ಹಲವರಿಗೆ ಕಣ್ಣಿನ ದೃಷ್ಟಿ ದೋಷ ಕಾಡುತ್ತಲೇ ಇರುತ್ತದೆ. ಸಮೀಪದೃಷ್ಟಿ ದೋಷ, ದೂರ ದೃಷ್ಟಿ ದೋಷ (ಶಾರ್ಟ್ ಸೈಟ್, ಲಾಂಗ್ ಸೈಟ್) ಅಷ್ಟೇ ಅಲ್ಲ, ಕಣ್ಣು ನೋವಿಂದ ತಲೆನೋವು, ತಲೆ ಸಿಡಿತ, ಟಿವಿ ನೋಡುವಾಗ ಮಬ್ಬು ಮಬ್ಬಾಗಿ ಕಾಣುವುದು.. ಹೀಗೆಲ್ಲ ಸಮಸ್ಯೆಗಳಾಗುತ್ತಲೇ ಇರುತ್ತವೆ. ಕನ್ನಡಕ ಧರಿಸುವುದು, ಲೆನ್ಸ್ ಹಾಕುವುದು ಮುಂತಾದ ಪರಿಹಾರಗಳಿದ್ದರೂ.. ಅವುಗಳನ್ನು ಆಗಾಗ್ಗೆ ಕಾಲಕಾಲಕ್ಕೆ ಬದಲಿಸುತ್ತಲೇ ಇರಬೇಕು. ಪ್ರತೀ ಬಾರಿ ಟೆಸ್ಟ್ ಮಾಡಿಸಿಕೊಂಡು, ದುಬಾರಿ ಹಣ ಕೊಟ್ಟು ಕನ್ನಡಕ, ಲೆನ್ಸ್ ಚೇಂಜ್ ಮಾಡುವವರು ಒಮ್ಮೆಯಾದರೂ ಮನಸ್ಸಿನಲ್ಲಿ ಅಂದುಕೊಂಡಿರ್ತಾರೆ. ಒಂದ್ಸಲ ಡ್ರಾಪ್ಸ್ ಹಾಕ್ಕೊಂಡ್ರೆ ಸರಿ ಹೋಗೋ ಮ್ಯಾಜಿಕ್ ಆಗಿಬಿಟ್ರೆ.. ಅಂತಾ. ಅಂತಹ ಮ್ಯಾಜಿಕ್ ನಡೆಯುವ ಕಾಲ ಹತ್ತಿರದಲ್ಲೇ ಇದೆ. ಇದೇ ಅಕ್ಟೋಬರಿನಲ್ಲಿ ಆ ಮ್ಯಾಜಿಕ್ ಪ್ರತಿ ಮೆಡಿಕಲ್ ಸ್ಟೋರುಗಳಲ್ಲಿ ಸಿಗಲಿದೆ.
ಒಂದು ಔಷಧಿಗಾಗಿ ಹಲವಾರು ಭಾರಿ ಚರ್ಚೆ ಮಾಡಿ ಎರಡು ವರ್ಷಗಳ ಬಳಿಕ ಔಷಧಿ ನಿಯಂತ್ರಣ ಸಂಸ್ಥೆ ಚಷ್ಮಾಗೆ ಪರ್ಯಾಯವಾಗಿ ನಿಲ್ಲಬಲ್ಲ ಭಾರತದ ಮೊದಲ ಐಡ್ರಾಪ್ಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ಔಷಧಿ ಮಾರುಕಟ್ಟೆಗೆ ಬಂದಿದ್ದೇ ಆದಲ್ಲಿ, ಕಣ್ಣಿಗೆ ಗ್ಲಾಸ್ ಹಾಕಿಕೊಳ್ಳುವ ಅವಶ್ಯಕತೆಯೇ ಬರುವುದಿಲ್ಲ. ಲೆನ್ಸ್ ಕೂಡಾ ಅಗತ್ಯ ಬೀಳಲ್ಲ.
