ನಟ ನಟಿಯರು ಎಂದರೆ ಅವರ ಬಗ್ಗೆ ಇರುವ ರೋಚಕ, ರೋಮಾಂಚಕ ಕಥೆಗಳೇ ಹೆಚ್ಚು. ರೊಮ್ಯಾಂಟಿಕ್ ಕಥೆಗಳೂ ಇರುತ್ತವೆ ಎನ್ನಿ. ಅಂತಹ ನಟಿಯರಲ್ಲಿ ಒಬ್ಬರು ಭಾನುಪ್ರಿಯ.
ತನನಂ.. ತನನಂ.. ಎನಲು ಮನಸು ನೀನೇ ಕಾರಣ.. ಹಾಡನ್ನು ಕನ್ನಡಿಗರು ಮರೆತಿಲ್ಲ. ಕನ್ನಡದಲ್ಲಿ ನಟಿಸಿದ್ದು ಕಡಿಮೆ ಚಿತ್ರಗಳಾದರೂ ಕೆಲವು ಚಿತ್ರಗಳು ಪ್ರೇಕ್ಷಕರ ನೆನಪಿನಲ್ಲಿವೆ. ರವಿಚಂದ್ರನ್, ವಿಷ್ಣುವರ್ಧನ್, ಶಿವರಾಜ್ ಕುಮಾರ್, ಅಂಬರೀಷ್ ಮೊದಲಾದವರ ಜೊತೆ ನಟಿಸಿದ್ದ ನಾಯಕಿ.
ರವಿಚಂದ್ರನ್ ಜೊತೆ ರಸಿಕ, ಅಂಬರೀಷ್ ಜೊತೆ ದೇವರ ಮಗ, ವಿಷ್ಣುವರ್ಧನ್ ಜೊತೆ ಕದಂಬ, ಸಿಂಹಾದ್ರಿಯ ಸಿಂಹ.. ಚಿತ್ರಗಳಲ್ಲಿ ನಟಿಸಿದ್ದ ಭಾನುಪ್ರಿಯಾ, ತೆಲುಗು, ತಮಿಳಿನಲ್ಲಿ ದೊಡ್ಡ ಹೆಸರು ಮಾಡಿದ್ದವರು. ಅವರಿಗೀಗ ವಯಸ್ಸು 58. ಈ ವಯಸ್ಸಿಗೆ ಭಾನುಪ್ರಿಯಾಗೆ ಮರೆವಿನ ಕಾಯಿಲೆ ಕಾಡುತ್ತಿದೆಯಂತೆ.
ಪಲ್ನಾಟಿ ಪುಲಿ, ಇಲ್ಲಲೇ ದೇವತಾ, ಝಾನ್ಸಿ ರಾಣಿ, ಅಮೆರಿಕ ಅಲ್ಲುಡು, ವಿಜೇತ, ಅನ್ವೇಷಣ, ಅಪೂರ್ವ ಸಹೋದರುಲು, ದೊಂಗ ಮೊಗುಡು, ತ್ರಿನೇತ್ರುಡು, ಭಗವಾನ್, ಸ್ವರ್ಣಕಮಲನ್, ಭಾಭಿ, ಅಳಗನ್, ಅನ್ನಮಯ್ಯ, ಪೆದರಾಯುಡು.. ಹೀಗೆ ಭಾನುಪ್ರಿಯ ನಟಿಸಿದ ಚಿತ್ರಗಳ ಸಂಖ್ಯೆ 150ಕ್ಕೂ ಹೆಚ್ಚು.
ಭಾನುಪ್ರಿಯ, ಶಾಸ್ತ್ರೀಯ ಸಂಗೀತದಲ್ಲಿ ಪ್ರವೀಣೆಯಾಗಿದ್ದರು. ಕೂಚುಪುಡಿ ನೃತ್ಯದಲ್ಲಿ ಪ್ರವೀಣೆ. ಒಂದು ನೃತ್ಯಶಾಲೆ ತೆರೆಯುವುದು ಅವರ ಕನಸಾಗಿತ್ತು. ನನಗೆ ಇದ್ದಕ್ಕಿದ್ದಂತೆ ನೃತ್ಯದಲ್ಲಿ ಕಲಿತಿದ್ದ ನೃತ್ಯದ ಭಂಗಿ, ಮುದ್ರೆಗಳೆಲ್ಲ ಮರೆತು ಹೋಗುತ್ತಿದ್ದವು. ಮನೆಯಲ್ಲೂ ಡ್ಯಾನ್ಸ್ ಮಾಡುವುದಕ್ಕೆ ಆಗುತ್ತಿಲ್ಲ. ಸಿನಿಮಾಗಳಲ್ಲಿ ನಟಿಸೋಣವೆಂದರೆ ಡೈಲಾಗ್ಸ್ ಕೂಡ ಮರೆತು ಹೋಗುತ್ತಿದೆ ಎಂದಿರುವ ಭಾನುಪ್ರಿಯಾ ಅವರು ಈ ಕಾರಣಕ್ಕಾಗಿಯೇ ಹೊಸ ಸಿನಿಮಾಗಳನ್ನೂ ಒಪ್ಪಿಕೊಳ್ಳುತ್ತಿಲ್ಲವಂತೆ.
ಭಾನುಪ್ರಿಯಾ ಅವರು ಆದರ್ಶ್, ಅಮೆರಿಕದಲ್ಲಿ ಡಿಜಿಟಲ್ ಗ್ರಾಫಿಕ್ಸ್ ಡಿಸೈನರ್ ಆಗಿದ್ದರು. 2018ರಲ್ಲಿ ಹೃದಾಘಾತದಲ್ಲಿ ಮೃತಪಟ್ಟರು. ಪತಿಯನ್ನು ತುಂಬಾ ಪ್ರೀತಿಸುತ್ತಿದ್ದ ಭಾನುಪ್ರಿಯಾ, ಪತಿನ ಹಠಾತ್ ನಿಧನದ ನಂತರ ಆಘಾತದಿಂದ ಹೊರಬಂದಿಲ್ಲ. ಪತಿಯ ಸಾವನ್ನು ಇನ್ನೂ ಕೂಡಾ ಅರಗಿಸಿಕೊಳ್ಳಲು ಆಗುತ್ತಿಲ್ಲ. ನೆನಪಿನ ಶಕ್ತಿ ಕ್ಷೀಣಿಸುತ್ತಿದೆ. ಹೀಗಾಗಿ ನನ್ನ ಕನಸಿನ ನೃತ್ಯಶಾಲೆ ಈಡೇರುತ್ತದೆಯೋ.. ಇಲ್ಲವೋ ಗೊತ್ತಿಲ್ಲ ಎನ್ನುವ ಭಾನುಪ್ರಿಯಾ, ಅದಕ್ಕಾಗಿಯೇ ಚಿಕಿತ್ಸೆ ಪಡೆದುಕೊಳ್ತಿದ್ದಾರಂತೆ.
ಪತಿ ಸತ್ತ ಮೇಲೆ ಭಾರತಕ್ಕೆ ವಾಪಸ್ ಆದ ಭಾನುಪ್ರಿಯಾ, ನಟನೆಯಲ್ಲಿಯೇ ತೊಡಗಿಸಿಕೊಂಡು ನೋವನ್ನು ಮರೆಯುವ ಪ್ರಯತ್ನ ಮಾಡಿದ್ದಾರಾದರೂ, ಅದರಲ್ಲಿ ಯಶಸ್ಸು ಕಂಡಿಲ್ಲ. ಜೀವನವೇ ಹಾಗಲ್ಲವೆ? ಎತ್ತರಕ್ಕೆ ಏರಿದವ ದಿಢೀರ್ ಇಳಿಯುತ್ತಾನೆ, ಯಾರಿಗೂ ಬೇಡ ಎಂದು ಪರಿಗಣಿಸ್ಪಟ್ಟವ ಒಂದು ದಿನ ದಿಢೀರ್ ಶ್ರೀಮಂತನಾಗುತ್ತಾನೆ. ವಿಧಿಯಾಟವನ್ನು ಬಲ್ಲವರಾರು, ದೇವರ ಎದುರು ನಿಲ್ಲುವವರಾರು ಎನ್ನುವ ಮಾತೆಲ್ಲಾ ಇರುವುದು ಇದೇ ಕಾರಣಕ್ಕೆ. ನೋವಿನಿಂದ ನೆನಪಿನ ಶಕ್ತಿಯನ್ನೇ ಕಳೆದುಕೊಂಡಿರುವ ನಟಿ, ಮನೆಯವರನ್ನು ಮರೆತಿಲ್ಲ ಎನ್ನುವುದಷ್ಟೇ ಸಮಾಧಾನದ ಸಂಗತಿ. ಇಲ್ಲದೇ ಹೋಗಿದ್ದರೆ ಏನಾಗುತ್ತಿತ್ತೋ.. ಏನೋ.. ಇಷ್ಟಪಟ್ಟು ಕಲಿತ ವಿದ್ಯೆಯೂ ಕೈಕೊಡುವುದು ಎಂದರೆ ಕಡಿಮೆ ದುರಂತ ಅಲ್ಲ.