ಒಂದು ಕಾಲದಲ್ಲಿ ಅಣ್ಣ ಅಂದ್ರೆ ನಮ್ಮಣ್ಣ ಎಂದು ಕುಮಾರಸ್ವಾಮಿ ಅವರನ್ನು ಹೊಗಳುತ್ತಿದ್ದ ಚೆಲುವರಾಯಸ್ವಾಮಿ, ಈಗ ಕಾಂಗ್ರೆಸ್ ಸರ್ಕಾರದಲ್ಲಿ ಮಿನಿಸ್ಟರ್. ನಮ್ಮ ಚೆಲುವ ಎಂದೇ ಪ್ರೀತಿಯಿಂದ ಕರೆಯುತ್ತಿದ್ದ ಕುಮಾರಸ್ವಾಮಿ ಅವರೂ ಅಷ್ಟೇ.. ಮಧ್ಯರಾತ್ರಿ ಗೆಳೆಯರು. ಅವರಿಬ್ಬರ ನಡುವೆ ಸಮರ ಶುರುವಾಗಿ ವರ್ಷಗಳೇ ಆಗಿವೆ. ಈಗ ಮತ್ತೊಮ್ಮೆ ಶುರುವಾಗಿದೆ. ಇಷ್ಟಕ್ಕೂ ಇದೆಲ್ಲ ಶುರುವಾಗಿದ್ದು ತಾಪಂ ಹಾಗೂ ಜಿಪಂ ಚುನಾವಣೆಯ ಅಂಗವಾಗಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ.
ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿಗಳ ಪಡೆದು ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ ಕುಮಾರಸ್ವಾಮಿಗೆ ಮತ ನೀಡಿ ನಿತ್ಯ ನಮ್ಮ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವಂತೆ ಮಾಡಿದ್ದೀರಿ ಎಂದು ಮಾತನಾಡಿದ್ದರು ಚೆಲುವರಾಯ ಸ್ವಾಮಿ.
ಅದಕ್ಕೆ ಪ್ರತಿಕ್ರಿಯೆ ಕೊಟ್ಟ ಕುಮಾರಸ್ವಾಮಿ ದೇಶದಲ್ಲಿ ಯಾವ ಯಾವ ಪಕ್ಷಗಳಲಿದ್ದವರು ಎಲ್ಲೆಲ್ಲಿ ಹೋಗಿದ್ದಾರೆ, ಚಲುವರಾಯಸ್ವಾಮಿ ಎಲ್ಲಿ ಇದ್ರು, ಎಲ್ಲಿ ಹೋಗಿದ್ದಾರೆ?. ಮೊದಲು ದೇಶದಲ್ಲಿ ಜೋಕರ್ ಸಂಸ್ಕೃತಿ ಪ್ರಾರಂಭವಾಗಿದ್ದು ಕಾಂಗ್ರೆಸ್‌ನಿಂದ. ಹೀಗಾಗಿ ನಾನು ಚಲುವರಾಯಸ್ವಾಮಿಗೆ ಉತ್ತರ ಕೊಡಬೇಕಿಲ್ಲ ಎಂದು ಉತ್ತರ ಕೊಟ್ಟರು. ಡೈರೆಕ್ಟ್ ಆಗಿಯೇ ಚೆಲುವರಾಯ ಸ್ವಾಮಿ ಅವರನ್ನ ಜೋಕರ್ ಎಂದರು.
ಅತ್ತ ಚೆಲುವರಾಯಸ್ವಾಮಿ ರಮ್ಮಿ ಆಟದಲ್ಲಿ ಜೋಕರನ್ನು ಯಾವುದಕ್ಕಾದರೂ ಸೇರಿಸಬಹುದು. ಆಡಳಿತಕ್ಕಾಗಿ ಯಾರ ಜೊತೆ ಬೇಕಾದರೂ ಹೋಗುವ ಅವರು ಜೋಕರ್ರಾ? ನಾನು ಜೋಕರ್ರಾ? ಆ ಪದಕ್ಕೆ ಅವರೇ ಹೆಚ್ಚು ಸೂಕ್ತ ಎಂದು ತಿರುಗೇಟು ನೀಡಿದರು.
