ದ್ವಾರಕೆ. ಶ್ರೀಕೃಷ್ಣ ಪರಮಾತ್ಮ ಕಟ್ಟಿದ ಊರು. ಮಥುರಾ ಹುಟ್ಟಿದ ಊರಾದರೆ, ದ್ವಾರಕೆ, ಶ್ರೀಕೃಷ್ಣನೇ ಕಟ್ಟಿದ್ದ ರಾಜಧಾನಿ. ಅದ್ಭುತ ನಗರ. ಆ ನಗರವನ್ನು ಸಮುದ್ರ ಆಪೋಶನ ತೆಗೆದುಕೊಂಡಿತು ಎನ್ನುತ್ತದೆ ಪುರಾಣ ಮತ್ತು ಮಹಾಭಾರತ. ಅದೆಲ್ಲವೂ ಬಕ್ವಾಸ್, ಬೋಗಸ್ ಎನ್ನುತ್ತಾರೆ ಸ್ವಯಂ ಘೋಷಿತ ವಿಚಾರವಂತರು. ತಜ್ಞರು. ಆದರೆ ಈಗ ಮತ್ತೊಮ್ಮೆ ASI ತಂಡ ಅಂದರೆ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಮದ್ರದ ಆಳಕ್ಕೆ ಇಳಿಯುತ್ತಿದೆ.
ಅಂಡರ್ ವಾಟರ್ ಟೀಂನಲ್ಲಿ ಮೂವರು ಮಹಿಳೆಯರು :
ASI ಇಲಾಖೆಯ ಆಳ ಸಮುದ್ರದ ಮುಳುಗು/ಈಜು ತಜ್ಞರ ತಂಡ ಮತ್ತೊಮ್ಮೆ, ಅರಬ್ಬೀ ಸಮುದ್ರದ ಗುಜರಾತ್ ಕರಾವಳಿಯ ಸಮುದ್ರಕ್ಕೆ ಧುಮುಕಿದೆ. ದ್ವಾರಕಾ ಕರಾವಳಿಯ ಮತ್ತು ಓಖಾ ಕರಾವಳಿ ದ್ವೀಪದಿಂದ ಶೋಧ ಕಾರ್ಯ ಆರಂಭಗೊಂಡಿದೆ. ಐದು ಸದಸ್ಯರ ತಂಡ ಈಗಾಗಲೇ ಕಳೆದ ಮಂಗಳವಾರ ಅಂದರೆ ಫೆಬ್ರವರಿ 18ರಂದು ಆಳ ಸಮುದ್ರಕ್ಕೆ ಇಳಿದಿದೆ. ಪ್ರೊ.ಅಲೋಕ್ ತ್ರಿಪಾಠಿ ಅವರ ನೇತೃತ್ವದಲ್ಲಿನ ಐವರ ತಂಡದಲ್ಲಿ ಮೂವರು ಅಪರಿಜಿತಾ ಶರ್ಮಾ, ಪೂನಂ ವಿಂದ್, ರಾಜಕುಮಾರಿ ಬರ್ಬೀನಾ ಇರುವುದು ಗಮನಿಸಬೇಕಾದ ವಿಚಾರ. ಮೂವರು ಮಹಿಳೆಯರು.
ದ್ವಾರಕಾ ಕಥೆ :
ದ್ವಾರಕಾ ನಗರವನ್ನು ಹಿಂದೂಗಳ ಏಳು ಪವಿತ್ರ ನಗರ ( ಅಯೋಧ್ಯಾ, ಮಥುರಾ, ಹರಿದ್ವಾರ, ವಾರಣಾಸಿ, ಕಾಂಚೀಪುರಂ, ಉಜ್ಜೈನಿ, ದ್ವಾರಕಾ) ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಮಥುರಾ ತೊರೆದ ನಂತರ ಶ್ರೀಕೃಷ್ಣ, ದ್ವಾರಕಾ ನಗರವನ್ನು ನಿರ್ಮಿಸಿದ ಎನ್ನುವ ನಂಬಿಕೆಯಿದೆ. ದ್ವಾರಕಾ ನಗರ ಸಮುದ್ರದಲ್ಲಿ ಮುಳುಗಿದ ನಂತರ, ಕಲಿಯುಗದ ಆರಂಭವಾಯಿತು ಎಂದೇ ಬಿಂಬಿತವಾಗಿದೆ.
