ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ದೆಹಲಿಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕುತ್ತಲೇ ಬಂದಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹನಿಟ್ರ್ಯಾಪ್ ರಗಳೆ ಬೆನ್ನಲ್ಲೇ ಈ ಭೇಟಿಗಳು ಕುತೂಹಲ ಮೂಡಿಸಿವೆ. ಬುಧವಾರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಮೂರು ದಿನ.. ಎರಡು ಮೀಟಿಂಗ್..!
ಮಂಗಳವಾರ ರಾತ್ರಿ ಕುಮಾರಸ್ವಾಮಿಯವರ ಮನೆಗೆ ಭೋಜನಕ್ಕೆ ತೆರಳಿದ ಜಾರಕಿಹೊಳಿ, ಸುಮಾರು ಒಂದೂವರೆ ತಾಸು ಮಾತುಕತೆ ನಡೆಸಿದ್ದರೆ, ಬುಧವಾರ ಬೆಳಗ್ಗೆ ಮತ್ತೊಮ್ಮೆ ಕುಮಾರಸ್ವಾಮಿ ನಿವಾಸಕ್ಕೆ ಭೇಟಿ ನೀಡಿದ ಜಾರಕಿಹೊಳಿ, ಸುಮಾರು ಹೊತ್ತು ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲ, ದೇವೇಗೌಡರನ್ನೂ ಭೇಟಿ ಮಾಡಿದ್ದಾರೆ.
ʻʻಇನ್ನೂ ಇಬ್ಬರು, ಮೂವರು ನಾಯಕರನ್ನು ಭೇಟಿಯಾಗುತ್ತಿದ್ದೇನೆ. ಅವರೊಂದಿಗೆ ಮಾತನಾಡಿದ ಬಳಿಕ ಗುರುವಾರ ಬೆಂಗಳೂರಿಗೆ ಮರಳುತ್ತೇನೆ ಮತ್ತು ಶುಕ್ರವಾರ ಮಾಧ್ಯಮದವರಿಗೆ ಎಲ್ಲ ವಿಷಯಗಳನ್ನು ಹೇಳುತ್ತೇನೆʼʼ ಇದು ಸತೀಶ್ ಜಾರಕಿಹೊಳಿ ಅವರ ಮಾತು. ಕುಮಾರಸ್ವಾಮಿ ಹಾಗೂ ಸತೀಶ್ ಜಾರಕಿಹೊಳಿ ಭೇಟಿ ಬಗ್ಗೆ ಭಾರಿ ಚರ್ಚೆ ನಡೆಯುತ್ತಿರುವಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಈ ಬಗ್ಗೆ ಗರಂ ಆಗೇ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಕಾಂಗ್ರೆಸ್ ವಕ್ತಾರ. ಅವರದ್ದು ಯಾವ ರೀತಿಯ ಭೇಟಿ ಎಂದು ಅವರನ್ನೇ ಕೇಳಿ ಎಂಬುದಾಗಿ ಉತ್ತರಿಸಿದ್ದಾರೆ.
ಏನಾಯ್ತು ಮೀಟಿಂಗ್..?
ಸಿದ್ದರಾಮಯ್ಯ ಸಿಎಂ ಆಗಿರುವವರೆಗೆ ಅಭ್ಯಂತರವಿಲ್ಲ. ಆದರೆ, ಹೊಸ ನಾಯಕತ್ವವನ್ನು ಒಪ್ಪಲು ನಾವಂತೂ ರೆಡಿ ಇಲ್ಲ. ಹಾಗೇನಾದರೂ ಆದರೆ ಇಡೀ ಸಮುದಾಯ ತಿರುಗಿಬೀಳಲಿದೆ ಎಂಬ ಸಂಗತಿಯನ್ನೂ ಜಾರಕಿಹೊಳಿ ಅವರು ದೇವೇಗೌಡರು ಮತ್ತು ಕುಮಾರಸ್ವಾಮಿ ಗಮನಕ್ಕೆ ತಂದರು ಎನ್ನಲಾಗಿದೆ. ಜಾರಕಿಹೊಳಿ ಮಾತುಗಳನ್ನು ಕೇಳಿದ ಕುಮಾರಸ್ವಾಮಿ ಅವರು, ”ನಿಮ್ಮ ನಿಲುವು ಸರಿ ಇದೆ ಮತ್ತು ನಿಮ್ಮ ರಾಜಕೀಯ ಹೋರಾಟಕ್ಕೆ ನಮ್ಮ ಬೆಂಬಲ ಮತ್ತು ಸಹಕಾರ ಇದ್ದೇ ಇದೆ,” ಎಂಬ ಅಭಯ ನೀಡಿದರು ಎಂದು ಹೇಳಲಾಗ್ತಿದೆ.
ಹನಿಟ್ರ್ಯಾಪ್ ಸಿಡಿ ಇವೆಯಂತೆ..!
ಹನಿಟ್ರ್ಯಾಪ್‌ಗೆ ಸಂಬಂಧಿಸಿದ ಸಿ.ಡಿ, ಪೆನ್ ಡ್ರೈವ್‌ಗಳನ್ನು ಅಧಿಕಾರಿಯೊಬ್ಬರಿಗೆ ಸೇರಿದ ಫ್ಲಾಟ್‌ನಲ್ಲಿ ನಾಯಕರೊಬ್ಬರು ಭದ್ರ ಪಡಿಸಿದ್ದರು. ಅಧಿಕಾರಿಯ ಈ ಫ್ಲಾಟ್ ಮೇಲೆ ಇತ್ತೀಚಿನ ಕಾನೂನುಬದ್ಧ ದಾಳಿ ವೇಳೆ ಅವುಗಳನ್ನು ಹೊರತೆಗೆಯಲಾಗಿದೆ. ಅದರಲ್ಲಿ ಹಲವು ನಾಯಕರು ಮತ್ತು ಕುಟುಂಬದವರ ಹನಿಟ್ರ್ಯಾಪ್‌ಗಳು ಪತ್ತೆಯಾಗಿವೆ. ಸತೀಶ್ ಜಾರಕಿಹೊಳಿ ಅವರು ಈ ಬಗ್ಗೆ ಸೀರಿಯಸ್ ಆಗಿದ್ದಾರಂತೆ.
ಇದಾದ ಬಳಿಕ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರನ್ನೂ ಭೇಟಿ ಮಾಡಿದ್ದಾರೆ. ಈ ವೇಳೆಯೂ ರಾಜ್ಯದ ಅಭಿವೃದ್ಧಿ ಹಾಗೂ ರಾಜಕೀಯ ಬೆಳವಣಿಗೆ ಜೊತೆಗೆ ಮಾತನಾಡಿದ್ದಾರೆ. ನಂತರ, ಹನಿಟ್ರ್ಯಾಪ್ ವಿಚಾರವನ್ನೂ ಚರ್ಚೆ ಮಾಡಿ, ಇದಕ್ಕೆ ಹೇಗೆ ಕಡಿವಾಣ ಹಾಕಬೇಕು ಎಂಬುದನ್ನು ಹಿರಿಯ ಮುತ್ಸದ್ದಿ ದೇವೇಗೌಡರ ಬಳಿ ಸಲಹೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.