ಇತ್ತ ಕುಮಾರಸ್ವಾಮಿ ಚೆಲುವರಾಯಸ್ವಾಮಿಯನ್ನು ಮಂತ್ರಿ ಮಾಡಿದ್ದೇ ನಾನು. ಅರ್ಧರಾತ್ರಿವರೆಗೆ ಒಪ್ಪಿಸಿ ಹಠ ಹಿಡಿದು ಮಂತ್ರಿ ಮಾಡಿದ್ದೆ. ನಾನು ಚೆಲುವರಾಯ ಸ್ವಾಮಿ ಮಂತ್ರಿ ಮಾಡಲು ಶ್ರಮ ಹಾಕಿದ್ದೇನೆ. ನನ್ನನ್ನು ಮಂತ್ರಿ ಮಾಡಿ ಎಂದು ಮೂರು ಗಂಟೆವರೆಗೆ ನಿದ್ದೆ ಮಾಡಲು ಬಿಟ್ಟಿಲ್ಲ. ಚಲುವರಾಯಸ್ವಾಮಿಯನ್ನು ಮಂತ್ರಿ ಮಾಡಲು 50 ಜನ ಶಾಸಕರನ್ನು ಸೇರಿಸಿದ್ದೇನೆ. ನಾನು ಪಟ್ಟಿರುವ ಶ್ರಮವನ್ನು ಅವರು ಮರೆಯೋದು ಬೇಡ ಎಂದರೆ, ಚೆಲುವರಾಯಸ್ವಾಮಿ ಅವರು ನನ್ನ ಮಂತ್ರಿ ಮಾಡಿದ್ದೇನೆ ಅನ್ನೋದಾದರೆ ನಾನು ಅವರನ್ನ ಸಿಎಂ ಮಾಡಿದ್ದೀನಿ ಅನ್ನೋದು ತಪ್ಪಾ?. ಕುಮಾರಸ್ವಾಮಿಗೆ ಸಿದ್ದರಾಮಯ್ಯ, ಡಿಕೆಶಿ, ಚಲುವರಾಯಸ್ವಾಮಿ ಬೈಯ್ಯುವ ಚಪಲ. ಅವರ ಬಗ್ಗೆ ಮಾತನಾಡಿ ನಾಲಿಗೆ ಹೊಲಸು ಮಾಡಿಕೊಳ್ಳಲು ಇಷ್ಟವಿಲ್ಲ ಎಂದು ಹೇಳಿದರು.
ಕುಮಾರಸ್ವಾಮಿಯಿಂದ ರಾಜಕಾರಣ ಕಲಿಯುವ ಅವಶ್ಯಕತೆ ನನಗಿಲ್ಲ. ಕುಮಾರಸ್ವಾಮಿ ನಾಯಕರನ್ನಾಗಿ ಮಾಡಲು ನಾವು ಸಾಥ್ ಕೊಟ್ವಾ? ಇಲ್ವಾ? ಅಂಥಾ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡ್ತಾರಾ? ಎಂದು ಚೆಲುವರಾಯ ಸ್ವಾಮಿ ಹೇಳಿದರೆ, ಚಲುವರಾಯಸ್ವಾಮಿಗೆ ಇರುವ ಚಟ ನನಗೆ ಇಲ್ಲ. ಮಂಡ್ಯದಲ್ಲಿ ಚಲುವರಾಯಸ್ವಾಮಿ ಚಟಗಳ ಬಗ್ಗೆ ಕೇಳಿದ್ರೆ ಹೇಳ್ತಾರೆ. ಚಟಗಳ ಬಗ್ಗೆ ಚರ್ಚೆ ಮಾಡೋದು ಬೇಡ, ಅದು ಕೀಳುಮಟ್ಟದ ಅಭಿರುಚಿ. ಚಲುವರಾಯಸ್ವಾಮಿ ಎಷ್ಟು ಮನೆ ಹಾಳು ಮಾಡಿದ್ದಾರೆ ಗೊತ್ತು. ನಾನು ದುಡ್ಡು ಮಾಡಬೇಕೆಂದು ಆಸೆಪಟ್ಟಿಲ್ಲ. ನಾನು ಜನರ ಮಧ್ಯ 24 ಗಂಟೆ ಕೆಲಸ ಮಾಡಿದ್ದೇನೆ. ಜನತಾ ದರ್ಶನ, ಗ್ರಾಮ ವಾಸ್ತವ್ಯದಲ್ಲಿ ಬೆಳಗ್ಗಿನ ಜಾವದವರೆಗೂ ಕೆಲಸ ಮಾಡಿದ್ದೇನೆ. ಇದು ನನ್ನ ವೈಯಕ್ತಿಕ ಸಮಸ್ಯೆ. ಎಲ್ಲವನ್ನೂ ದೇವರು ನೋಡುತ್ತಾನೆ ಎಂದು ಹೇಳಿದರು.