ಬೆಳ್ತಂಗಡಿಯ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕೇಂದ್ರಿತವಾಗಿ ʼಊರಿಗೆ ದೊಡ್ಡವರೆ ಕೊಲೆ ಮಾಡಿದವರಾ?ʼ ಎಂಬ ಹೆಸರಿನಲ್ಲಿ ಯೂಟ್ಯೂಬರ್ ಎಂ ಡಿ ಸಮೀರ್ ಅಪ್‌ಲೋಡ್ ಮಾಡಿದ್ದ ವಿಡಿಯೋವನ್ನು ತೆಗೆದುಹಾಕಲು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಆದೇಶ ನೀಡಿದೆ. ನ್ಯಾಯಾಲಯದ ಆದೇಶದಂತೆ ವಿಡಿಯೋವನ್ನು ಯೂಟ್ಯೂಬ್ ಆ ವಿಡಿಯೋವನ್ನು ಬ್ಲಾಕ್ ಮಾಡಿದೆ. 27-02-2025ರಂದು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದ್ದ ಈ ವಿಡಿಯೋವನ್ನು ಸರಿಸುಮಾರು 2 ಕೋಟಿ ಮಂದಿ ವೀಕ್ಷಿಸಿದ್ದಾರೆ.
ಧರ್ಮಸ್ಥಳದ ಎಸ್ ಸುಕೇಶ್ ಮತ್ತು ಶೀನಪ್ಪ ಮೂಲ ದಾವೆಯ ಭಾಗವಾಗಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು 6ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಎಸ್ ನಟರಾಜ್ ಅವರು ಪುರಸ್ಕರಿಸಿದ್ದಾರೆ. ಪ್ರತಿವಾದಿಗಳಾಗಿದ್ದ ಎಂ ಡಿ ಸಮೀರ್, ಧೂತ ಸಮೀರ್ ಎಂ ಡಿ ಯೂಟ್ಯೂಬ್ ಚಾನಲ್, ಸಮೀರ್ ಎಂ ಡಿ ಯೂಟ್ಯೂಬ್ ಚಾನಲ್ ಮತ್ತು ಅವರ ಬೆಂಬಲಿಗರು ಶ್ರೀ ಕ್ಷೇತ್ರ ಧರ್ಮಸ್ಥಳದ ಮುಖ್ಯಸ್ಥ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಸದಸ್ಯರ ವಿರುದ್ದ ಯಾವುದೇ ತೆರನಾದ ಆಧಾರರಹಿತ ಸುದ್ದಿ, ಮಾಹಿತಿ, ವಿಚಾರ ಪ್ರಸಾರ, ಹಂಚಿಕೆ ಮಾಡದಂತೆ ನ್ಯಾಯಾಲಯವು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ. ಅಂದ ಹಾಗೆ ಇದು ತಾತ್ಕಾಲಿಕ ಆದೇಶ.
ಅಲ್ಲದೇ, ಶ್ರೀ ಕ್ಷೇತ್ರ ಧರ್ಮಸ್ಥಳದ ಮುಖ್ಯಸ್ಥ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ವಿರುದ್ದ ಯೂಟ್ಯೂಬ್ ಎಲ್‌ಎಲ್‌ಸಿ, ಇನ್‌ಸ್ಟಾಗ್ರಾಂ ಎಲ್‌ಎಲ್‌ಸಿ, ಫೇಸ್‌ಬುಕ್, ಗೂಗಲ್, ಮೆಟಾದಲ್ಲಿ ಮಾಡಿರುವ ಆಧಾರರಹಿತ ಆರೋಪಗಳನ್ನು ಉಲ್ಲೇಖಿತ ಯುಆರ್‌ಎಲ್‌ಗಳನ್ನು ತೆಗೆದು ಹಾಕಬೇಕು ಎಂದು ಕೂಡಾ ನ್ಯಾಯಾಲಯ ಆದೇಶ ನೀಡಿದೆ. ಅಂದರೆ ಇನ್ನು ಮುಂದೆ ಧರ್ಮಸ್ಥಳದ ವಿರುದ್ಧ, ಹೆಗ್ಗಡೆ ಕುಟುಂಬದವರ ವಿರುದ್ಧ ಅವಹೇಳನಕಾರಿ, ಆಧಾರ ರಹಿತ ಆರೋಪ ಮಾಡುವುದು ನ್ಯಾಯಾಂಗ ಉಲ್ಲಂಘನೆಯಾಗಲಿದೆ. ಕಂಟೆಂಪ್ಟ್ ಆಫ್ ಕೋರ್ಟ್ ಎದುರಿಸುವ ಶಕ್ತಿ ಇದ್ದವರು ಮಾತ್ರವೇ ಆರೋಪ ಮಾಡಬಹುದು.
