ಅನಂತ್ ಕುಮಾರ್ ಹೆಗಡೆ. ಈಗ ಮಾಜಿ ಸಂಸದ. ದೊಡ್ಡ ಅಂತರದಿಂದ ಗೆದ್ದಿದ್ದ ಅನಂತ ಕುಮಾರ್ ಹೆಗಡೆ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇಷ್ಟಕ್ಕೂ ಆಗ ಹೆಗಡೆ ಮಾಡಿದ್ದ ತಪ್ಪೇನೆಂದರೆ ನಮಗೆ ಸಂಪೂರ್ಣ ಬಹುಮತ ಬಂದರೆ ಸಂವಿಧಾನ ಬದಲಿಸುತ್ತೇವೆ ಎಂದಿದ್ದು. ಈಗ ರಾಜ್ಯದ ಡಿಸಿಎಂ ಡಿಕೆ ಶಿವಕುಮಾರ್ ಕೂಡಾ ಹೆಚ್ಚೂ ಕಡಿಮೆ ಅದೇ ಮಾತು ಹೇಳಿದ್ದಾರೆ. ಸಂವಿಧಾನ ಬದಲಾವಣೆಯ ಮಾತು.
ಡಿಕೆ ಶಿವಕುಮಾರ್ ಮಾತನಾಡಿದ್ದು ಎಲ್ಲಿ..?
ನ್ಯೂಸ್ 18 ಚಾನೆಲ್ಲಿನ ಕಾರ್ಯಕ್ರಮದಲ್ಲಿ ಮುಸಲ್ಮಾನರಿಗೆ ಗುತ್ತಿಗೆಯಲ್ಲಿ ಶೇ.4ರಷ್ಟು ಮೀಸಲಾತಿ ಕೊಡುವ ವಿಷಯ ಚರ್ಚೆಯಾಯಿತು. ಆಗ ಮಾತನಾಡಿದ ಡಿಕೆ ʻʻಇದು ಕೋರ್ಟಿಗೆ ಹೋಗುತ್ತದೆ. ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತದೆ. ನಮ್ಮ ನಿಲುವನ್ನು ಪ್ರಶ್ನಿಸಿ ಸಾಕಷ್ಟು ಮಂದಿ ನ್ಯಾಯಾಲಯದ ಮೆಟ್ಟಿಲೇರುತ್ತಾರೆ ಎಂದು ನಮಗೆ ತಿಳಿದಿದೆ. ಒಳ್ಳೆ ದಿನ ಬರುತ್ತದೆ. ಸಂವಿಧಾನ ಬದಲಾವಣೆ ಆಗಲಿದೆʼʼ ಎಂದು ಹೇಳಿದ್ದಾರೆ.
ಡಿಕೆ ಕೊಟ್ಟ ಸ್ಪಷ್ಟನೆ ಏನು..?
“ಸಂವಿಧಾನ ಬದಲಾವಣೆ ಮಾಡುವುದಾಗಿ ನಾನು ಎಲ್ಲಿಯೂ ಹೇಳಿಲ್ಲ. ನನ್ನ ಹೇಳಿಕೆಯನ್ನು ತಿರುಚಿ ಬಿಜೆಪಿ ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುವೆ. ಇದು ಡಿಕೆ ಕೊಟ್ಟಿರುವ ಹೇಳಿಕೆ. “ನಾನು ಹಾಗೆ ಹೇಳಿಯೇ ಇಲ್ಲ. ನನ್ನ ಹೇಳಿಕೆಯನ್ನು ಬಿಜೆಪಿ ತಿರುಚಿದೆ. ಕಳೆದ 36 ವರ್ಷಗಳಿಂದ ಶಾಸಕನಾಗಿ ವಿಧಾನಸಭೆಯಲ್ಲಿದ್ದೇನೆ. ನನಗೂ ಸಾಮಾನ್ಯ ಜ್ಞಾನವಿದೆ. ಇಂತಹ ವಿಚಾರದಲ್ಲಿ ಜೆ.ಪಿ ನಡ್ಡಾ ಅವರಿಗಿಂತಲೂ ನಾನು ಉತ್ತಮ ಸೂಕ್ಷ್ಮತೆ ಇರುವ ರಾಜಕಾರಣಿ. ಆದರೆ ಬಿಜೆಪಿ ಜನಸಾಮಾನ್ಯರ ದಾರಿ ತಪ್ಪಿಸುತ್ತಿದೆ. ನಮ್ಮದು ರಾಷ್ಟ್ರೀಯ ಪಕ್ಷ. ಸುಳ್ಳು ಹೇಳಿಕೆ ಸೃಷ್ಟಿಸಿ, ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ. ನಾನು ಈ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿಲ್ಲ” ಎಂದಿದ್ದಾರೆ.
