ಆಟಗಾರರು, ದೇವರು ಮತ್ತು ನಂಬಿಕೆಗಳು ಒಂದರೊಳಗೊಂದು ಬೆಸೆದುಕೊಂಡಿವೆ. ಖ್ಯಾತ ಪ್ರಖ್ಯಾತ ಆಟಗಾರರು, ತಮ್ಮ ಆಟದ ಖ್ಯಾತಿಯನ್ನು ಶ್ರಮಕ್ಕಿಂತ ತಾವು ನಂಬಿರುವ ದೇವರಿಗೆ ಅರ್ಪಿಸುತ್ತಾರೆ. ಇತ್ತೀಚೆಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರು ಭಗವದ್ಗೀತೆ ಪಠಣ ತುಂಬಿದ ಆತ್ಮಸ್ಥೈರ್ಯವನ್ನು ಹಂಚಿಕೊಂಡಿದ್ದರು. ಕ್ರಿಕೆಟ್ಟಿನಲ್ಲೂ ಈ ರೀತಿಯ ನಂಬಿಕೆ ಇದೆ. ಇದೀಗ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರು ನಂಬಿದ ದೇವರುಗಳ ಶಕ್ತಿಯನ್ನು ಅವರೇ ಹೇಳಿಕೊಂಡಿದ್ದಾರೆ.
ಟೀಂ ಇಂಡಿಯಾದ ನೂತನ ಕೋಚ್ ಗೌತಮ್ ಗಂಭೀರ್ ಜೊತೆ ಕೊಹ್ಲಿ ನಡೆಸಿರುವ ವಿಶೇಷ ಸಂವಾದದಲ್ಲಿ ಕೊಹ್ಲಿ ಜಪ ಮಾಡಿದ್ದ ವಿಷಯವನ್ನು ಬಹಿರಂಗಪಡಿಸಿದ್ದಾರೆ ಗಂಭೀರ್. 2014-15ರಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ನಡೆದಿತ್ತು. ಹಾಗೆ ನೋಡಿದರೆ ಕೊಹ್ಲಿಯವರ ವೃತ್ತಿ ಬದುಕಿನಲ್ಲಿ ಅದು ಮರೆಯಲಾಗದ ಸರಣಿ. ಆ ಸರಣಿಯಲ್ಲಿ ಕೇವಲ 4 ಪಂದ್ಯಗಳ 8 ಇನ್ನಿಂಗ್ಸ್‌ಗಳಲ್ಲಿ 692 ರನ್ ಗಳಿಸಿದ್ದ ಕೊಹ್ಲಿ 4 ಶತಕ ಹಾಗೂ ಒಂದು ಅರ್ಧ ಶತಕ ಗಳಿಸಿದ್ದರು. 86.50ರ ಸರಾಸರಿಯಲ್ಲಿ ರನ್ ಗಳಿಸಿದ್ದರು. ಅದನ್ನು ನೆನಪಿಸಿಕೊಂಡಿದ್ದಾರೆ ಗಂಭೀರ್.
ಆಸ್ಟ್ರೇಲಿಯಾದಲ್ಲಿ ನೀವು ಬಂಪರ್ ಬ್ಯಾಟಿಂಗ್ ನಡೆಸಿದ ಸರಣಿ ಬಗ್ಗೆ ಮಾತನಾಡೋಣ. 2014-15ರ ಸರಣಿಯಲ್ಲಿ ನೀವು ರಾಶಿ ರಾಶಿ ರನ್ ಬಾರಿಸಿದಾಗ, ಓಂ ನಮಃ ಶಿವಾಯ ಎಂದು ಜಪ ಮಾಡುತ್ತಿದ್ದೆ ಎಂದು ನನ್ನ ಬಳಿ ಹೇಳಿದ್ದು ನನಗೆ ಇನ್ನೂ ನೆನಪಿದೆ’ ಎಂದಿದ್ದಾರೆ. ಇದಕ್ಕೆ ಕೊಹ್ಲಿ ನಗುತ್ತಲೇ ತಲೆಯಾಡಿಸಿದ್ದಾರೆ. ಆ ಸರಣಿಯಲ್ಲಿ ಕೊಹ್ಲಿ ಒಂದೊಂದು ಬಾಲ್ ಎದುರಿಸುವಾಗಲೂ ʻಓಂ ನಮಃ ಶಿವಾಯ.. ಓಂ ನಮಃ ಶಿವಾಯ..ʼ ಎಂದು ಜಪ ಮಾಡುತ್ತಿದ್ದರಂತೆ. ಆ ರೀತಿಯ ಜಪ ನಿಮ್ಮನ್ನು ಆಟಕ್ಕೆ ಹೊಂದಿಕೊಳ್ಳೋಕೆ, ಏಕಾಗ್ರತೆಗೆ ಸಹಾಯ ಮಾಡಿತು ಎಂದು ಹೇಳಿದ್ದಾರೆ ಗಂಭೀರ್.
ಕೊಹ್ಲಿಯ ಈ ಓಂ ನಮಃ ಶಿವಾಯ ಜಪದ ಕಥೆ ಹೇಳಿದ ನಂತರ ಕೊಹ್ಲಿಯವರೂ ಗೌತಮ್ ಗಂಭೀರ್ ಅವರ ಹನುಮಾನ್ ಚಾಲೀಸದ ಶಕ್ತಿಯನ್ನೂ ಹೇಳಿಕೊಂಡಿದ್ದಾರೆ.
