ಬಿಜೆಪಿ ಹೈಕಮಾಂಡ್ ಎಲ್ಲ ಕಡೆ ಆಕ್ಟಿವ್ ಆದಂತೆ ಕಾಣುತ್ತಿದೆ. ದಿಢೀರ್ ಆಕ್ಟಿವ್ ಹಿಂದಿನ ರಹಸ್ಯವೇನೋ ಗೊತ್ತಿಲ್ಲ. ಒಂದು ಕಡೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಹಿನ್ನಡೆ ಎನ್ನುವಂತೆ ತೋರುತ್ತಿದೆ. ಮತ್ತೊಂದೆ ಯತ್ನಾಳ್ʻಗೆ ನೋಟಿಸ್ ಕೊಡಲಾಗಿದೆ. ಆದರೆ ನೋಟಿಸ್ ಬಂದಿಲ್ಲ ಅಂತಿದ್ದಾರೆ ಯತ್ನಾಳ್. ಮತ್ತೊಂದು ಕಡೆ ದೆಹಲಿಯಲ್ಲಿ ಸಚಿವ ಸೋಮಣ್ಣ ಮನೆಯಲ್ಲಿ ಲಿಂಗಾಯತ ನಾಯಕರ ಓಪನ್ ಸೀಕ್ರೆಟ್ ಮೀಟಿಂಗ್ ನಡೆಯುತ್ತಿದೆ.
ವಿಜಯೇಂದ್ರಗೆ ಹಿನ್ನಡೆ :
ಯತ್ನಾಳ್‌ಗೆ ನೋಟಿಸ್ :
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಕ್ಷ ದ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ. ಜತೆಗೆ 3 ದಿನಗಳೊಳಗಾಗಿ ಲಿಖಿತ ವಿವರಣೆ ನೀಡುವಂತೆ ಗಡುವನ್ನೂ ವಿಧಿಸಿದೆ. ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ತಾವು ಪಕ್ಷದ ಶಿಸ್ತು ಉಲ್ಲಂಘಿಸುತ್ತಿದ್ದೀರಿ. ಇದು ಪಕ್ಷದ ಶಿಸ್ತಿಗೆ ವಿರುದ್ಧ. ಈ ಹಿಂದೆ ಶೋಕಾಸ್ ನೋಟಿಸ್ ನೀಡಿದ್ದಾಗ ತಿದ್ದಿಕೊಳ್ಳುವ ಭರವಸೆ ನೀಡಿ, ಅದನ್ನು ಉಲ್ಲಂಘಿಸಿದ್ದೀರಿ. ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು ಎನ್ನುವುದು ನೊಟೀಸಿನಲ್ಲಿರುವ ಪ್ರಶ್ನೆ.
ನೋಟಿಸ್ ಬಂದಿಲ್ಲ : ಯತ್ನಾಳ್
ಯತ್ನಾಳ್ ಅವರಿಗೆನೀಡುತ್ತಿರುವ ಎರಡನೆಯ ಶೋಕಾಸ್ ನೋಟಿಸ್ ಇದಾಗಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಮೊದಲ ಶೋಕಾಸ್ ನೋಟಿಸ್ ನೀಡಲಾಗಿತ್ತು. ಅದಕ್ಕೆ ಆರು ಪುಟಗಳ ವಿವರಣೆಯನ್ನೂ ಯತ್ನಾಳ್ ಅವರು ನೀಡಿದ್ದರು. ಆಗ ನನಗೆ ಯಾವ ನೋಟಿಸ್ ಬಂದಿಲ್ಲ ಎಂದು ಹೇಳಿದ್ದ ಯತ್ನಾಳ್, ದೆಹಲಿಯಲ್ಲಿ ಉತ್ತರ ಕೊಟ್ಟು ಬಂದಿದರು. ಇದೀಗ ಯತ್ನಾಳ್ ಸೇರಿ ಅವರ ಬಣದ ಮುಖಂ ಡರು ಸೋಮವಾರ ವಾರದಲ್ಲಿ ಎರಡನೇ ಬಾರಿ ದೆಹಲಿಗೆ ತೆರಳಿ ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿರುವ ಮಧ್ಯೆಯೇ ಪಕ್ಷದ ಕೇಂದ್ರ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ಓಂಪಾಠಕ್ ಅವರು ಶೋಕಾಸ್ ನೋಟಿಸ್ ನೀಡಿರುವುದು ಕುತೂಹಲ ಮೂಡಿಸಿದೆ. ಈಗಲೂ ಕೂಡಾ ನನಗೆ ಯಾವ ನೊಟೀಸ್ ಬಂದಿಲ್ಲ ಎನ್ನುತ್ತಿದ್ಧಾರೆ ಯತ್ನಾಳ್.
