ರಾಜ್ಯದಲ್ಲಿ ಯಾವ ಮಠಾಧೀಶರು ಕೂಡಾ ರಾಜಕೀಯದಿಂದ ಹೊರತಾಗಿಲ್ಲ. ಸ್ವಾಮೀಜಿಗಳು ಹಾಗೂ ಮಠಗಳು ಈಗ ಒಂದಲ್ಲ ಒಂದು ಪಕ್ಷದ ವೇದಿಕೆಯಾಗಿಯೇ ಇವೆ. ಇದು ಒಕ್ಕಲಿಗ ಮಹಾಸಂಸ್ಥಾನದ ಚಂದ್ರಶೇಖರನಾಥ ಸ್ವಾಮೀಜಿ ಅವರಿಗೂ ಹೊಸದಲ್ಲ. ಆದರೆ ಎಫ್‌ಐಆರ್ ಹೊಸದಷ್ಟೇ. ಸದ್ಯಕ್ಕೆ ಡಿಕೆ ಶಿವಕುಮಾರ್ ಅವರೇನೋ ಮಠದ ಸ್ವಾಮಿಗಳಿಗೇಕೆ ರಾಜಕೀಯ, ಅವರು ಮಾತನಾಡಿದ್ದು ತಪ್ಪು ಎನ್ನುತ್ತಿದ್ದಾರೆ. ಇಂತಹುದೇ ಎಡವಟ್ಟುಗಳು ಈ ಹಿಂದೆಯೂ ಆಗಿದ್ದವು. ಕೇವಲ 6 ತಿಂಗಳ ಹಿಂದೆ ಇದೇ ಒಕ್ಕಲಿಗ ಮಹಾಸಂಸ್ಥಾನದ ಚಂದ್ರಶೇಖರನಾಥ ಸ್ವಾಮೀಜಿ ತುಂಬಿದ ವೇದಿಕೆಯಲ್ಲಿಯೇ, ಸಿಎಂ ಸಿದ್ದರಾಮಯ್ಯ ಇದ್ದ ಸ್ಟೇಜಿನಲ್ಲೇ ʻʻ ಮುಖ್ಯಮಂತ್ರಿಗಳು ತಮ್ಮ ಸ್ಥಾನವನ್ನು ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟಕೊಡಲಿ, ಈಗಾಗಲೇ ಸಿಎಂ ಹುದ್ದೆಯನ್ನು ಅವರು ಅನುಭವಿಸಿದ್ದಾರೆ. ಡಿಕೆಶಿಯವರನ್ನು ಸಿಎಂ ಮಾಡಲು ಸಿದ್ದರಾಮಯ್ಯನವರಿಂದ ಮಾತ್ರ ಸಾಧ್ಯʼʼ ಎಂದು ನೇರವಾಗಿ ಹೇಳಿದ್ದರು. ಆಗ ಅವರ ವಿರುದ್ಧ ಟೀಕೆ ಮಾಡಿದ್ದವರು ಸಿದ್ದರಾಮಯ್ಯ ಬೆಂಬಲಿಗರಾದ ಕೆಎನ್ ರಾಜಣ್ಣ ಮೊದಲಾದವರ ಮಾತ್ರ.
ಇನ್ನು ಒಕ್ಕಲಿಗ ಸಮುದಾಯದ ಹಲವು ಸ್ವಾಮೀಜಿಗಗಳು ಕುಮಾರಸ್ವಾಮಿ ಪರ ಅಥವಾ ವಿರುದ್ಧ, ಡಿಕೆ ಶಿವಕುಮಾರ್ ಪರ ಅಥವಾ ವಿರುದ್ಧ ಆಗಾಗ್ಗೆ ಹೇಳಿಕೆ ನೀಡಿದ್ದಾರೆ. ಇನ್ನು ಪೆಜಾವರ ಶ್ರೀಗಳು ಬಿಜೆಪಿ ಪರ, ಕುರುಬ ಸಮುದಾಯದ ಸ್ವಾಮೀಜಿ ಸಿದ್ಧರಾಮಯ್ಯನವರ ಪರ, ಲಿಂಗಾಯತ ಮಠಾಧೀಶರು ಅರ್ಧ ಕಾಂಗ್ರೆಸ್ಸಿನಲ್ಲಿಯೂ, ಇನ್ನರ್ಧ ಬಿಜೆಪಿಯಲ್ಲಿಯೂ ಹಂಚಿ ಹೋಗಿದ್ದಾರೆ ಎಂಬ ಜನಾಭಿಪ್ರಾಯ ಮೂಡಿದೆ. ಆದರೆ ಕೆಲವರು ಮಾತ್ರವೇ ಬಹಿರಂಗವಾಗಿ ಹೇಳುತ್ತಾರೆ. ಆಗ ಎಲ್ಲವೂ ಓಕೆ ಆಗಿತ್ತು, ಈಗ ಅಲ್ಲವಾ ಎನ್ನುವುದು ಕೆಲವರ ಪ್ರಶ್ನೆ.