ಗೌತಮ್ ಗಂಭೀರ್ 2009ರಲ್ಲಿ ನ್ಯೂಜಿಲೆಂಡ್ ವಿರುದ್ಧ ನೇಪಿಯರ್ ಟೆಸ್ಟ್‌ನಲ್ಲಿ ಎರಡೂವರೆ ದಿನ ಬ್ಯಾಟಿಂಗ್ ಮಾಡಿ ಭಾರತವನ್ನು ಸೋಲಿನಿಂದ ಪಾರು ಮಾಡಿದ್ದರು. ಆ ಟೆಸ್ಟ್ ಬಗ್ಗೆಯೂ ಸಂವಾದದ ವೇಳೆ ಚರ್ಚೆ ನಡೆದಿದೆ. ಗಂಭೀರ್, ಎರಡೂವರೆ ದಿನವೂ ಹನುಮಾನ್ ಚಾಲೀಸಾ ಪಠಣೆ ಮಾಡುತ್ತಾ, ಬ್ಯಾಟ್ ಮಾಡಿ 137 ರನ್ ಹೊಡೆದಿದ್ದರು. ನಿಮಗೆ ಸ್ವತಃ ಅನುಭವವಾಗದ ಹೊರತು, ಅಂತಹ ಕ್ಷಣಗಳನ್ನು ನಂಬುವುದಕ್ಕೆ ಆಗುವುದಿಲ್ಲ. ನನಗಂತೂ ಆ ಪಂದ್ಯದಲ್ಲಿ ಹನುಮಾನ್ ಚಾಲೀಸ ನೀಡಿದ ಶಕ್ತಿ ಎಂಥದ್ದು ಎಂಬ ವಿಷಯ ಅರಿವಿಗೆ ಬಂತು. ಹನುಮಾನ್ ಚಾಲೀಸ ಪಠಣ ಮಾಡುತ್ತಾ ಏಕಾಗ್ರತೆ ಸಾಧಿಸಿದ್ದೆ. ಅದು ಆಟದಲ್ಲಿ ನೆರವಾಯಿತು ಎಂದು ಹೇಳಿಕೊಂಡಿದ್ದಾರೆ. ಆ ಪಂದ್ಯದಲ್ಲಿ ಭಾರತ ಸೋಲಿನ ಭೀತಿಗೆ ಸಿಲುಕಿತ್ತು. ಆಗ ಎರಡೂವರೆ ದಿನ ಬ್ಯಾಟಿಂಗ್ ಮಾಡಿದ್ದ ಗಂಭೀರ್ 436 ಎಸೆತಗಳನ್ನು ಎದುರಿಸಿ 136 ರನ್ ಹೊಡೆದಿದ್ದರು. ಸತತ 10 ಗಂಟೆ, 43 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ್ದರು. ಆ ಪಂದ್ಯದಲ್ಲಿ ಗಂಭೀರ್ ರಾಹುಲ್ ದ್ರಾವಿಡ್ ಜೊತೆ 133 ರನ್, ಸಚಿನ್ ತೆಂಡೂಲ್ಕರ್ ಜೊತೆ 97 ರನ್ ಹಾಗೂ ವಿವಿಎಸ್ ಲಕ್ಷ್ಮಣ್ ಜೊತೆ 96 ರನ್ ಜೊತೆಯಾಟ ನೀಡಿದ್ದರು. ಹನುಮಾನ್ ಚಾಲೀಸ ಮತ್ತು ಬ್ಯಾಟಿಂಗಿನಲ್ಲಿ ಎಷ್ಟು ಹೊತ್ತು ಮುಳುಗಿ ಹೋಗಿದ್ದೆ ಎಂದರೆ, 5ನೇ ದಿನದಾಟದ ಮೊದಲ ಸೆಷನ್ ಆಟ ಮುಗಿದಾಗ ಲಕ್ಷ್ಮಣ್ ಅವರ ಜೊತೆ ಮಾತನಾಡಿದೆ. ಆಗ ಅವರು ಎರಡು ಗಂಟೆಗಳಿಂದ ಜೊತೆಯಾಗಿ ಆಡುತ್ತಿದ್ದೇವೆ. ಈ ಎರಡು ಗಂಟೆಯಲ್ಲಿ ನೀನು ನನ್ನ ಜೊತೆ ಒಂದೇ ಒಂದು ಮಾತೂ ಆಡಿಲ್ಲ. ಓವರ್ ಟು ಓವರ್ ಮಧ್ಯೆಯೂ ಮಾತನ್ನಾಡಿಲ್ಲ ಎಂದಾಗಲೇ ನನಗೆ ಪರಿಸ್ಥಿತಿ ಅರ್ಥವಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಇದೇ ವೇಳೆ ಕೊಹ್ಲಿ & ಗಂಭೀರ್ ತಮ್ಮಿಬ್ಬರ ಮಧ್ಯೆ ಯಾವ ರೀತಿಯ ವೈಮನಸ್ಯ, ದ್ವೇಷಗಳೂ ಇಲ್ಲ. ಆಟದಲ್ಲಿ ಕೆಲವೊಮ್ಮೆ ಗಲಾಟೆ, ಮನಸ್ತಾಪಗಳು ನಡೆಯುತ್ತವೆ. ಪಂದ್ಯ ಮುಗಿದ ಮೇಲೆ ಅವುಗಳನ್ನು ಅಲ್ಲಿಯೇ ಬಿಟ್ಟು ಮುಂದೆ ಹೋಗುತ್ತೇವೆ ಎಂದು ಗಂಭೀರ್ ಮತ್ತು ಕೊಹ್ಲಿ ಇಬ್ಬರೂ ಹೇಳಿಕೊಂಡಿದ್ದಾರೆ.