ರಾಜ್ಯದಲ್ಲೀಗ ಹೊಸ ಬಿಪಿಎಲ್ ಕಾರ್ಡ್ ಬೇಕು ಎಂದರೆ ಸರ್ಕಾರ ಅರ್ಜಿ ತಗೊಳ್ತಿಲ್ಲ. ಎಪಿಎಲ್ ಕಾರ್ಡಿಗೂ ಅರ್ಜಿ ಸ್ವೀಕಾರ ಮಾಡ್ತಿಲ್ಲ. ವಾರದಲ್ಲಿ ಒಂದು ದಿನ ಅರ್ಜಿ ಹಾಕಬಹುದು ಎನ್ನುತ್ತದೆ ಸರ್ಕಾರ. ಆದರೆ ಆ ಸಮಯದಲ್ಲಿ ಅರ್ಜಿ ಹಾಕಲು ಹೋದರೆ ಸರ್ವರ್ ಡೌನ್ ಆಗಿರುತ್ತದೆ. ಅರ್ಜಿ ಹಾಕುವುದಕ್ಕೆ ಸರ್ಕಾರ ಕೊಟ್ಟ ಸಮಯ ಮುಗಿಯುವವರೆಗೂ ಸರ್ವರ್ ಆಕ್ಟಿವೇಟ್ ಆಗುವುದಿಲ್ಲ. ಸರ್ವರ್ ಡೌನ್ ಆಗಿತ್ತು, ಈಗ ಅರ್ಜಿ ಹಾಕ್ಕೊಳ್ಳಿ ಎಂದರೆ.. ನೋನೋ.. ಟೈಂ ಈಸ್ ಓವರ್, ಮುಂದಿನ ವಾರ ನೋಡೋಣ ಎನ್ನುತ್ತದೆ ಕಂಪ್ಯೂಟರ್. ಅಧಿಕಾರಿಗಳು ಉತ್ತರ ಕೊಡೋದೇ ಇಲ್ಲ. ಇದು ಒಂದು ವಾರ ಅಥವಾ ತಿಂಗಳ ಕಥೆಯಲ್ಲ. ವರ್ಷಗಳ ಕಥೆ. ಈ ಸಮಸ್ಯೆನ್ನು ಮೇಲ್ಮನೆಯಲ್ಲಿ ಪ್ರಶ್ನೆ ಮಾಡಿದ್ದಾರೆ ಶಾಸಕ ಸಿಟಿ ರವಿ.
ಶಾಸಕ ಸಿಟಿ ರವಿ ಕೇಳಿದ್ದೇನು..?
ಕಳೆದ ವರ್ಷದಿಂದ ಯಾರಿಗೂ ಪಡಿತರ ಚೀಟಿ ಕೊಡದೆ ಸ್ಥಗಿತಗೊಳಿಸಲಾಗಿದೆ. ಅರ್ಜಿ ಹಾಕಿದವರಿಗೂ ಕೊಡುತ್ತಿಲ್ಲ. ಹೊಸ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ. ನಿಗದಿತ ದಿನದಲ್ಲಿ ಮಾತ್ರ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಅಥವಾ ತೆಗೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಸರ್ವರ್ ಡೌನ್ ಸಮಸ್ಯೆ ಎದುರಾಗುತ್ತಿದೆ. ಈ ಎಲ್ಲ ಸಮಸ್ಯೆ ಬಗೆಹರಿಸಬೇಕು. ಕಾಲಮಿತಿಯಲ್ಲಿ ಪಡಿತರ ಚೀಟಿ ನೀಡಬೇಕು ಎಂದು ವಿಧಾಪರಿಷತ್‌ನಲ್ಲಿ ಶಾಸಕ ಸಿಟಿ ರವಿ ಪ್ರಶ್ನೆ ಮಾಡಿದ್ದಾರೆ.
