ಒಂದು ಪುಟ್ಟ ವಿರಾಮದ ನಂತರ ಮತ್ತೊಮ್ಮೆ ಡಿಕೆ ಮತ್ತು ಹೆಚ್‌ಡಿಕೆ ನಡುವಿನ ವಾರ್ ಶುರುವಾಗಿದೆ. ಡಿಕೆ ಮತ್ತು ಹೆಚ್‌ಡಿಕೆ ಮಾತಿನ ಮಲ್ಲಯುದ್ಧ ಹೊಸದೇನಲ್ಲ. ಒಬ್ಬರು ಸೆಂಟ್ರಲ್ ಮಿನಿಸ್ಟರ್, ಇನ್ನೊಬ್ಬರು ರಾಜ್ಯದ ಉಪಮುಖ್ಯಮಂತ್ರಿ. ದಶಕಗಳಿಂದ ನಡೆಯುತ್ತಿರುವ ಪರಸ್ಪರ ದ್ವೇಷದ ಕದನದಲ್ಲಿ ಒಂದೆರಡು ವರ್ಷ ಸ್ನೇಹದ ಕಿರುನಗೆ ಅರಳಿತ್ತಷ್ಟೇ. ಆ ನಗು, ಸಂಭ್ರಮದಲ್ಲಿ ಇಬ್ಬರಲ್ಲೂ ಪ್ರಾಮಾಣಿಕತೆ ಇರಲಿಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಸಂಪೂರ್ಣವಾಗಿ ನಂಬಿರಲೇ ಇಲ್ಲ. ಸಂಬಂಧ ಹಳಸುತ್ತಿದ್ದಂತೆಯೇ ಶುರುವಾದ ಮಾತುಗಳಲ್ಲಿ ಇಬ್ಬರೂ ಎಕ್ಸ್ ಪೋಸ್ ಆಗಿದ್ದರು. ಇದೀಗ ಮತ್ತೊಮ್ಮೆ.. ಪುಟ್ಟ ವಿರಾಮದ ನಂತರ ಇಬ್ಬರ ನಡುವೆ ಮಾತಿನ ಮಲ್ಲಯುದ್ಧ ಶುರುವಾಗಿದೆ.
ಕುಮಾರಸ್ವಾಮಿ, ಕೇಂದ್ರ ಸಚಿವ
ನಾನು ಕನಕಪುರದಲ್ಲಷ್ಟೇ ಬಂಡೆ ಒಡೆದಿದ್ದೇನೆ. ಬಳ್ಳಾರಿಗೂ, ನನಗೂ ಏನು ಸಂಬಂಧ ಎಂದು ಉಪಮುಖ್ಯಮಂತ್ರಿ ಹೇಳಿಕೊಂಡಿದ್ದಾರೆ. ಆದರೆ, ಅವರು ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ್ದಕ್ಕೆ ನನ್ನ ಬಳಿ ಟನ್‌ಗಟ್ಟಲೆ ದಾಖಲೆಗಳಿವೆ. ನಾನೇನು ಗಾಳಿಯಲ್ಲಿ ಗುಂಡು ಹೊಡೆಯುತ್ತಿಲ್ಲ, ಇರುವ ಸತ್ಯ ಹೇಳುತ್ತಿದ್ದೇನೆ.
