ರೇಣುಕಾಸ್ವಾಮಿ ಕೊಲೆ ಕೇಸ್ ರಾಜ್ಯದ ಅತೀ ದೊಡ್ಡ ಭಯಾನಕ ಕೊಲೆಯಾಗಿದ್ದಕ್ಕೆ ಕಾರಣ ಆರೋಪಿ ಸ್ಥಾನದಲ್ಲಿ ನಟ ದರ್ಶನ್ ಇದ್ದದ್ದು. ಹೀಗಾಗಿ ಮಾಧ್ಯಮಗಳಲ್ಲಿ ದರ್ಶನ್ ಮತ್ತು ರೇಣುಕಾಸ್ವಾಮಿ ಕೊಲೆ ಕೇಸ್ ಭರ್ಜರಿ ಸದ್ದು, ಸುದ್ದಿ ಮಾಡ್ತಾನೇ ಇದೆ. ಇದೀಗ ದರ್ಶನ್ ಕೇಸಿಗೆ ದೆವ್ವವೂ ಎಂಟ್ರಿ ಕೊಟ್ಟಾಗಿದೆ.
ದೆವ್ವ, ಪ್ರೇತ, ಭೂತ, ಪಿಶಾಚಿಗಳೆಲ್ಲ ಇದೆಯೋ.. ಇಲ್ಲವೋ.. ಗೊತ್ತಿಲ್ಲ. ಒಬ್ಬೊಬ್ಬರೂ ಒಂದೊಂದು ಕಥೆ ಹೇಳ್ತಾರೆ. ಇದೀಗ ದರ್ಶನ್ ಪ್ರಕರಣದಲ್ಲಿ ದೆವ್ವ ಎಂಟ್ರಿ ಕೊಟ್ಟಿದ್ದು, ಮಾಧ್ಯಮಗಳಲ್ಲಿ ರೋಚಕ ತಿರುವು ಪಡೆದುಕೊಂಡಿದೆ. ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ಗೆ ರೇಣುಕಾಸ್ವಾಮಿ ಅವರ ಆತ್ಮವು ದೆವ್ವವಾಗಿ ಕಾಡುತ್ತಿರುವ ಅನುಭವ ಆಗ್ತಿದ್ಯಂತೆ. ಖುದ್ದು ದರ್ಶನ್ ಅವರೇ ಈ ರೀತಿಯ ಮಾತುಗಳನ್ನಾಡಿದ್ದಾರಂತೆ. ನಿದ್ದೆ ಮಾಡಲು ಆಗುತ್ತಿಲ್ಲ. ರಾತ್ರಿ ಹೊತ್ತು ರೇಣುಕಾಸ್ವಾಮಿ ಆತ್ಮವೇ ನನ್ನ ಕಾಡುತ್ತಿದೆ ಎಂದು ದರ್ಶನ್ ಹೇಳಿಕೊಂಡಿದ್ದಾರಂತೆ. ಹಾಗಂತ ಕೆಲವು ಮಾಧ್ಯಮಗಳು ವರದಿ ಮಾಡ್ತಾ ಇವೆ.
ದರ್ಶನ್ ಅವರು ನಟಿಸಿರುವ 50+ ಚಿತ್ರಗಳಲ್ಲಿ ಒಂದು ದೆವ್ವದ ಚಿತ್ರವೂ ಇದೆ. ಜಗ್ಗುದಾದ ಸಿನಿಮಾದಲ್ಲಿ ದರ್ಶನ್ ಅವರಿಗೆ ದೆವ್ವವಾಗಿ ಕಾಟ ಕೊಡೋದು ಅಜ್ಜ ರವಿಶಂಕರ್. ಅದು ಸಿನಿಮಾ. ಆದರೆ ರಿಯಲ್ ಸ್ಟೋರಿ. ಆದರೆ ರಿಯಲ್ ಸ್ಟೋರಿ ನಿಜಾನಾ.. ಗೊತ್ತಿಲ್ಲ.
ನನಗೆ ಒಬ್ಬಂಟಿಯಾಗಿರಲು ಸಾಧ್ಯವಾಗುತ್ತಿಲ್ಲ. ಭಯದಲ್ಲಿ ನಿದ್ದೆ ಮಾಡಲು ಆಗುತ್ತಿಲ್ಲ ಅಂತಾ ಹೇಳ್ಕೊಂಡಿರೋ ದರ್ಶನ್, ತಮ್ಮದೇ ಸೆಲ್ಲಿನಲ್ಲಿ ನಿದ್ರೆ ಬಾರದೆ ಕೂಗಾಡುತ್ತಾರಂತೆ. ಕಿರುಚೂತ್ತಾರಂತೆ. ನಿದ್ದೆಯಲ್ಲೂ ಪದೇ ಪದೆ ಬೆಚ್ಚಿ ಬೀಳುತ್ತಿದ್ದಾರಂತೆ. ಕೊಲೆಯ ಸನ್ನಿವೇಶ ನೆನೆದು ರಾತ್ರಿಯು ಬೆವರುತ್ತಿದ್ದಾರಂತೆ. ಅಂದಹಾಗೆ ಮಾಧ್ಯಮಗಳಲ್ಲೂ ಹರಿದಾಡುತ್ತಿರುವುದು ಅಂತೆ ಕಂತೆಗಳ ಸುದ್ದಿಗಳಷ್ಟೇ.