ಏಕೆಂದರೆ ಈಗ ವಿವಾದವಾಗಿರುವುದು ಚಂದ್ರಶೇಖರ ನಾಥ ಸ್ವಾಮೀಜಿ ಮುಸ್ಲಿಮರು ಮತ್ತು ವಕ್ಫ್ ಬೋರ್ಡ್ ವಿಚಾರದ ಬಗ್ಗೆ ಮಾತನಾಡಿರುವುದಕ್ಕೆ. ”ಮುಸ್ಲಿಂ ಸಮುದಾಯದ ಮತದಾನದ ಹಕ್ಕು ರದ್ದುಪಡಿಸಲು ಕಾನೂನು ಜಾರಿಗೆ ತರಬೇಕು” ಎಂಬ ಹೇಳಿಕೆಯು ವಿವಾದಕ್ಕೆ ಗುರಿಯಾಗಿದೆ. ಯಾವಾದ ಅದು ವಿವಾದವಾಯಿತೋ.. ತಕ್ಷಣ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
“ಮುಸ್ಲಿಮರು ಕೂಡ ಈ ದೇಶದ ಪ್ರಜೆಗಳು. ಎಲ್ಲರಂತೆ ಅವರಿಗೂ ಮತದಾನದ ಹಕ್ಕಿದೆ. ನನ್ನ ಹೇಳಿಕೆಯಿಂದ ನಮ್ಮ ಮುಸ್ಲಿಂ ಬಾಂಧವರಿಗೆ ನೋವಾಗಿದ್ದರೆ, ಅದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಮ್ಮ ಹೇಳಿಕೆಯು ಯಾವುದೇ ಸಮುದಾಯವನ್ನು ಗುರಿಯಾಗಿಸುವ ಉದ್ದೇಶ ಹೊಂದಿಲ್ಲ, ಆದರೆ ವಕ್ಫ್ ಆಸ್ತಿಗಳ ದುರುಪಯೋಗವನ್ನು ಪರಿಹರಿಸುವ ಗುರಿ ಹೊಂದಿದೆ. ಒಕ್ಕಲಿಗ ಸಮುದಾಯ ಎಲ್ಲರನ್ನೂ ಒಳಗೊಳ್ಳುವ ಮತ್ತು ಸಾಮರಸ್ಯದ ಸ್ವಭಾವಕ್ಕೆ ಒತ್ತು ನೀಡುತ್ತದೆ. ನಮ್ಮ ಮಠವು ಐತಿಹಾಸಿಕವಾಗಿ ಮುಸ್ಲಿಮರು ಮತ್ತು ಇತರ ಧರ್ಮಗಳೊಂದಿಗೆ ಸೌಹಾರ್ದ ಸಂಬಂಧ ಹೊಂದಿದೆ. ನಾವು ಯಾವಾಗಲೂ ಎಲ್ಲ ಧರ್ಮದ ಜನರನ್ನು ಸಮಾನವಾಗಿ ಕಾಣುತ್ತೇವೆ. ಮುಸ್ಲಿಮರು ಆಗಾಗ್ಗೆ ನಮ್ಮ ಮಠಕ್ಕೆ ಭೇಟಿ ನೀಡುತ್ತಾರೆ. ಮತ್ತು ಅವರ ಸಾಮಾಜಿಕ ಕಾರ್ಯಗಳಲ್ಲಿ ನಾವು ಸಕ್ರಿಯವಾಗಿ ಭಾಗವಹಿಸುತ್ತೇವೆ. ಯಾವುದೇ ಸಮುದಾಯದ ಬಗ್ಗೆ ಅಸಹಿಷ್ಣುತೆ ಇಲ್ಲʼʼ ಎಂದು ಸ್ಪಷ್ಟನೆ ಕೊಟ್ಟರು.
ಆದರೆ ಚಂದ್ರಶೇಖರ ನಾಥ ಸ್ವಾಮೀಜಿ ವಿರುದ್ಧ ಎಫ್‌ಐಆರ್ ಆಗಿ, ಕೇಸ್ ಕೂಡಾ ದಾಖಲಾಗಿದೆ. ಎಫ್‌ಐಆರ್ ಹಾಗೂ ಕೇಸ್ ದಾಖಲಿಸಿರುವುದರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ಸಿನ ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್, ಲಕ್ಷ್ಮೀ ಹೆಬ್ಬಾಳ್ಕರ್.. ಮೊದಲಾದವರು ಬಿಜೆಪಿ ನಾಯಕರನ್ನು ಟೀಕೆ ಮಾಡಿದ್ಧಾರೆ.