ಯತ್ನಾಳ್ ಉಚ್ಚಾಟನೆಗೆ ಕಾರಣ ಏನಿರಬಹುದು ಎಂದರೆ.. ಮೇಲ್ನೋಟಕ್ಕೆ ಅದು ನಿಯಂತ್ರಣವಿಲ್ಲದ ನಾಲಗೆ.. ಎನ್ನಬಹುದು. ಯತ್ನಾಳ್ ಅವರ ಮಾತಿನಲ್ಲಿ ಹಿತಮಿತ ಇರಲಿಲ್ಲ. ಅವರು ಯಾರನ್ನು ಬೇಕಾದರೂ.. ಹೇಗೆ ಬೇಕಾದರೂ ಟೀಕೆ ಮಾಡುತ್ತಿದ್ದರು. ಇದೆಲ್ಲದರ ಜೊತೆಗೆ ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ಅಡ್ಜಸ್ಟ್ ಮೆಂಟ್ ರಾಜಕಾರಣದ ಆರೋಪ ಮಾಡುತ್ತಿದ್ದ ಯತ್ನಾಳ್‌ವಿರುದ್ಧವೂ ಹೊಂದಾಣಿಕೆ ರಾಜಕೀಯದ ಆರೋಪಗಳಿದ್ದವು. ಯತ್ನಾಳ್ ಉಚ್ಚಾಟನೆಗೆ 10 ಕಾರಣಗಳನ್ನು ಪಟ್ಟಿ ಮಾಡಬಹುದು.
1. ನಾಲಗೆಯೇ ಶತ್ರು..!
ಯತ್ನಾಳ್ ಅವರದ್ದು ಹಠಮಾರಿ ವ್ಯಕ್ತಿತ್ವ. ಇನ್ನು ಅವರಿಗೆ ಮನಸ್ಸಿಗೆ ಬಂದಂತೆ ಬಯ್ಯುವ ಹವ್ಯಾಸವೂ ಇದೆ. ಹಾಗೆ ಬಯ್ಯುವಾಗ ಏಕವಚನ, ಬಹುವಚನಗಳನ್ನು ನೋಡುವುದಿಲ್ಲ. ಹಂದಿ, ನಾಯಿ ಅನ್ನೋದಕ್ಕೂ ಹಿಂದೆ ಮುಂದೆ ನೋಡಲ್ಲ. ಆದರೆ.. ಹಾಗೆ ಬಯ್ಯುವಾಗ ಎದುರಾಳಿಗಳೂ ತಮಗೆ ಹೆದರಿ ಕೂರಬೇಕು ಎಂದು ಬಯಸುತ್ತಾರೆ. ಆದರೆ.. ಹಾಗಾಗುವುದಿಲ್ಲ. ಅದೇ ಮಾದರಿಯಲ್ಲಿ ತಿರುಗೇಟು, ಬೈಗುಳಗಳು ಬಂದಾಗ ಕೆರಳಿ ಕೆಂಡವಾಗುವ ಯತ್ನಾಳ್, ಇನ್ನಷ್ಟು ಹತೋಟಿ ತಪ್ಪುತ್ತಾರೆ.
2. ಸಂಧಾನಕ್ಕೆ ಡೋಂಟ್ ಕೇರ್..!
ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರೊಂದಿಗೆ ಸಂಧಾನ ನಡೆಸುವ ಹಲವರ ಪ್ರಯತ್ನಗಳಿಗೆ ಯತ್ನಾಳ್ ಸೊಪ್ಪು ಹಾಕಲೇ ಇಲ್ಲ. ಈ ವಿಚಾರವಾಗಿ ಹೈಕಮಾಂಡ್ ಮಾಡಿದ ಮನವಿಯನ್ನೂ ಯತ್ನಾಳ್ ಕಡೆಗಣಿಸಿದರು. ಮಾಡಿದ ಆರೋಪಗಳನ್ನು ತಾರ್ಕಿಕ ಅಂತ್ಯಕ್ಕೂ ಕೊಂಡೊಯ್ಯದೆ.. ನೀಡುತ್ತಿದ್ದ ಹೇಳಿಕೆಗಳು ಯತ್ನಾಳ್ ಅವರನ್ನು ಬಿಜೆಪಿಯಲ್ಲಿ ಒಂಟಿಯಾಗಿಸಿದವು.
3. ಬೆದರಿಕೆ ತಂತ್ರವೇ ವಿಲನ್..!