ನೋಡಿದವರು ಯಾರು ಎಂದರೆ.. ಉತ್ತರ ಇಲ್ಲ. ಕೇಳಿದವರು ಯಾರು ಎಂದರೆ.. ಉತ್ತರ ಇಲ್ಲ. ಹೋಗಲಿ, ಈ ರೀತಿ ಆದರೆ ಪೊಲೀಸರು ಕೌನ್ಸೆಲಿಂಗ್ ಮಾಡಿಸುವ ಕೆಲಸವನ್ನಾದರೂ ಮಾಡಿಸ್ತಾರೆ. ಅದಾದ್ರೂ ಆಗಿದ್ಯಾ ಎಂದರೆ, ಅದೂ ಇಲ್ಲ. ಸುದ್ದಿಯಂತೂ ಭರ್ಜರಿಯಾಗಿ ಓಡಾಡ್ತಾ ಇದೆ.
ಯಾರಾದ್ರೂ ಅಕಾಲಿಕ ಮರಣಕ್ಕೆ ತುತ್ತಾದರೆ, ಬರ್ಬರವಾಗಿ ಹತ್ಯೆಯಾದರೆ, ಚಿತ್ರಹಿಂಸೆ ಅನುಭವಿಸಿ ಕೊಲೆಯಾದರೆ, ಅಂಥಾ ಅತೃಪ್ತ ಆತ್ಮಗಳು ಸೇಡಿಗಾಗಿ ಹಪಹಪಿಸುತ್ತವೆ ಅನ್ನೋ ಕಥೆಯನ್ನ ಅವರಿವರ ಬಳಿ ಕೇಳಿರ್ತೀವಿ, ಸಿನಿಮಾಗಳಲ್ಲಿ ನೋಡಿರ್ತೀವಿ. ಆದರೆ ಇದೀಗ ರೇಣುಕಾಸ್ವಾಮಿ ಆತ್ಮವಾಗಿ ಕಾಡ್ತಿರೋದ್ಯಾಕೆ ಅಂದ್ರೆ, ಪಿತೃಪಕ್ಷ ಸಾರ್ ಅನ್ನೋ ಕಾರಣವನ್ನೂ ಹುಡುಕಿಟ್ಟಿದ್ದಾರೆ ದೆವ್ವಗಳ ನಂಬಿಕಸ್ಥರು. ವಿಜಯಲಕ್ಷ್ಮಿ ದರ್ಶನ್ ಕಾಳಿಯ ದೇವಸ್ಥಾನಗಳಿಗೆ ಹೋಗಿದ್ದಕ್ಕೆ, ಕೊಲ್ಲೂರಿನಲ್ಲಿ ಮೂಕಾಂಬಿಕೆಯ ಸನ್ನಿಧಿಯಲ್ಲಿ ಚಂಡಿಕಾ ಹೋಮ ಮಾಡಿಸಿದ್ದಕ್ಕೆ, ಕಾಮಾಕ್ಯ ಮಂದಿರಕ್ಕೆ ಹೋಗಿದ್ದಕ್ಕೆ, ಬಂಡಿ ಮಹಾಕಾಳಿಯ ದೇವಸ್ಥಾನದಲ್ಲಿ ಪೂಜೆ ಮಾಡಿಸಿದ್ದಕ್ಕೆ, ರಾಘವೇಂದ್ರರ ಸನ್ನಿಧಿಯಲ್ಲಿ ಪೂಜೆ ಮಾಡಿಸಿದ್ದಕ್ಕೆ.. ಎಲ್ಲದಕ್ಕೂ ರೇಣುಕಾಸ್ವಾಮಿ ಆತ್ಮವೇ ಕಾರಣ ಅನ್ನೋ ಕಥೆಗಳೂ ಹರಿದಾಡ್ತಿವೆ.
ಮಾನಸಿಕ ತಜ್ಞರ ವಾದ ಏನು..?
ವಾಸ್ತವ ಏನೆಂದು ಮಾನಸಿಕ ತಜ್ಞರನ್ನು ಸಂಪರ್ಕಿಸಿದಾಗ ಸಿಕ್ಕ ಉತ್ತರವೇ ಬೇರೆ. ಅಪರಾಧ ಪ್ರಜ್ಞೆ ಕಾಡುತ್ತಿರುವಾಗ ಈ ರೀತಿಯ ವರ್ತನೆ ಸರ್ವೇಸಾಮಾನ್ಯ. ಅಲ್ಲದೆ ಜೈಲಿನಂತಹ ಸ್ಥಳಗಳಲ್ಲಿ ಒಂಟಿಯಾಗಿದ್ದಾಗ ಇಂತಹ ಅರಚಾಟ, ಕಿರುಚಾಟ, ಯಾರೋ ಕೂಗಿದಂತೆ, ಕರೆದಂತೆ ಆಗುವ ಭ್ರಮೆಗಳೆಲ್ಲ ಆಗುವಂತಹುದ್ದೇ ಎನ್ನುತ್ತಾರೆ ಮನೋವಿಜ್ಞಾನಿಗಳು. ಕೊಲೆಯಂತಹ ಗಂಭೀರ ಅಪರಾಧವನ್ನು ಮಾಡಿದವರಲ್ಲಿ ಬಹುತೇಕ ಜನ ತಾವು ಕೊಲೆ ಮಾಡಿದವರು ಅಥವಾ ತಮ್ಮಿಂದ ಕೊಲೆಯಾದವರು ದೆವ್ವವಾಗಿ ಕಾಡುತ್ತಾರೆ ಎಂದು ಭಾವಿಸುವುದು, ಹೆದರುವುದು, ಭಯಭೀತರಾಗುವುದು ನ್ಯಾಚುರಲ್ ಎಂಬ ವಾದ ಮುಂದಿಟ್ಟಿದ್ದಾರೆ.