ಕಾಂಗ್ರೆಸ್ ಕಾರ್ಯಕರ್ತರನ್ನು ಗ್ಯಾರಂಟಿ ಅನುಷ್ಠಾನ ಸಮಿತಿ ಹೆಸರಿನಲ್ಲಿ ಸರ್ಕಾರದ ಒಳಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಗ್ಯಾರಂಟಿ ಅನುಷ್ಠಾನಗಳ ಸಮಿತಿ ರಾಜ್ಯಾಧ್ಯಕ್ಷರಿಗೆ ಸಂಪುಟ ಸ್ಥಾನಮಾನ ನೀಡಲಾಗಿದೆ. ಅಂದರೆ ಒಬ್ಬ ಮಂತ್ರಿಗೆ ಕೊಡುವ ಎಲ್ಲ ಗೌರವ, ಸವಲತ್ತನ್ನೂ ಅವರಿಗೆ ನೀಡಲಾಗುತ್ತದೆ. ಇದು ಇಷ್ಟಕ್ಕೇ ನಿಲ್ಲುತ್ತಿಲ್ಲ. ಸರ್ಕಾರಿ ಕಾರು, ಕಚೇರಿ ಹಾಗೂ ಆಪ್ತ ಕಾರ್ಯದರ್ಶಿಗಳ ನೇಮಕದ ಜೊತೆ, ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸಂಬಳ ಸವಲತ್ತು ನೀಡಲಾಗುತ್ತಿದೆ.
ಏನೇನೆಲ್ಲ ಸವಲತ್ತು..?
ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ, ಮಾಸಿಕ ವೇತನ, ಸಭಾ ಭತ್ಯೆ (ಮೀಟಿಂಗ್ ಅಲೊಯೆನ್ಸ್) ನೀಡಲಾಗುತ್ತದೆ. ಜಿಲ್ಲಾ ಮಟ್ಟದ ಅಧ್ಯಕ್ಷರಿಗೆ 40,000 ರೂ ವೇತನ ಕೊಡ್ತಾರೆ. 5 ಜನ ಉಪಾಧ್ಯಕ್ಷರಿಗೆ 10000 ರೂ ವೇತನ ನಿಗದಿಯಾಗಿದೆ. 15 ಜನ ಸದಸ್ಯರಿಗೆ ತಿಂಗಳಿಗೆ ಎರಡು ಸಭೆಗಳ ಸಭಾ ಭತ್ಯೆ 2,200 ರೂ ನೀಡಲಾಗುತ್ತದೆ. ಇದು ಜಿಲ್ಲಾ ಮಟ್ಟದಲ್ಲಾದರೆ.. ತಾಲೂಕು ಮಟ್ಟದಲ್ಲಿಯೂ ಪ್ರತ್ಯೇಕ ಸಭೆ, ವೇತನ, ಸವಲತ್ತುಗಳಿವೆ.
ತಾಲ್ಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ, ಮಾಸಿಕ ವೇತನ, ಸಭಾಭತ್ಯೆ ಪ್ರತ್ಯೇಕ. ತಾಲ್ಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಗೆ 25,000 ರೂ ವೇತನವಿದ್ದರೆ, 14 ಜನ ಸದಸ್ಯರಿಗೆ ತಿಂಗಳಿಗೆ ಎರಡು ಸಭೆಯ ಸಭಾಭತ್ಯೆ 2,000 ರೂ ನೀಡಲಾಗುತ್ತದೆ.
ಅಷ್ಟೇ ಅಲ್ಲ, ಬಿಬಿಎಂಪಿ ವ್ಯಾಪ್ತಿಯಲ್ಲಿನ ಸಂಬಳ, ಭತ್ಯೆಯೇ ಬೇರೆ. ಬಿಬಿಎಂಪಿ ಗ್ಯಾರಂಟಿಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಿಗೆ 40,000 ರೂ ವೇತನ ಹಾಗೂ 8 ಜನ ಸದಸ್ಯರಿಗೆ ತಿಂಗಳಿಗೆರಡು ಸಭಾಭತ್ಯೆ 2,400 ರೂ. ನೀಡಲಾಗುತ್ತದೆ.
