ಡೇಟಾ/ಡಾಟಾ ಇಲ್ಲದೆ ಇದ್ದರೆ ಮೊಬೈಲ್ ಫೋನ್ ರೀಚಾರ್ಜ್ ಸಾಧ್ಯವೇ ಇಲ್ಲ. ಇತ್ತೀಚೆಗೆ ಎಲ್ಲರೂ ಸ್ಮಾರ್ಟ್ ಫೋನ್ ಬಳಸ್ತಿದ್ದಾರೆ ಎಂಬ ಕಾರಣಕ್ಕೆ ಇದು ಕಾಮನ್ ಎನ್ನಬಹುದಾದರೂ, ಬೇಸಿಕ್ ಸೆಟ್ ಮೊಬೈಲ್ ಹೊಂದಿರುವವರಿಗೆ ಇದು ನಯಾಪೈಸೆಯಷ್ಟೂ ಉಪಯೋಗ ಇಲ್ಲ. ಆದರೆ ಕೇವಲ ಕರೆಗಳಿಗೆ ಮಾತ್ರ ಚಾರ್ಜ್ ಮಾಡಿಸುವ ಅವಕಾಶವೇ ಈಗ ಇಲ್ಲ. ಆದರೆ ಇನ್ನು ಮುಂದೇ ಹಾಗಾಗಲ್ಲ. ಟೆಲಿಕಾಂ ನಿಯಂತ್ರಕ ಟ್ರಾಯ್, ಕರೆ ದರಗಳು ಹಾಗೂ ಕರೆ-ಡೇಟಾ ನಿಯಮಗಳನ್ನು ಬದಲಿಸಿದೆ.
ಡೇಟಾ ಬೇಡ ಕೇವಲ ಕರೆ/ಎಸ್ಸೆಮ್ಮಸ್ ಪ್ಯಾಕ್ ಸಾಕು ಎನ್ನುವವರಿಗೆ ಪ್ರತ್ಯೇಕ ಪ್ಲಾನ್ ಕೊಡುವಂತೆ ಆದೇಶ ಕೊಟ್ಟಿದೆ. ವಿಶೇಷ ರೀಚಾರ್ಜ್ ಕೂಪನ್‌ಗಳ ಮೇಲಿನ 90 ದಿನಗಳ ಮಿತಿಯನ್ನು ತೆಗೆದು ಹಾಕಲಾಗಿದ್ದು, ದನ್ನು 365 ದಿನಗಳವರೆಗೆ ವಿಸ್ತರಿಸಲು ಸೂಚನೆ ನೀಡಿದೆ.
ವೃದ್ಧರು ಹಾಗೂ ಮನೆಗಳಲ್ಲಿ ಬ್ರಾಡ್ ಬ್ಯಾಂಡ್ ಹೊಂದಿರುವವರಿಗೆ ಇಂಟರ್‌ನೆಟ್‌ಗೆ ರೀಚಾರ್ಜ್ ಮಾಡಿಸುವ ಅವಶ್ಯಕತೆ ಇರುವುದಿಲ್ಲ. ವೈಫೈ ಇದ್ದವರಿಗೂ ಮನೆಯಲ್ಲಿ ಡೇಟಾ ಚಾರ್ಜಿಂಗ್ ಬೇಕಾಗಿಲ್ಲ. ಬೇಸಿಕ್ ಸೆಟ್ ಇದ್ದವರಿಗೂ ಅಗತ್ಯ ಇರೋದಿಲ್ಲ. ಅಲ್ಲದೆ ಡೇಟಾ ಬೇಕಾ ಅಥವಾ ಬೇಡವಾ ಎಂದು ನಿರ್ಧರಿಸುವುದು ಗ್ರಾಹಕರೇ ಹೊರತು, ಕಂಪೆನಿಗಳಲ್ಲ. ನಿಮಗೆ ಅಗತ್ಯ ಇದೆಯೋ ಇಲ್ಲವೋ.. ಡೇಟಾ ಪ್ಯಾಕ್ ಖರೀದಿಸಲೇಬೇಕು ಎನ್ನುವ ಧೋರಣೆ ಸರಿಯಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಟ್ರಾಯ್ ಗ್ರಾಹಕರು ತಾವು ಬಳಸುವ ಸೇವೆಗಳಿಗಷ್ಟೇ ಹಣ ಪಾವತಿಸಬೇಕು ಎಂದು ಹೇಳಿದೆ.
