ಬೆಳೆದ ಮೇಲೆ ಬೆಳೆಸಿದವರನ್ನು ಮರೆತರಾ ಡಾಲಿ ಧನಂಜಯ..? ದರ್ಶನ್ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಡಾಲಿ ಧನಂಜಯ ವಿರುದ್ಧ ದರ್ಶನ್ ಅಭಿಮಾನಿಗಳು ಮುಗಿಬಿದ್ದಿರೋದ್ಯಾಕೆ ಎಂದು ಉತ್ತರ ಹುಡುಕುತ್ತಾ ಹೋದರೆ.. ಕಾರಣಗಳೂ ಇವೆ. ಧನಂಜಯ ಧನ್ಯತಾ ಮದುವೆಗೆ ಬಹುತೇಕ ಚಿತ್ರರಂಗ ಹಾಗೂ ರಾಜಕೀಯದವರಷ್ಟೇ ಅಲ್ಲದೆ ಅಭಿಮಾನಿಗಳಿಗೂ ಆಹ್ವಾನ ಇದೆ. ಆದರೆ ದರ್ಶನ್ ಕುಟುಂಬಕ್ಕೆ ಇನ್ನೂ ಆಹ್ವಾನ ಪತ್ರಿಕೆ ಹೋಗಿಲ್ಲ.
ಡಾಲಿ ಧನಂಜಯ ಅವರು ನಟನೆಗೆ ಬರುವ ಮೊದಲು ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದವರು. ಕನ್ನಡದಲ್ಲಷ್ಟೇ ಅಲ್ಲದೆ ಪರಭಾಷೆಗಳಲ್ಲೂ ಖ್ಯಾತಿ ಪಡೆದಿರುವ ಡಾಲಿ ಧನಂಜಯ ಸಾಹಿತ್ಯ, ಚಳವಳಿಗಳಲ್ಲಿಯೂ ಗುರುತಿಸಿಕೊಂಡಿರುವ ನಟ. ಹೀಗಾಗಿ ಡಾಲಿ ಧನಂಜಯ ಅವರ ಬಳಗ ದೊಡ್ಡದು. ಇದೀಗ ಅಭಿಮಾನಿಗಳನ್ನೂ ಮದುವೆಗೆ ಕರೆದಿರುವ ಡಾಲಿ ಧನಂಜಯ ಅವರ ವಿರುದ್ಧ ದರ್ಶನ್ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಸಿಟ್ಟಾಗಿದ್ದಾರೆ. ಕಾರಣ. ದರ್ಶನ್ ಅವರಿಗೆ ಇನ್ನೂ ಡಾಲಿ ಲಗ್ನಪತ್ರಿಕೆ ಕೊಟ್ಟಿಲ್ಲ ಎನ್ನುವುದು.
ಸುದ್ದಿಗೋಷ್ಠಿಯಲ್ಲಿ “ಎಲ್ಲರನ್ನು ಕರೆದಿದ್ದೀರಿ, ದರ್ಶನ್ ಅವರನ್ನು ಆಹ್ವಾನಿಸಿಲ್ವಾ” ಎಂಬ ಪ್ರಶ್ನೆಗೆ ಧನಂಜಯ , “ಎಲ್ಲರನ್ನು ಮದುವಗೆ ಕರೆದಿದ್ದೇನೆ, ದರ್ಶನ್ ಅವರನ್ನು ಕರೆಯದೇ ಇರುತ್ತೀನಾ? ಖಂಡಿತವಾಗಿಯೂ ಅವರನ್ನು ಮದುವೆಗೆ ಕರೆಯುತ್ತೇನೆ. ನಾನು ಮೀಟ್ ಮಾಡುವುದಕ್ಕೆ ಪ್ರಯತ್ನಿಸಿದೆ. ಅದಿನ್ನೂ ಸಾಧ್ಯವಾಗಿಲ್ಲ. ನಾನು ಅವರನ್ನು ಭೇಟಿಯಾಗಿ, ತುಂಬ ಪ್ರೀತಿಯಿಂದ ಮದುವೆಗೆ ಆಹ್ವಾನಿಸಲಿದ್ದೇನೆ” ಎಂದು ಉತ್ತರ ಕೊಟ್ಟಿದ್ದಾರೆ.
