆನಂತರ ಖುಲಾಸೆಯಾಗಿದ್ದಾನೆ. ಸತ್ತೂ ಹೋಗಿದ್ದಾನೆ. ಅವನಲ್ಲವಾದರೆ ಯಾರು ಎಂಬ ಪ್ರಶ್ನೆಗೆ ಎಲ್ಲರೂ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಕುಟುಂಬದತ್ತ ಬೊಟ್ಟು ಮಾಡ್ತಿದ್ದಾರೆ. ವಿಚಿತ್ರವೆಂದರೆ ಅವರಿಗೂ.. ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಕೋರ್ಟ್ ತೀರ್ಪು ಹೊರಬಿದ್ದಾಗಿದೆ. ಇದೆಲ್ಲದರ ನಡುವೆ ಸೌಜನ್ಯಗೆ ನ್ಯಾಯ ಎನ್ನುವುದು ದಿಕ್ಕು ತಪ್ಪಿದೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿರುವ ವಾಸ್ತವ. ಹೀಗಿರುವಾಗಲೇ ಚಿ.ಸೌಜನ್ಯ ಎಂಬ ಸಿನಿಮಾ ಸೆಟ್ಟೇರುತ್ತಿದೆ. ಇನ್ ಡೈರೆಕ್ಟ್ ಆಗಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರೇ ಅಪರಾಧಿಗಳು ಎಂದು ಬೊಟ್ಟು ಮಾಡುತ್ತಿದೆ.