ವಿಜಯಪುರ, ಬಸನಗೌಡ ಪಾಟೀಲ್ ಯತ್ನಾಳ್ ಅವರ ತವರು ಜಿಲ್ಲೆ. ಯತ್ನಾಳ್ ಅವರೇನೋ ದಿನಕ್ಕೊಮ್ಮೆ..ಎರಡು ಬಾರಿ ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೆ, ಡ್ಯಾಷ್ ಡ್ಯಾಷ್ ಪದಗಳ ಮೂಲಕವೇ ಬಯ್ಯುತ್ತಿದ್ದರೆ, ವಿಜಯೇಂದ್ರ ಮಾತ್ರ ಆವಾಗೊಮ್ಮೆ ಈವಾಗೊಮ್ಮೆ ಮಾತನಾಡ್ತಾರೆ. ಇನ್ನು ವಿಜಯಪುರದಲ್ಲೇ ನಡೆದ ಜನಾಕ್ರೋಶ ಯಾತ್ರೆಯಲ್ಲಿಯೂ ಅಷ್ಟೇ, ವೇದಿಕೆಯಲ್ಲಿ ಅಪ್ಪಿ ತಪ್ಪಿಯೂ ಯತ್ನಾಳ್ ಹೆಸರು ಹೇಳಲಿಲ್ಲ. ಮಾಧ್ಯಮಗಳಿಗೆ ಉತ್ತರ ಕೊಡುವಾಗ ಮಾತ್ರ ಮಾತನಾಡಿದ ವಿಜಯೇಂದ್ರ ʻʻಯತ್ನಾಳ್ ಅವರ ಉಚ್ಚಾಟನೆಯಿಂದ ಪಕ್ಷಕ್ಕೆ ಲಾಭವಾಗಿದೆ ಎಂದು ಹೇಳಲ್ಲ. ಆದರೆ ಬಲಿಷ್ಠವಾಗಿದೆ. ಏಕೆಂದರೆ ಅದಾದ ನಂತರ ಕಾರ್ಯಕರ್ತರು ಮತ್ತು ನಾಯಕರಲ್ಲಿ ಒಗ್ಗಟ್ಟು ಕಾಣಿಸುತ್ತಿದೆ. ಸಣ್ಣ ಪುಟ್ಟ ಗೊಂದಲಗಳಿವೆ. ಇಲ್ಲ ಎಂದು ಹೇಳಲ್ಲ. ಆದರೆ ಅವುಗಳನ್ನು ಮರೆತು ಹೋರಾಡುತ್ತಿದ್ದೇವೆʼʼ ಎಂದು ಉತ್ತರ ಕೊಟ್ಟಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿಯನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರಬೇಕೆನ್ನುವುದು ಎಲ್ಲರ ಸಂಕಲ್ಪವಾಗಿದೆ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಆ ನಿಟ್ಟಿನೆಡೆ ಕಾರ್ಯೋನ್ಮುಖರಾಗಿದ್ದಾರೆ ಎಂದಿರುವ ವಿಜಯೇಂದ್ರ ಅವರ ಜೊತೆ ವಿಜಯಪುರ ಜಿಲ್ಲೆಯ ಪ್ರಭಾವಿ ಮುಖಂಡರಿದ್ದರು. ವಿಜು ಗೌಡ ಪಾಟೀಲ್, ಅಪ್ಪು ಪಟ್ಟಣ ಶೆಟ್ಟಿ ಸೇರಿದಂತೆ ಹಲವು ಬಿಜೆಪಿ ನಾಯಕರು ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕರೆತಂದಿದ್ದರು. ಈ ಮೂಲಕ ಯತ್ನಾಳ್ ಅವರನ್ನು ಪಕ್ಷದಿಂದ ಹೊರಹಾಕಿದ್ದರಿಂದ ಪಕ್ಷ ಹಾಗೂ ಸಂಘಟನೆಯ ಮೇಲೆ ಯಾವುದೇ ಪರಿಣಾಮ ಇಲ್ಲ ಎಂಬ ಸಂದೇಶವನ್ನೂ ರವಾನಿಸಿದ್ಧಾರೆ.
