ಹೊಟ್ಟೆ ಯಾಕೋ ಉಬ್ಬಿದಂತಿದೆ. ಹಸಿವಿಲ್ಲ. ಹುಳಿ ತೇಗು ಬರುತ್ತೆ. ಸರಿಯಾಗಿ ಡೈಜೇಷನ್ ಆಗಿಲ್ಲ. ಏನೋ ಒಂಥರಾ ಊಟ ಮಾಡೋಕೆ ಮೂಡ್ ಇಲ್ಲ. ಇದು ಹಲವರ ಸಮಸ್ಯೆ. ಕಾರಣ ಬೇರೇನಿರಲ್ಲ, ಆಸಿಡಿಟಿ. ಸರಿಯಾದ ಸಮಯಕ್ಕೆ ತಿನ್ನೋದು, ಕುಳಿತುಕೊಂಡು ತಿನ್ನೋದು, ಸರಿಯಾಗಿ ಜಗಿದು ಊಟ ಮಾಡೋದು (ಮುದ್ದೆ ಊಟಕ್ಕೆ ಇದು ಅಪ್ಲೈ ಆಗಲ್ಲ. ಆದರೆ ಕೆಲವರು ಅನ್ನವನ್ನೂ ಕೂಡಾ ಬಾಯಿಗೆ ಹಾಕ್ಕೊಂಡು ಗುಳುಂ ಅಂತಾ ನುಂಗ್ತಾರೆ), ಆಗಾಗ್ಗೆ ನೀರು ಕುಡೀತಾ ಇರೋದು, ಸಿಂಪಲ್ ವ್ಯಾಯಾಮಗಳಾನ್ನಾದರೂ ಮಾಡ್ತಾ ಇರೋದು.. ಇಂತಹವನ್ನೆಲ್ಲ ಫಾಲೋ ಮಾಡ್ತಿದ್ರೆ ಆಸಿಡಿಟಿಯನ್ನ ಕಂಟ್ರೋಲ್ ಮಾಡಬಹುದು. ಇದೆಲ್ಲದರ ಹೊರತಾಗಿಯೂ ಕೆಲವು ಮನೆ ಮದ್ದುಗಳಿವೆ. ಆಯುರ್ವೇದ ಔಷಧಿಗಳಿವೆ. ಅವುಗಳೆಲ್ಲ ನಮ್ಮ ನಮ್ಮ ಅಡುಗೆ ಮನೆಯಲ್ಲೇ ಇವೆ.
ಹಾಲು ಮತ್ತು ಮೊಸರು :
ತಣ್ಣಗಿನ ಹಾಲು ಕುಡಿಯೋದ್ರಿಂದ ಆಸಿಡಿಟಿ ದೂರವಾಗುತ್ತಂತೆ. ಮೊಸರು ಕೂಡಾ ಅಷ್ಟೇ. ಹಾಲು ಮತ್ತು ಮೊಸರಿನಲ್ಲಿ ನೈಸರ್ಗಿಕ ಅಂಟಾಸಿಡ್ ಇರುತ್ತೆ. ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿರುತ್ತದೆ. ನೈಸರ್ಗಿಕವಾಗಿ ಪ್ರೊಬಯೋಟಿಕ್ ಆಗಿರುವ ಈ ಡೈರಿ ಪದಾರ್ಥಗಳು ನಮ್ಮ ಕರುಳಿನ ಆರೋಗ್ಯವನ್ನು ಉತ್ತಮವಾಗಿ ಕಾಪಾಡುತ್ತವೆ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತವೆ. ಹಾಗಂತ ಫ್ರಿಜ್ಜಿಂದ ತೆಗೆದು ಕೋಲ್ಡ್ ಆಗಿರೋದನ್ನೆಲ್ಲ ಕುಡೀಬೇಡಿ. ನೈಸರ್ಗಿಕ ಹಾಲು, ಮೊಸರು ಬಳಸಿ.
ಹಣ್ಣು ತಿನ್ನಿ.. ಯಾವುದಾದರೂ..
ಯಾವುದೇ ಹಣ್ಣಿರಲಿ, ಹಣ್ಣಿನಲ್ಲಿ ನಾರಿನ ಅಂಶ ಇರುತ್ತದೆ. ಯಾವುದೇ ಬಗೆಯ ಹಣ್ಣುಗಳನ್ನು ಅಸಿಡಿಟಿ ಸಮಸ್ಯೆಗೆ ಪರಿಹಾರಕ್ಕೆ ಸೇವಿಸಬಹುದು. ಇದು ನಮ್ಮ ಜೀರ್ಣ ಶಕ್ತಿಯನ್ನು ಮತ್ತು ಆರೋಗ್ಯವನ್ನು ವೃದ್ಧಿಸುತ್ತದೆ. ಪ್ರತಿದಿನ ಎರಡು ಹಣ್ಣುಗಳನ್ನು ಸೇವಿಸುವುದರಿಂದ ಅಸಿಡಿಟಿ ಆಗುವುದನ್ನು ತಡೆಯಬಹುದು. ಸ್ನಾಕ್ಸ್ ಬರಹ ಸೇವಿಸಿ ಆರೋಗ್ಯಕರವಾದ ಜೀರ್ಣಶಕ್ತಿಯನ್ನು ಹೊಂದಬಹುದು. ಕಾಫಿ ಟೀ ಕುಡಿಯುವ ಬದಲು ಆರಾಮವಾಗಿ ಹಣ್ಣುಗಳನ್ನು ತಿಂದು ಆರೋಗ್ಯ ವೃದ್ಧಿಸಿಕೊಳ್ಳಬಹುದು.
