ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆ ಆಗಲೇಬೇಕು ಎಂಬ ಹೋರಾಟ ಮುಂದುವರೆಸಲು ನಿರ್ಧರಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಮುಖಂಡರು, ಹೋರಾಟವನ್ನು ಚಾಲ್ತಿಯಲ್ಲಿಟ್ಟಿದ್ದಾರೆ. ವಿಜಯೇಂದ್ರಗೆ ಟೆನ್ಷನ್ ಮುಗಿದಿಲ್ಲ. ಶಿಸ್ತಿನ ಕ್ರಮಗಳು ಕಮಲ ಬಂಡಾಯವನ್ನು ಶಮನ ಮಾಡುತ್ತಾ? ಎಂಬ ಕುತೂಹಲಕ್ಕೆ ನೋ ಎಂಬ ಉತ್ತರ ಸಿಕ್ಕಿದೆ.
ಯತ್ನಾಳ್ ಉಚ್ಚಾಟನೆ ರೆಬೆಲ್ಸ್ ತಂಡಕ್ಕೆ ಡೈರೆಕ್ಟ್ ವಾರ್ನಿಂಗ್. ಯತ್ನಾಳ್‌ಗೆ ಹೈಕಮಾಂಡ್ ಕೆಲವು ನಾಯಕರ ಬೆಂಬಲ ಇದೆ ಎಂಬ ವಾದವಿತ್ತಾದರೂ, ಉಚ್ಚಾಟನೆ ಶಿಕ್ಷೆಯಿಂದ ಯತ್ನಾಳ್ ಬಚಾವ್ ಆಗಲಿಲ್ಲ. ಇಷ್ಟೆಲ್ಲ ಆದ ಮೇಲೆ ಶುಕ್ರವಾರ ರಾಜಾಧಾನಿಯಲ್ಲಿ ಸಭೆ ಸೇರಿದ ಮುಖಂಡರು ಯತ್ನಾಳ್ ಏಕಾಂಗಿಯಲ್ಲ ಎಂಬ ಸಂದೇಶ ರವಾನಿಸುವ ಯತ್ನ ಮಾಡಿದ್ದಾರೆ.
ಯತ್ನಾಳ್ ಬಣದ ಮುಖಂಡರಾದ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ಬಿ.ಪಿ.ಹರೀಶ್, ಜಿ. ಎಂ.ಸಿದ್ದೇಶ್ವರ, ಪ್ರತಾಪ್ ಸಿಂಹ, ಎನ್.ಆರ್. ಸಂತೋಷ್.. ಹೀಗೆ ಎಲ್ಲ ನಾಯಕರೂ ನಾವು ಈಗಲೂ ಯತ್ನಾಳ್ ಜೊತೆಯಲ್ಲಿದ್ದೇವೆ ಎಂಬ ಸಂದೇಶ ಕೊಟ್ಟಿದ್ದಾರೆ. ಇನ್ನು ಅತ್ತಲೂ ಅಲ್ಲ.. ಇತ್ತಲೂ ಇಲ್ಲ.. ಎಂಬಂತೆ ಇರುವ ಬೊಮ್ಮಾಯಿ, ಅಶೋಕ್, ಸಿಟಿ ರವಿ ಅವರಂತಹ ನಾಯಕರು ಒಳಗೊಳಗೆ ಈಗಲೂ ಯತ್ನಾಳ್ ಜೊತೆಯಲ್ಲೇ ಇದ್ದಾರೆ.
ಎಲ್ಲ ಮುಖಂಡರೂ ಯತ್ನಾಳ್ ಪರವಾಗಿ ಬಲವಾಗಿ ನಿಲ್ಲಬೇಕು. ವಿಜಯೇಂದ್ರ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರು ಪಕ್ಷ ದಲ್ಲಿನ ಲಿಂಗಾಯತ ನಾಯಕರನ್ನು ಮುಗಿಸುತ್ತಿರುವ ಬಗ್ಗೆ ಸಮುದಾಯಕ್ಕೆ ತಿಳಿಸಬೇಕು. ಉಚ್ಚಾಟನೆ ವಾಪಸ್ ಪಡೆಯಬೇಕು. ಪಕ್ಷ ಕ್ಷತನ್ನ ನಿರ್ಧಾರವನ್ನು ಪರಿಶೀಲನೆ ಮಾಡಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಸದ್ಯಕ್ಕೆ ಸೈಲೆಂಟ್ ಆಗಿರುವುದು ಯತ್ನಾಳ್ ನಾಲಗೆ ಮಾತ್ರ.
