ತಿರುಪತಿ ತಿಮ್ಮಪ್ಪ ಹರಕೆ ಬಿಡಲ್ಲ ಎನ್ನುವುದು ಗಾದೆ ಹಾಗೂ ನಂಬಿಕೆ. ತಿರುಪತಿ ತಿಮ್ಮಪ್ಪನಿಗೆ ಏನೇ ಹರಸಿಕೊಳ್ಳಿ, ಅದು ಈಡೇರುವವರೆಗೂ ಕಾಡುತ್ತಲೇ ಇರುತ್ತದೆ. ತಿಮ್ಮಪ್ಪನ ಭಕ್ತರಿಗೆ ಈ ಅನುಭವವಾಗಿರುತ್ತದೆ. ಅಂತಹ ತಿರುಪತಿ ತಿಮ್ಮಪ್ಪನಿಗೆ ಗೀತಾ-ಶಿವಣ್ಣ ದಂಪತಿ ಮೊದಲ ಹರಕೆ ತೀರಿಸಿದ್ದಾರೆ. ತಿರುಪತಿಯಲ್ಲಿ ಶಿವಣ್ಣ-ಗೀತಾ ದಂಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟಿದ್ದಾರೆ.
ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿರುವ ಶಿವರಾಜ್ ಕುಮಾರ್, ಪತ್ನಿ ಹಾಗೂ ಕುಟುಂಬದ ಕೆಲವು ಸದಸ್ಯರ ಜೊತೆ ತಿರುಪತಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅನಾರೋಗ್ಯದಿಂದ ಬಳಲಿದ್ದ ಶಿವಣ್ಣಗೆ ಬೆಂಗಳೂರಿನಲ್ಲೇ ರೇಡಿಯೇಷನ್ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದು, ಡಿಸೆಂಬರ್ 15ರ ಹೊತ್ತಿಗೆ ಶಿವಣ್ಣ ಅಮೆರಿಕಾಗೆ ತೆರಳಲಿದ್ದಾರೆ ಎನ್ನಲಾಗಿದೆ.
ಶೀಘ್ರದಲ್ಲಿಯೇ ಶಸ್ತ್ರ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಲಿರುವ ಶಿವಣ್ಣ, ತಿಮ್ಮಪ್ಪನಿಗೆ ಮುಡಿ ಕೊಟ್ಟಿದ್ದಾರೆ. ಶಿವಣ್ಣನ ಜೊತೆ ಗೀತಾ ಅವರೂ ಮುಡಿ ಕೊಟ್ಟಿರುವುದು ವಿಶೇಷ.
ಡಾ.ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಇಬ್ಬರು ತಿರುಪತಿಯ ಶ್ರೀವೆಂಕಟೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ, ಮುಡಿ ಕೊಟ್ಟಿರುವುದಕ್ಕೆ ಕಾರಣವೇ ಶಿವರಾಜ್ ಕುಮಾರ್ ಅನಾರೋಗ್ಯ. ಹೀಗಾಗಿಯೇ 2019ರಲ್ಲಿ ಶಿವಣ್ಣ ಮತ್ತು ಮಗಳ ಅನಾರೋಗ್ಯ, ಗುಣಮುಖರಾಗಿದ್ದಕ್ಕೆ ಗೀತಾ ಅವರು ಮುಡಿ ಕೊಟ್ಟಿದ್ದರು. ಆ ಘಟನೆಯನ್ನು ಅಭಿಮಾನಿಗಳು ಮತ್ತೆ ನೆನಪಿಸಿಕೊಂಡಿದ್ದಾರೆ. ಶಿವಣ್ಣನ ಜೊತೆ ಅವರ ಆಪ್ತರು ಅನೇಕರು ಮುಡಿ ಕೊಟ್ಟಿದ್ದಾರೆ. ಇದೂ ಕೂಡಾ ವಿಶೇಷವೇ. ಆದರೆ ಶಿವಣ್ಣ ಜೊತೆಯಲ್ಲಿ ಹೋಗಿದ್ದ ಆಪ್ತರು, ಶಿವಣ್ಣ ಅವರಿಗಾಗಿಯೇ ಮುಡಿ ಕೊಟ್ಟರೇ ಎನ್ನುವುದು ಖಚಿತವಾಗಿಲ್ಲ.
ಚಿಕಿತ್ಸೆಗೆಂದು ಅಮೆರಿಕಗೆ ತೆರಳುವ ಶಿವಣ್ಣ ಒಂದು ತಿಂಗಳು ಅಮೆರಿಕದಲ್ಲೇ ಇರಲಿದ್ದಾರೆ. ಗೀತಾ ಅವರು ಶಿವಣ್ಣ ಅವರ ಆರೈಕೆ ನೋಡಿಕೊಳ್ಳುತ್ತಾರೆ. ಅದಾದ ಬಳಿಕ ಬೆಂಗಳೂರಿಗೆ ಹಿಂತಿರುಗುವ ಶಿವಣ್ಣ, ಒಂದು ಹಂತದ ವಿಶ್ರಾಂತಿ ಮುಗಿಯುತ್ತಿದ್ದಂತೆಯೇ ಮತ್ತೆ ಆಕ್ಟಿವ್ ಆಗುತ್ತಾರೆ. ಬಳಿಕ ಸಿನಿಮಾಗಳಲ್ಲಿ ಮತ್ತೆ ಭಾಗಿಯಾಗಲಿದ್ದಾರೆ. ಚಿಕಿತ್ಸೆ ಮುಗಿಸಿ ಬಂದ ಬಳಿಕ ಶಿವಣ್ಣ ಸೀದಾ ರಾಮ್ ಚರಣ್ ಸಿನಿಮಾ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆನಂತರ ಹೋಮ್ ಬ್ಯಾನರ್ ಸಿನಿಮಾದಲ್ಲಿ ನಟಿಸುವ ಸಾಧ್ಯತೆಯಿದೆ. ಶಿವಣ್ಣ ಆದಷ್ಟು ಬೇಗ ಸಂಪೂರ್ಣವಾಗಿ ಗುಣಮುಖರಾಗಿ ಬರಲಿ ಎಂದು ಅವರ ಅಭಿಮಾನಿಗಳು ಕೂಡ ಹಾರೈಸುತ್ತಿದ್ದಾರೆ.
ಈಗಾಗಲೇ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ’45’ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಸದ್ಯ ಈ ಸಿನಿಮಾವೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಅರ್ಜುನ್ ಜನ್ಯ ಇತ್ತೀಚೆಗೆ ವಿಎಫ್‌ಎಕ್ಸ್ ಮಾಡಿಸುತ್ತಿರುವ ಫೋಟೊಗಳನ್ನು ಹಂಚಿಕೊಂಡಿದ್ದರು. ಈ ಸಿನಿಮಾದಲ್ಲಿ ಶಿವಣ್ಣನ ಜೊತೆ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ.
ಈ ಎಲ್ಲ ಚಿತ್ರಗಳ ಕಮಿಟ್‌ಮೆಂಟ್ ಜೊತೆ ಶಿವಣ್ಣ ಆಸ್ಪತ್ರೆ ಸೇರುತ್ತಿರುವುದನ್ನು ಅಭಿಮಾನಿಗಳು ಕಷ್ಟವಾದರೂ ಅರಗಿಸಿಕೊಳ್ಳುತ್ತಿದ್ದಾರೆ. ಅದು ವಾಸ್ತವ ಎನ್ನುವ ಸತ್ಯ ಅವರಿಗೂ ಅರಿವಾಗಿದೆ.