ರೇಣುಕಾಸ್ವಾಮಿ ಕೊಲೆ ಕೇಸ್. ಇಡೀ ರಾಜ್ಯದಲ್ಲಿ ಈ ಪ್ರಕರಣ ಬಿಟ್ಟರೆ ಬೇರೆ ಸುದ್ದಿಯೇ ಇಲ್ಲವೇನೋ ಎಂಬಂತೆ ಸುದ್ದಿಯಾಗುತ್ತಿದೆ. ನಟ ದರ್ಶನ್ ಅವರ ಪ್ರಖ್ಯಾತಿ ಮತ್ತು ಕುಖ್ಯಾತಿಗಳೆರಡೂ ಇದಕ್ಕೆ ಕಾರಣ. ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ದರ್ಶನ್ ಗ್ಯಾಂಗ್‌ನ ಒಟ್ಟು 17 ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಮೊದಲ ಮೂವರು ರಿಲೀಸ್ ಆಗಿದ್ದಾರೆ. ಅದೂ ಜಾಮೀನು ಸಿಕ್ಕಿ ೧೦ ದಿನಗಳ ನಂತರ ಎನ್ನುವುದೇ ವಿಶೇಷ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲಿಗೆ ಜಾಮೀನು ಪಡೆದಿದ್ದ ಮೂವರು ಆರೋಪಿಗಳು ಇದೀಗ ಜೈಲಿಂದ ಹೊರಬಂದಿದ್ದಾರೆ. ತುಮಕೂರು ಜಿಲ್ಲಾ ಕಾರಾಗೃಹದಲ್ಲಿದ್ದ ಆರೋಪಿ ಕೇಶವಮೂರ್ತಿ, ಕಾರ್ತಿಕ್, ನಿಖಿಲ್ ನಾಯಕ್ ಅವರಿಗೆ ಕಳೆದ ತಿಂಗಳ ಸೆಪ್ಟೆಂಬರ್ 23 ರಂದು ಜಾಮೀನು ಸಿಕ್ಕಿತ್ತು. ಜಾಮೀನಿಗೆ ಶ್ಯೂರಿಟಿದಾರರು ಸಿಗದೇ ಆರೋಪಿಗಳ ಕುಟುಂಬಸ್ಥರು ಪರದಾಡಿದ್ದರು.
ಸತತ 9 ದಿನಗಳಿಂದ ಶ್ಯೂರಿಟಿದಾರರು ಸಿಗದೇ ಪರದಾಡಿದ್ದ ಆರೋಪಿಗಳಿಗೆ ಕೊನೆಗೂ ಜಾಮೀನು ಸಿಕ್ಕ ಮೇಲೆ ರಾತ್ರಿಯೇ ತುಮಕೂರು ಜೈಲಾಧಿಕಾರಿಗೆ ಜಾಮೀನು ಆದೇಶ ಪ್ರತಿ ತಲುಪಿಸಿದ್ದಾರೆ. ಎ 16 ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ ನಿಂದ, ಆರೋಪಿ ಎ15 ಆರೋಪಿ ನಿಖಿಲ್ ನಾಯಕ್ ಹಾಗೂ ಎ17 ಕಾರ್ತಿಕ್ ಗೆ 57 ನೇ ಸಿಸಿಹೆಚ್ ಕೋರ್ಟ್ ನಿಂದ ಜಾಮೀನು ಸಿಕ್ಕಿತ್ತು. ರಿಲೀಸ್ ಆದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಆರೋಪಿಗಳು ಕಾನೂನು ಏನು ಹೇಳುತ್ತದೆಯೋ ಆ ಪ್ರಕಾರ ನಡೆಯುತ್ತೇವೆ, ಎಲ್ಲಾ ಹೇಳಿಕೆಗಳನ್ನು ಕೊಟ್ಟಿದ್ದೇವೆ.. ತನಿಖೆಯಲ್ಲಿ , ಕೋರ್ಟ್‌ನಲ್ಲಿ ಹೇಳಿದ್ದೇವೆ. ಪ್ರಕರಣ ಕೋರ್ಟ್‌ನಲ್ಲಿದೆ. ಇದಕ್ಕಿಂತ ಹೆಚ್ಚಿನದ್ದು ಏನೂ ಗೊತ್ತಿಲ್ಲ ಹೇಳಿದ್ದಾರೆ. ಮಾಧ್ಯಮಗಳ ಹೆಚ್ಚಿನ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡಿಲ್ಲ.