ಯಾವ ನಿಯಮ.. ಯಾವ ಕಾನೂನು..?
ಪ್ರಶ್ನೆ ಇರುವುದೇ ಇಲ್ಲಿ. ಸರ್ಕಾರದಿಂದ ಸಂಬಳ, ಭತ್ಯೆ ಪಡೆಯುವುದಕ್ಕೆ ಕೆಲವು ನಿಯಮಗಳಿರುತ್ತವೆ. ವೇತನ ಕೊಡುವಾಗ ಅದಕ್ಕೆ ಕೆಲವು ಮಾನದಂಡಗಳನ್ನು ಮೊದಲೇ ರೂಪಿಸಬೇಕು. ಅರ್ಜಿ ಆಹ್ವಾನಿಸಬೇಕು. ಸ್ವೀಕಾರ ಮಾಡಬೇಕು. ಇದೆಲ್ಲವೂ ಪಾರದರ್ಶಕವಾಗಿಯೇ ಆಗಬೇಕು. ಸೆಲೆಕ್ಷನ್ ಕಮಿಟಿ ರಚನೆಯಾಗಿರಬೇಕು. ಅಲ್ಲಿ ಸಂದರ್ಶನವೋ.. ಮತ್ತೊಂದೋ ನಡೆಯಬೇಕು. ಸರ್ಕಾರದ ಯಾವುದೋ ಒಬ್ಬ ವ್ಯಕ್ತಿಗೆ ಇಷ್ಟವಾಯಿತು, ಇವರಿಗೆ ಇನ್ನು ಮುಂದೆ ಪ್ರತೀ ತಿಂಗಳು ಸಂಬಳ ಕೊಡಿ ಎಂದರೆ ಕೊಡುವುದಕ್ಕೆ ಬರುವುದಿಲ್ಲ. ಅದಕ್ಕೆ ಅದರದ್ದೇ ನಿಯಮಗಳಿವೆ. ಈ ಯಾವ ನಿಯಮಗಳನ್ನೂ ಸರ್ಕಾರ ಪಾಲನೆ ಮಾಡುತ್ತಿಲ್ಲ. ಮಾಡಿಲ್ಲ.
ಏಕೆಂದರೆ ಅನುಷ್ಠಾನ ಸಮಿತಿಯವರಿಗೆ ಹಣ ಕೊಡುವುದು ಸರ್ಕಾರದಿಂದ, ಅದು ರಾಜ್ಯದ ಜನರ ಹಣವೇ ಹೊರತು, ಕಾಂಗ್ರೆಸ್ಸಿನ ಖಜಾನೆಯಲ್ಲ. ಹೀಗಿದ್ದರೂ ಸರ್ಕಾರದ ಪರವಾಗಿ ಮಾತನಾಡುತ್ತಿರುವ ಡಿಕೆ ಶಿವಕುಮಾರ್ ಈ ಸರ್ಕಾರವನ್ನು ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರಕ್ಕೆ ತಂದಿದ್ದಾರೆ. ಅವರಿಗೆ ಸರ್ಕಾರದಲ್ಲಿ ಭಾಗಿಯಾಗುವ ಹಕ್ಕಿದೆ. ಅವರ ಹಕ್ಕನ್ನು ನಾವು ನೀಡಿದ್ದೇವೆ ಅಷ್ಟೇ ಎಂದು ಹೇಳಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ, ಸದಸ್ಯರಿಗೆ ನೀಡುತ್ತಿರುವ ಗೌರವ ಧನ, ಭತ್ಯೆಯನ್ನು ಸಮರ್ಥಿಸಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಅವರ ವರ್ತನೆ ಹದ್ದು ಮೀರುತ್ತಿದೆ. ಪ್ರಶ್ನೆ ಮಾಡುವ ಎಲ್ಲವನ್ನೂ ಅಹಂಕಾರದಿಂದಲೇ ನಿಭಾಯಿಸುತ್ತಿರುವ ಡಿಕೆ ವಿರುದ್ಧ ಸ್ವಪಕ್ಷೀಯರಿಂದಲೇ ಆಕ್ರೋಶ ವ್ಯಕ್ತವಾಗಿದೆ.