ವಿಜಯೇಂದ್ರಗೆ ಹಿನ್ನಡೆ :
ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೂ ಹಿನ್ನಡೆ ಆಗಿದ್ದು ಮಾಜಿ ಸಚಿವ ಹಾಗೂ ಹಾಲಿ ಸಂಸದ ಡಾ.ಕೆ.ಸುಧಾಕರ್ ಅವರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಬಿ.ಸಂದೀಪ್ ಆಯ್ಕೆಗೆ ಪಕ್ಷದ ವರಿಷ್ಠರು ತಡೆ ನೀಡಿದ್ದಾರೆ. ಆದರೆ ಮುಂಬರುವ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಸಂದೀಪ್ ಮತ ಚಲಾಯಿಸಬಹುದು. ಈ ಮೂಲಕ ಸುಧಾಕರ್ ʻತಾನೆಷ್ಟು ಪವರ್ ಫುಲ್ʼ ಎಂದು ಸಾಬೀತು ಪಡಿಸಿದ್ದಾರೆ.
ಯತ್ನಾಳ್ ಬಣಕ್ಕೆ ಸೋಮಣ್ಣ ನೇತೃತ್ವ :
ಇನ್ನು ಯತ್ನಾಳ್ ಬಣಕ್ಕೆ ಸಚಿವ ಸೋಮಣ್ಣ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಸೋಮಣ್ಣ ಅವರ ಮನೆ ಪೂಜೆಯ ನೆಪದಲ್ಲಿ ʻಲಿಂಗಾಯತ ನಾಯಕʼರು ದೆಹಲಿಯಲ್ಲಿ ಸಭೆ ನಡೆಸಿದ್ದಾರೆ. ಒಂದು ವೇಳೆ ಬಿಜೆಪಿ ಹೈಕಮಾಂಡ್ ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬದಲಿಸುವ ನಿರ್ಣಯ ಕೈಗೊಂಡಲ್ಲಿ ಲಿಂಗಾಯತ ಸಮುದಾಯದಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ವಿ.ಸೋಮಣ್ಣ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಹೆಸರುಗಳನ್ನು ಪರಿಶೀಲಿಸಬೇಕು ಎಂಬ ಚರ್ಚೆ ಪಕ್ಷದಲ್ಲಿ ಆರಂಭವಾಗಿದೆ. ಕೇಂದ್ರ ಸಚಿವ ಸೋಮಣ್ಣ ಅವರ ನಿವಾಸದಲ್ಲಿ ನಡೆದ ಸಭೆಯಲ್ಲೂ ಈ ಬಗ್ಗೆ ಸಮಾಲೋಚನೆ ನಡೆದಿದೆ. ಆದರೆ, ಇದುವರೆಗೆ ಬೊಮ್ಮಾಯಿ ಅವರಾಗಲಿ, ಸೋಮಣ್ಣ ಅವರಾಗಲಿ ಅಥವಾ ನಿರಾಣಿ ಅವರಾಗಲಿ ಯಾವುದೇ ಸ್ಪಷ್ಟ ಅಭಿಪ್ರಾಯ ಹೊರಹಾಕಿಲ್ಲ
ಬಸವರಾಜ ಬೊಮ್ಮಾಯಿ ಯಾವ ವಿಷಯದಲ್ಲೂ ಅಷ್ಟೇ, ಸ್ಪಷ್ಟವಾಗಿ ಏನನ್ನೂ ಹೇಳದೆ ಆಸೆ ಮಾತ್ರ ತೋಡಿಕೊಳ್ಳೋದು ಹೊಸದೇನಲ್ಲ. ಅಕಸ್ಮಾತ್ ಬೊಮ್ಮಾಯಿ ವಿರುದ್ಧವಾದರೆ ನಾನು ಹಾಗೆ ಹೇಳಿಲ್ಲ ಎನ್ನುವುದು ಅಥವಾ ಅವರಂತೆಯೇ ಆದರೆ ನಾನು ಕೇಳಿದ್ದಲ್ಲ, ಹೈಕಮಾಂಡ್ ಹೇಳಿದ್ದು ಎನ್ನುವುದು ಬೊಮ್ಮಾಯಿ ಕ್ಯಾರೆಕ್ಟರ್. ಒಟ್ಟಿನಲ್ಲಿ ಸಮರ ಕುತೂಹಲ ಸಖತ್ ಆಗಿದೆ.