ವೋಚರ್‌ಗಳಿಗೆ ಯಾವುದೇ ಬೆಲೆಯನ್ನು ನಿಗದಿಪಡಿಸಲು ಅನುಮತಿಸಿರುವ ಟ್ರಾಯ್, 10 ರು. ರೀಚಾರ್ಜ್ ಕೂಪನ್ ಕೂಡ ಒದಗಿಸಬೇಕು ಎಂದು ಸೂಚಿಸಿದೆ. ಇದರಿಂದ ಟೆಲಿಕಾಂ ಕಂಪೆನಿಗಳ ಹಗಲು ದರೋಡೆಗೆ ಬ್ರೇಕ್ ಬಿದ್ದಂತಾಗಿದೆ.
ಟ್ರಾಯ್ ಹೊಸ ನಿಯಮಗಳ ಪ್ರಕಾರ..
ಕೇವಲ ಕಾಲ್/ಎಸ್ ಎಂ ಎಸ್ ಬೇಕು. ಡೇಟಾ ಬೇಡ ಎಂದರೆ ಚಾರ್ಜ್ ಮಾಡಿಸಬೇಕು
10 ರೂ. ರೀಚಾರ್ಜ್ ಕೇಳಿದರೂ ಮಾಡಿಸಬೇಕು
ಗ್ರಾಹಕರು ಕೇಳಿದ್ದಷ್ಟೇ ಸೇವೆಗಳಿಗೆ ಹಣ ಪಾವತಿಸಬೇಕು
ಡೇಟಾ ರೀಚಾರ್ಜ್ ಕಡ್ಡಾಯ ಎಂದು ಹೇಳುವಂತಿಲ್ಲ
ಅಲ್ಲಿಗೆ ಜಿಯೋ, ಏರ್ ಟೆಲ್, ವೊಡಾಫೋನ್, ಬಿಎಸ್ ಎನ್ ಎಲ್ ಸೇರಿದಂತೆ ಎಲ್ಲ ಕಂಪೆನಿಗಳು ನಡೆಸುತ್ತಿದ್ದ ಹಗಲು ದರೋಡೆಗೆ ಬ್ರೇಕ್ ಬಿದ್ದಂತಾಗಿದೆ. ಗ್ರಾಹಕರು ತಮಗೆ ಏನು ಬೇಕೋ.. ಎಷ್ಟು ಬೇಕೋ.. ಅದಕ್ಕೆ ಮಾತ್ರ ಚಾರ್ಜ್ ಮಾಡುವ ಅವಕಾಶ ದೊರೆತಿದೆ.
ಇತ್ತೀಚೆಗಷ್ಟೇ ಗ್ರಾಹಕರಿಗೆ ಬೇಡವಾದ ಎಸ್ ಎಂ ಎಸ್/ಮಾರ್ಕೆಟಿಂಗ್ ಕರೆಗಳನ್ನು ಸ್ಥಗಿತಗೊಳಿಸುವಂತೆ ಟ್ರಾಯ್ ಸೂಚನೆ ನೀಡಿತ್ತು. ಕಂಪೆನಿಗಳ ಈ ಆಟದಿಂದಾಗಿ ಹಲವು ಗ್ರಾಹಕರು ವಂಚನೆಗೊಳಗಾಗಿದ್ದರು. ವಂಚಕರು ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು.
ಇದೀಗ ಟೆಲಿಕಾಂ ಕಂಪೆನಿಗಳ ವಂಚನೆಗೂ ಬ್ರೇಕ್ ಹಾಕಿದೆ. ಡೇಟಾ ಕೊಡುವ ಮುಂಚೆ ಇದ್ದ ರೀತಿಯಲ್ಲಿಯೇ ಎಲ್ಲವೂ ಸಲೀಸಾಗಿ ಸಿಗಲಿದೆ. ಆದೇಶ ಜಾರಿಗೆ ಬರಲು ಸ್ವಲ್ಪ ದಿನ ಕಾಯಬೇಕು. ಅಷ್ಟೇ.