ಕೊತ್ತೊಂಬರಿ ಸೊಪ್ಪು :
ಕೊತ್ತಂಬರಿ ಸೊಪ್ಪು ಅಥವಾ ಬೀಜ ಅಸಿಡಿಟಿಗೆ ಒಳ್ಳೆ ಮದ್ದು. . ಅಸಿಡಿಟಿ ಹೆಚ್ಚಾದ ಸಂದರ್ಭದಲ್ಲಿ 10 ಎಂಎಲ್ ಹಸಿ ಕೊತ್ತಂಬರಿ ಸೊಪ್ಪಿನ ಜ್ಯೂಸ್ ನೈಸರ್ಗಿಕ ಟಾನಿಕ್ ಆಗಿ ಅಸಿಡಿಟಿ ಹೋಗಲಾಡಿಸುತ್ತದೆ. ಬೇಕೆಂದರೆ ನೀರು ಹಾಗೂ ಮಜ್ಜಿಗೆ ಜೊತೆ ಕೂಡ ಇದನ್ನು ಸೇರಿಸಿ ಸೇವಿಸಬಹುದು. ಇನ್ನು ಕೊತ್ತಂಬರಿ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಅಡುಗೆಯಲ್ಲಿ ಬಳಸಬಹುದು ಅಥವಾ ಚಹಾ ತಯಾರು ಮಾಡಿ ಸೇವಿಸಬಹುದು. ಇದು ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ವಾಕರಿಕೆ, ವಾಂತಿ ಇನ್ನಿತರ ಸಮಸ್ಯೆಗಳನ್ನು ಸುಲಭವಾಗಿ ಹೋಗಲಾಡಿಸುತ್ತದೆ.
ಸೋಂಪು :
ಕೆಲವು ಹೋಟೆಲ್ಲುಗಳಲ್ಲಿ ಸೋಂಪು ಕಾಳುಗಳನ್ನ ಇಟ್ಟಿರ್ತಾರೆ. ಅಂಗಡಿಗಳಲ್ಲೂ ಸಿಗುತ್ತೆ. ಊಟ ಆದ ನಂತರ ಒಂದು ಚಮಚ ಜಿಗಿದು ತಿನ್ನುವುದು ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ಬಾಯಿಯ ದುರ್ವಾಸನೆಯನ್ನು ಕೂಡ ಹೋಗಲಾಡಿಸುತ್ತದೆ. ಸೋಂಪು ಕಾಳುಗಳನ್ನು ಜಗಿದು ತಿನ್ನಬೇಕು. ಊಟದ ನಂತರ ಕೂಡ ಸೋಂಪು ಕಾಳುಗಳನ್ನು ಸೇವಿಸಬಹುದು ಅಥವಾ ಇಡೀ ರಾತ್ರಿ ನೆನೆ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೋಂಪು ಕಾಳುಗಳ ನೀರು ಕುಡಿಯಬಹುದು.
ಉಪ್ಪು ಮತ್ತು ಶುಂಠಿ :
ಊಟ ಮಾಡುವ 10 ನಿಮಿಷಗಳ ಮೊದಲು ಚಿಟಿಕೆ ಉಪ್ಪು ಮತ್ತು ಹಸಿಶುಂಠಿಯನ್ನು ಚೆನ್ನಾಗಿ ಅಗೆದು ಅದರ ರಸವನ್ನು ನುಂಗುಬೇಕು. ಇದರಿಂದ ಆಸಿಡಿಟಿಯ ಸಮಸ್ಯೆ ನಿವಾರಣೆಯಾಗುವುದು ಮಾತ್ರವಲ್ಲದೆ ಎದೆಯುರಿ, ಹುಳಿತೇಗು ಕೂಡ ನಿಲ್ಲುತ್ತದೆ. ಆದರೆ ಶುಂಠಿಯ ಕಾರವನ್ನು ಸ್ವಲ್ಪ ಸಮಾಧಾನದಿಂದ ತಡೆದುಕೊಳ್ಳಬೇಕು.
ಓಂಕಾಳು :
ಓಂಕಾಳುಗಳಲ್ಲಿ ಥೈಮೋಲ್ ಇರುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಓಂ ಕಾಳುಗಳನ್ನು ಚಿಟಿಕೆ ಉಪ್ಪಿನ ಜೊತೆ ಸೇವಿಸುವುದರಿಂದ ಅಜೀರ್ಣತೆ ದೂರವಾಗುತ್ತದೆ. ಬೇಕೆಂದರೆ ಒಂದು ಟೀ ಚಮಚ ಓಂ ಕಾಳುಗಳನ್ನು ಇಡೀ ರಾತ್ರಿ ನೀರಿನಲ್ಲಿ ನೆನೆಹಾಕಿ ಆ ನೀರನ್ನು ಕುಡಿಯಬಹುದು.
ಇವು ಕೆಲವು ಆಯುರ್ವೇದ ಔಷಧಿಗಳಷ್ಟೇ. ಹಾಗೆ ನೋಡಿದರೆ ನಮ್ಮ ನಿಮ್ಮ ಅಡುಗೆ ಮನೆಯೇ ಒಂದು ಆಯುರ್ವೇದ ಮೆಡಿಕಲ್ ಸ್ಟೋರ್ ಎನ್ನಬಹುದು.