ಪ್ರತಿಯೊಂದು ರಾಶಿಗಳಿಗೂ ಒಂದೊಂದು ವ್ಯಕ್ತಿತ್ವ ಇದೆ. ಅದರದ್ದೇ ಆದ ಒಂದು ಕ್ಯಾರೆಕ್ಟರ್ ಇರುತ್ತದೆ. ಒಂದೊಂದು ರಾಶಿಗೂ ಅದರದ್ದೇ ಆದಂತಹ ಗ್ರಹ, ಇಷ್ಟ ದೇವರು, ಜಾತಕ, ಕುಂಡಲಿ, ನಕ್ಷತ್ರ ಇದ್ದೇ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿರುವ 12 ರಾಶಿಗಳ ಪ್ರಕಾರ ಶಕ್ತಿ ಮತ್ತು ದೌರ್ಬಲ್ಯಗಳೂ ಪಟ್ಟಿಯಾಗುತ್ತವೆ. 12 ರಾಶಿಗಳ ವೀಕ್ನೆಸ್ ಹಾಗೂ ಬಲವನ್ನು ವೃದ್ಧಿಪಡಿಸುವಂತಹ ಅಂಶಗಳು ಯಾವುವು ಅನ್ನೋದನ್ನ ರಾಶಿಗಳನ್ನು ನೋಡಿಯೂ ನಿರ್ಧಾರ ಮಾಡಬಹುದು. ನಿಮ್ಮ ರಾಶಿಯ ಬಲ ಹಾಗೂ ವೀಕ್ನೆಸ್ ಏನು ಅನ್ನೋದನ್ನ ತಿಳ್ಕೋಬಹುದು. ಒಂದು ರೀತಿಯಲ್ಲಿ ನಿಮ್ಮ ರಾಶಿ ನೋಡಿ, ನಿಮ್ಮ ಕ್ಯಾರೆಕ್ಟರ್, ಸ್ಟ್ರೆಂಗ್ತ್, ವೀಕ್‌ನೆಸ್ ಎಲ್ಲವನ್ನೂ ತಿಳಿದುಕೊಳ್ಳಬಹುದು. ನಿಮ್ಮ ಜನ್ಮರಾಶಿ ಕರೆಕ್ಟ್ ಆಗಿ ಗೊತ್ತಿರಬೇಕಷ್ಟೇ. ಮೊದಲಿಗೆ 12ನೇ ರಾಶಿಯಿಂದ ಹೋಗೋಣ.
ಮೀನ ರಾಶಿ :
ಕಲೆಯ ವಿಚಾರದಲ್ಲಿ ಸಾಕಷ್ಟು ಕ್ರಿಯಾತ್ಮಕತೆ ಹೊಂದಿರುವವರು.ಕ್ರಿಯೇಟಿವಿಟಿಯಲ್ಲೇ ಗೆಲ್ಲುವವರು.
ಆದರೆ ಇವರಿಗೆ ಭಯ ಜಾಸ್ತಿ. ಇವರು ಯಾರನ್ನೂ ನಂಬುವುದು ಕಷ್ಟ. ಆದರೆ ಇವರು ನಂಬಿಕೆಗೆ ಅರ್ಹರಾದ ವ್ಯಕ್ತಿಗಳನ್ನು ನಂಬುವುದಿಲ್ಲ. ಹೀಗಾಗಿ ಮೋಸ ಹೋಗುವ ಸಾಧ್ಯತೆ ಹೆಚ್ಚು. ಇವರು ವಾಸ್ತವದಲ್ಲಿ ಬದುಕುವುದಿಲ್ಲ. ಇವರ ಲೋಕವೇ ಬೇರೆ.