ಎಂಟೋಡ್ ಫಾರ್ಮಾಸಿಟಿಕಲ್ ತನ್ನ ಕೇಂದ್ರ ಕಚೇರಿಯಲ್ಲಿ ಪ್ರೆಸ್ ವೂ (presVu) ಎಂಬ ಐಡ್ರಾಪ್ ಲೋಕಾರ್ಪಣೆ ಮಾಡಿದೆ. ಈ ಒಂದು ಔಷಧಿ ಕಣ್ಣಿನ ಪಾಪೆಯ ಗಾತ್ರವನ್ನು ಸಣ್ಣದು ಮಾಡುತ್ತದಂತೆ. ಇದರಿಂದಾಗಿ ವಸ್ತುಗಳು ಹತ್ತಿರದಲ್ಲಿ ಕಾಣುವಂತೆ ಮಾಡುವಲ್ಲಿ ಸಹಾಯ ಮಾಡುತ್ತದೆ ಎಂದು ಸಂಸ್ಥೆ ಹೇಳಿದೆ. ದೃಷ್ಟಿದೋಷ ಅನ್ನೋದು ವಯೋಸಹಜ ಕಾಯಿಲೆ. ಇತ್ತೀಚೆಗೆ ಅದು ಯಾವ್ಯಾವುದೋ ಕಾರಣಕ್ಕೆ ಬರುತ್ತಿದೆ. ಕಣ್ಣಿಗೆ ಹತ್ತಿರದ ವಸ್ತುಗಳನ್ನು ಕಾಣವು ಸಾಮರ್ಥ್ಯವನ್ನು ಕಿತ್ತುಕೊಳ್ಳುತ್ತದೆ. ಹತ್ತಿರದ ವಸ್ತುಗಳನ್ನ ಸ್ಪಷ್ಟವಾಗಿ ನೋಡಲು ಬಹಳಷ್ಟು ಜನರಿಗೆ 40 ಸೆಕೆಂಡ್ನಿಂದ 60 ಸೆಕೆಂಡ್ ಬೇಕಾಗುತ್ತದೆ. ಈ ಒಂದು ಐ ಡ್ರಾಪ್ ಇವೆಲ್ಲಾ ಸಮಸ್ಯೆಗಳನ್ನು ದೂರ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಕಣ್ಣಿಗೆ ಈ ಔಷಧಿಯ ಒಂದು ಡ್ರಾಪ್ ಹಾಕ್ಕೊಂಡ್ರೆ ಕೇವಲ ಹದಿನೈದು ನಿಮಿಷಗಳಲ್ಲಿ ಇದು ತನ್ನ ಕೆಲಸ ಮಾಡಲು ಶುರು ಮಾಡುತ್ತದೆ. ಒಂದ್ಸಲ ಹಾಕ್ಕೊಂಡ ಡ್ರಾಪ್ ಸಾಮರ್ಥ್ಯ ಮುಂದಿನ ಆರು ಗಂಟೆಗಳವರೆಗೂ ಹಾಗೆಯೇ ಇರುತ್ತದೆ. ಮೊದಲ ಡ್ರಾಪ್ ಹಾಕಿಕೊಂಡ ಮೂರು ಅಥವಾ ಆರು ಗಂಟೆಗಳ ಬಳಿಕ ಎರಡನೇ ಡ್ರಾಪ್ ಹಾಕಿಕೊಂಡರೆ ಅದು ಇನ್ನೂ ಹೆಚ್ಚು ಗಂಟೆಗಳ ಕಾಲ ತನ್ನ ಪರಿಣಾಮವನ್ನು ಬೀರಲಿದೆ. ಅಸ್ಪಷ್ಟವಾಗಿ ಕಾಣುವ ದೃಷ್ಟಿದೋಷಕ್ಕೆ ಕಣ್ಣಿಗೆ ಗ್ಲಾಸ್, ಕಾಂಟ್ಯಾಕ್ಟ್ ಲೆನ್ಸ್ ಹಾಗೂ ಸರ್ಜರಿ ಹೊರತಾಗಿ ಯಾವುದೇ ಔಷಧಿ ಇಲ್ಲಿಯವರೆಗೂ ಇನ್ನೂ ಬಂದಿಲ್ಲ. ಇದೇ ಮೊದಲ ಐಡ್ರಾಪ್ ಎಂದು ಎಂಟೋಡ್ ಪಾರ್ಮಾಸೆಟಿಕಲ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಖಿಲ್ ಮಾಸುಕರ್ ಹೇಳಿದ್ದಾರೆ.