ಈ ಹಿಂದೆಯೂ ನಡೆದಿತ್ತು ಸಮದ್ರದಾಳದಲ್ಲಿ ಸಂಶೋಧನೆ :
ಇಲಾಖೆಯ ಅಂಡರ್ ವಾಟರ್ ತಂಡ, 1980ರ ದಶಕದಿಂದಲೂ ಸಮುದ್ರದ ಪುರಾತತ್ವ ಸಂಶೋಧನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ದ್ವಾರಕಾ ಕರಾವಳಿಯ ಮತ್ತು ಓಖಾ ಕರಾವಳಿ ದ್ವೀಪದಿಂದ ಶೋಧ ಕಾರ್ಯ ಆರಂಭಗೊಂಡಿದೆ. ಈ ಭಾಗದ ಉತ್ಖನನ ಮತ್ತು ಅಧ್ಯಯನವನ್ನು 2005 ಮತ್ತು 2007ರ ನಡುವೆ ನಡೆಸಲಾಗಿತ್ತು. ಗುಜರಾತಿನ ಕಛ್ ಭಾಗದ ಪಂಚಕುಯಿ ಕರಾವಳಿ ಭಾಗದಲ್ಲಿ ದ್ವಾರಕಾ ನಗರ ಮುಳುಗಿದೆ ಎಂದು ನಂಬಲಾಗಿದೆ. ಹಾಗಾಗಿ, ದ್ವಾರಕೆಯ ಬೆನ್ನತ್ತಿ, ಪುರಾತತ್ವ ಇಲಾಖೆಯವರು ಉತ್ಖನನ ಮಾಡಿದ್ದರು.
ಶ್ರೀಕೃಷ್ಣನ ಕರ್ಮಭೂಮಿ ಎಂದೇ ಬಿಂಬಿತವಾಗಿರುವ ದ್ವಾರಕಾದ ಹಿಂದಿನ ಆಕರ್ಷಣೆ, ರಹಸ್ಯ ಏನು ಎನ್ನುವುದನ್ನು ತಿಳಿಯುವ ಉದ್ದೇಶದಿಂದ ಎಂ.ಆರ್.ರಾವ್ ಅವರ ತಂಡ ಸಮುದ್ರಾದಳದಲ್ಲಿ ಶೋಧ ನಡೆಸಿತ್ತು. ಪತ್ತೆಯಾದ ಗೋಡೆಗಳು ಕ್ರಿ.ಪೂ. 1528 ರಿಂದ 3000ದವರೆಗಿನ ಅವಧಿಯದ್ದು ಎಂದು ಅಧಿಕಾರಿಗಳು ಹೇಳಿದ್ದರು.
ಉದ್ದೇಶ ಏನು..?
4ಸಾವಿರ ವರ್ಷಗಳ ಹಳೆಯ ಯೋಜಿತ ನಗರವೆಂದೇ ಪುರಾಣದಲ್ಲಿ ಉಲ್ಲೇಖವಾಗಿರುವ ದ್ವಾರಕಾ ನಗರದ ಶ್ರೀಮಂತಿಕೆ ಮತ್ತು ನೀರೊಳಗೆ ಇತಿಹಾಸವಾಗಿರುವ ಭಾರತದ ಭವ್ಯ ಪುರಾಣದ ಪರಂಪರೆಯನ್ನು ಸಂರಕ್ಷಿಸುವುದಕ್ಕಾಗಿ. 1979- 80ರ ಇಸವಿಯಲ್ಲಿ ಒಂದು ತಂಡ ಈ ಪ್ರಯತ್ನವನ್ನು ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ, ಫೆಬ್ರವರಿ 25, 2024ರಂದು ಸ್ಕೂಬಾ ಡೈವ್ ಮೂಲಕ, ಸಮುದ್ರದಾಳಕ್ಕೆ ಹೋಗಿ, ದ್ವಾರಕಾ ನಗರದ ದರ್ಶನವನ್ನು ಮಾಡಿದ್ದರು. ” ಆಳ ಸಮುದ್ರದಲ್ಲಿ ದ್ವಾರಕೆಯನ್ನು ನೋಡಿ, ವಿಕಸಿತ ಭಾರತದ ನನ್ನ ಸಂಕಲ್ಪ ಇನ್ನಷ್ಟು ಸುದೃಢಗೊಂಡಿದೆ” ಎಂದು ಹೇಳಿದ್ದರು.
ಈ ಸಂಶೋಧನೆಯಲ್ಲಿ ದ್ವಾರಕೆ ನಗರದ ಸ್ಪಷ್ಟ ಸುಳಿವು ಲಭ್ಯವಾದರೆ ಶ್ರೀಕೃಷ್ಣ, ಮಹಾಭಾರತ ಪುರಾಣವಷ್ಟೇ ಅಲ್ಲ, ಇತಿಹಾಸ ಎನ್ನುವುದು ಸಾಬೀತಾಗಲಿದೆ. ಅದು ಸಾಬೀತಾದರೆ ಭಾರತದ ಭವ್ಯ ಇತಿಹಾಸದ ಚಿತ್ರಣವೇ ಬದಲಾಗಲಿದೆ.