“ಈಗ ಇಂಟರ್‌ನೆಟ್ ಮೂಲಕ ತಕ್ಷಣದ ಕಮ್ಯುನಿಕೇಷನ್ ಸಾಧ್ಯವಾಗಿದೆ. ನ್ಯಾಯಾಲಯಗಳು ಹಿಂದೆಂದಿಗಿಂತಲೂ ವಿಶೇಷವಾಗಿ ಮಧ್ಯಂತರ ಪ್ರತಿಬಂಧಕ ಆದೇಶ ಜಾರಿ ಮಾಡುವಾಗ ಹೆಚ್ಚು ವಾಸ್ತವ ಅಂಶಗಳನ್ನು ಪರಿಗಣಿಸಬೇಕು ಎಂದು ಳಿದೆ. ಎಲ್ಲಾ ಪ್ರತಿವಾದಿಗಳಿಗೂ ಸಮನ್ಸ್ ಜಾರಿ ಮಾಡಿ, ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿದೆ.
ಸುಕೇಶ್ ಮತ್ತು ಶೀನಪ್ಪ ಪರ ವಕೀಲರ ವಾದ : ಸಮೀರ್ ವಿಡಿಯೋ ವಿರುದ್ಧ ಅರ್ಜಿ ಸಲ್ಲಿಸಿದ್ದವರು
ಸಮೀರ್ ಮಾಡಿರುವ ವಿಡಿಯೋಗೆ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಇರುವವರು ಪ್ರಾಯೋಜಕತ್ವ ವಹಿಸಿದ್ದಾರೆ. ಸಮೀರ್ ಅವರು ಹೆಗ್ಗೆಡೆ ಕುಟುಂಬದ ವಿರೋಧಿಗಳಿಂದ ಪಿತೂರಿ ನಡೆಸಿದ್ದಾರೆ. ಸಮೀರ್ ವಿಡಿಯೋದಲ್ಲಿನ ವಿಷಯವು ಸುಳ್ಳಾಗಿದ್ದು, ಅದು ಮಾನಹಾನಿಯಾಗಿದೆ ಎಂದು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಸಮೀರ್ ಯೂಟ್ಯೂಬ್ ಚಾನಲ್‌ನಿಂದ ʼಊರಿಗೆ ದೊಡ್ಡವರೆ ಕೊಲೆ ಮಾಡಿದವರಾ?ʼ ತೆಗೆದು ಹಾಕಲಾಗಿದೆ.
ಜೊತೆಗೆ ಫೇಸ್ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿಗಳು, ಅವರ ಕುಟುಂಬ ಸದಸ್ಯರು ಹಾಗೂ ಧರ್ಮಸ್ಥಳಕ್ಕೆ ಸಂಬಂಧಿಸಿದ ಸಂಸ್ಥೆಗಳ ವಿರುದ್ಧ ಅಪಪ್ರಚಾರ ಮಾಡದಂತೆ ಸೂಚನೆ ಕೊಟ್ಟಿದೆ.