ಕುಂಭ ರಾಶಿ :
ಪ್ರತಿಯೊಬ್ಬರ ಬಗ್ಗೆಯೂ ವಿಶೇಷ ಪ್ರೀತಿ, ಕಾಳಜಿ ಇರುತ್ತದೆ. ಸ್ವತಂತ್ರವಾಗಿ ಬದುಕಬೇಕು ಎನ್ನುವಂತಹ ಆಸೆ ಜೊತೆಗೆ ಪ್ರಗತಿದಾಯಕ ವಿಚಾರಧಾರೆಗಳಿರುತ್ತವೆ. ಸದಾ ತಮ್ಮ ಮುಂದಿನ ಜೀವನದ ಬಗ್ಗೆಯೇ ಯೋಚನೆ ಮಾಡುವಂತಹವರು.
ಆದರೆ ಇವರು ಯಾರನ್ನಾದರೂ ಹಚ್ಚಿಕೊಂಡರೆ ಅತಿಯಾಗಿ ಹಚ್ಚಿಕೊಳ್ಳುತ್ತಾರೆ. ಕೊನೆಗೆ ತಮಗೆ ಹಾಗೆ ತಾವು ಹಚ್ಚಿಕೊಂಡಿರುವವರಿಗೆ ಇಬ್ಬರಿಗೂ ಸಮಸ್ಯೆ ಸೃಷ್ಟಿಸುವಂತಹವರು. ಕೋಪದ ವಿಚಾರದಲ್ಲಿ ಇವರಿಗೆ ತಮ್ಮ ಮೇಲೆ ತಮಗೇ ಕಂಟ್ರೋಲ್ ಇರುವುದಿಲ್ಲ.
ಮಕರ ರಾಶಿ :
ತಮ್ಮ ಜೀವನದಲ್ಲಿ ಸಾಕಷ್ಟು ಡಿಸಿಪ್ಲಿನ್ ಆಗಿರುವ ಮಕರ ರಾಶಿಯ ಜನ ತಮಗೆ ನೀಡಿರುವಂತಹ ಜವಾಬ್ದಾರಿಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸುವ ಮನೋಭಾವ ಹೊಂದಿರುತ್ತಾರೆ. ತಮ್ಮ ಜೀವನದಲ್ಲಿ ಒಂದು ಗುರಿಯನ್ನು ಹೊಂದಿರುತ್ತಾರೆ ಹಾಗೂ ಆ ಗುರಿಯನ್ನು ತಲುಪುವುದಕ್ಕೆ ಸ್ಥಿರವಾದ ಮಾರ್ಗವನ್ನು ಕೂಡ ಇವರು ರೂಪಿಸಿಕೊಳ್ಳುತ್ತಾರೆ.
ಆದರೆ ಇವರು ತಮಗಾಗದವರನ್ನು ಕ್ಷಮಿಸುವ ಮನೋಭಾವ ಹೊಂದಿರುವುದಿಲ್ಲ. ತಮ್ಮದೇ ತಪ್ಪುಗಳಿದ್ದರೂ ಕ್ಷಮಿಸುವುದಿಲ್ಲ. ತಪ್ಪನ್ನು ಒಪ್ಪಿಕೊಳ್ಳೋದೂ ಇಲ್ಲ. ಶತ್ರುಗಳ ನಾಶಕ್ಕೆ ಇವರು ಯಾವ ಹಂತಕ್ಕೆ ಬೇಕಾದರೂ ಹೋಗುವಂತಹ ಮನೋಭಾವದವರು.
ಧನು ರಾಶಿ :
ಸಾಮಾನ್ಯವಾಗಿ ಸಾಹಸ ಮನೋಭಾವವನ್ನು ಹೊಂದಿರುವಂತಹ ಧನು ರಾಶಿಯವರು ತಮ್ಮ ಜೀವನದಲ್ಲಿ ಹೊಸ ಹೊಸ ಅನುಭವಗಳನ್ನು ಹೊಂದೋದಕ್ಕೆ ಇಷ್ಟಪಡುತ್ತಾರೆ.
