ಚಿತ್ರರಂಗದಲ್ಲಿ ಇರುವ ಕೆಲವರು ಬದುಕಿದ್ದಾಗಲೇ ದೇವರಾಗಿದ್ದಾರೆ. ನಟಿ ಖುಷ್ ಬೂ, ಸೌಂದರ್ಯ ಮೊದಲಾದ ನಟಿಯರಿಗೆ ಅಭಿಮಾನಗಳು ದೇವಸ್ಥಾನ ಕಟ್ಟಿಸಿದ್ದರು ನಟ ಪುನೀತ್ ರಾಜ್ ಕುಮಾರ್ ಮೃತಪಟ್ಟ ಮೇಲೆ ದೇವರಾಗಿ, ಪೂಜೆ, ಸೇವೆ ಮಾಡಿಸಿಕೊಳ್ಳುವಂತಾಗಿದೆ. ಅದು ಅಭಿಮಾನಿ ದೇವರುಗಳ ಕೃಪೆ. ಇನ್ನು ಸುದೀಪ್ ತಮ್ಮ ದೇವಸ್ಥಾನವನ್ನು ಕಟ್ಟದಂತೆ ತಾವೇ ತಡೆಹಿಡಿದಿದ್ದಾರೆ. ಇಂತಹ ದೇವಸ್ಥಾನ ಈಗ ನಟಿ ಲೀಲಾವತಿ ಅವರಿಗೆ ಕೂಡಾ ನಿರ್ಮಾಣವಾಗಿದೆ. ದೇವಸ್ಥಾನ ಕಟ್ಟಿಸಿರೋದು ಅವರ ಮಗ ವಿನೋದ್ ರಾಜ್.
ಹಿರಿಯ ನಟಿ ಲೀಲಾವತಿ ಅವರು ನಿಧನರಾಗಿ ವರ್ಷವಾಗುತ್ತಾ ಬಂದಿದೆ. ಇದೀಗ ಲೀಲಾವತಿ ಅವರಿಗಾಗಿ ಮಗ ವಿನೋದ್ ರಾಜ್ ದೇವಸ್ಥಾನವನ್ನೇ ಕಟ್ಟಿಸಿದ್ದಾರೆ. ನೆಲಮಂಗಲ ತಾಲ್ಲೂಕಿನ ಸೋಲದೇವನಹಳ್ಳಿಯಲ್ಲಿ ಒಂದು ಎಕರೆ ಪ್ರದೇಶದಲ್ಲಿ ದೇವಸ್ಥಾನ ನಿರ್ಮಾಣವಾಗಿದೆ. ಲೀಲಾವತಿ ಅವರಿಗಾಗಿ 1 ಕೋಟಿ ಖರ್ಚು ಮಾಡಿರುವ ವಿನೋದ್ ರಾಜ್, ಸಮಾಧಿ ಸ್ಥಳವನ್ನೇ ದೇಗುಲದಂತೆ ಕಟ್ಟಿಸಿ ಸ್ಮಾರಕ ಮಾಡಿದ್ದಾರೆ. ಅಂದರೆ ಸಮಾಧಿಯೇ ಸ್ಮಾರಕವಾಗಿದೆ. ಸ್ಮಾರಕವೇ ದೇವಸ್ಥಾನವಾಗಿದೆ.
ಸ್ಮಾರಕದ ಒಳಗೆ ಲೀಲಾವತಿಯವರ 62 ಅಪರೂಪದ ಫೋಟೋಗಳನ್ನು ಅಳವಡಿಸಲಾಗಿದೆ. ಚಿಕ್ಕ ರಂಗಮಂದಿರ ನಿರ್ಮಿಸಲಾಗಿದೆ. ಸಣ್ಣ ಸಣ್ಣ ರಂಗ ಪ್ರದರ್ಶನಗಳು, ಸಭೆ ಸಮಾರಂಭಕ್ಕೆ ಅವಕಾಶವನ್ನೂ ಕಲ್ಪಿಸಲಾಗಿದೆ. ಲೀಲಾವತಿ ಅವರ ಸ್ಮಾರಕದ ಬಳಿ ಬಂದು ಉಳಿದುಕೊಳ್ಳುವವರಿಗಾಗಿ ಎರಡು ಸುಸಜ್ಜಿತ ಕೋಣೆಗಳನ್ನು ನಿರ್ಮಿಸಲಾಗಿದೆ. ಊಟ, ಭೋಜನಾಲಯದ ವ್ಯವಸ್ಥೆಯೂ ಇರುತ್ತದೆ. ಸ್ಮಾರಕದ ಸುತ್ತ ಒಂದು ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ.
ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಮಂದಿರ ತೆರೆದಿರುವ ಸ್ಮಾರಕ ನೆಲಮಂಗಲ ಪಟ್ಟಣದಿಂದ ಸುಮಾರು 8 ಕಿ.ಮೀ. ದೂರದಲ್ಲಿದೆ. ಡಿಸೆಂಬರ್ 5ನೇ ತಾರೀಕು ಸ್ಮಾರಕ ಉದ್ಘಾಟನೆಯಾಗಲಿದೆ ಎಂದು ವಿನೋದ್ ರಾಜ್ ಮಾಹಿತಿ ನೀಡಿದ್ಧಾರೆ. ತಬ್ಬಲಿ ಮಗನ ಜೊತೆ ನಿಂತು ಕಾರ್ಯಕ್ರಮ ಯಶಸ್ಸುಗೊಳಿಸುವಂತೆ ವಿನೋದ್ ರಾಜ್ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಲೀಲಾವತಿ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದವರು. ಕನ್ನಡದಲ್ಲಷ್ಟೇ ಅಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600 ಚಿತ್ರಗಳಲ್ಲಿ ನಟಿಸಿದ್ದರು. ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ತ್ಯುನ್ನತ ಪ್ರಶಸ್ತಿ ಡಾ. ರಾಜ್ ಕುಮಾರ್ ಪ್ರಶಸ್ತಿಯನ್ನು 1999-2000ದ ಸಾಲಿನಲ್ಲಿ ಲೀಲಾವತಿಗೆ ನೀಡಲಾಗಿದೆ. 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ನೀಡಲಾಯ್ತು. ಲೀಲಾವತಿ ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ. ನಾಟಕ, ರಂಗಭೂಮಿ ಬಗ್ಗೆ ಚಿಕ್ಕವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದರು. ಲೀಲಾ ಅವರು ವೃತ್ತಿಜೀವನ ಆರಂಭಿಸಿದ್ದು ಮೈಸೂರಿನಲ್ಲಿ, ವೃತ್ತಿರಂಗಭೂಮಿಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಮುನ್ನ ಕೆಲವೆಡೆ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸಿದ್ದರು. ಇದೀಗ ದೇವಸ್ಥಾನ ನಿರ್ಮಾಣವಾಗಿದ್ದು, ದೇವರಾಗಿ ಹೋಗಿದ್ದಾರೆ.