ಒಂದು ಪಕ್ಷಕ್ಕೆ ಯಾರು ಖಳನಾಯಕರಾಗಬಹುದು. ಪಕ್ಷದಲ್ಲಿರುವ ಅಸಮಾಧಾನಿತ ನಾಯಕರು ಆಗಬಹುದು. ನಾಯಕರ ನಡುವಿನ ಪರ್ಸನಲ್ ವೈಮನಸ್ಯಗಳು ಪಕ್ಷಕ್ಕೆ ಡ್ಯಾಮೇಜ್ ಆಗಬಹುದು. ಆದರೆ ಒಂದು ಪಕ್ಷಕ್ಕೆ ಹೈಕಮಾಂಡ್ ನಾಯಕರೇ ವಿಲನ್ ಆಗಬಹುದಾ.. ಹೀಗೊಂದು ಪ್ರಶ್ನೆ ಹುಟ್ಟುವುದು ರಾಜ್ಯ ಬಿಜೆಪಿ ಭಿನ್ನಮತಗಳನ್ನು ನೋಡಿದಾಗ.
ರಾಜ್ಯ ಬಿಜೆಪಿಯಲ್ಲೀಗ ಭಿನ್ನಮತ ಭುಗಿಲೆದ್ದು ಹೊಗೆಯಾಗಿ, ಬೆಂಕಿಯಾಗಿ ಧಗಧಗಿಸ್ತಾ ಇದೆ. ಇಷ್ಟು ದಿನ ರಾಜ್ಯ ಬಿಜೆಪಿ ಗಲಾಟೆ ನೋಡಿ ಮಜಾ ತೆಗೆದುಕೊಳ್ತಿದ್ದ ಬಿಜೆಪಿ ಹೈಕಮಾಂಡ್, ಈಗ ಧಡಬಡಿಸಿ ಎದ್ದು ಕೂತಿದೆ. ವಿಚಿತ್ರ ಏನೆಂದರೆ ಬಿಜೆಪಿ, ತನ್ನನ್ನು ತಾನು ಶಿಸ್ತುಬದ್ಧ ಪಕ್ಷ ಅಂತಾ ಹೇಳ್ಕೊಳ್ಳುತ್ತೆ. ಆದರೆ ಗೊಂದಲ, ಗಲಾಟೆಯೂ ಶಿಸ್ತುಬದ್ಧವಾಗಿಯೇ ನಡೆಯುತ್ತೆ. ತಮಾಷೆ ಅಂದ್ಕೊಂಡ್ರೂ ಇದು ಸತ್ಯ. ಬೀದಿ ಜಗಳ, ಬೈಗುಳ, ಟೀಕೆಗಳು ನಡೆಯುತ್ತವೆ. ಎಲ್ಲವೂ ಶಿಸ್ತುಬದ್ಧ. ಈ ಬಿಜೆಪಿಗೆ ವಿಲನ್ ಯಾರು ಅಂತಾ ನೋಡಿದ್ರೆ, ಹೈಕಮಾಂಡ್ ಅಂತಾ ಹೇಳ್ಬೇಕು.
ಯಡಿಯೂರಪ್ಪ ಕಣ್ಣೀರಿಂದ ಶುರುವಾದ ಕಥೆ..!
