ಅದೃಷ್ಟ ಎನ್ನುವುದು ಹಾಗೆ ಒಮ್ಮೊಮ್ಮೆ ಒದ್ದುಕೊಂಡು ಬರುತ್ತದೆ. ಬೇಡ ಬೇಡ ಅಂತ ಬಾಗಿಲು ಹಾಕ್ಕೊಂಡು, ಸುತ್ತಿಕೊಂಡು ಮಲಗಿದ್ದರೂ ಸಂಪತ್ತು ಬಾಚಿಕೊಂಡು ತಬ್ಬಿಕೊಳ್ಳುತ್ತದೆ. ಸ್ವಿಗ್ಗಿಯ 500 ಸಿಬ್ಬಂದಿಗೆ ಈಗ ಹಾಗೆಯೇ ಆಗಿದೆ. ಸ್ವಿಗ್ಗಿ ಬುಧವಾರ ಷೇರುಪೇಟೆಯಲ್ಲಿ ಭರ್ಜರಿಯಾಗಿ ಲಿಸ್ಟ್ ಆಗಿ ಎಂಟ್ರಿ ಕೊಟ್ಟಿದೆ. ಬೆನ್ನಲ್ಲೇ ಸ್ವಿಗ್ಗಿಯ 500 ಉದ್ಯೋಗಿಗಳು ಒಂದೇ ದಿನದಲ್ಲಿ ಕೋಟ್ಯಧಿಪತಿಗಳಾಗಿ ಬದಲಾಗಿದ್ದಾರೆ. ಇವರಲ್ಲಿ 70 ಉದ್ಯೋಗಿಗಳು ಕನಿಷ್ಠ 8.5 ಕೋಟಿ ರೂ. (1 ಮಿಲಿಯನ್ ಡಾಲರ್) ಪಡೆದುಕೊಂಡಿದ್ದರೆ, ಇನ್ನುಳಿದವರು ಕೋಟ್ಯಧಿಪತಿಗಳಾಗಿದ್ದಾರೆ.
ಸ್ವಿಗ್ಗಿ ತನ್ನ ಐಪಿಒ ರಿಲೀಸ್ ಮಾಡಿದ್ದು ತನ್ನ 5,000 ಉದ್ಯೋಗಿಗಳಿಗೆ 9,000 ಕೋಟಿ ರೂ. ಮೊತ್ತದ ಷೇರು ಹಂಚಿಕೆ ಮಾಡಿದೆ. ಹೀಗೆ ಇರುವವರೆಲ್ಲ ಸುದೀರ್ಘ ಕಾಲದಿಂದ ಸ್ವಿಗ್ಗಿ ಕಂಪೆನಿಯ ಜೊತೆಯಲ್ಲೇ ಇದ್ದವರು ಎನ್ನುವುದು ವಿಶೇಷ. ಉದ್ಯೋಗಿ ಷೇರು ಆಯ್ಕೆ (ಇಎಸ್‌ಒಪಿ)ಯಡಿ ಸ್ಟಾರ್ಟಪ್ ಒಂದು ಈ ಪ್ರಮಾಣದ ಷೇರು ಹಂಚಿಕೆ ಮಾಡುವುದು ತೀರಾ ಅಪರೂಪದ ಬೆಳವಣಿಗೆಯಾಗಿದೆ. ಸ್ವಿಗ್ಗಿಗಿಂತ ಮುನ್ನ ಈ ಹಿಂದೆ ಫ್ಲಿಪ್‌ಕಾರ್ಟ್ ಕೂಡ ಇದೇ ರೀತಿ ಷೇರುಗಳನ್ನು ಹಂಚಿಕೆ ಮಾಡಿತ್ತು.
ಮೊದಲ ದಿನ ಷೇರುಪೇಟೆಯಲ್ಲಿ ವಹಿವಾಟು ಆರಂಭಿಸಿದ ಸ್ವಿಗ್ಗಿಯ ಆರಂಭಿಕ ಬೆಲೆ 370 ರೂ. ಇತ್ತು. ಇದು ಸ್ವಿಗ್ಗಿಯವರೇ ನಿಗಧಿಪಡಿಸಿದ್ದ ಮೌಲ್ಯ. ಷೇರುಪೇಟೆಗೆ ಎಂಟ್ರಿ ಕೊಡುತ್ತಲೆ 420 ರೂ.ಗೆ ಏರಿದ್ದ ಷೇರು ಮೌಲ್ಯ, ಮೊದಲ ದಿನವೇ ಭರ್ಜರಿ ಏರಿಕೆ ಕಂಡ ಐಪಿಒ ದರ 442 ರೂ.ವರೆಗೆ ಏರಿತು. ನವೆಂಬರ್ 11ರಂದು ಲಿಸ್ಟ್ ಆಗಿದ್ದ ಸ್ವಿಗ್ಗಿ ಅರ್ಹ ಹಾಗೂ ಸೂಕ್ತ ಟ್ರೇಡ್ ಬಿಡ್ಡಿಂಗ್‌ದಾರರ ಡಿಮ್ಯಾಟ್ ಖಾತೆಗೆ ಒಪಿಒ ಹಂಚಿಕೆಯಾಗಲಿದೆ. ನವೆಂಬರ್ 12ರಂದು ಷೇರುದಾರರಿಗೆ ಲಿಸ್ಟ್ ಆಗಿತ್ತು.
ಸ್ವಿಗ್ಗಿಯ ಈ ನಿರ್ಧಾರದಿಂದ ಸ್ವಿಗ್ಗಿಯ 500+ ಉದ್ಯೋಗಿಗಳು ಕೋಟ್ಯಧಿಪತಿಗಳಾಗಿದ್ದಾರೆ.
ಐಪಿಒಗೆ ಮುನ್ನ ಕಳೆದ ತಿಂಗಳಷ್ಟೇ ಸ್ವಿಗ್ಗಿಯ ಸಹ ಸಂಸ್ಥಾಪಕ ಶ್ರೀಹರ್ಷ ಮಜೆಟಿ, ನಂದನ್ ರೆಡ್ಡಿ, ಫಾನಿ ಕಿಶನ್, ಫುಡ್ ಮಾರ್ಕೆಟ್‌ಪ್ಲೇಸ್ ಸಿಇಒ ರೋಹಿತ್ ಕಪೂರ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮುಖ್ಯಸ್ಥ ಅಮಿತೇಶ್ ಝಾ, ಸಿಎಫ್‌ಒ ರಾಹುಲ್ ಬೋಥ್ರಾ, ಎಚ್‌ಆರ್ ಮುಖ್ಯಸ್ಥ ಗಿರೀಶ್ ಮೆನನ್, ಸಿಟಿಒ ಮಧುಸೂದನ್ ರಾವ್ ಹಾಗೂ ಇತರರು 1,600 ಕೋಟಿ ರೂ. ಮೊತ್ತದ ಷೇರುಗಳನ್ನು ಸ್ವೀಕರಿಸಿದ್ದರು.
ಸ್ವಿಗ್ಗಿಯ ಬದ್ಧವೈರಿ ಜೊಮ್ಯಾಟೋ ಕೂಡ 2021ರಲ್ಲಿ ತನ್ನ ಉದ್ಯೋಗಿಗಳಿಗೆ ಆಸ್ತಿ ಸೃಷ್ಟಿಸಿತ್ತು. ಆ ವೇಳೆ ಕಂಪನಿ ಉದ್ಯೋಗಿಗಳಿಗೆ 7,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಿತ್ತು.
ಐಪಿಒದಲ್ಲಿ ಷೇರು ಹಂಚಿಕೆ ದರ 390 ರೂ.ಗೆ ಹೋಲಿಸಿದರೆ ಬುಧವಾರ ಎನ್‌ಎಸ್‌ಇನಲ್ಲಿ ಸ್ವಿಗ್ಗಿ ಷೇರುಗಳು ಶೇ. 7.69 ಪ್ರೀಮಿಯಂ ದರದಲ್ಲಿ ಲಿಸ್ಟ್ ಆಗಿದ್ದವು. ಎನ್‌ಎಸ್‌ಇನಲ್ಲಿ 420 ರೂ.ನಲ್ಲಿ ಲಿಸ್ಟ್ ಆಗಿದ್ದರೆ, ಬಿಎಸ್‌ಇನಲ್ಲಿ ಶೇ. 5.6ರಷ್ಟು ಪ್ರೀಮಿಯಂನೊಂದಿಗೆ 412 ರೂ.ನಲ್ಲಿ ಲಿಸ್ಟ್ ಆಗಿತ್ತು.
ಆದರೆ, ಲಿಸ್ಟ್ ಆದ ಬಳಿಕವೂ ಷೇರು ಒಂದೇ ಸಮನೆ ಏರಿಕೆ ಕಂಡಿದೆ. ಒಂದು ಹಂತದಲ್ಲಂತೂ ಷೇರು ಶೇ. 19ಕ್ಕಿಂತ ಹೆಚ್ಚು ಏರಿಕೆ ಕಂಡು 465.80 ರೂ.ಗೆ ತಲುಪಿತ್ತು. ಬಳಿಕ ದಿನದಂತ್ಯಕ್ಕೆ ಷೇರು 66 ರೂ. ಅಥವಾ ಶೇ. 16.92ರಷ್ಟು ಗಳಿಕೆಯೊಂದಿಗೆ 456ರಲ್ಲಿ ವಹಿವಾಟು ಮುಗಿಸಿತು. ಇದರಿಂದ ಐಪಿಒ ಹೂಡಿಕೆದಾರರು, ಇಎಸ್‌ಒಪಿ ಅಡಿಯಲ್ಲಿ ಕಂಪನಿಯಿಂದ ಷೇರು ಪಡೆದವರು ಭರ್ಜರಿ ಲಾಭ ಗಳಿಸಿದ್ದಾರೆ.
ಸ್ವಿಗ್ಗಿಯ ಈ ನಡೆಯನ್ನು ಪ್ರತಿಸ್ಪರ್ಧಿ ಜೊಮ್ಯಾಟೋ ಕೂಡಾ ಬಹಿರಂಗವಾಗಿ ಸ್ವಾಗತಿಸಿದೆ. ಹಾಗಾದರೆ ಜೊಮ್ಯಾಟೋದವರೂ ಕೂಡಾ ತಮ್ಮಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಷೇರು ಕೊಡುತ್ತಾರಾ ಎಂಬ ನಿರೀಕ್ಷೆ ಮೂಡಿದೆ.