ಸಂಸತ್ತಿನಲ್ಲಿ ಸಮರ್ಥನೆ.. ವೈಯಕ್ತಿವಾಗಿ ಗರಂ ಆದ ಖರ್ಗೆ..!
ಸಂಸತ್ತಿನಲ್ಲಿ ಡಿಕೆ ಶಿವಕುಮಾರ್ ಹಾಗೆಲ್ಲ ಹೇಳಿಯೇ ಇಲ್ಲ. ಮಾಧ್ಯಮಗಳೇ ತಿರುಚುತ್ತಿವೆ ಎಂದೆಲ್ಲ ಗುಡುಗಿದ ಖರ್ಗೆ, ವೈಯಕ್ತಿಕವಾಗಿ ಡಿಕೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಫೋನ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಒಂದು ಹೇಳಿಕೆಯಿಂದ ಪಕ್ಷಕ್ಕೆ ರಾಷ್ಟ್ರಮಟ್ಟದಲ್ಲಿ ಡ್ಯಾಮೇಜ್ ಆಗ್ತಾ ಇದೆ. ಇಷ್ಟು ದಿನ ಮಾಡಿದ್ದೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಬಿಜೆಪಿಯನ್ನ ಎದುರಿಸುವುದು ಹೇಗೆ. ದಲಿತರಿಗೆ ಯಾವ ಸಂದೇಶ ಹೋಗಿದೆ ಎಂದೆಲ್ಲ ಅರಿವಿದೆಯಾ.. ಎಂದು ತರಾಟೆಗೆ ತೆಗೆದುಕೊಂಡಿದ್ದಾರಂತೆ.
ಇಲ್ಲ ಸರ್.. ಹಾಗೇನಿಲ್ಲ. ನಾನು ಆ ಅರ್ಥದಲ್ಲಿ ಹೇಳಿಲ್ಲ..ಎಂದು ಸಮರ್ಥನೆ ಮಾಡಿಕೊಳ್ಳೊಕೆ ಮುಂದಾದ ಡಿಕೆಗೆ ʻನಾನೂ ಆ ಹೇಳಿಕೆಯ ವಿಡಿಯೋ ನೋಡಿದ್ದೇನೆ. ನಿಮ್ಮ ಹೇಳಿಕೆಯ ಅರ್ಥ ಅದೇ ಬರುತ್ತದೆ, ಸುಮ್ಮನೆ ಮಾತನಾಡಬೇಡಿʼ ಎಂದು ಗದರಿದರಂತೆ. ಅದಾದ ಮೇಲೆಯೇ ಡಿಕೆ ಸುದ್ದಿಗೋಷ್ಟಿ ಕರೆದು ಸ್ಪಷ್ಟನೆ ನೀಡಿದ್ದು.
ಸಂವಿಧಾನ ರಕ್ಷಕರು ಎಲ್ಲಿ..?
ಹೌದು, ಕಳೆದ ವರ್ಷ ಸಂವಿಧಾನ ರಕ್ಷಕರು ದೊಡ್ಡ ಮಟ್ಟದಲ್ಲಿ ಆಕ್ಟಿವ್ ಆಗಿದ್ದರು. ಅನಂತ್ ಕುಮಾರ್ ಹೆಗಡೆ ಹೇಳಿಕೆಯಂತೂ ಸ್ಪಷ್ಟವಾಗಿತ್ತು. ಅದನ್ನವರು ಹೌದು, ಹೇಳಿದ್ದೇನೆ ಎಂದು ಒಪ್ಪಿಕೊಂಡಿದ್ದರು ಕೂಡಾ. ಅದಾದ ನಂತರ ಹಲವು ನಾಯಕರ ಹೇಳಿಕೆಗಳ ಅರ್ಥವನ್ನೆಲ್ಲ ಹುಡುಕಿ, ಸಂಶೋದಿಸಿ ಮಾನತಾಡಿದ್ದರು. ಈಗ ಆ ಸಂವಿಧಾನ ರಕ್ಷಕರು ಮಾತನ್ನೇ ಆಡುತ್ತಿಲ್ಲ. ಈಗ ಆ ಸಂವಿಧಾನ ರಕ್ಷಕರಿಗೆ ಎಲ್ಲ ಓಕೆನಾ..? ಹೆಗಡೆ ಹೇಳಿದಾಗ ಕುದಿಯುತ್ತಿದ್ದ ರಕ್ತ, ಈಗ ತಣ್ಣಗಾಗಿರುವುದು ಏಕೆ..? ಕುದಿಯುತ್ತಿದ್ದ ರಕ್ತ ಕುದಿಯದ ಹಾಗೆ ಯಾರಾದರೂ ಇಂಜಕ್ಷನ್ ಕೊಟ್ಟರಾ..? ಗೊತ್ತಿಲ್ಲ. ಸಂವಿಧಾನ ರಕ್ಷಕರು ನಾಪತ್ತೆಯಾಗಿರುವುದಂತೂ ಸತ್ಯ.