ಸರ್ಕಾರದ ಉತ್ತರ :
ಬಿಪಿಎಲ್‌ನಲ್ಲಿ 10 ರಿಂದ 20% ಎಪಿಎಲ್ ಕಾರ್ಡ್ ನವರು ಇದ್ದಾರೆ. ಇದರ ಪರಿಷ್ಕರಣೆ ಆರಂಭ ಮಾಡಲಾಗಿದೆ. ಈ ಹಿಂದೆ ಪರಿಷ್ಕರಣೆ ಸಂದರ್ಭದಲ್ಲಿ ಇದಕ್ಕೆ ತದ್ವಿರುದ್ಧವಾದ ವಾತಾವರಣ ಸೃಷ್ಟಿಯಾಯಿತು. ಕೇಂದ್ರ ಸರ್ಕಾರದ ಮಾನದಂಡ ಅನುಸರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಪರಿಷ್ಕರಣೆ ಉದ್ದೇಶ ಇದೆ,. ಬಿಪಿಎಲ್ ಕಾರ್ಡ್ ಹೊಂದಿರುವರ ಪೈಕಿ ಸುಮಾರು 20 ಲಕ್ಷ ಅನರ್ಹರಿದ್ದಾರೆ, ಇವರೆಲ್ಲರೂ ಎಪಿಎಲ್ ಕಾರ್ಡ್ ಪಡೆಯಬೇಕಿತ್ತು. ಈ ಹಿಂದೆ ಅನರ್ಹ ಬಿಪಿಎಲ್ ಪಡಿತರ ಚೀಟಿದಾರರನ್ನು ಪತ್ತೆ ಹಚ್ಚಲು ಪರಿಷ್ಕರಣೆಗೆ ಮುಂದಾದಾಗ ತೀವ್ರ ವಿರೋಧ ವ್ಯಕ್ತವಾಯಿತು. ಹೀಗಾಗಿ, ಈಗ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒ, ಗ್ರಾಮ ಲೆಕ್ಕಿಗ ಸೇರಿದಂತೆ ಮುಂತಾದವರನ್ನು ಒಳಗೊಂಡ ಸಮಿತಿ ರಚಿಸಿ, ಈ ಸಮಿತಿ ಮೂಲಕ ಖುದ್ದಾಗಿ ಪರಿಶೀಲಿಸಲು ನಿರ್ಧರಿಸಲಾಗಿದೆ ಎಂದರು. ಸುಮಾರು 91 ಸಾವಿರ ಅರ್ಜಿಗಳನ್ನು ಪರಿಶೀಲಿಸಿ ಪಡಿತರ ಚೀಟಿ ನೀಡುವುದು ಬಾಕಿ ಇದೆ. ಇನ್ನೆರಡು ತಿಂಗಳಲ್ಲಿ ಬಿಪಿಎಲ್ ಪಡಿತರ ಚೀಟಿ ನೀಡುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಉತ್ತರ ಕೊಟ್ಟಿದ್ದಾರೆ ಸಚಿವ ಕೆಎಚ್ ಮುನಿಯಪ್ಪ.
ಅನರ್ಹ ಬಿಪಿಎಲ್ ಫಲಾನುಭವಿಗಳನ್ನು ಪತ್ತೆ ಹಚ್ಚಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಿತಿ ರಚಿಸಿ, ಮನೆಗಳಿಗೆ ಭೇಟಿ ನೀಡಿ, ಖುದ್ದಾಗಿ ಪರಿಶೀಲಿಸಲು ಉದ್ದೇಶಿಸಲಾಗಿದ್ದು, ಪಿಡಿಒ, ಗ್ರಾಮ ಲೆಕ್ಕಿಗರು ಖುದ್ದು ಮನೆಗೇ ಬಂದು ಪರಿಶೀಲನೆ ಮಾಡ್ತಾರೆ. ಅಲ್ಲೇನಾದರೂ ಎಡವಟ್ಟು ಕಂಡರೆ ಕಾರ್ಡ್ ಕ್ಯಾನ್ಸಲ್ ಆಗುತ್ತದೆ. ಕಾರ್ಡ್ ರದ್ದಾಗಬಹುದು ಅಥವಾ ಬಿಪಿಎಲ್ ಕಾರ್ಡ್, ಎಪಿಎಲ್ ಕಾರ್ಡ್ ಆಗಬಹುದು. ಎಲ್ಲವೂ ಈಗ ಪಿಡಿಒ, ಗ್ರಾಮ ಲೆಕ್ಕಿಗರ ಕೈಲಿದೆ.