ನಾನು ಈಗ ರಾಜಕೀಯ ಕೊನೆಗಾಲದಲ್ಲಿದ್ದೇನೆ. ಜನರ ಪ್ರೀತಿ ಅಭಿಮಾನ ಗಳಿಸದೆ ಇದ್ದರೆ ರಾಜಕೀಯದಲ್ಲಿ ಉಳಿಗಾಲ ಸಾಧ್ಯವಿಲ್ಲ. ಇದೊಂದು ಮಾತು ಸಿದ್ದರಾಮಯ್ಯ ಬಣ ಹಾಗೂ ಬೆಂಬಲಿಗರಲ್ಲಿ ನಿರುತ್ಸಾಹ ಮೂಡಿಸಿದ್ದರೆ, ಡಿಕೆಶಿ ಬಣದವರಲ್ಲಿ ಸಂಚಲನ ಸೃಷ್ಟಿಸಿದೆ. ಏಕೆಂದರೆ ಸಿದ್ದರಾಮಯ್ಯ ಪ್ರತಿ ಮಾತನ್ನೂ ಅಳೆದು ತೂಗಿ ಆಡುತ್ತಾರೆ ಎನ್ನುವುದು ಸಿದ್ದು ಬಣದ ಬೆಂಬಲಿಗರ ನಂಬಿಕೆ.
ಇತ್ತೀಚೆಗೆ ಡಿಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಅಧಿಕಾರ ಹಂಚಿಕೆ ಒಪ್ಪಂದ ಮತ್ತೆ ಚರ್ಚೆಗೆ ಬಂದಿದೆ. ಇದು ರಾಜ್ಯ ಕಾಂಗ್ರೆಸ್ ನಾಯಕರು ಮುಜುಗರಕ್ಕೆ ಕಾರಣವಾಗಿ ಮತ್ತೆ ಭುಗಿಲೇಳುವ ಲಕ್ಷಣ ಕಾಣುತ್ತಿದೆ. ಇದರ ನಡುವೆಯೇ ಎಚ್ಚೆತ್ತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಯಾರು ಕೂಡ ಒಪ್ಪಂದದ ಬಗ್ಗೆ ಮಾತನಾಡಬಾರದು ಎಂದು ಖಡನ್ ಸಂದೇಶ ರವಾನಿಸಿದ್ದಾರೆ.
ಆದರೆ ವಾಸ್ತವವೆಂದರೆ ಇದರ ಬಗ್ಗೆ ಹೇಳಿಕೆ ಶುರು ಮಾಡಿದ್ದೇ ಡಿಕೆ ಶಿವಕುಮಾರ್. ದೆಹಲಿಗೆ ಹೋಗಿದ್ದಾಗ ನ್ಯಾಷನಲ್ ಟಿವಿ ಚಾನೆಲ್ಲುಗಳಲ್ಲಿ ಅಧಿಕಾರ ಹಂಚಿಕೆ ಕುರಿತು ಕಾಂಗ್ರೆಸ್‌ನಲ್ಲಿ ಮಾತುಕತೆ ಆಗಿದೆ. ನಾನು ಸೋನಿಯಾ ಅವರಿಗೆ ನಿಷ್ಠನಾಗಿದ್ದೇನೆ. ನನಗೆ ಕೊಟ್ಟ ಮಾತಿನಂತೆಯೇ ಅವರ ಕುಟುಂಬ ನಡೆಯುತ್ತದೆ ಎನ್ನುವ ಮಾತುಗಳನ್ನಾಡಿದ್ದರು. ಅದಾದ ನಂತರ ಖುದ್ದು ಸಿದ್ದರಾಮಯ್ಯ ಅಂತದ್ದೇನೂ ಚರ್ಚೆಯೇ ಆಗಿಲ್ಲ ಎಂದರೆ, ಗೃಹ ಸಚಿವರ ಪರಮೇಶ್ವರ್ ನೀವ್ ನೀವೇ ಒಪ್ಪಂದ ಮಾಡ್ಕೊಳ್ತೀರಿ ಅನ್ನೋದಾದ್ರೆ ನಾವೆಲ್ಲ ಯಾಕ್ ಇರಬೇಕು ಅನ್ನೋ ಹೇಳಿಕೆ ಕೊಟ್ಟಿದ್ದರು. ಕೊನೆಗೆ ಹಾಸನ ಸಮಾವೇಶದಲ್ಲಿ “ಈ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ಬಂಡೆಯಂತೆ ನಿಲ್ಲುವುದಾಗಿ ಮೈಸೂರಿನಲ್ಲಿ ಹೇಳಿದ್ದೇನೆ. ಈಗಲೂ ಇದ್ದೇನೆ, ನಾಳೆಯೂ ಇರುತ್ತೇನೆ. ಸಾಯುವವರೆಗೂ ಇರುತ್ತೇನೆ. ಇದು ಈ ಕನಕಪುರದ ಬಂಡೆಯ ಇತಿಹಾಸ. ನಾನು ಎಲ್ಲಿ ಕೆಲಸ ಮಾಡುತ್ತೇನೋ ಅಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡುವುದು ನನ್ನ ಕರ್ತವ್ಯ” ಎಂದು ಹೇಳಿಕೆ ಕೊಟ್ಟಿದ್ದರು.
ಇದೀಗ ನೋಡಿದರೆ ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ತಾನೀಗ ರಾಜಕೀಯ ಕೊನೆಗಾಲದಲ್ಲಿದ್ದೇನೆ ಎಂದು ಹೇಳಿದ್ದಾರೆ. ಮಾತನಾಡಿರುವುದು ʻಶಾಪದ ಜಿಲ್ಲೆʼ ಎಂದೇ ಖ್ಯಾತಿಯಾಗಿದ್ದ ಚಾಮರಾಜನಗರದಲ್ಲಿ. ಅಲ್ಲಿ ಸತ್ತೇಗಾಲ ಸರ್ಕಾರಿ ಶಾಲಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಾನು ಏನಿಲ್ಲ ಅಂದ್ರು 20 ಬಾರಿ ಚಾಮರಾಜನಗರಕ್ಕೆ ಬಂದಿದ್ದೇನೆ. ನಾನು ಚಾಮರಾಜನಗರಕ್ಕೆ ಬಂದಾಗಲೆಲ್ಲ ಅಧಿಕಾರ ಕಳೆದುಕೊಂಡಿಲ್ಲ. ಬದಲಿಗೆ ಸಿಎಂ ಖುರ್ಚಿ ಗಟ್ಟಿಯಾಗಿದೆ. ನಾನು ಈಗ ರಾಜಕೀಯ ಕೊನೆಗಾಲದಲ್ಲಿದ್ದೇನೆ. ಜನರ ಪ್ರೀತಿ ಅಭಿಮಾನ ಗಳಿಸದೆ ಇದ್ರೆ ರಾಜಕೀಯದಲ್ಲಿ ಉಳಿಗಾಲ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಈ ರೀತಿ ವೇದಾಂತಿಯಂತೆ ಮಾತನಾಡುವುದು ಹೊಸದಲ್ಲ. ಆದರೆ ಮಾತನಾಡಿರುವ ಟೈಂ ಬಹಳ ಮುಖ್ಯ. ಹೀಗಾಗಿಯೇ ಈಗ ಕೊನೆಗಾಲದ ಸ್ಟೇಟ್ ಮೆಂಟ್ ಚರ್ಚೆ ಜೋರಾಗಿದೆ. ಇದು ಎಲ್ಲಿಂದ ಎಲ್ಲಿಗೆ ಮುಟ್ಟುತ್ತದೆಯೋ ಭಗವಂತನೇ ಬಲ್ಲ.