ಅನ್ನ ದಾಸೋಹಿ, ಅಕ್ಷರ ದಾಸೋಹಿ ಸಿದ್ಧಗಂಗಾ ಶ್ರೀಗಳಾದ ಶಿವಕುಮಾರ ಸ್ವಾಮೀಜಿ, ಸಾವಿರಾರು ಮನೆಗಳ ಅನ್ನದಾತರೂ ಹೌದು. ಸಿದ್ಧಗಂಗಾ ಶ್ರೀಗಳ ಹೆಸರು ನೆನಪಿಸಿಕೊಂಡೇ ದಿನ ಆರಂಭಿಸುವ ಲಕ್ಷಾಂತರ ಜನ ಕರ್ನಾಟಕದಲ್ಲಿದ್ದಾರೆ. ಅವರ ಫೋಟೋಗಳನ್ನು ಮನೆಗಳಲ್ಲಿಟ್ಟು ಪೂಜಿಸವವರಿದ್ದಾರೆ. ಸಿದ್ದಗಂಗಾ ಮಠದಿಂದ ಪ್ರತಿ ವರ್ಷ 10 ಸಾವಿರಕ್ಕೂ ಹೆಚ್ಚು ಮಕ್ಕಳು ಹೊರಬರುತ್ತಾರೆ. ಜಾತಿ, ಮತ, ಧರ್ಮ ನೋಡದೆ ಅಲ್ಲಿ ವಿದ್ಯಾರ್ಥಿಗಳಿಗೆ ಅಹಾರ, ಶಿಕ್ಷಣ ಮತ್ತು ವಸತಿಗಳನ್ನು ಉಚಿತವಾಗಿ ಕೊಡಲಾಗುತ್ತದೆ. ಅಂತಹ ಸಿದ್ಧಗಂಗಾ ಶ್ರೀಗಳ ಪುತ್ಥಳಿ ವಿರೂಪವಾಗುತ್ತದೆ ಎಂದರೆ..
ಬೆಂಗಳೂರಿನ ಗಿರಿನಗರ, ವೀರಭದ್ರನಗರ ವೃತ್ತದಲ್ಲಿ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆಯನ್ನು ಕಿಡಿಗೇಡಿಗಳು, ವಿಕೃತ ಮನಸ್ಸಿನವರು ಧ್ವಂಸ ಮಾಡಿ ವಿರೂಪಗೊಳಿಸಿದ್ದರು. ಇದು ಹೊಸದೇನಾಗಿರಲಿಲ್ಲ. ಈ ಹಿಂದೆಯೂ ಈ ರೀತಿಯ ಘಟನೆ ನಡೆದಿತ್ತು. ಆದರೆ ಅದೇ ರೀತಿಯ ಘಟನೆ ಮರುಕಳಿಸಿದಾಗ ವೀರಶೈವ, ಲಿಂಗಾಯತ ಸಂಘಟನೆಗಳು ಬೀದಿಗಿಳಿದವು. ಅಖಿಲ ಭಾರತ ವೀರಶೈವ ಮಹಾಸಭಾ ಬೆಂಗಳೂರು ನಗರ ಘಟಕದಿಂದ ಪ್ರತಿಭಟನೆ ನಡೆಸಲಾಯಿತು. ಮಾಜಿ ಉಪ ಮಹಾಪೌರ ಬಿ.ಎಸ್. ಪುಟ್ಟರಾಜು, ವೀರಶೈವ ಸಮುದಾಯದ ಮುಖಂಡ ಮಲ್ಲಿಕಾರ್ಜುನ್, ಬಿಜೆಪಿ ಮುಖಂಡ ಹೆಚ್.ಆರ್.ಮಲ್ಲಿಕಾರ್ಜುನ್ ,ಅಖಿಲ ಭಾರತ ವೀರಶೈವ ಮಹಸಭಾ ಬೆಂಗಳೂರು ಘಟಕದ ಅಧ್ಯಕ್ಷ ಬಿ.ಆರ್. ನವೀನ್ ಕುಮಾರ್, ಉಪಾಧ್ಯಕ್ಷ ಗುರುಮೂರ್ತಿ, ವಿಜಯ್ ಕುಮಾರ್, ಪಿ.ಸ್ವರ್ಣ ಗೌರಿ,ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಕೋಶಾಧ್ಯಕ್ಷ ವಿಜಯ್ಕುಮಾರ್ ಎಂ. ಗುಡದಿನ್ನಿ, ಕಾರ್ಯದರ್ಶಿ ಮಂಜುನಾಥ್, ಅಶೋಕ್, ಕುಶಾಲ್ ಹಾಗೂ ವೀರಶೈವ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಅರೆಸ್ಟ್ ಆದವನು ಮತಾಂತರವಾಗಿದ್ದ..!