ಆದರೆ ಇವರಿಗೆ ತಾಳ್ಮೆ ಕಮ್ಮಿ. ಆಗಾಗ ತಮ್ಮ ವಿಚಾರಗಳನ್ನು ಇವರು ಚೇಂಜ್ ಮಾಡುತ್ತಲೇ ಇರುತ್ತಾರೆ. ಪ್ರಾಮಿಸ್ ಮಾಡ್ತಾರೆ. ಪೂರೈಸುವುದಕ್ಕೆ ಪ್ರಯತ್ನ ಮಾಡಲ್ಲ. ಇವರು ಅಂಗೈಯಲ್ಲೇ ಆಕಾಶ ತೋರಿಸುವ ವ್ಯಕ್ತಿತ್ವದವರು.
ವೃಶ್ಚಿಕ ರಾಶಿ :
ಇವರದ್ದು ಒನ್ ಮ್ಯಾನ್ ಆರ್ಮಿ. ಯಾವುದೇ ಕೆಲಸಗಳನ್ನು ಮಾಡಬೇಕಾದರೂ ಕೂಡ ವೃಶ್ಚಿಕ ರಾಶಿಯವರು ಅದನ್ನ ಅರ್ಥ ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಸಮಯ, ಸಹಾಯ ಬಯಸುವುದಿಲ್ಲ. ಒಮ್ಮೆ ನಿರ್ಧಾರ ಮಾಡಿದರು ಎಂದರೆ, ಅದನ್ನು ಅಲುಗಾಡಿಸಲು ಸಾಧ್ಯವಿಲ್ಲ.
ವೀಕ್ ನೆಸ್ ವಿಷಯಕ್ಕೆ ಬಂದರೆ, ಸಾಕಷ್ಟು ವಿಚಾರಗಳನ್ನು ತಮ್ಮಲ್ಲಿಯೇ ಅಡಗಿಸಿ ಇಟ್ಟುಕೊಂಡಿರುತ್ತಾರೆ ಹೀಗಾಗಿ ಅವರನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಕೆಲವೊಮ್ಮೆ ಹೊಟ್ಟೆಕಿಚ್ಚಿನ ಕಾರಣದಿಂದಾಗಿ ಸಾಕಷ್ಟು ಒಳ್ಳೆಯ ಸ್ನೇಹಿತರನ್ನು ಕೂಡ ಕಳೆದುಕೊಳ್ಳುತ್ತಾರೆ ಹಾಗೂ ಅವರನ್ನು ಸಂಪೂರ್ಣವಾಗಿ ನಂಬಲು ಕೂಡ ಸಾಧ್ಯವಿಲ್ಲ. ಇವರೂ ಕೂಡಾ ಯಾರನ್ನೂ ನಂಬುವುದಿಲ್ಲ.
ತುಲಾ ರಾಶಿ :
ಚಾರಧಾರೆಗಳು ಹಾಗೂ ಬುದ್ಧಿಶಕ್ತಿಯ ಬಗ್ಗೆ ಮಾತನಾಡುವುದಾದರೆ ತುಲಾ ರಾಶಿಯವರು ಟಾಪಲ್ಲಿರ್ತಾರೆ. ಯಾವುದೇ ದೊಡ್ಡ ಮಟ್ಟದ ಸಮಸ್ಯೆ ಇರಲಿ, ಅವುಗಳಿಗೆ ಸಮಸ್ಯೆ ಹುಡುಕುವ ಶಕ್ತಿ ಇವರಲ್ಲಿರುತ್ತದೆ. ಸಾಮರಸ್ಯವನ್ನು ಮೂಡಿಸುವಂತಹ ವಿಚಾರದಲ್ಲಿ ತುಲಾ ರಾಶಿಯವರು ಸದಾ ಮುಂದಿರ್ತಾರೆ.
ಆದರೆ ಎಲ್ಲರ ಸಮಸ್ಯೆ ಬಗೆಹರಿಸಿ, ಸಾಮರಸ್ಯ ಮೂಡಿಸುವ ಇವರು ಪ್ರೀತಿಯನ್ನು ಹೇಳಿಕೊಳ್ಳೋದಕ್ಕೆ ಮುಂದೆ ಬರುವುದಿಲ್ಲ. ದ್ರೋಹವನ್ನಂತೂ ಯಾವತ್ತಿಗೂ ಸಹಿಸುವುದಿಲ್ಲ. ದ್ವೇಷವನ್ನು ಯಾವತ್ತೂ ಮರೆಯುವುದಿಲ್ಲ.
ಕನ್ಯಾ ರಾಶಿ :
ಇವರು ಲೆಕ್ಕಾಚಾರದವರು. ಒಂದು ಕೆಲಸ ಮಾಡುವ ಮೊದಲು, ಆ ಕೆಲಸದ ಹಿನ್ನೆಲೆ ಮುನ್ನೆಲೆ ಎಲ್ಲವನ್ನೂ ಲೆಕ್ಕಾಚಾರ ಹಾಕುತ್ತಾರೆ. ಪ್ರತಿಯೊಂದು ಮಾಹಿತಿಯನ್ನೂ ಕಲೆಹಾಕುತ್ತಾರೆ. ಇದು ಇವರಲ್ಲಿ ಯಾವುದೇ ಸಮಸ್ಯೆ ಬಗೆಹರಿಸುವ ಶಕ್ತಿ ನೀಡುತ್ತದೆ.
ಆದರೆ ಇವರು ಅಂತರ್ಮುಖಿಗಳು. ನಾಚಿಕೆಯ ಸ್ವಭಾವದವರು. ಅಗತ್ಯಕ್ಕಿಂತ ಹೆಚ್ಚು ಯೋಚನೆ ಮಾಡುವವರು.
ಸಿಂಹ ರಾಶಿ :
ಸಿಂಹ ರಾಶಿಯವರ ಆತ್ಮವಿಶ್ವಾಸ ಹಾಗೂ ತಾವು ಯಾವುದಾದರೂ ಕೆಲಸವನ್ನು ಒಪ್ಪಿಕೊಂಡರೆ ಮಾಡೇ ಮಾಡುತ್ತೇನೆ ಎನ್ನುವಂತಹ ಛಲ ಬೇರೆಯವರಲ್ಲಿ ಕಾಣುವುದಿಲ್ಲ. ನಾಯಕತ್ವದ ಗುಣಕ್ಕೆ ಬಂದರೆ ಸಿಂಹ ರಾಶಿಯವರು ನಿಜಕ್ಕೂ ಕೂಡ ಸಿಂಹ. ಇವರು ಯಾವಾಗಲೂ ಸ್ಪೆಷಲ್. ಸಾಮಾನ್ಯವಾಗಿ ತಮ್ಮ ವ್ಯಕ್ತಿತ್ವವನ್ನು ಬದಲಿಸಿಕೊಳ್ಳುವುದಿಲ್ಲ.
ನೆಗೆಟಿವ್ ಎಂದರೆ ಸಿಂಹ ರಾಶಿಯವರು ಸಾಮಾನ್ಯವಾಗಿ ಅಹಂಕಾರಿಗಳಾಗಿರುತ್ತಾರೆ. ಅಹಂಕಾರ ಇವರ ಹುಟ್ಟುಗುಣ. ಒಂದು ವಸ್ತು ಬೇಕು ಅಂತ ಇದ್ರೆ ಅದು ಒಳಿತಾಗಲಿ ಕೆಡಕಾಗಲಿ ಅದನ್ನ ಬೇಕೇ ಬೇಕು ಹಾಗೂ ಪಡೆದುಕೊಳ್ಳಬೇಕು ಎನ್ನುವಂತಹ ಹಠಮಾರಿಗಳು. ಕೆಲಸ ಮಾಡಬಾರದು ಎಂಬ ಹಠಮಾರಿತನಕ್ಕೆ ಬಿದ್ದರೆ, ಅದು ಎಂಥ ಸುಲಭದ ಕೆಲಸವೇ ಆಗಲಿ, ಮಾಡುವುದಕ್ಕೆ ಮುಂದಾಗುವುದಿಲ್ಲ.
ಕರ್ಕ ರಾಶಿ :
ಕರ್ಕ ರಾಶಿಯವರ ಪಾಸಿಟಿವ್ ಪಾಯಿಂಟ್ ಕರುಣಾಮಯಿ ಹೃದಯವಂತರು. ಬೇರೆಯವರ ಕಷ್ಟಕ್ಕೆ ಸ್ಪಂದಿಸುವಂತಹ ಮನಸ್ಸುಳ್ಳವರು. ಒಬ್ಬರನ್ನ ಇಷ್ಟಪಟ್ಟರೆ ಅವರಿಗೆ ಬೇಕಾಗಿರುವಂತಹ ಪ್ರತಿಯೊಂದು ಕೆಲಸಗಳನ್ನು ಮಾಡುವುದಕ್ಕೆ ಮುಂದಿರ್ತಾರೆ. ವಿಶೇಷವಾದ ಕಾಳಜಿ ಹಾಗೂ ಪ್ರೀತಿಯನ್ನು ಮನಸ್ಸಿನಲ್ಲಿ ಹೊಂದಿರುವ ವ್ಯಕ್ತಿ.
ವೀಕ್ನೆಸ್ ಬಗ್ಗೆ ಮಾತನಾಡುವುದಾದರೆ, ಅವರ ಮನೋಭಾವನೆ ಯಾವಾಗ ಬದಲಾಗುತ್ತದೆ ಎಂದು ಹೇಳುವುದು ಕಷ್ಟ. ಒಬ್ಬರ ಬಗ್ಗೆ ಚಿಕ್ಕ ಅನುಮಾನ ಮೂಡಿದರೆ ಸಾಕು, ಇವರ ಮನೋಭಾವನೆ ಮೇಲೆ ಭಾರಿ ಪರಿಣಾಮ ಬೀರುತ್ತದೆ. ತಮ್ಮ ಜೀವನ ಸಂಗಾತಿಯ ಬಗ್ಗೆ ಒಂದಲ್ಲ ಒಂದು ಅನುಮಾನ ಇಟ್ಟುಕೊಳ್ಳುವ ಅನುಮಾನ ಪಿಶಾಚಿ ಎನ್ನಬಹುದು. ಹೀಗಾಗಿ ಇವರು ಯಾವತ್ತಿಗೂ ಸಂತೃಪ್ತರಾಗಿರುವುದಿಲ್ಲ.
ಮಿಥುನ ರಾಶಿ :
ಯಾವುದೇ ಪರಿಸ್ಥಿತಿ ಇರಲಿ ಅದಕ್ಕೆ ಸರಿ ಹೊಂದುವ ರೀತಿಯಲ್ಲಿ ತಮ್ಮನ್ನು ತಾವು ಬದಲಾಯಿಸಿಕೊಳ್ಳುವ ಸ್ಥಿತಿಸ್ಥಾಪಕ ಗುಣದವರು. ಮಾತುಗಾರಿಕೆಯ ಶೈಲಿಯಲ್ಲಿ ಜನರನ್ನು ಯಾವ ರೀತಿಯಲ್ಲಿ ಕನೆಕ್ಟ್ ಮಾಡಿಕೊಳ್ಳಬಹುದು ಹಾಗೂ ಅವರನ್ನು ಯಾವ ರೀತಿಯಲ್ಲಿ ಆಕರ್ಷಿಸಿಕೊಳ್ಳಬಹುದು ಎನ್ನುವುದನ್ನು ಇವರನ್ನು ನೋಡಿ ಕಲಿಯಬೇಕು. ಇವೆಲ್ಲ ಧನಾತ್ಮಕ ಅಂಶಗಳು.
ನಕಾರಾತ್ಮಕ ಅಂಶಗಳೆಂದರೆ ಕೆಲಸದಲ್ಲಿ ನಿರಂತರತೆಯನ್ನು ಹೊಂದಿರುವುದಿಲ್ಲ ಹಾಗೂ ಸಾಕಷ್ಟು ಸಂದರ್ಭದಲ್ಲಿ ಅವರು ನರ್ವಸ್ ಆಗುವಂತಹ ಸಾಧ್ಯತೆ ಕೂಡ ಹೆಚ್ಚಾಗಿದೆ. ಸರಿಯಾದ ಸಂದರ್ಭದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಅಪರೂಪ.
ವೃಷಭ ರಾಶಿ :
ಪಾಸಿಟಿವ್ ಪಾಯಿಂಟ್ ಅಂದ್ರೆ ಅವರನ್ನ ಯಾವುದೇ ಪರಿಸ್ಥಿತಿಯಲ್ಲಿ ಕೂಡ ನಂಬಿಕೊಳ್ಳಬಹುದು. ತಾಳ್ಮೆಯ ವಿಚಾರದಲ್ಲಿ, ಪ್ರಾಮಾಣಿಕತೆಯಲ್ಲಿ, ನಿಷ್ಠೆಯ ವಿಚಾರದಲ್ಲಿ ಷಭ ರಾಶಿಯವರನ್ನು ಮೀರಿಸುವಂತಹ ಮತ್ತೊಬ್ಬರು ನಿಮಗೆ ಸಿಗೋದು ಅನುಮಾನ.
ದೌರ್ಬಲ್ಯ ಹೇಳುವುದಾರೆ ಇವರು ಹಠವಾದಿಗಳಾಗಿರುತ್ತಾರೆ ಹಾಗೂ ಒಂದು ವಸ್ತು ಅಥವಾ ವಿಚಾರವನ್ನು ಇಷ್ಟಪಟ್ಟರು ಎಂದರೆ, ಅಗತ್ಯಕ್ಕಿಂತ ಹೆಚ್ಚಾಗಿ ಪ್ರೀತಿಸ್ತಾರೆ. ಒಂದು ರೀತಿ ಪೊಸೆಸಿವ್ನೆಸ್ ಬೆಳೆಸಿಕೊಳ್ಳುತ್ತಾರೆ. ಕಾಂಪ್ರೊಮೈಸ್ ಮನಸ್ಥಿತಿ ಇರುವುದಿಲ್ಲ.
ಮೇಷ ರಾಶಿ :
ಮೇಷ ರಾಶಿಯವರ ಬಲದ ಬಗ್ಗೆ ತಿಳಿದುಕೊಳ್ಳೋದಾದ್ರೆ, ಮೇಷ ರಾಶಿಯವರಿಗೆ ಏಕಾಗ್ರತೆ ಹಾಗೂ ನಿಷ್ಠೆ ಜಾಸ್ತಿ. ನಾಯಕತ್ವದ ಗುಣ ಹುಟ್ಟುತ್ತಲೇ ಬರುತ್ತೆ. ಯಾವುದೇ ಪರಿಸ್ಥಿತಿ ಬಂದ್ರು ಕೂಡ ಮೇಷ ರಾಶಿಯವರು ಗಟ್ಟಿಯಾಗಿ ನಿಂತು ಎದುರಿಸುವಂತಹ ವ್ಯಕ್ತಿತ್ವದವರು. ಅದನ್ನ ಸರಿಯಾದ ರೀತಿಯಲ್ಲಿ ನಿರ್ವಹಿಸುವುದಕ್ಕೆ ಬೇಕಾಗಿರುವಂತಹ ಬುದ್ಧಿವಂತಿಕೆ ಹಾಗೂ ಧೈರ್ಯವಂತಿಕಯೂ ಇರುತ್ತದೆ.
ವೀಕ್ನೆಸ್ ಹೇಳುವುದಾದರೆ ಇವರ ಮೂಡ್ ಯಾವಾಗ ಯಾವ ರೀತಿಯಲ್ಲಿ ಇರುತ್ತದೆ ಎಂಬುದನ್ನು ಊಹೆ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಚಿಕ್ಕ ಪುಟ್ಟ ವಿಚಾರಗಳಿಗೂ ಕೂಡ ಮೇಷ ರಾಶಿಯವರು ಕೋಪ ಮಾಡಿಕೊಳ್ಳುತ್ತಾರೆ. ದೃಢವಾದ ನಿರ್ಧಾರ ತೆಗೆದುಕೊಳ್ಳುವುದು ನಿಧಾನ.