ಯತ್ನಾಳ್ ಅವರಿಂದ ತಪ್ಪಾಗಿದ್ದರೆ ತಿದ್ದಿಕೊಂಡು ಹೋಗುತ್ತೇವೆ : ಕುಮಾರ್ ಬಂಗಾರಪ್ಪ
ಯತ್ನಾಳ್ ಅವರಿಂದ ವೈಯಕ್ತಿಕವಾಗಿ ತಪ್ಪು ಆಗಿದ್ದರೆ ಅದನ್ನು ತಿದ್ದಿಕೊಂಡು ಹೋಗುತ್ತೇವೆ. ಈ ಮಾತು ಹೇಳಿರುವುದು ಕುಮಾರ್ ಬಂಗಾರಪ್ಪ. ಅದಕ್ಕೆ ಕಾರಣವೂ ಇದೆ. ರೆಬೆಲ್ಸ್ ಮೀಟಿಂಗಿನಲ್ಲಿ ಮಾತನಾಡಿದ ಬಹುತೇಕ ನಾಯಕರು ಯತ್ನಾಳ್ ಅವರು ಪಕ್ಷದ ಕೆಲ ನಾಯಕರನ್ನು ಟೀಕಿಸುವ ಭರದಲ್ಲಿ ಬಳಸಿದ ಪದಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯತ್ನಾಳ್ ಅವರು ಪ್ರತಿ ಬಾರಿ ಇನ್ನು ಮುಂದೆ ಹೀಗಾಗಲ್ಲ, ಆ ರೀತಿ ಮಾತನಾಡಲ್ಲ ಎಂದು ಪ್ರಾಮಿಸ್ ಮಾಡಿ ಮೂರ್ನಾಲ್ಕು ದಿನಗಳಲ್ಲಿಯೇ ಮುರಿಯುತ್ತಿದ್ದರು ಎಂಬ ಬಗ್ಗೆ ನಾಯಕರೇ ಕಟುವಾಗಿದ್ದಾರೆ. ಅವರೆಲ್ಲರೂ ಯತ್ನಾಳ್ ಸ್ನೇಹಿತರು ಎನ್ನುವುದು ಮುಖ್ಯ.
ಇನ್ನು ಯತ್ನಾಳ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳೋಕೆ ನಾವು ರೆಡಿ, ಅವರ ಬಾಯಿ, ನಾಲಗೆಯ ಬಗ್ಗೆ ನೀವು ಗ್ಯಾರಂಟಿ ಕೊಡ್ತೀರಾ ಎಂಬ ಪ್ರಶ್ನೆಗೆ ಯಾವೊಬ್ಬರೂ ಯೆಸ್ ಎನ್ನಲಿಲ್ಲ. ಹೀಗಾಗಿ ಉಚ್ಚಾಟನೆ ಅನಿವಾರ್ಯವಾಯ್ತು ಎನ್ನಲಾಗಿದೆ. ಒಂದು ಲೆಕ್ಕದಲ್ಲಿ ನೋಡುತ್ತಿದ್ದರೆ ಸುಮಾರು ಇನ್ನೂರು ಮಂದಿಯಷ್ಟು ಕಾರ್ಯಕರ್ತರು ರಾಜೀನಾಮೆ ಕೊಟ್ಟಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿ ಬಿಟ್ಟರೆ ಬೇರೆ ಸ್ವಾಮಿಗಳು ಮಾತನಾಡುತ್ತಿಲ್ಲ. ಹೀಗಾಗಿ ಯತ್ನಾಳ್ ಹಾದಿ ಸುಲಭವಲ್ಲ. ಹಾಗೆಂದು ಯತ್ನಾಳ್ ಉಚ್ಚಾಟನೆಯಾಯಿತು ಎಂದ ಕೂಡಲೇ ವಿಜಯೇಂದ್ರ ಹಾದಿ ಸುಗಮವಲ್ಲ.