ದೊಡ್ಮನೆಯಲ್ಲಿ ಇಂಥವು ನಡೆಯುತ್ತಲೇ ಇರುತ್ತವೆ. ಶಿವರಾಜ್ ಕುಮಾರ್ ಚಿತ್ರಕ್ಕೆ ತಾಯಿ, ಭಾವ, ಸೋದರಮಾವಂದಿರು ಪ್ರೊಡ್ಯೂಸರ್ ಆಗಿದ್ದರು. ರಾಘವೇಂದ್ರ ಮತ್ತು ಪುನೀತ್ ಕೂಡಾ ಶಿವಣ್ಣ ಚಿತ್ರಗಳನ್ನ ನಿರ್ಮಿಸಿದ್ದವರೇ. ಇತ್ತೀಚೆಗಷ್ಟೇ ಯುವ ಸಿನಿಮಾಗೆ ಅಶ್ವಿನಿ ಪ್ರೊಡ್ಯೂಸರ್ ಆಗಿದ್ದರು. ಇದೀಗ ರಾಮ್ ಕುಮಾರ್ ಪುತ್ರನ ಚಿತ್ರಕ್ಕೆ ಗೀತಾ ಪ್ರೊಡ್ಯೂಸರ್ ಆಗಿದ್ದಾರೆ.
ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವ ರಾಜ್ ಕುಮಾರ್ ಸಿನಿಮಾಗೆ ಅಶ್ವಿನಿ ಪುನೀತ್ ನಿರ್ಮಾಪಕಿಯಾಗಿದ್ದರೆ, ರಾಮ್ ಕುಮಾರ್-ಪೂರ್ಣಿಮಾ ಪುತ್ರನ ಚಿತ್ರಕ್ಕೆ ಗೀತಾ ಶಿವರಾಜ್ ಕುಮಾರ್ ನಿರ್ಮಾಪಕಿಯಾಗುತ್ತಿದ್ದಾರೆ.
ದೊಡ್ಮನೆಯವರ ಹಲವು ಬ್ಯಾನರುಗಳಲ್ಲಿ ವಜ್ರೇಶ್ವರಿ ಕಂಬೈನ್ಸ್ & ಪೂರ್ಣಿಮಾ ಎಂಟರ್‌ಪ್ರೈಸಸ್ ಪ್ರಮುಖವಾದವು. ಇದೇ ಪೂರ್ಣಿಮಾ ಕಂಬೈನ್ಸ್ ಬ್ಯಾನರ್ʻನಲ್ಲಿ ತ್ರಿಮೂರ್ತಿ, ಅಪ್ಪು, ಯಾರೇ ಕೂಗಾಡಲಿ, ಗುರಿ, ಸ್ವಸ್ತಿಕ್, ಜಾಕೀ, ಓಂ, ಆಕಾಶ್, ವಂಶಿ, ಅಣ್ಣಾ ಬಾಂಡ್ ಮೊದಲಾದ ಚಿತ್ರಗಳನ್ನು ನಿರ್ಮಿಸಿದ್ದಾರೆ.
ಈ ಪೂರ್ಣಿಮಾ ಅವರ ಮಗ ಧೀರೇನ್ ರಾಮ್‌ಕುಮಾರ್ ಎರಡನೇ ಸಿನಿಮಾವನ್ನು ಗೀತಾ ಶಿವರಾಜ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಇದು ಗೀತಾ ಪಿಕ್ಚರ್ಸ್ ಅವರ ಸಂಸ್ಥೆಯಿಂದ ನಿರ್ಮಾಣ ಆಗುತ್ತಿರುವ ನಾಲ್ಕನೇ ಸಿನಿಮಾ. ‘ಭೈರತಿ ರಣಗಲ್’ ಯಶಸ್ಸಿನ ಬಳಿಕ ಮತ್ತೊಂದು ಸಿನಿಮಾವನ್ನು ಅನೌನ್ಸ್ ಮಾಡಿದ್ದು ‘ಶಾಖಾಹಾರಿ’ ಸಿನಿಮಾ ನಿರ್ದೇಶಕ ಸಂದೀಪ್ ಸುಂಕದ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಧೀರೇನ್ ರಾಮ್‌ಕುಮಾರ್ ಅವರ ಎರಡನೇ ಚಿತ್ರ.
ಡಿಸೆಂಬರ್ 6ನೇ ತಾರೀಕು ಪಾರ್ವತಮ್ಮ ರಾಜ್ ಕುಮಾರ್ ಹುಟ್ಟಿದ ದಿನ. ಪಾರ್ವತಮ್ಮನವರ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಧಿರೇನ್ ಸಿನಿಮಾ ಅನೌನ್ಸ್ ಮಾಡಿದ್ದಾರೆ ಗೀತಾ. ಧಿರೇನ್ ಈ ಮೊದಲು ‘ಶಿವ 143’ ಸಿನಿಮಾದಲ್ಲಿ ನಟಿಸಿದ್ದರು. ಸಖತ್ ಹಾಟ್ & ಸ್ಪೈಸಿ ಪಾತ್ರದಲ್ಲಿ ನಟಿಸಿದ್ದ ಧಿರೇನ್ 2ನೇ ಸಿನಿಮಾಗೆ ರೆಡಿ ಆಗಿದ್ದಾರೆ. ಶಾಖಾಹಾರಿ ಚಿತ್ರವನ್ನು ಒಟಿಟಿಯಲ್ಲಿ ನೋಡಿದ ಅನೇಕರು ಈ ಚಿತ್ರವನ್ನು ಹೊಗಳಿದ್ದಾರೆ. ಆ ಚಿತ್ರದ ನಿರ್ದೇಶಕ ಸಂದೀಪ್ ಅವರು ನಿರ್ದೇಶನ ಮಾಡುತ್ತಿರುವುದರಿಂದ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಮೂಡಿದೆ.
ಯುವ ಹಾಗೂ ಧಿರೇನ್ ಇಬ್ಬರಿಗೂ ಮೊದಲ ಚಿತ್ರದಲ್ಲಿ ಹೇಳಿಕೊಳ್ಳುವಂತಹ ಅದ್ಭುತ ಯಶಸ್ಸು ಸಿಕ್ಕಿಲ್ಲ. ಯುವ ಚಿತ್ರದ ಬಾಕ್ಸಾಫೀಸಿನಲ್ಲಿ ಉತ್ತಮ ಲಾಭವನ್ನೇ ಮಾಡಿದರೂ, ಯುವಗೆ ಸ್ಟಾರ್ ಪಟ್ಟ ತಂದುಕೊಡಲಿಲ್ಲ. ಇನ್ನು ಧಿರೇನ್, ಮಾನ್ವಿತಾ ಕಾಮತ್ ಜೊತೆ ಮೊದಲ ಚಿತ್ರದಲ್ಲಿ ಸಾಕಷ್ಟು ಹಸಿಬಿಸಿಯಾಗಿಯೇ ನಟಿಸಿದ್ದರೂ ಸಿನಿಮಾ ಕ್ಲಿಕ್ ಆಗಲಿಲ್ಲ. ಹೀಗಾಗಿ ಇಬ್ಬರಿಗೂ ಎರಡನೇ ಸಿನಿಮಾ ಅತ್ಯಂತ ಮುಖ್ಯ.