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಅನೇಕ ಭ್ರಷ್ಟಾಚಾರ ಆರೋಪಗಳನ್ನು ಮತ್ತು ವೈಯಕ್ತಿಕ ಟೀಕೆಗಳನ್ನು ಮಾಡಿದ್ದ ಬಸವನಗೌಡ ಪಾಟೀಲ್ ಯತ್ನಾಳ್, ಒಂದು ವೇಳೆ ತಮ್ಮ ವಿರುದ್ಧ ಶಿಸ್ತುಕ್ರಮ ಕೈಗೊಂಡಿದ್ದೇ ಆದಲ್ಲಿ ಪಕ್ಷದ ಭ್ರಷ್ಟಾಚಾರದ ವಿವಿರಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದರು. ಯತ್ನಾಳ್ ಅವರ ಈ ಬೆದರಿಕೆಗಳಿಂದ ಕೆರಳಿದ ಹೈಕಮಾಂಡ್, ಅವರನ್ನು 6 ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿ ಕ್ರಮ ಕೈಗೊಂಡಿದೆ.
4. ಏಕಾಂಗಿ ಹೋರಾಟದ ಮಂತ್ರ..!
ತನ್ನ ಬಣದ ನಾಯಕರೊಡನೆ ರಾಜ್ಯಾದ್ಯಂತ ವಕ್ಫ್ ವಿರೋಧಿ ಹೋರಾಟವನ್ನು ಆಯೋಜನೆ ಮಾಡಿದ್ದ ಯತ್ನಾಳ್ ಬಿಜೆಪಿ ರಾಜ್ಯ ಘಟಕದ ಅನುಮತಿ ಪಡೆಯುವ ಪ್ರಯತ್ನವನ್ನೇ ಮಾಡಲಿಲ್ಲ. ಅಲ್ಲದೇ ಬಿಜೆಪಿ ರಾಜ್ಯ ಘಟಕ ಅಧಿಕೃತವಾಗಿ ಹಮ್ಮಿಕೊಂಡಿದ್ದ ವಕ್ಫ್ ವಿರೋಧಿ ಹೋರಾಟದಲ್ಲಿ ಯತ್ನಾಳ್ ಪಾಲ್ಗೊಳ್ಳಲಿಲ್ಲ. ವಕ್ಫ್ ವಿರೋಧಿ ಹೋರಾಟ, ಪಕ್ಷಕ್ಕೆ ಬಲ ತುಂಬುವ ಬದಲು ನಿಶ್ಯಕ್ತಿಯಾಗುವಂತೆ ಮಾಡಿತು. ಕಾರ್ಯಕರ್ತರು ಗೊಂದಲಕ್ಕೊಳಗಾದರು.
5. ವಿಜಯೇಂದ್ರರನ್ನು ಪ್ರಶ್ನೆ ಮಾಡಿದರೆ..
ಯತ್ನಾಳ್ ಅವರ ಗುಂಪುಗಾರಿಕೆ ಮತ್ತು ಬಣ ರಾಜಕಾರಣದಿಂದಾಗಿ ವಿಜಯೇಂದ್ರ ಅವರನ್ನ ಪ್ರಶ್ನೆ ಮಾಡುವಂತಾಯಿತು. ವಿಜಯೇಂದ್ರ, ಹೈಕಮಾಂಡ್ ಆಯ್ಕೆಯಾಗಿದ್ದರು. ಆ ಮೂಲಕ ಅವರು ಹೈಕಮಾಂಡ್ ನಿರ್ಧಾರವನ್ನೂ ಪ್ರಶ್ನೆ ಮಾಡಿದ್ದರು. ಪದೇ ಪದೇ ಪಕ್ಷದ ನಾಯಕತ್ವದ ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕ, ಯತ್ನಾಳ್ ಅವರು ಪಕ್ಷದ ಆಂತರಿಕ ರಚನೆಗೆ ಪೆಟ್ಟು ನೀಡುತ್ತಿದ್ದಾರೆ..” ಎಂದು ವಿಜಯೇಂದ್ರ ಬಣ ಹೈಕಮಾಂಡ್‌ಗೆ ದೂರು ನೀಡಿತು. ಹೈಕಮಾಂಡ್ ಈ ದೂರುಗಳನ್ನು ಸ್ವೀಕರಿಸಿದ್ದು ಮಾತ್ರವಲ್ಲದೇ, ಇವುಗಳಲ್ಲಿ ಸತ್ಯ ಇದೆ ಎಂಬ ತೀರ್ಮಾನಕ್ಕೂ ಬಂದಿತು.
6. ಗುಂಪುಗಾರಿಕೆ
ಯಡಿಯೂರಪ್ಪ ವಿರುದ್ಧ ರಾಜಕೀಯ ಯುದ್ಧವನ್ನೇ ಸಾರಿದ ಬಸನಗೌಡ ಪಾಟೀಲ್ ಯತ್ನಾಳ್, ಪಕ್ಷದಲ್ಲಿ ಗುಂಪುಗಾರಿಕೆಯ ಚಟುವಟಿಕೆಗಳಿಗೆ ನಾಯಕತ್ವ ವಹಿಸಿದರು.ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವ ಹೊಂದಿರುವ ಯತ್ನಾಳ್, ವಿಜಯೇಂದ್ರ ವಿರುದ್ಧ ಅಸಮಾಧಾನ ಹೊಂದಿದ್ದ ನಾಯಕರಿಗೆಲ್ಲ ಟಾನಿಕ್ ಕೊಟ್ಟರು. ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಜಿಎಂ ಸಿದ್ದೇಶ್ವರ, ಬಿಪಿ ಹರೀಶ್, ಅರವಿಂದ ಲಿಂಬಾವಳಿ, ಸಿಟಿ ರವಿ, ಪ್ರತಾಪ್ ಸಿಂಹ ಸೇರಿದಂತೆ ಬಹುತೇಕ ನಾಯಕರಿಗೆ ಯತ್ನಾಳ್ ನೇತೃತ್ವ ವಹಿಸಿದ್ದರು.