ಇತಿಹಾಸ ನೋಡಿದರೆ ರಾಜ್ಯದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದು ಯಡಿಯೂರಪ್ಪ ನೇತೃತ್ವದಲ್ಲಿ. 20-20 ಸರ್ಕಾರದ ದಿಢೀರ್ ಪತನದ ನಂತರ, 110 ಸ್ಥಾನ ಗೆದ್ದು, ಉಳಿದ ಬೆಂಬಲವನ್ನ ಹೊರಗಿನಿಂದ ತೆಗೆದುಕೊಂಡು ಬಿಜೆಪಿ ಅಧಿಕಾರಕ್ಕೆ ಬಂದರಲ್ಲ, ಆಗಲೂ ಬಿಜೆಪಿಯಲ್ಲಿ ಭಿನ್ನಮತವೇ ಇತ್ತು. ಆಗಲೂ ಕೂಡಾ ಈಗಿನಂತೆಯೇ ಭಿನ್ನಮತ ಭುಗಿಲೆದ್ದು, ಬೆಂಕಿಯಾಗುವವರೆಗೆ ತಾಳ್ಮೆಯಿಂದ ಕಾದು ನೋಡಿದ್ದ ಹೈಕಮಾಂಡ್, ಕೊನೆಗೆ ರೆಡ್ಡಿ ಬಣದ ಜೊತೆ ನಿಂತಾಗ ಯಡಿಯೂರಪ್ಪ ಕಣ್ಣೀರು ಹಾಕಿದ್ದರು. ಆಗ ರೆಡ್ಡಿ ಮತ್ತು ಯಡಿಯೂರಪ್ಪ ಇಬ್ಬರನ್ನೂ ಕೂರಿಸಿ, ಮಾತನಾಡಿಸಿ ಬುದ್ದಿ ಹೇಳಿ ಸರಿ ಪಡಿಸಿದ್ದರೆ, ಆನಂತರ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಹೈಕಮಾಂಡ್ ತಲೆತಗ್ಗಿಸುವುದು ತಪ್ಪುತ್ತಿತ್ತು. ಆದರೆ ಹೈಕಮಾಂಡ್ ಆಗ ಹಾಗೆ ಮಾಡಲಿಲ್ಲ. ಆಗ ಹೈಕಮಾಂಡಿನಲ್ಲಿದ್ದ ಅಡ್ವಾಣಿ, ಸುಷ್ಮಾ ಸ್ವರಾಜ್, ಅನಂತ್ ಕುಮಾರ್.. ಯಡಿಯೂರಪ್ಪರನ್ನು ಹಣಿಯಲು ನಿಂತಿದ್ದರು.
ಯಡಿಯೂರಪ್ಪ ಜೈಲಿಗೆ ಹೋದರು..!
ಅದಾದ ಮೇಲೆ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಲೋಕಾಯುಕ್ತ ಕೇಸಿನಲ್ಲಿ ಜೈಲಿಗೆ ಹೋದಾಗ ಯಡಿಯೂರಪ್ಪರನ್ನ ಬಿಜೆಪಿ ಹೈಕಮಾಂಡ್ ಕೈಬಿಟ್ಟಿತ್ತು. ಜೈಲಿಗೆ ಹೋಗಿ ಬಂದ ಡಿಕೆ ಶಿವಕುಮಾರ್ ಅವರ ಬೆನ್ನಿಗೆ ಇಡೀ ಕಾಂಗ್ರೆಸ್ ನಿಂತಂತೆ, ಆಗ ಬಿಜೆಪಿ ನಿಲ್ಲಲಿಲ್ಲ. ಕೊನೆಗೆ ಯಡಿಯೂರಪ್ಪ ಬಿಜೆಪಿ ಬಿಟ್ಟು, ಕೆಜೆಪಿ ಕಟ್ಟಿದರು. 2013ರ ಫಲಿತಾಂಶ ಬಂದಾಗ ಬಿಜೆಪಿಗೆ ಪ್ರತಿಪಕ್ಷ ಸ್ಥಾನವೂ ಸಿಕ್ಕಿರಲಿಲ್ಲ. ಆಗಲೂ ಹೈಕಮಾಂಡಿನಲ್ಲಿ ಸ್ಟ್ರಾಂಗ್ ಆಗಿದ್ದವರು ಅಡ್ವಾಣಿ, ಅನಂತ ಕುಮಾರ್ ಇತ್ಯಾದಿ.. ಇತ್ಯಾದಿ..