ಇಷ್ಟು ಹೇಳಿದ್ದೇ ತಡ.. ಬೆಳೆಯುವಾಗ ಡಿ ಬಾಸ್ ಬೇಕಿತ್ತು. ಈಗ ಬೇಡ್ವಾ ಎಂದು ದರ್ಶನ್ ಅಭಿಮಾನಿಗಳು ಡಾಲಿ ವಿರುದ್ಧ ಮುಗಿಬಿದ್ದಿದ್ದಾರೆ. ದರ್ಶನ್ ಅವರು ಈ ಹಿಂದೆ ಧನಂಜಯ ಚಿತ್ರಗಳನ್ನು ಪ್ರಮೋಟ್ ಮಾಡಿದ್ದ ವಿಡಿಯೋ, ಫೋಟೋ ಹಾಕಿ ಗುರ್ ಎನ್ನುತ್ತಿದ್ದಾರೆ.
ಡಾಲಿ ಧನಂಜಯ ಅವರ ಟಗರು ಪಲ್ಯ ಚಿತ್ರವನ್ನು ದರ್ಶನ್ ಪ್ರಮೋಟ್ ಮಾಡಿದ್ದರು. ಇನ್ನು ಡಾಲಿ ಧನಂಜಯ ಅವರು, ದರ್ಶನ್ ಅವರ ಯಜಮಾನ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಇನ್ನು ಡಾಲಿ ಅವರ ಜೊತೆ ದರ್ಶನ್ ಹಲವು ಬಾರಿ ಪಾರ್ಟಿ ಮಾಡಿದ್ದಾರೆ. ದರ್ಶನ್ ಅವರ ಕಾಟೇರ ಸಕ್ಸಸ್ ಆದ ಸಂದರ್ಭದಲ್ಲಿ ನಡೆದ ಪಾರ್ಟಿಯಲ್ಲಿ ಡಾಲಿಯೂ ಇದ್ದರು. ಅದು ಕೇಸ್ ಕೂಡಾ ಆಗಿತ್ತು. ಇಷ್ಟೆಲ್ಲ ಆತ್ಮೀಯತೆ ಇದ್ದರೂ ಡಾಲಿ ಧನಂಜಯ ಅವರು ದರ್ಶನ್ ಅವರನ್ನು ಕರೆದಿಲ್ಲ ಏಕೆ..?
ಅದಕ್ಕೆ ಕಾರಣ ಇದೆ. ವಾಸ್ತವ ಏನೆಂದರೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿರುವ ದರ್ಶನ್ ಈಗ ಎಲ್ಲರಿಗೂ ಸಿಗುತ್ತಿಲ್ಲ. ತಮ್ಮ ಸುತ್ತ ಒಂದು ಕೋಟೆಯನ್ನೇ ಕಟ್ಟಿಕೊಂಡಿರುವ ದರ್ಶನ್, ಯಾರ ಫೋನ್ ಕೂಡಾ ರಿಸೀವ್ ಮಾಡ್ತಿಲ್ಲ. ಒಂದು ರೀತಿಯಲ್ಲಿ ಒಂಟಿಯಾಗಿರುವ ದರ್ಶನ್ ಅವರನ್ನು ಚಿತ್ರರಂಗದ ಹಲವರು ಸಂಪರ್ಕ ಮಾಡಿರುವ ಪ್ರಯತ್ನ ಮಾಡಿದ್ದಾರಾದರೂ ಸಾಧ್ಯವಾಗಿಲ್ಲ. ಅದೇ ಅನುಭವ ಡಾಲಿ ಧನಂಜಯ ಅವರಿಗೂ ಆಗಿದೆ. ಅಷ್ಟೆ. ಇನ್ನು ಡಾಲಿ ಧನಂಜಯ ಚಿತ್ರರಂಗದ ಎಲ್ಲರ ಜೊತೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ. ದರ್ಶನ್ ಜೊತೆಯಲ್ಲೂ ಸ್ನೇಹ ಚೆನ್ನಾಗಿಯೇ ಇದೆ.
ಸದ್ಯಕ್ಕೆ ದರ್ಶನ್ ಎಲ್ಲರಿಗೂ ಸಿಗುತ್ತಿಲ್ಲ. ಅತ್ಯಂತ ಆಪ್ತ ಬಳಗದಲ್ಲಿರುವವರಿಗೆ ಮಾತ್ರ ಸಿಗುತ್ತಿದ್ದಾರೆ.