ಸಿಸಿಟಿವಿ ಪರಿಶೀಲಿಸಿದಾಗ ಆರೋಪಿ ಉದ್ದೇಶಪೂರ್ವಕವಾಗಿಯೇ ಬಂದು ಪುತ್ಥಳಿ ವಿರೂಪಗೊಳಿಸಿದ್ದಾನೆ ಎಂಬುದು ಮೇಲ್ನೋಟಕ್ಕೇ ಗೊತ್ತಾಗಿತ್ತು. ಬೆನ್ನು ಹತ್ತಿದ ಪೊಲೀಸರು ಬ್ಯಾಡರಹಳ್ಳಿಯ ಭರತ್ ನಗರ ನಿವಾಸಿ ಶಿವಕೃಷ್ಣ ಅನ್ನೋ ಡೆಲಿವರಿ ಬಾಯ್‌ನನ್ನು ಅರೆಸ್ಟ್ ಮಾಡಿದ್ದಾರೆ. ಆತನಿಗಿನ್ನೂ 34 ವರ್ಷ. ಕೇವಲ ಒಂದು ವಾರದ ಹಿಂದಷ್ಟೇ, ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಆಗಿ ಮತಾಂತರವಾಗಿದ್ದು ಶಿವಕೃಷ್ಣ, ಮತಾಂತರವಾದ ಮೇಲೆ ರಾಜ್‌ಶಿವು ಧರ್ಮಾಂದನಂತೆ ವರ್ತಿಸುತ್ತಿದ್ದ. ಕ್ರೈಸ್ತ ಧರ್ಮದ ಪ್ರಚಾರಕ್ಕೆ ಕೋಡ್ ಸ್ಕ್ಯಾನ್ ಇರೋ ಭಿತ್ತಿಪತ್ರ ಹಂಚಿಕೆ ಮಾಡ್ತಿದ್ದ. ಅದಲ್ಲದೇ ಶ್ರೀಗಳ ಪುತ್ಥಳಿ ಒಡೆಯಲು ಈತನಿಗೆ ಕನಸಿನಲ್ಲಿ ಯೇಸು ಹೇಳಿದ್ರಂತೆ.. ಯೇಸು ಹೇಳಿದ್ದಕ್ಕೆ ಮೂರ್ತಿ ವಿರೂಪಗೊಳಿಸಿದ್ದೇನೆ ಎಂದು ಆರೋಪಿ ಹೇಳಿದ್ದಾನೆ ಎಂದು ತಿಳಿದು ಬಂದಿದೆ. ದೇವರಂತೆ ಪೂಜಿಸೋ ಶ್ರೀಗಳ ಪುತ್ಥಳಿಗೆ ಅದ್ಯಾವಾಗ ವಿರೂಪ ಆಯ್ತೋ.. ಇದು ಭಕ್ತರು ಹಾಗೂ ಹಲವು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ಬಿಷಪ್ ಖಂಡನೆ. ಕ್ರಮಕ್ಕೆ ಒತ್ತಾಯ :
ಆರೋಪಿ ಶಿವಕೃಷ್ಣ ವಿರುದ್ಧ ಹಿನ್ನೆಲೆ ಅಥವಾ ಸಂಬಂಧವನ್ನು ಲೆಕ್ಕಿಸದೆ ಕಾನೂನು ಕ್ರಮ ಜರುಗಿಸಬೇಕು ಎಂದು ಬೆಂಗಳೂರಿನ ಆರ್ಚ್ ಬಿಷಪ್ ಪೀಟರ್ ಮಚಾದೋ ಒತ್ತಾಯಿಸಿದ್ದಾರೆ. ಶಿವಕುಮಾರ ಸ್ವಾಮೀಜಿ ಅಸಂಖ್ಯಾತರಿಗೆ ಸ್ಫೂರ್ತಿಯಾಗಿದ್ದರು. ಜಾತ್ಯತೀತ ಮೌಲ್ಯಗಳ ಸಂದೇಶವಾಹಕರಾಗಿದ್ದರು. ಪ್ರತಿಮೆಯನ್ನು ವಿರೂಪಗೊಳಿಸಿದ ಎನ್ನಲಾದ ಅಪರಾಧಿಯು, ಯೇಸುಕ್ರಿಸ್ತರನ್ನೊಳಗೊಂಡ ಕನಸಿನಿಂದ ತಾನು ಪ್ರೇರೇಪಿಸಲ್ಪಟ್ಟಿದ್ದೇನೆ ಎಂದು ವರದಿ ಮಾಡಿದ ತಪ್ಪೊಪ್ಪಿಗೆಯು ಭಯ ಹುಟ್ಟಿಸುವಂತಿದೆ ಎಂದಿದ್ದಾರೆ.