ಕೊನೆಗೆ ಮೋದಿ ಪ್ರಧಾನಿಯಾಗುವ ಹೊತ್ತಿಗೆ ಯಡಿಯೂರಪ್ಪ, ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನ ಮಾಡಿದರು. ಬಿಜೆಪಿಗೆ ಅಧಿಕೃತ ಪ್ರತಿಪಕ್ಷ ಸ್ಥಾನ ಸಿಕ್ಕಿದ್ದೇ ಆಗ. 2013ರಲ್ಲಿ ಬಿಜೆಪಿ, ಜೆಡಿಎಸ್ ಒಂದೇ ನಂಬರ್ ಪಡೆದಿದ್ದವು. ಆದರೆ ವೋಟ್ ಶೇರಿನಲ್ಲಿ ಜೆಡಿಎಸ್ ಮುಂದಿದ್ದ ಕಾರಣಕ್ಕೆ ಜೆಡಿಎಸ್ ಪ್ರತಿಪಕ್ಷವಾಗಿತ್ತು. ಅದಾದ ನಂತರ ಹೈಕಮಾಂಡ್ ಮತ್ತೊಮ್ಮೆ ರಾಜ್ಯ ಬಿಜೆಪಿಗೆ ವಿಲನ್ ಆಗಿದ್ದು 2018ರಲ್ಲಿ.
2018ರಲ್ಲೂ ಬಿಎಸ್‌ವೈ ವಿರೋಧಿ ಬಣ ಸಕ್ರಿಯ..!
2018ರಲ್ಲಿ ಅಸೆಂಬ್ಲಿ ಎಲೆಕ್ಷನ್ ನಡೆದಾಗ, ಮತ್ತೆ ಭಿನ್ನಮತ ಹೊಗೆಯಾಡಿತು. ಆಗಲೂ ಹೈಕಮಾಂಡ್ ಭಿನ್ನರಿಗೇ ಮಣೆ ಹಾಕಿತು. ಪಕ್ಷದ ನಾಯಕರು ಈಗಲೂ ಕೂಡಾ 2018ರ ಚುನಾವಣೆ ನೆನಪಿಸಿಕೊಳ್ತಾರೆ. ಆಗ ವಿಜಯೇಂದ್ರಗೆ ಟಿಕೆಟ್ ಕೊಟ್ಟು, ಮೈಸೂರು ಭಾಗದಲ್ಲಿ ಸ್ಪರ್ಧೆ ಮಾಡಿದ್ದರೆ ಬಿಜೆಪಿ 113 ರ ಮ್ಯಾಜಿಕ್ ನಂಬರ್ ಕಷ್ಟವಾಗುತ್ತಿರಲಿಲ್ಲ ಎನ್ನುತ್ತಾರೆ. ಆದರೆ ಅದೇ ಮಾತನ್ನು ಹೈಕಮಾಂಡ್ ಎದುರು ಹೇಳೋದಿಲ್ಲ. ಕೊನೆಗೆ 104ಕ್ಕೆ ಸುಸ್ತು ಹೊಡೆದ ಬಿಜೆಪಿ, ನಂತರ ಆಪರೇಷನ್ ಕಮಲ ಮಾಡಿದ್ದು ಇನ್ನೊಂದು ಕಥೆ.
ಯಡಿಯೂರಪ್ಪ ರಾಜೀನಾಮೆ ಅಗತ್ಯವಿತ್ತಾ..?
ಇನ್ನು ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಮಾಡಿದಾಗಲೂ ಅಷ್ಟೇ, ಹೈಕಮಾಂಡ್ ತಾನು ಹೇಳಿದ್ದೇ ನಡೆಯಬೇಕು ಎಂಬ ಹಠಕ್ಕೆ ಬಿತ್ತು. ಅದಾದ ನಂತರ 2023ರ ಎಲೆಕ್ಷನ್ನಿನಲ್ಲಿ ತಾನೇ ಟಿಕೆಟ್ ಫೈನಲ್ ಮಾಡಿ ಚುನಾವಣೆಗೆ ಹೋಯ್ತು. ಫಲಿತಾಂಶ ಬಂದಾಗ 60ರ ಆಸುಪಾಸಿನಲ್ಲಿ ಸುಸ್ತು ಹೊಡೆದಿತ್ತು.
ರಿಪೀಟ್ ರಿಪೀಟ್ ಭಿನ್ನಮತ..!
