ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಒಂದು ರೀತಿಯಲ್ಲಿ ಸಮರವನ್ನೇ ಸಾರಿರುವ ಬಸನಗೌಡ ಪಾಟೀಲ ಯತ್ನಾಳ್, ಈಗ ಬಸವಣ್ಣನವರ ವಿಷಯದಲ್ಲೂ ಭಾನಗಡಿ ಮಾಡಿಕೊಂಡಿದ್ದಾರೆ. ಯಡಿಯೂರಪ್ಪ, ವಿಜಯೇಂದ್ರ ಅವರ ಕುರಿತು ಮಾತನಾಡುತ್ತಾ ಬಸನಗೌಡ ಪಾಟೀಲ ಯತ್ನಾಳ್, ಬೀದರಿನಲ್ಲಿ “ಬಸವಣ್ಣನವರಂತೆ ಹೊಳ್ಯಾಗ ಜಿಗೀರಿ” ಎಂದು ಭಾಷಣ ಮಾಡಿದ್ದರು. ಅದೀಗ ವಿವಾದವಾಗಿದೆ. ಈ ವಿವಾದಾತ್ಮಕ ಹೇಳಿಕೆ ವಿಷಾದವೂ ಇಲ್ಲ. ಕ್ಷಮೆಯನ್ನೂ ಕೇಳಲ್ಲ. ನಾನು ಅಂಜೋಮಗ ಅಲ್ಲ. ನಾನೇ ಬಸವಣ್ಣ ಅದೀನಿ ಎಂದಿದ್ದಾರೆ ಯತ್ನಾಳ್.
ಸತ್ಯ ಏನೂಂತ ಬಿಜಾಪುರ ಬಾಗಲಕೋಟೆ ಜನಸಾಮಾನ್ಯರಿಗೆ ಗೊತ್ತು. ನಮ್ಮ ಹಿರಿಯರು ಸಾವಿರಾರು ವರ್ಷಗಳಿಂದ ಬಸವಣ್ಣನವರ ಅಂತ್ಯ ಹೇಗಾಯ್ತು ಅಂತ ಹೇಳ್ಕೊಂತಾ ಬಂದಾರೆ. ಇತಿಹಾಸಾನೆ ಹಂಗೈತಿ. ಕಮ್ಯುನಿಸ್ಟರು, ಕಾಮರೇಡುಗಳು ಏನು ಬೇಕಾದರೂ ಪುಸ್ತಕದಲ್ಲಿ ಬರ್ಕೊತಾರೆ, …ಬುದ್ದಿಜೀವಿಗಳು…ಸಾಹಿತಿಗಳು ಎಲ್ಲಾ ಪೇಯ್ಡ್ ಗಿರಾಕಿಗಳು. ತಮ್ಮ ವಿರುದ್ಧದ ಹೇಳಿಕೆಗಳಿಂದ ಹೆದರೋದೂ ಇಲ್ಲ. ಕ್ಷಮೆಯನ್ನೂ ಕೇಳಲ್ಲ. ವಾಟ್ಸ್ ಆಪ್ ನಲ್ಲಿ ನಡೆಯೋ ಮಂಗ್ಯಾಟಕ್ಕೆ ತಾವು ಹೆದರುವ ಮಗ ಅಲ್ಲ. ನಾನೇ ಬಸವಣ್ಣ ಅದೀನಿ ಎಂದು ಹೇಳಿಕೆ ನೀಡಿದ್ದಾರೆ ಯತ್ನಾಳ್.
ಯತ್ನಾಳ್ ವಿವಾದಾತ್ಮಕ ಹೇಳಿಕೆ ಏನಿತ್ತು..?