ಕೆಲಸ ಕಳೆದುಕೊಂಡು ಕಷ್ಟದ ಪರಿಸ್ಥಿತಿಯಲ್ಲಿ ಇದ್ದಾಗ ಹೀಗೆಲ್ಲ ಆಗಿದೆ. ನಮಗೆ ಶ್ಯೂರಿಟಿ ಸಿಗುತ್ತಿರಲಿಲ್ಲ ಎಂದಿರುವ ಆರೋಪಿಗಳು ಕೊಲೆ ಪ್ರಕರಣದ ಬಗ್ಗೆ ಏನನ್ನೂ ಹೇಳೋದಿಲ್ಲ ಎಂದಿದ್ದಾರೆ. ಈ ಮೂವರೂ ಆರೋಪಿಗಳ ವಿರುದ್ಧ ಕೊಲೆ ಪ್ರಕರಣದಲ್ಲಿ ಭಾಗಿಯಾದ ಸೆಕ್ಷನ್ʻಗಳು ಇರಲಿಲ್ಲ. ಹೀಗಾಗಿ ಜಾಮೀನು ದೊರೆತಿದೆ. ಅಂದಹಾಗೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳೇ ಹೇಳಿಕೊಂಡಂತೆ ಹಾಗೂ ಪೊಲೀಸ್ ಚಾರ್ಜ್ ಶೀಟ್ ಪ್ರಕಾರ ಮೂವರೂ ಆರೋಪಿಗಳು ನೇರವಾಗಿ ಕೊಲೆಯಲ್ಲಿ ಭಾಗಿಯಾಗಿಲ್ಲ. ಆದರೆ ಸಾಕ್ಷ್ಯ ನಾಶ ಪಡಿಸಲು ಯತ್ನಿಸಿದ ಆರೋಪ ಇವರೆಲ್ಲರ ಮೇಲಿದೆ.
ರೇಣುಕಾಸ್ವಾಮಿ ಕೊಲೆ ವೇಳೆ ಟೀ ಕುಡಿಯೋಕೆ ಅಂತ ಹೋಗಿದ್ದ ಕೇಶವಮೂರ್ತಿ, ಆರೋಪಿ ನಂಬರ್ 16 ಆಗಿದ್ದ. 5 ಲಕ್ಷದ ಆಸೆಗೆ ಜೈಲಿಗೆ ಹೋಗಲು ಸಿದ್ಧವಾಗಿದ್ದ ಕೇಶವಮೂರ್ತಿಯೇ ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ಮೊದಲು ಬಾಯಿಬಿಟ್ಟಿದ್ದ ವ್ಯಕ್ತಿ ಎನ್ನುವುದು ತನಿಖೆಯಲ್ಲಿ ಬಹಿರಂಗವಾಗಿತ್ತು. ರೇಣುಕಾಸ್ವಾಮಿ ಕೊಲೆ ಆದ ಬಳಿಕ ಸರೆಂಡರ್ ಆಗಲು ಕಾರ್ತಿಕ್ ಮತ್ತು ನಿಖಿಲ್ ಮೊದಲು ಒಪ್ಪಿದ್ದರು. ಆದರೆ ರಾಘವೇಂದ್ರ ಮೊದಲು ಒಪ್ಪಿಗೆ ಕೊಟ್ಟು ಆಮೇಲೆ ಸರೆಂಡರ್ ಆಗಲ್ಲ ಎಂದಿದ್ದ. ಈ ಸಮಯದಲ್ಲಿ ಯಾರಾದ್ರೂ ಸಿಗ್ತಾರಾ ಅಂತ ಹುಡುಕಿಕೊಂಡು ಹೋಗಿದ್ದ ನಿಖಿಲ್ ಮತ್ತು ಕಾರ್ತಿಕ್ ಅವರಿಗೆ ಉತ್ತರಹಳ್ಳಿ ಬಳಿ ಟೀ ಕುಡಿಯುತ್ತಾ ಕುಳಿತಿದ್ದ ಕೇಶವಮೂರ್ತಿ ಕಣ್ಣಿಗೆ ಬಿದ್ದಿದ್ದ. ಅವನ ಜೊತೆ ಮಾತನಾಡಿದ ಕಾರ್ತಿಕ್, ಒಂದು ಕೊಲೆಯಾಗಿದೆ. ಸರೆಂಡರ್ ಆದ್ರೆ ಹಣ ಕೊಡ್ತಾರೆ. ಆಮೇಲೆ ಬೇಲ್ ಕೊಡಿಸಿ ಹೊರಗೆ ಕರೆದುಕೊಂಡು ಬರುತ್ತಾರೆ. ನಂತರ ಜೀವನಕ್ಕೂ ಏನೋ ಒಂದು ವ್ಯವಸ್ಥೆ ಮಾಡ್ತಾರೆ ಎಂದೆಲ್ಲ ಪುಸಲಾಯಿಸಿದ್ದ. ಹಣ ಸಿಗುತ್ತೆ ಅಂತ ಒಪ್ಪಿಕೊಂಡ ಕೇಶವಮೂರ್ತಿ ಶೆಡ್ಡಿಗೆ ಹೋಗಿದ್ದ. ಆತನಿಗೆ ಅಡ್ವಾನ್ಸ್ ಆಗಿ ನೀಡಿದ್ದ 5 ಲಕ್ಷ ರೂ. ಹಣವನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು. ಪ್ರಕರಣದಲ್ಲಿ ಕೊನೆಯ ಆರೋಪಿಗಳಾಗಿದ್ದ ಮೂವರಿಗೂ ಒಬ್ಬರ ಪರ್ಸನಲ್ ಶ್ಯೂರಿಟಿ ಪಡೆದು ಜಾಮೀನು ನೀಡಲು ಸೂಚಿಸಿತ್ತು.