ಸಮೀಪ ದೃಷ್ಟಿ ದೋಷ ಎಂದರೆ, ಒಂದು ಪೇಪರ್ ತೆಗೆದುಕೊಂಡು ಕೈಗಳಲ್ಲಿ ಓದುವುದಕ್ಕೆ ಕಷ್ಟವಾಗುವುದು. ಸುಮಾರು 30-40 ಸೆಕೆಂಡ್ ನಂತರ ಹತ್ತಿರದಲ್ಲಿದ್ದ ಪೇಪರ್ ಸರಾಗವಾಗಿ ಓದುವಂತೆ ಸ್ಪಷ್ಟವಾಗಿ ಕಾಣುವುದು. ಇದು ಸಮೀಪದೃಷ್ಟಿ ದೋಷದ ಆರಂಭ. ಇದನ್ನು ವೈಜ್ಞಾನಿಕವಾಗಿ ಪ್ರೆಸ್‌ಬೈಯೋಪಿಯಾ ಅಂತಾರೆ. ಈ ರೋಗದಿಂದ ನರಳುವವರಿಗೆ ಈ ಔಷಧಿ ಕಂಡು ಹಿಡಿಯಲಾಗಿದೆ.
ಅಕ್ಟೋಬರ್ ಮೊದಲ ವಾರದಿಂದಲೇ ದೇಶದ ಎಲ್ಲಾ ಮೆಡಿಕಲ್ ಶಾಪ್ಗಳಲ್ಲಿ ಇದು ದೊರೆಯಲಿದೆ. ಇದರ ಬೆಲೆ 350 ರೂಪಾಯಿ. 40 ರಿಂದ 55 ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಪ್ರೆಸ್‌ಬೈಯೋಪಿಯಾ ಕಾಯಿಲೆ, 60ನೇ ವಯಸ್ಸಿನಲ್ಲಿ ತೀವ್ರವಾಗುತ್ತದೆ. ಅವರು ಈ ಡ್ರಾಪ್ ಬಳಸಬಹುದಾಗಿದೆ. 40-55ರ ವಯಸ್ಸಿನಲ್ಲಿ ವಯೋಸಹಜವಾಗಿ ಕಾಣಿಸಿಕೊಳ್ಳುವ ಸಮೀಪದೃಷ್ಟಿ ದೋಷಕ್ಕೆ ಈ ಔಷಧಿ ಪರಿಣಾಮಕಾರಿಯಾಗಲಿದೆ. ಇದು ಸಂಪೂರ್ಣ ದೇಶೀಯವಾಗಿ ತಯಾರಾದ ಐಡ್ರಾಪ್.
ಆದರೆ, ಇದೇ ಐಡ್ರಾಪ್ 40 ವಯಸ್ಸಿಗಿಂತ ಕೆಳಗಿನವರಿಗೂ ಕಾಣಿಸಿಕೊಳ್ಳುವ ದೃಷ್ಟಿದೋಷಕ್ಕೆ ಕೂಡಅ ಪರಿಹಾರ ನೀಡಬಲ್ಲುದಾ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ಸಿಕ್ಕಿಲ್ಲ. ಅಂದಹಾಗೆ ಇದರ ಬೆಲೆ 350 ರೂ.