ಡಿಕೆ ಶಿವಕುಮಾರ್, ಉಪಮುಖ್ಯಮಂತ್ರಿ
ನನ್ನ ವ್ಯವಹಾರದ ದಾಖಲೆಗಳಿದ್ದರೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬಿಡುಗಡೆ ಮಾಡಲಿ. ಈ ಕುಮಾರಸ್ವಾಮಿ ಅಂಥವರಿಗೆಲ್ಲ ಹೆದರುವ ಮಗ ನಾನಲ್ಲ. ಟನ್ ಅಷ್ಟೇ ಅಲ್ಲ, ಭೂಲೋಕ ಎಷ್ಟಿದೆಯೋ ಅಷ್ಟೂ ದಾಖಲೆಗಳನ್ನು ಬಿಡುಗಡೆ ಮಾಡಲಿ. ಅವರು ಏನು ಮಾಡುತ್ತಿದ್ದಾರೆ ಎಂಬುದು ನನಗೂ ತಿಳಿದಿದೆ. ನನ್ನ ಆಸ್ತಿ, ನನ್ನ ಮಕ್ಕಳ ಆಸ್ತಿ, ನನ್ನ ಕುಟುಂಬದವರ ಆಸ್ತಿ ದಾಖಲೆಗಳನ್ನೆಲ್ಲ ತಂದಿಟ್ಟುಕೊಂಡಿದ್ದಾರೆ. ಅವೆಲ್ಲವನ್ನೂ ಬಿಡುಗಡೆ ಮಾಡಲಿ. ನಾನು ಏನಾದರೂ ತಪ್ಪು ಮಾಡಿದ್ದರೆ ಯಾವ ಶಿಕ್ಷೆಗೆ ಬೇಕಾದರೂ ಒಳಗಾಗುತ್ತೇನೆ. ಅವರು ಎಲ್ಲ ದಾಖಲೆಗಳನ್ನೂ ಬಿಡುಗಡೆ ಮಾಡಲಿ.
ಯಡಿಯೂರಪ್ಪಗೂ ಹೆಚ್‌ಡಿಕೆ ಟಾಂಗ್..!
ಸಾಯಿ ವೆಂಕಟೇಶ್ವರ ಮೈನಿಂಗ್ ವಿಚಾರದಲ್ಲಿ ಪ್ರಕರಣ ದಾಖಲಿಸಿ ನಮ್ಮ ಕುಟುಂಬದ್ದೇನಿದೆ ಎಂಬುದನ್ನು ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುಡುಕಿಸಿದ್ದರು. ಆದರೆ, ಏನೂ ಸಿಕ್ಕಿರಲಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ನನ್ನ ಮೇಲೆ ನಾಲ್ಕು ಪ್ರಕರಣ ಹಾಕಿಸಿದ್ದರು. ಸಾಯಿ ವೆಂಕಟೇಶ್ವರ, ಜಂತಕಲ್ ಮೈನಿಂಗ್, ಡಿನೋಟಿಫಿಕೇಶನ್ ಪ್ರಕರಣ ಹಾಕಿದ್ದರು. ಇದಾಗಿ 17 ವರ್ಷವಾಗಿದೆ. ಒಂದು ತನಿಖೆ ನಡೆಸುವುದಕ್ಕೂ ಆಗಿಲ್ಲ. ಆಗ ಸ್ಪೈಸ್ ಜೆಟ್ ವೇಗದಲ್ಲಿ ತನಿಖೆ ಮಾಡಿದ್ದರು ಎಂದಿದ್ದಾರೆ ಕುಮಾರಸ್ವಾಮಿ.
ಕುಮಾರಸ್ವಾಮಿ ಅವರು ಮತ್ತು ಅವರ ಪಕ್ಷ, ಬಿಜೆಪಿ ನಡೆಸಿದ ಬೆಲೆ ಏರಿಕೆ ವಿರೋಧಿ ಹೋರಾಟದಲ್ಲಿ ಅಂತರ ಕಾಯ್ದುಕೊಂಡಿತ್ತು. ಇದಾದ ನಂತರ ಎಂದಿನಂತೆ ಡಿಕೆ ವಿರುದ್ಧ ಗುಡುಗಿರುವ ಕುಮಾರಸ್ವಾಮಿ, ದಿಢೀರನೆ ಯಡಿಯೂರಪ್ಪನವರ ಹೆಸರು ಎತ್ತಿರುವುದು ಅಚ್ಚರಿ ಮೂಡಿಸಿದೆ. ಎರಡೂ ಪಕ್ಷಗಳ ನಡುವೆ ಕೋಲ್ಡ್ ವಾರ್ ಶುರುವಾಗಿದ್ದು, ಶೀಘ್ರದಲ್ಲೇ ಆಸ್ಫೋಟಗೊಳ್ಳುವ ಎಲ್ಲ ಲಕ್ಷಣಗಳೂ ಇವೆ. ಕುಮಾರಸ್ವಾಮಿ ಒಟ್ಟಿಗೇ ಒಂದೇ ಗುಂಡು ಹೊಡೆಯೋರಲ್ಲ. ಅದು ಹಲವು ಬಾರಿ ಸಾಬೀತಾಗಿದೆ.