ಅಪ್ರಾಪ್ತರ ಮೇಲೆ ಲೈಂಗಿಕ ಕಿರುಕುಳದ ನೀಡಿದ ಆರೋಪ ಹಿನ್ನೆಲೆ ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರಿಗೆ ಜಾಮೀನು ಸಿಕ್ಕಿದೆ. ಮತ್ತೊಮ್ಮೆ ಜಾಮೀನು ಸಿಕ್ಕಿದೆ ಎನ್ನುವುದೇ ವಿಶೇಷ. ಜಾಮೀನು ನೀಡಿರುವುದು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ. ಸಾಕ್ಷ ವಿಚಾರಣೆ ಪೂರ್ಣಗೊಂಡ ಹಿನ್ನೆಲೆ ನ್ಯಾಯಾಲಯ ಜಾಮೀನು ನೀಡಿದೆ. ಆದರೆ ಶಿವಮೂರ್ತಿ ಶರಣರು ಚಿತ್ರದುರ್ಗ ಜಿಲ್ಲೆಗೆ ಕಾಲಿಡುವ ಹಾಗಿಲ್ಲ.
ಈ ಹಿಂದೆ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ಮೈಸೂರಿನ ಒಡನಾಡಿ ಸಂಸ್ಥೆ ಸುಪ್ರೀಂ ಕೋರ್ಟ್ ಮೆಟ್ಟಲೇರಿತ್ತು. ಆಗ ಜಾಮೀನು ಪ್ರಶ್ನಿಸಿದ್ದ ಒಡನಾಡಿ ಸಂಸ್ಥೆಗೆ ಗೆಲುವು ಸಿಕ್ಕಿತ್ತು. ಸಾಕ್ಷ ವಿಚಾರಣೆ ನಡೆಸುವವರೆಗೆ ಬಂಧನದಲ್ಲಿಡಲು ಸುಪ್ರಿಂ ಆದೇಶಿಸಿತ್ತು. ಹೀಗಾಗಿ ಸಂತ್ರಸ್ತೆಯರಿಬ್ಬರು ಸೇರಿ 13 ಮುಖ್ಯ ಸಾಕ್ಷಗಳ ವಿಚಾರಣೆ ಪೂರ್ಣಗೊಂಡ ಕಾರಣ ಶ್ರೀಗಳ ಬಿಡುಗಡೆಯಾಗಿದೆ. ಹೈಕೋರ್ಟ್ ನೀಡಿದ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಪ್ರಕರಣದಲ್ಲಿ ಮುರುಘಾ ಶ್ರೀಗಳು ಒಟ್ಟು 2 ವರ್ಷಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದಾರೆ. ಬಿಡುಗಡೆ ಬಳಿಕ ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಮುರುಘಾಶ್ರೀ ಇರುವಂತಿಲ್ಲ. ಮುರುಘಾ ಮಠಕ್ಕೆ ಹೋಗುವಂತಿಲ್ಲ. ತಮ್ಮ ಮೇಲೆ ಆರೋಪ ಮಾಡಿರುವವರ ಸಂಪರ್ಕ ಮಾಡುವಂತಿಲ್ಲ. ದೂರವಾಣಿಯಲ್ಲೂ ಮಾತನಾಡುವ ಹಾಗಿಲ್ಲ. ಕೋರ್ಟ್ ವಿಧಿಸಿರುವ ಷರತ್ತುಗಳಲ್ಲಿ ಯಾವುದೇ ಒಂದು ಷರತ್ತು ಉಲ್ಲಂಘನೆಯಾದರೂ, ಶಿವಮೂರ್ತಿ ಶರಣರು ಸಂಕಷ್ಟ ಎದುರಿಸಬೇಕಾಗುತ್ತದೆ. ಹೀಗಾಗಿ ಶಿವಮೂರ್ತಿ ಶರಣರು ದಾವಣಗೆರೆಯ ಶಿವಯೋಗಿ ಮಂದಿರಕ್ಕೆ ತೆರಳಿ ಅಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ಶಿವಮೂರ್ತಿ ಶರಣರಿಗೆ ಭರ್ಜರಿ ಸ್ವಾಗತ : ಪೋಕ್ಸೋ ಕೇಸಿನಲ್ಲಿ ಜೈಲಿಗೆ ಹೋಗಿದ್ದರೂ, ಶಿವಮೂರ್ತಿ ಶರಣರ ಜನಪ್ರಿಯತೆಗೆ ಯಾವುದೇ ಕುತ್ತು ಬಂದಿಲ್ಲ. ಜೈಲಿನಿಂದ ಮುರುಘಾ ಶ್ರೀ ಬಿಡುಗಡೆಯಾಗುತ್ತಿದ್ದಂತೆಯೇ ಕಾರಾಗೃಹ ಬಳಿ ಹಾರ ಹಾಕಿ ಭಕ್ತರು ಸ್ವಾಗತಿಸಿದ್ದಾರೆ. ದಾವಣಗೆರೆ ವಿರಕ್ತಮಠದ ಬಸವಪ್ರಭುಶ್ರೀ, ಮಠದ ಉತ್ತರಾಧಿಕಾರಿ ಬಸವಾದಿತ್ಯ ಮುರುಘಾಶ್ರೀಗಳು ಸ್ವಾಗತಿಸಿದ್ದಾರೆ. ಮುರುಘಾ ಮಠದ ಉತ್ತರಾಧಿಕಾರಿ ಬಸವಾದಿತ್ಯ ಮುರುಘಾಶ್ರೀ, ಶಿವಮೂರ್ತಿ ಶರಣರಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ.