ನವಂಬರ್ 25ರಂದು ನಡೆದಿದ್ದ ವಕ್ಫ್ ವಿರುದ್ಧದ ಪಾದಯಾತ್ರೆ ವೇಳೆ ಮಾತನಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ವಕ್ಫ್ ಬೋರ್ಡ್ ವಿರುದ್ಧ ಎಲ್ಲರೂ ಕೂಡಿ ಹೋರಾಟ ಮಾಡಬೇಕಿದೆ. ನಾವು ಹೋರಾಟಕ್ಕೆ ಇಳಿದರೆ ಅವರು ಕೂಡ ಹೋರಾಟ ಮಾಡುತ್ತಾರೆ. ವಿಜಯೇಂದ್ರ ಬಣದವರು ಹೋರಾಟ ಮಾಡುತ್ತಾರೆ, ಬೆಂಕಿ ಹಚ್ಚುತ್ತಾರೆ. ಅವರು ನಮ್ಮ ನಡುವೆಯೇ ಜಗಳ ಹಚ್ಚುತ್ತಾರೆ, ನಾವು ಹೆದರಬಾರದು. ಹೆದರಿದರೆ ಬಸವಣ್ಣನವರ ಹಾಗೆ ನದಿಗೆ ಹಾರಿ ಸಾಯಬೇಕಾಗುತ್ತದೆ ಎಂದು ಯತ್ನಾಳ್ ಹೇಳಿದ್ದರು.
ವಿವಾದವಾಗಿರುವುದೇ ಇದು. ಯತ್ನಾಳ್ ಅವರ ಹೇಳಿಕೆ ಪ್ರಕಾರ ಬಸವಣ್ಣನವರು ಆತ್ಮಹತ್ಯೆ ಮಾಡಿಕೊಂಡರು ಎಂಬಂತಾಗುತ್ತದೆ. ಆದರೆ ಲಿಂಗಾದಿ ಶರಣರು ಹೇಳುವ ಪ್ರಕಾರ ಬಸವಣ್ಣನವರು ದೇಹತ್ಯಾಗ ಮಾಡಿದರು ಎನ್ನಲಾಗುತ್ತದೆ. ಇತಿಹಾಸದಲ್ಲಿ ಎರಡೂ ವಾದಗಳು ಇರುವುದು ಸ್ಪಷ್ಟ. ಆದರೆ ಇತಿಹಾಸಕಾರರು ದೇಹತ್ಯಾಗ ಮಾಡಿದರು ಎನ್ನುವುದನ್ನೇ ಪ್ರತಿಪಾದಿಸುತ್ತಾ ಬಂದಿದ್ದಾರೆ.
ಯತ್ನಾಳ್ ಅವರ ಹೇಳಿಕೆಗೆ ಭಾರಿ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗಿದೆ.
ಪ್ರಿಯಾಂಕ್ ಖರ್ಗೆ, ಸಚಿವ : ಬಸವಣ್ಣನವರು ಹೊಳೆ ಹಾರಿಲ್ಲ, ಈ ಸಮಾಜಕ್ಕೆ ಜ್ಞಾನದ ಹೊಳೆ ಹರಿಸಿದ್ದಾರೆ, ಯತ್ನಾಳ್ ಅವರೇ, ನಿಮ್ಮ ಪ್ರಕಾರ ಬಸವಣ್ಣನವರು ಹೊಳೆ ಹಾರಿದ್ದಾರೆ ಎನ್ನುವುದಾದರೆ ಅವರನ್ನು ಹೊಳೆಗೆ ಹಾರುವಂತೆ ಮಾಡಿದವರು ಯಾರು? ಕಲ್ಯಾಣದ ಶರಣರ ಹತ್ಯೆ ನಡೆಸಿದವರು ಯಾರು? ಶರಣರು ಮರಣವೇ ಮಹಾನವಮಿ ಎಂದಿದ್ದೇಕೆ? ವಚನ ಭಂಡಾರಕ್ಕೆ ಬೆಂಕಿ ಇಟ್ಟವರು ಯಾರು? ಅನುಭವ ಮಂಟಪಕ್ಕೆ ದಾಳಿ ಮಾಡಿದವರು ಯಾರು? ಮಡಿವಾಳ ಮಾಚಿದೇವರು ಕತ್ತಿ ಹಿಡಿದಿದ್ದೇಕೆ? ಯಾರಿಂದ ರಕ್ಷಣೆ ಪಡೆಯಲು? ಬಿಜೆಪಿಯವರಿಗೆ ಈ ವಿಚಾರಗಳ ಬಗ್ಗೆ ಚರ್ಚಿಸುವ ಶಕ್ತಿ ಇದೆಯೇ? ಲ್ಯಾಣ ಕ್ರಾಂತಿಯ ಮೂಲಕ ಮೌಢ್ಯದಲ್ಲಿ ಜಡಗಟ್ಟಿದ್ದ ಸಮಾಜಕ್ಕೆ ಹೊಸ ಮಾರ್ಗ ತೋರಿದ ಬಸವಣ್ಣನವರು ಕೇವಲ ಹೊಳೆ ಹಾರಿದವರಾಗಿ ಕಂಡಿದ್ದು ಬಿಜೆಪಿಗರ ಅಜ್ಞಾನದ ದ್ಯೋತಕವಾಗಿದೆ. ಬಸವಣ್ಣರನ್ನು ಅನುಸರಿಸುವ ಈ ನಾಡಿನ ಜನ ಬಿಜೆಪಿಗರ ಈ ನಡೆಯನ್ನು ಸಹಿಸಲು ಸಾಧ್ಯವಿಲ್ಲ. ಕೆಲ ದಿನಗಳ ಹಿಂದೆ ನಾಡಿನ ಜನ ವೇದಿಕೆಯಿಂದ ಕೆಳಗಿಳಿಸಿ ಓಡಿಸಿದ್ದರೂ ಬುದ್ದಿ ಕಲಿಯದ ಯತ್ನಾಳ್ ಅವರ ನಾಲಿಗೆಗೆ ಕಡಿವಾಣ ಹಾಕುವ ಶಕ್ತಿ ಕರ್ನಾಟಕದ ಜನರಿಗಿದೆ.
ಚನ್ನಬಸವಾನಂದ ಸ್ವಾಮೀಜಿ : ಯತ್ನಾಳ್ ಅವರಿಗೆ ವಚನಗಳ ಅರಿವಿಲ್ಲ. ಲಿಂಗಾಯತ ಧರ್ಮದ ಬಗ್ಗೆ ಮಾಹಿತಿಯೂ ಇಲ್ಲ. ತಕ್ಷಣ ಯತ್ನಾಳ್ ಲಿಂಗಾಯತರ ಕ್ಷಮೆ ಕೇಳಬೇಕು
ಶ್ರೀಶೈಲ ಜಿ ಮಸೂತೆ : ತಾನು ಹುಟ್ಟಿದ ಧರ್ಮವನ್ನೇ ಮರೆತು, ವಿವೇಕ ವಿವೇಚನೆ ಇಲ್ಲದೆ ಮಾತನಾಡುತ್ತಿದ್ಧಾರೆ. ಯತ್ನಾಳ್ ಅವರೊಬ್ಬ ಮಾನಸಿಕ ಅಸ್ವಸ್ಥ ರಾಜಕಾರಣಿ.
ಸಾಣೆಹಳ್ಳಿ ಶ್ರೀ : ಬಸವಣ್ಣನವರ ಬಗ್ಗೆ ಯತ್ನಾಳ್ ಮಾತನಾಡಿದ್ದು ಅಕ್ಷಮ್ಯ. ಯತ್ನಾಳ್ ಹೇಡಿಯಾಗಿರಲಿಲ್ಲ. ಬಸವಣ್ಣನವರ ಇತಿಹಾಸ, ವಚನಗನ್ನು ಯತ್ನಾಳ್ ಇನ್ನಾದರೂ ಓದುವ, ಅರಿತುಕೊಳ್ಳುವ ಪ್ರಯತ್ನ ಮಾಡಲಿ. ದೊಡ್ಡವರನ್ನು ಹೀಯಾಳಿಸಿ ಮಾತನಾಡಿ ಚಪ್ಪಾಳೆ ಗಿಟ್ಟಿಸಿಕೊಂಡರೆ ದೊಡ್ಡವರಾಗುತ್ತೇನೆ ಎನ್ನುವ ಭ್ರಮೆಯಲ್ಲಿದ್ದಾರೆ ಯತ್ನಾಳ್.