ಇನ್ನು ಈಗಲೂ ಅಷ್ಟೇ, ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇಮಕವಾದ ನಂತರ ಯತ್ನಾಳ್, ರಮೇಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದಾಗ ಸಮಾಧಾನ ಮಾಡಲಿಲ್ಲ. ಸೈಲೆಂಟ್ ಆಗಿ ನೋಡುತ್ತಾ ಕೂರಿತಷ್ಟೇ. ಅದಾದ ಮೇಲೆ ಯತ್ನಾಳ್ ಬಣಕ್ಕೆ ಇನ್ನಷ್ಟು ನಾಯಕರು ಜೊತೆಗೂಡಿ, ಅದು ಬೀದಿ ಜಗಳವಾದಾಗಲೂ ಹೈಕಮಾಂಡ್ ಸುಮ್ಮನೆ ನೋಡುತ್ತಾ, ಎಲ್ಲ ಸರಿ ಹೋಗುತ್ತೆ ಎಂಬಂತೆ ನೋಡುತ್ತಾ ಕೂತಿತು.
ರೆಡ್ಡಿ-ರಾಮುಲು ಬೀದಿ ಜಗಳ..!
ಈಗ ಯತ್ನಾಳ್ ಬಣವನ್ನು ತಣ್ಣಗೆ ಮಾಡುವ ಪ್ರಯತ್ನಕ್ಕೆ ಹೈಕಮಾಂಡ್ ಕೈಹಾಕುವ ಮೊದಲೇ ರೆಡ್ಡಿ-ಶ್ರೀರಾಮುಲು ಜಗಳ ಬೀದಿಗೆ ಬಂದಿದೆ. ಶ್ರೀರಾಮುಲುಗೆ ಕಾಂಗ್ರೆಸ್ ಹಾಯ್ ಹಾಯ್ ಅಂತಿದ್ಯಂತೆ. ಅಲ್ಲಿಗೆ ಇನ್ನೊಂದು ಸುತ್ತಿನ ಸಮರ ಶುರುವಾಗಲಿದೆ ಎನ್ನುವುದು ಸ್ಪಷ್ಟ. ಇಲ್ಲಿಯೂ ಅಷ್ಟೇ, ರೆಡ್ಡಿಯವರನ್ನು ಕರೆತರುವಾಗ, ಶ್ರೀರಾಮುಲು-ರೆಡ್ಡಿ ನಡುವಿನ ವೈಮನಸ್ಸನ್ನು ಸರಿ ಪಡಿಸುವ ಕೆಲಸ ಆಗಲಿಲ್ಲ. ಈಗ ಹೊಗೆ, ಬೆಂಕಿಯಾಗ್ತಾ ಇದೆ.
ಈ ಎಲ್ಲ ಪ್ರಕರಣದಲ್ಲೂ ಕೂಡಾ ಶಿಸ್ತು ಬದ್ಧ ಪಕ್ಷವಾಗಿದ್ದ ಬಿಜೆಪಿ, ಗೊಂದಲ, ಗಲಾಟೆ, ಜಗಳ, ಟೀಕೆ, ಬೈಗುಗಳವನ್ನೂ ಶಿಸ್ತುಬದ್ಧವಾಗಿಯೇ ಮಾಡಿದೆ ಅನ್ನೋದು ರಾಜಕೀಯ ತಜ್ಞರ ವಾದ. ಇದು ತಮಾಷೆ ಅನ್ನಿಸಿದ್ರೂ, ಸೀರಿಯಸ್ ಕೂಡಾ ಹೌದು.
ಯಡಿಯೂರಪ್ಪರನ್ನು ವೀಕ್ ಮಾಡುವುದಕ್ಕೆ ಹೋಗಿ, ದಕ್ಷಿಣ ಭಾರತದಲ್ಲಿ ಇರುವ ಒಂದು ರಾಜ್ಯವನ್ನೂ ಬಿಜೆಪಿ ಕಳೆದುಕೊಳ್ಳುತ್ತಾ ಅನ್ನೋ ಕುತೂಹಲವಂತೂ ಇದೆ. ಪರಿಸ್ಥಿತಿ ನೋಡಿದರೆ ಅದು ಸಾಧ್ಯವೂ ಹೌದು.