ಯತ್ನಾಳ್ ಬೆಂಬಲಿಗರು ಸೈಲೆಂಟ್ ಅಗಿರಲಿಲ್ಲ :
ವಿಜಯಪುರ ಜಿಲ್ಲಾ ಬಿಜೆಪಿಗೆ ಆರ್.ಎಸ್.ಪಾಟೀಲ ಕೂಚಬಾಳ ಸಾರಥಿಯಾಗಿದ್ದರು. ಅವರು ಯತ್ನಾಳ ಬೆಂಬಲಿಗ. ಈಗ ವಿಜಯೇಂದ್ರ ಬಣದ ಗುರುಲಿಂಗಪ್ಪ ಅಂಗಡಿ ಜಿಲ್ಲಾಧ್ಯಕ್ಷ. ಇವರು ವಿಜಯೇಂದ್ರ ಬೆಂಬಲಿಗ. . ಹೀಗಾಗಿ ಯತ್ನಾಳರ ವಿರುದ್ಧ ಸೇಡು ತೀರಿಸಿಕೊಳ್ಳಲು ವಿಜಯೇಂದ್ರ ಮತ್ತು ಅವರ ತಂಡ ಹವಣಿಸುತ್ತಿತ್ತು. ಆದರೆ ಯತ್ನಾಳ್ ಬೆಂಬಲಿಗರು ಬಿಜೆಪಿ ಜನಾಕ್ರೋಶ ಯಾತ್ರೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಪೋಸ್ಟ್ ಮಾಡಿ ವಿಜಯೇಂದ್ರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಈ ವಿಷಯವೇ ದೊಡ್ಡ ಮಟ್ಟದ ಗಲಾಟೆಗೆ ಕಾರಣ ಆಗಬಹುದು ಎಂದು ಮಂಜಾಗ್ರತೆ ವಹಿಸಿದ್ದ ಪೊಲೀಸರು ಯತ್ನಾಳ್ ಪರ ಬೆಂಬಲಿಗರನ್ನು ಗುರುತಿಸಿ, ಜನಾಕ್ರೋಶ ಯಾತ್ರೆ ಸ್ಥಳದಿಂದ ಆಚೆ ಹಾಕಿದ್ದಾರೆ. ಪೊಲೀಸರು ಬಿಜೆಪಿ ಬಾವುಟ ಹಾಕಿಕೊಂಡಿದ್ದವರನ್ನು ಬಿಜೆಪಿ ಕಾರ್ಯಕರ್ತರು ಎಂದು ಗುರುತಿಸಿದರೆ, ಕೇಸರಿ ಶಾಲು ಹಾಕಿದ್ದವರನ್ನು ನಿರ್ದಾಕ್ಷಿಣ್ಯವಾಗಿ ಹೊರಹಾಕಿದ್ಧಾರೆ. ಅಲ್ಲದೆ ಎಲ್ಲರೂ ಸ್ಥಳೀಯರೇ. ಯಾರು ಯತ್ನಾಳ್ ಪರ, ಯಾರು ಯತ್ನಾಳ್ ವಿರೋಧ ಎಂದು ಗುರುತಿಸುವುದು ಪೊಲೀಸರಿಗೆ ಕಷ್ಟವಾಗಿಲ್ಲ.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ತಂಡ ನಗರದ ಕೆಲವೆಡೆ ಸಭೆ ನಡೆಸಿ, ವಿಜಯಪುರದ ಜನಾಕ್ರೋಶ ಯಾತ್ರೆಯನ್ನು ಅತ್ಯಂತ ಯಶಸ್ವಿಗೊಳಿಸಬೇಕು. ಪಕ್ಷ ಒಬ್ಬ ವ್ಯಕ್ತಿ ಮೇಲೆ ಅವಲಂಬನೆ ಆಗಿಲ್ಲ ಎಂಬ ಸಂದೇಶವನ್ನು ಕೊಡಬೇಕೆಂದು ಕರೆ ನೀಡಿದ್ದರು. ಅದು ವರ್ಕೌಟ್ ಆಗಿದೆ.