ಬಿಡುಗಡೆ ಬಳಿಕ ಮಾತನಾಡಿದ ಶ್ರೀಗಳು ನಮ್ಮ ವಿರುದ್ಧದ ಪ್ರಕರಣದ ಬಗ್ಗೆ ಕಾನೂನು ಹೋರಾಟ ನಡೆಸುತ್ತೇವೆ. ಸತ್ಯಕ್ಕೆ ಜಯ ಸಿಗುತ್ತದೆಂಬ ನಿರೀಕ್ಷೆ ನಮಗಿದೆ. ಬಸವೇಶ ಮತ್ತು ಮುರುಘೇಶನ ಆಶೀರ್ವಾದದಿಂದ ಬಂಧೀಖಾನೆಯಿಂದ ನಾವು ಬಿಡುಗಡೆ ಆಗಿದ್ದೇವೆ. ಮುರುಘಾಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ವೇಳೆ ಬಿಡುಗಡೆಗೊಂಡಿದ್ದೇವೆ. ನೋಡೋಣ ಮುಂದೆ ವಿಚಾರ ಮಾಡಿ ಹೆಜ್ಜೆ ಇಡೋಣ. ಜೈಲಿನ ಅನುಭವದ ಬಗ್ಗೆ ಮುಂದೆ ಹೇಳುತ್ತೇವೆ. ಇದು ಸಕಾಲ ಅಲ್ಲ, ಮೌನವಾಗಿರುವ ಸಮಯ ಎಂದಿದ್ದಾರೆ ಮುರುಘಾ ಶ್ರೀಗಳು.
ಜೈಲಿನ ಹೊರಗೆ ಅಷ್ಟೇ ಅಲ್ಲ, ವಣೆಗೆರೆಗೆ ತಲುಪಿದ ಶಿವಮೂರ್ತಿ ಶರಣರನ್ನು ವಿರಕ್ತ ಮಠದ ಸ್ವಾಮೀಜಿಗಳು, ಮಠದ ಭಕ್ತರು ಬರಮಾಡಿಕೊಂಡಿದ್ದಾರೆ. ಸ್ವಾಮಿಗಳು ಜಯದೇವ ಸರ್ಕಲ್ ಬಳಿ ಇರುವ ಶಿವಯೋಗಿ ಮಂದಿರಕ್ಕೆ ಭೇಟಿ ನೀಡಿ ಜಯದೇವ ಶ್ರೀಗಳ ಗದ್ದುಗೆ ಗೆ ಪೂಜೆ ಸಲ್ಲಿಸಿ, ಮಠಕ್ಕೆ ತೆರಳಿದ್ದಾರೆ.
ಪ್ರಕರಣದ ಇತಿಹಾಸ : 2022ರ ಆಗಸ್ಟ್ 26ರಂದು ಮುರುಘಾಶ್ರೀ ವಿರುದ್ಧ ಮೊದಲ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಸೆ.1ರಿಂದ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು. ಮೊದಲ ಪೋಕ್ಸೋ ಪ್ರಕರಣದಲ್ಲಿ ಹೈಕೋರ್ಟ್ ನ.3ರಂದು ಜಾಮೀನು ನೀಡಿತ್ತು. ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿದ್ದ ಕಾರಣ, ಮತ್ತೆ ಜೈಲು ಸೇರಿದ್ದರು. ಇದೀಗ ದರ್ಶನ್ ಪರ ವಾದಿಸುತ್ತಿರುವ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರೇ, ಆಗ ಸ್ವಾಮೀಜಿ ಪರ ವಾದಿಸಿದ್ದರು.