ಬಿಲ್ಲ ಸುದೀಪ್.. ರಂಗ ಸುದೀಪ್.. ಬಾಷ ಸುದೀಪ್. ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ ಅವರ ‘ಬಿಲ್ಲ ರಂಗ ಬಾಷ’ ಶೂಟಿಂಗ್ ಶುರು ಆಗಿದೆ. ವಿಕ್ರಾಂತ್ ರೋಣ ನಂತರ ಅನೂಪ್ ಭಂಡಾರಿ ಮತ್ತು ಸುದೀಪ್ ಮತ್ತೆ ಒಂದಾಗಿದ್ದಾರೆ. ಹನುಮಾನ್ ನಿರ್ಮಾಪಕರಾದ ಪ್ರೈಮ್ ಶೋ ಎಂಟರ್‌ಟೇನ್‌ಮೆಂಟ್ ನಿರ್ಮಾಣದಲ್ಲಿ ಸಿನಿಮಾ ಬರುತ್ತಿದೆ. ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. BRB ಎಂಬುದು ಮೂರು ಪಾತ್ರಗಳ ಹೆಸರುಗಳ ಶೈಲಿಯಲ್ಲಿ ನಿರ್ಮಿತವಾಗಿದ್ದು ಬಿಲ್ಲ, ರಂಗ, ಬಾಷಾ ಎಂಬ ಅಕ್ಷರಗಳಿಂದ ಬಂದಿದೆ.
ಒಂದೊಂದು ಅಕ್ಷರದ ಮೇಲೂ ಒಂದೊಂದು ಚಿಹ್ನೆ ಇದೆ. ಒಂದರಲ್ಲಿ ಬ್ರಹ್ಮನ ಆಯುಧ ಬ್ರಹ್ಮಾಸ್ತ್ರ ಬಳಸಿದರೆ, ಮತ್ತೊಂದರಲ್ಲಿ, ವಿಷ್ಣುವಿನ ಆಯುಧ ಚಕ್ರ ಹಾಗೂ ಮಹೇಶ್ವರನ ಆಯುಧ ತ್ರಿಶೂಲವನ್ನ ಬಳಸಲಾಗಿದೆ. ವಾರ್ ಮತ್ತು ಮೈಥಾಲಜಿ ಮಿಕ್ಸ್ ಆಗಿರುವ ಕಥೆ ಇರಬಹುದೇ ಎಂಬ ಅನುಮಾನ ಮೂಡಿದೆ. ಇಲ್ಲದಿದ್ದರೆ ತ್ರಿಮೂರ್ತಿಗಳೇಕೆ ಬರುತ್ತಿದ್ದರು ಎನ್ನುವ ಪ್ರಶ್ನೆಯೂ ಇದೆ. ಚಿತ್ರದ ನಿರ್ಮಾಪಕರು ಹನುಮಾನ್ ಸಿನಿಮಾ ನಿರ್ಮಾಣ ಮಾಡಿದ್ದವರು ಎನ್ನುವುದೂ ಕೂಡಾ ಒಂದು ಕಾರಣ.
ಇನ್ನು ಪೋಸ್ಟರ್‌ನ ಬಲ ಭಾಗದಲ್ಲಿ ಕಿಚ್ಚ ಸುದೀಪ್ ಅವರ ಕ್ಲೋಸ್ ಅಪ್ ಇಮೇಜ್ ಇದೆ. ಹಿಮ ಬೀಳುವ ಪ್ರದೇಶದಲ್ಲಿ ನಿಂತಿರುವ ಸುದೀಪ್, ಮೈಮೇಲೆ ನೀರಿನ ಹನಿಗಳಿವೆ. ಹಣೆ ಮೇಲೆ ಕನ್ನಡಕ ಇದೆ. ಆ ಕನ್ನಡಕದ ಪ್ರತಿಬಿಂಬದಲ್ಲಿ ಕಟ್ಟಡವೊಂದಕ್ಕೆ ಬೆಂಕಿ ಬಿದ್ದಿದೆ. ಸುದೀಪ್ ಹಿಂಭಾಗದಲ್ಲೊಂದು ಕಟ್ಟಡ ಇದೆ. ಪೋಸ್ಟರ್ ಮೂಲಕ ಏನನ್ನು ತಂಡ ಹೇಳಲು ಹೊರಟಿದೆ ಎಂಬ ಕುತೂಹಲ ಮೂಡಿದೆ. ಹಿಮಪಾತಗಳ ನಡುವೆ ಹಿಮಪರ್ವತಗಳು ಹಾಗೂ ಆಧುನಿಕವಾದ ಫ್ಯಾಂಟಸಿ-ಸ್ಟೈಲ್ ಕೋಟೆ ನೋಡಿದರೆ,. ಜೊತೆಗೆ ಸಿನಿಮಾ ಶೂಟಿಂಗ್ ಅಂತೂ ಶುರು ಆಗಿದೆ. ಚಿತ್ರದ ಪ್ರೊಡ್ಯೂಸರ್, ಡೈರೆಕ್ಟರ್ ಮತ್ತು ಹೀರೋ ಬಿಟ್ಟರೆ ಮಿಕ್ಕ ವಿಷಯಗಳನ್ನು ಚಿತ್ರತಂಡ ಹಂತಹಂತವಾಗಿ ಬಿಡುಗಡೆ ಮಾಡುವುದಾಗಿ ಹೇಳಿದೆ.