7. ಗೆಲ್ಲುವ ಸಾಮರ್ಥ್ಯ ಕಡಿಮೆ
ವಿಜಯೇಂದ್ರ ಅವರಿಗೆ ಹೋಲಿಸಿದರೆ ಯತ್ನಾಳ್ ಅವರಿಗೆ ಗೆಲ್ಲಿಸುವ ಸಾಮರ್ಥ್ಯ ಇಲ್ಲ. ಅವರ ಕ್ಷೇತ್ರದಲ್ಲಿಯೇ ಲೋಕಸಭೆಯಲ್ಲಿ ಬಿಜೆಪಿಗೆ ಲೀಡ್ ಸಿಕ್ಕಿರಲಿಲ್ಲ. ಯತ್ನಾಳ್ ಅವರಷ್ಟೇ ಅಲ್ಲ, ಯತ್ನಾಳ್ ಬಣದ ಬಹುತೇಕ ನಾಯಕರಿಗೆ ಮುಳುವಾಗಿದ್ದೇ ಈ ವಿಚಾರ. ತಮ್ಮ ಕ್ಷೇತ್ರದಲ್ಲೇ ಪ್ರಭಾವ ಇಲ್ಲದವರು, ಗೆಲ್ಲಿಸುವ ಸಾಮರ್ಥ್ಯ ಇರುವವರನ್ನು ಪ್ರಶ್ನೆ ಮಾಡುತ್ತಾ ಹೋಗಬಾರದು ಎನ್ನುವ ನಿಲುವಿಗೆ ಹೈಕಮಾಂಡ್ ಬಂತು.
8. ಆಂತರಿಕ ಸರ್ವೆ
ಇನ್ನು ಅಮಿತ್ ಶಾ ಅವರು ತರಿಸಿಕೊಂಡ ಆಂತರಿಕ ಸರ್ವೆಯಲ್ಲಿ ವಿಜಯೇಂದ್ರ ಪರ ಶೇ.80ಕ್ಕೂ ಹೆಚ್ಚು ಕಾರ್ಯಕರ್ತರ ಒಲವಿತ್ತು. ಇದೂ ಕೂಡಾ ಯತ್ನಾಳ್ ಉಚ್ಚಾಟನೆಗೆ ಕಾರಣವಾಯ್ತು
9. ಪಂಚಮಸಾಲಿ ಭಯ
ಇನ್ನು ಯತ್ನಾಳ್ ಪಂಚಮಸಾಲಿ ಲಿಂಗಾಯತರು. ಯತ್ನಾಳ್ ಹೋರಾಟದಿಂದಾಗಿ ಬಿಜೆಪಿಯ ಲಿಂಗಾಯತ ಮತಗಳು ಛಿದ್ರವಾದವೇ ಹೊರತು, ಲಾಭವಾಗಲಿಲ್ಲ. ಆ ಲಾಭವಾಗಿದ್ದು ಕಾಂಗ್ರೆಸ್ಸಿಗೆ.
10. ಹೈಕಮಾಂಡ್ ವಿರುದ್ಧವೂ ಭ್ರಷ್ಟಾಚಾರದ ಆರೋಪ
ಪದೇ ಪದೇ ರಾಜ್ಯ ನಾಯಕತ್ವದ ವಿರುದ್ಧ ಕಿಡಿಕಾರುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್, 2 ಸಾವಿರ ಕೋಟಿ ಕೊಟ್ಟರೆ ಸಿಎಂ ಆಗಬಹುದು ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಇದು ದೆಹಲಿಯ ನಾಯಕರನ್ನು ಕೆರಳಿಸಿತ್ತು. ಕಾಂಗ್ರೆಸ್ಸಿಗೆ ಬಹುದೊಡ್ಡ ಅಸ್ತ್ರ ಒದಗಿಸಿತ್ತು.
ಒಟ್ಟಿನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆ ನಿರ್ಧಾರ, ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗಳಿಗೆ ಕಾರಣವಾಗಿದೆ. ಇದೀಗ ಯತ್ನಾಳ್ ಅವರ ರಾಜಕೀಯ ನಡೆ ಏನಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ.