ಐಎಎಸ್ ರೋಹಿಣಿ ಸಿಂಧೂರಿ, ಐಪಿಎಸ್ ರೂಪಾ ಮೌದ್ಗೀಲ್‌ಗೆ ನ್ಯಾಯಾಲಯ ನೀಡಿರುವ ಸಲಹೆ ಇದು.
ರೋಹಿಣಿ ಸಿಂಧೂರಿ V/S ರೂಪಾ ಮೌದ್ಗೀಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಜಿ ಮಾಡಿಕೊಂಡು ಇತ್ಯರ್ಥ ಪಡಿಸಿಕೊಳ್ಳುವಂತೆ ನ್ಯಾಯಾಲಯ ಸಲಹೆ ನೀಡಿದೆ. 5ನೇ ACMM ನ್ಯಾಯಾಲಯದಿಂದ ರೋಹಿಣಿ, ರೂಪಾ ಇಬ್ಬರಿಗೂ ಸಲಹೆ ನೀಡಲಾಗಿದ್ದು, ಇಬ್ಬರಿಗೂ ಇಂಗ್ಲಿಷ್ʻನ ʻಒನ್ ಮಿನಿಟ್ ಅಪಾಲಜಿʼ ಪುಸ್ತಕ ಓದಿ ಎಂದು ಹೇಳಲಾಗಿದೆ. ಆದರೆ ಇದು ಸಲಹೆಯಷ್ಟೇ.. ತೀರ್ಪು ಅಲ್ಲ. ಏಕೆಂದರೆ ಕೋರ್ಟ್‌ನಲ್ಲಿ ಮುಖಾಮುಖಿಯಾಗಿರುವುದು ಐಎಎಸ್ ಮತ್ತು ಐಪಿಎಸ್. ಹಾಗಾಗಿ ಕೋರ್ಟ್ ಕಾನೂನು ವ್ಯಾಪ್ತಿಯ ಹೊರಗೆ, ರಾಜಿ ಸಂಧಾನದಲ್ಲೇ ವಿವಾದ ಬಗೆಹರಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಪ್ರಕರಣದಲ್ಲಿ ಕೋರ್ಟ್ ಮೂಲಕ ತೀರ್ಪು ನೀಡಬಹುದಾದರೂ.. ಅದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಬಹುದು. ವ್ಯವಸ್ಥೆಯನ್ನು ಹಾಳು ಮಾಡಬಹುದು ಎಂಬ ಕಾರಣಕ್ಕೆ ನ್ಯಾಯಾಲಯವೂ ಜಾಗ್ರತೆಯಿಂದ ಹೆಜ್ಜೆ ಇಡುತ್ತಿದೆ. ಒಂದು ರೀತಿಯಲ್ಲಿ ನ್ಯಾಯಾಲಯ ತನ್ನ ತಾಳ್ಮೆಯನ್ನು ತಾನೇ ಪರೀಕ್ಷೆಗೆ ಒಡ್ಡಿಕೊಂಡಿದೆ. ರೋಹಿಣಿ, ರೂಪಾ ಇಬ್ಬರ ಪತಿಯರನ್ನೂ ಹೊರಗೆ ಕಳುಹಿಸಿ ಪಾಟೀ ಸವಾಲು ನಡೆಸಲಾಗಿದೆ.
2023ರ ಫೆ.18, 19ರಂದು ರೋಹಿಣಿ ಸಿಂಧೂರಿ ವಿರುದ್ಧ ರೂಪಾ ಫೇಸ್ ಬುಕ್ ಪೋಸ್ಟ್ ಮಾಡಿದ್ದರು. ಆ ಫೇಸ್ ಬುಕ್ ಪೋಸ್ಟ್ ವಿರುದ್ಧ ರೋಹಿಣಿ ಸಿಂಧೂರಿ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. 2023ರ ಮಾ.3ರಂದು ಮ್ಯಾಜಿ ಸ್ಟೇಟ್ ಕೋರ್ಟ್‌ಗೆ ಖಾಸಗಿ ದೂರು ದಾಖಲಿಸಿದ್ದಾರೆ.
ʻನೀವಿಬ್ಬರೂ ಸರ್ಕಾರದಲ್ಲಿ ಹಿರಿಯ ಅಧಿಕಾರಿಗಳು, ಇಬ್ಬರೂ ಉತ್ತಮ ಹೆಸರು ಗಳಿಸಿದ್ದೀರಿ. ನಿಮ್ಮ ಸಮಯ ಸಮಾಜಕ್ಕೆ, ಸಾರ್ವಜನಿಕರ ಸೇವೆಗೆ ಉಪಯೋಗವಾಗಲಿʼ ಎಂದಿರುವ ಜಡ್ಜ್ ʻಕೋರ್ಟ್ ಕಲಾಪದಲ್ಲಿಯೇ ಇಬ್ಬರು ಅಧಿಕಾರಿಗಳ ಸಮಯ ವ್ಯರ್ಥವಾಗುತ್ತಿದೆ ಎಂದು ಅಭಿಪ್ರಾಯ ಪಟ್ಟಿದೆ. ರಾಜಿ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಸಲಹೆ ನೀಡಿರುವ ನ್ಯಾಯಾಧೀಶರು ರೋಹಿಣಿ ಸಿಂಧೂರಿ ಮತ್ತು ರೂಪಾ ಮೌದ್ಗೀಲ್ ಪ್ರಕರಣದ ವಿಚಾರಣೆ ಫೆಬ್ರವರಿ 12ಕ್ಕೆ ಮುಂದೂಡಿದ್ದಾರೆ.
ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಆಲೋಚಿಸಿ. ಇದನ್ನು ನಾನು ನಿಮಗೆ ಹೇಳುವ ಅಗತ್ಯವಿಲ್ಲ. ಆದರೆ, ಸಮಾಜದ ಹಿತ ದೃಷ್ಟಿಯಿಂದ ಹೇಳಿದ್ದೇನೆ ಅಷ್ಟೇ. ನೀವು ಯೋಚಿಸಿ ನಿರ್ಧಾರದ ತಿಳಿಸಿದರೆ, ಅದರಂತೆ ಪ್ರಕರಣವನ್ನು ನ್ಯಾಯಾಲಯ ಮುಂದುರಿಸಲಿದೆ’ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರಕರಣ ಬುಧವಾರ 5ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ವಿಜಯ ಕಮಾರ್ ಜಾಟ್ಲಾ ಅವರ ಮುಂದೆ ವಿಚಾರಣೆಗೆ ಬಂದಿತ್ತು. ಈ ವೇಳೆ ರೋಹಿಣಿ ಮತ್ತು ರೂಪಾ ಉಪಸ್ಥಿತರಿದ್ದರು. ರೋಹಿಣಿ ಮನವಿ ಮೇರೆಗೆ ಪಾಟಿ ಸವಾಲು ಪ್ರಕ್ರಿಯೆಯನ್ನು ನ್ಯಾಯಾಲಯ ಗೌಪ್ಯವಾಗಿ (ಇನ್-ಕ್ಯಾಮರಾ ಪ್ರೊಸಿಡಿಂಗ್ಸ್) ನಡೆಸಿತು. ರೂಪಾ ಪರ ವಕೀಲ ಪಿ.ಪ್ರಸನ್ನ ಕುಮಾರ್ ಅವರು ಸುಮಾರು 45 ನಿಮಿಷಗಳ ಕಾಲ ರೋಹಿಣಿ ಅವರನ್ನು ಪಾಟಿ ಸವಾಲಿಗೆ ಗುರಿಪಡಿಸಿದರು.