ಕಥೆ ಏನು ಎಂದರೆ.. ಇದು ಕ್ರಿ.ಶ. 2209ರ ಕಾಲಘಟ್ಟದ ಕಥಾನಕವಂತೆ. ಕಿಚ್ಚ ಸುದೀಪ್ ಅವರು ಕಥೆ ಕೇಳಿ ಸಖತ್ ಇಂಪ್ರೆಸ್ ಆಗಿದ್ದರಂತೆ. 200 ವರ್ಷಗಳ ಭವಿಷ್ಯದಲ್ಲಿ ನಡೆಯೋ ಫ್ಯಾಂಟಸಿಯೂ ಚಿತ್ರದಲ್ಲಿ ಇದೆಯಂತೆ. ಮತ್ತೊಂದು ಮೂಲಗಳ ಪ್ರಕಾರ ಬಿಲ್ಲ ರಂಗ ಬಾಷ ಸಿನಿಮಾ ಒಂದೇ ಆದ್ರೂ ಮೂರು ಕ್ಯಾರೆಕ್ಟರ್‌ಗಳ ಕುರಿತ ಚಿತ್ರ ಎನ್ನಲಾಗ್ತಿದೆ. ಇಲ್ಲಿ ಬಿಲ್ಲ, ರಂಗ ಹಾಗೂ ಬಾಷ ಅನ್ನೋ ಮೂರೂ ಪಾತ್ರಗಳನ್ನ ಬಾದ್‌ಷಾ ಕಿಚ್ಚನೇ ನಿರ್ವಹಿಸ್ತಾರೆ ಅನ್ನೋದು ಕೂಡ ಇಂಟರೆಸ್ಟಿಂಗ್. ಅಣ್ಣಾವ್ರು ತ್ರಿಮೂರ್ತಿಗಳು ಸಿನಿಮಾದಲ್ಲಿ ನಟಿಸಿದ ಹಾಗೆ ಮೂರು ರೋಲ್‌ಗಳಲ್ಲಿ ನಟಿಸ್ತಾರಾ ಅಥ್ವಾ ಮೂರು ಶೇಡ್‌ಗಳುಳ್ಳ ಪಾತ್ರಕ್ಕೆ ಜೀವ ತುಂಬ್ತಾರಾ ಅನ್ನೋದನ್ನ ನಿರೀಕ್ಷಿಸಬೇಕಿದೆ. ವಿಕ್ರಾಂತ್ ರೋಣ ಚಿತ್ರದಲ್ಲಿ ಕ್ಯಾಮೆರಾ ಕೈಚಳಕ ತೋರಿದ್ದ ವಿಲಿಯಂ ಡೇವಿಡ್ ಇಲ್ಲಿಯೋ ಸಿನಿಮಾಟೋಗ್ರಾಫರ್ ಆಗಿ ಕಿಚ್ಚನಿಗೆ ಫ್ರೇಮ್ ಇಟ್ಟಿದ್ದಾರೆ.
ಸಿನಿಮಾಗಾಗಿ ಸೆಟ್ ನಿರ್ಮಾಣಕ್ಕೇ ದೊಡ್ಡ ಮಟ್ಟದಲ್ಲಿ ಖರ್ಚು ಮಾಡುತ್ತಿದ್ದು, ಸಿನಿಮಾ ಬಜೆಟ್ ಎಷ್ಟು ಎಂಬುದು ಕೂಡಾ ನಿಗೂಢವಾಗಿಯೇ ಇದೆ.