ಎಟಿ ರಘು. ಈ ಹೆಸರು ಕೇಳಿದ ತಕ್ಷಣ ಅಭಿಮಾನಿಗಳ ಕಣ್ಣ ಮುಂದೆ ಅಂಬರೀಷ್ ಹೆಸರು ನೆನಪಾಗುತ್ತದೆ. ಏಕೆಂದರೆ ಎಟಿ ರಘು ಅವರ ನಿರ್ದೇಶನದ 27 ಚಿತ್ರಗಳಲ್ಲಿ ಅಂಬರೀಷ್ ನಟಿಸಿದ್ದಾರೆ. ಅಂತಹ ಎಟಿ ರಘು ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಎಟಿ ರಘು ಅವರಿಗೆ ದೊಡ್ಡ ಖ್ಯಾತಿ ತಂದು ಕೊಟ್ಟಿದ್ದ ಸಿನಿಮಾ ಮಂಡ್ಯದ ಗಂಡು. ಅಂಬರೀಷ್ ಅವರ ರಾಜಕೀಯ ಎಂಟ್ರಿಗೆ ಮುನ್ನುಡಿ ಬರೆದಿದ್ದ ಸಿನಿಮಾ ಮಂಡ್ಯ. ಮಂಡ್ಯದ ಗಂಡು ಅಷ್ಟೇ ಅಲ್ಲ, ಅಂಬರೀಷ್ ಅವರ ಶಂಕರ್ ಸುಂದರ್, ಆಶಾ, ಅವಳ ನೆರಳು, ಧರ್ಮಯುದ್ಧ, ಗೂಂಡಾಗುರು, ಗುರು ಜಗದ್ಗುರು, ಪ್ರೀತಿ, ಅಂತಿಮ ತೀರ್ಪು, ಇನ್ಸ್ ಪೆಕ್ಟರ್ ಕ್ರಾಂತಿಕುಮಾರ್, ಆಪತ್ಬಾಂಧವ, ನ್ಯಾಯಕ್ಕಾಗಿ ನಾನು, ಕೆಂಪು ಸೂರ್ಯ, ಮೈಸೂರು ಜಾಣ, ಸೂರ್ಯೋದಯ, ಮಿಡಿದ ಹೃದಯಗಳು, ಹಾಗೂ ಬೇಟೆಗಾರ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.
ಎಟಿ ರಘು ಅವರಿಗೆ 76 ವರ್ಷ ವಯಸ್ಸಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುರುವಾರ ರಾತ್ರಿ 9.30ರ ಸುಮಾರಿನಲ್ಲಿ ವಿಧಿವಶರಾಗಿದ್ದಾರೆ. ರಘು ಅವರಿಗೆ ಡಯಾಬಿಟೀಸ್ ವಿಪರೀತವಾಗಿತ್ತು. ಕಿಡ್ನಿ ಫೇಲ್ಯೂರ್, ಹೃದಯ ಚಿಕಿತ್ಸೆ, ಎರಡು ಕಾಲು ಹಾಗೂ ಕಣ್ಣುಗಳ ಆಪರೇಷನ್ ಆಗಿ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಕಿಡ್ನಿಗಳು ಕೆಲಸ ಮಾಡುತ್ತಿರಲಿಲ್ಲ. ನಿರಂತರವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಆರ್ ಟಿ ನಗರದ ಮಠದಹಳ್ಳಿಯಲ್ಲಿ ವಾಸವಾಗಿದ್ದ ರಘು, ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆ ನಂತರ ಹೆಬ್ಬಾಳದ ಚಿತಾಗಾರದಲ್ಲ ಅಂತ್ಯಕ್ರಿಯೆ ನೆರವೇರಲಿದೆ.
ರೆಬಲ್ ಸ್ಟಾರ್ ಅಂಬರೀಷ್ ಅವರ ಚಿತ್ರಗಳನ್ನೇ ಹೆಚ್ಚು ನಿರ್ದೇಶನ ಮಾಡಿದ್ದರು. ನಟರಾಗಿ, ನಿರ್ಮಾಪಕರಾಗಿದ್ದ ಎಟಿ ರಘು, ಮೂಲತಃ ಕೊಡಗಿನವರು. ನ್ಯಾಯ ನೀತಿ ಧರ್ಮ ಚಿತ್ರದ ಮೂಲಕ ನಿರ್ದೇಶಕರಾಗಿದ್ದರು. ಅಂಬರೀಷ್ ಅವರನ್ನು ಬಿಟ್ಟರೆ ಪ್ರಭಾಕರ್ ಅವರೊಂದಿಗೆ ಧರ್ಮಯುದ್ಧ, ಕಾಡಿನ ರಾಜ, ಪದ್ಮವ್ಯೂಹ, ಜೈಲರ್ ಜಗನ್ನಾಥ್ ಹಾಗೂ ದೇವರಾಜ್ ಜೊತೆ ಅಜಯ್ ವಿಜಯ್, ಅಗ್ನಿಸಾಕ್ಷಿ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.
ಅಷ್ಟೇ ಅಲ್ಲದೆ ರಜನಿಕಾಂತ್ ಅವರ ʻತೇರಿ ಅದಾಲತ್ʼ ಎಂಬ ಹಿಂದಿ ಚಿತ್ರವನ್ನೂ ಡೈರೆಕ್ಟ್ ಮಾಡಿದ್ದಾರೆ.
ಎಟಿ ರಘು ಅವರ ಕೊನೆಯ ದಿನಗಳು ಕಷ್ಟದಿಂದ ಕೂಡಿದ್ದವು. ಅಂಬರೀಷ್ ಇರುವವರೆಗೆ ಅವರೇ ನೋಡಿಕೊಳ್ತಿದ್ದರಂತೆ. ಅಂಬರೀಷ್ ನಿಧನರಾದ ಮೇಲೆ ವಾರಕ್ಕೆ ಮೂರು ದಿನ ಡಯಾಲಿಸಿಸ್ ಮಾಡಿಸಲೂ ಪರದಾಡುವಂತಾಗಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಜರ್ಝರಿತರಾಗಿದ್ದ ರಘು ಅವರ ಕಡುಕಷ್ಟವನ್ನು ಮಾಧ್ಯಮಗಳಿಂದ ವಿಷಯ ತಿಳಿದ ಕಿಚ್ಚ ಸುದೀಪ್ ನೆರವು ನೀಡಿದ್ದರು.
ನನಗೆ ದೊಡ್ಡ ಶಕ್ತಿಯಾಗಿದ್ದ ಅಂಬರೀಷ್ ಹೋದ ಮೇಲೆ ನಿಮ್ಮಲ್ಲಿ ಅಂಬಿಯನ್ನು ಕಾಣ್ತಿದ್ದೇನೆ. ಅಂಬರೀಷ್ ಅವರೇ ನಿಮ್ಮಿಂದ ಈ ಕೆಲಸ ಮಾಡಿಸ್ತಿದ್ದಾರೆ ಎಂದು ಕಣ್ಣೀರಿಟ್ಟಿದ್ದರು ಎಟಿ ರಘು. ಒಂದು ಕಾಲದಲ್ಲಿ ಸ್ಟಾರ್ ನಟರು ಎಟಿ ರಘು ಚಿತ್ರಗಳಲ್ಲಿ ದುಂಬಾಲು ಬೀಳುತ್ತಿದ್ದರು. ಆದರೆ ಕೊನೆಯ ದಿನಗಳಲ್ಲಿ ಎಟಿ ರಘು ಅವರೇ ಸಹಾಯಕ್ಕಾಗಿ ಅಂಗಲಾಚುವಂತಾಗಿತ್ತು.